ಬೆಂಗಳೂರು:ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ನಕಲಿ ದಾಖಲೆ ಸೃಷ್ಟಿಸಿ, ಆಧಾರ್ ಕಾರ್ಡ್ ಮಾಡಿಸಿಕೊಡುತ್ತಿದ್ದ ಬೃಹತ್ ಜಾಲವನ್ನು ಭೇದಿಸುವಲ್ಲಿ ಬೆಂಗಳೂರು ಗ್ರಾಮಾಂತರದ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ 9 ಆರೋಪಿಗಳನ್ನು ಬಂಧಿಸಿದ್ದಾರೆ. ಬರೀ 500 ರಿಂದ 1000 ರೂ. ಕೊಟ್ಟರೆ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದರು ಎಂಬ ಸಂಗತಿ ತನಿಖೆಯಲ್ಲಿ ಬಯಲಾಗಿದೆ. ಬಾಂಗ್ಲಾ ಮೂಲದ ಸೈದುಲ್ ಅಕೂನ್ ಅಲಿಯಾಸ್ ಶಾಹಿದ್ ಅಹಮ್ಮದ್ (42), ಮೊಹಮ್ಮದ್ ಅಬ್ದುಲ್ ಅಲೀಂ (35) ಹಾಗೂ ಬೆಂಗಳೂರಿನ ಸುಹೈಲ್ ಅಹಮ್ಮದ್ (24) ಮೊಹಮ್ಮದ್ ಇದಾಯತ್ (25), ಸೈಯ್ಯದ್ ಮನ್ಸೂರ್ (43), ಆಯೇಷಾ (40), ಅಮೀನ್ ಸೇಠ್ (64), ರಾಕೇಶ್ (41), ಇಸ್ತಿಯಾಕ್ ಪಾಷಾ (50) ಬಂಧಿತರು. ತಲೆಮರೆಸಿಕೊಂಡಿರುವ ಐವರು ಬಾಂಗ್ಲಾ ಪ್ರಜೆಗಳಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಆರೋಪಿಗಳಿಂದ ಬೌರಿಂಗ್, ವಾಣಿ ವಿಲಾಸ ಆಸ್ಪತ್ರೆ ಸೇರಿ ಬೆಂಗಳೂರಿನ ವಿವಿಧ ಬಿಬಿಎಂಪಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ 5 ನಕಲಿ ಸೀಲ್​ಗಳು, 26 ಗೆಜೆಟೆಡ್ ಅಧಿಕಾರಿಗಳ ಲೆಟರ್​ಹೆಡ್, 16 ಮೊಬೈಲ್ ಫೋನ್, 31 ಆಧಾರ್ ಕಾರ್ಡ್, 13 ಪ್ಯಾನ್ ಕಾರ್ಡ್, 28 ವೋಟರ್ ಐಡಿ, 5 ಚಾಲನಾ ಪರವಾನಗಿ, 3 ಆಯುಷ್ಮಾನ್ ಕಾರ್ಡ್, 3 ಓಟರ್ ಐಡಿ ಅಪ್ಲಿಕೇಶನ್ ಫಾಮ್ರ್, 92 ಬಿಬಿಎಂಪಿ ಮೆಡಿಕಲ್ ಆಫೀಸರ್​ಗಳ ಸೀಲು ಮತ್ತು ಸಹಿ ಇರುವ ಸರ್ಟಿಫಿಕೇಟ್ ಫಾರ್ ಆಧಾರ್ ಎನ್ರೋಲ್​ವೆುಂಟ್ ಫಾಮರ್್​ಗಳನ್ನು ಜಪ್ತಿ ಮಾಡಲಾಗಿದೆ.
ಕಾರ್ಯಾಚರಣೆ ಹೇಗೆ?:ಪ್ರಮುಖ ಆರೋಪಿ ಸೈದುಲ್ ಅಕೂನ್ ಅಕ್ರಮವಾಗಿ ಬಾಂಗ್ಲಾದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರನ್ನು ಗುರುತಿಸಿ ಆಧಾರ್​ಕಾರ್ಡ್ ಮಾಡಿಸಿಕೊಡುವುದಾಗಿ ಹೇಳುತ್ತಿದ್ದ. ವಿವರಗಳನ್ನು ಅಬ್ದುಲ್ ಅಲೀಂಗೆ ಕೊಡುತ್ತಿದ್ದ. ತಾವರೆಕೆರೆ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ನಡೆಸುವ ತಾತ್ಕಾಲಿಕ ನೌಕರನಾಗಿ ಕೆಲಸ ಮಾಡುತ್ತಿದ್ದ ಫಾರ್ವಸಿಸ್ಟ್ ಇಸ್ತಿಯಾಕ್ ಪಾಷಾ ಬಿಬಿಎಂಪಿ ಗೆಜೆಟೆಡ್ ಅಧಿಕಾರಿಗಳ ಮೊಹರು, ವಿಳಾಸವನ್ನು ಆರೋಪಿ ರಾಕೇಶ್​ಗೆ ಕೊಡುತ್ತಿದ್ದ. ರಾಕೇಶ್ ಫೋಟೊಶಾಪ್ ಮೂಲಕ ನಕಲಿ ಲೆಟರ್​ಹೆಡ್ ತಯಾರಿಸಿ ಅದರಲ್ಲಿ ಆಧಾರ್ ಕಾರ್ಡ್ ಪಡೆಯುವ ಬಾಂಗ್ಲಾ ಪ್ರಜೆಗಳ ಹೆಸರನ್ನು ನಮೂದಿಸುತ್ತಿದ್ದ. ಇತರ ಆರೋಪಿಗಳು ಲೆಟರ್​ಹೆಡ್ ಮೇಲೆ ಗೆಜೆಟೆಡ್ ಆಫೀಸರ್ ನಕಲಿ ಸೀಲ್ ಮತ್ತು ಸಹಿ ಹಾಕುತ್ತಿದ್ದರು. ಆರೋಪಿಗಳಾದ ಮೊಹಮ್ಮದ್ ಇದಾಯತ್ ಮತ್ತು ಸೈಯ್ಯದ್ ಮನ್ಸೂರ್ ಲೆಟರ್​ಹೆಡ್ ಅನ್ನು ಬೆಂಗಳೂರು ಒನ್​ಗೆ ಕೊಟ್ಟು ಬಾಂಗ್ಲಾ ಪ್ರಜೆಗಳ ಹೆಸರಿನಲ್ಲಿ ಆಧಾರ್​ಗೆ ಸರ್ಜಿ ಸಲ್ಲಿಸುತ್ತಿದ್ದರು. ಕೆಲ ದಿನಗಳ ಬಳಿಕ ಆಧಾರ್ ಕಾರ್ಡ್ ಆರೋಪಿಗಳ ಕೈ ಸೇರುತ್ತಿದ್ದಂತೆ 500 ರೂ.ನಿಂದ 1 ಸಾವಿರ ರೂ.ಗೆ ಬಾಂಗ್ಲಾ ವಲಸಿಗರಿಗೆ ಕೊಡುತ್ತಿದ್ದರು.

ಸಿಕ್ಕಿಬಿದ್ದದ್ದು ಹೇಗೆ?:ಏ.14ರಂದು ಮುಂಜಾನೆ ಮಾದನಾಯಕನಹಳ್ಳಿಯ ಚಿಕ್ಕಗೊಲ್ಲರಹಟ್ಟಿಯಲ್ಲಿ ಎಸ್​ಬಿಐ ಎಟಿಎಂ ಕೇಂದ್ರದಿಂದ 18 ಲಕ್ಷ ರೂ. ಕಳ್ಳತನ ಆಗಿತ್ತು. ಡಿವಿಆರ್ ಅನ್ನು ಸಹ ಆರೋಪಿಗಳು ಹೊತ್ತೊಯ್ದಿದ್ದರು. ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸಿಸಿಕ್ಯಾಮರಾ ಪರಿಶೀಲಿಸಿ ತನಿಖೆ ನಡೆಸಿದಾಗ ಬಾಂಗ್ಲಾ ಪ್ರಜೆ ಇಸ್ಮಾಯಿಲ್ ಎಂಬಾತನ ಸುಳಿವು ಸಿಕ್ಕಿತ್ತು. ‘ಬಾಂಗ್ಲಾ ದೇಶದಿಂದ ತ್ರಿಪುರಾ ಗಡಿಯ ಮೂಲಕ ಅಕ್ರಮವಾಗಿ ನುಸುಳಿ ಬಂದಿದ್ದೇನೆ. ಇಲ್ಲಿ ಗುಜರಿ ಸಂಗ್ರಹಿಸಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದೇನೆ. ಇತರ ಬಾಂಗ್ಲಾ ನಿವಾಸಿಗಳ ಜತೆಗೆ ಸೇರಿ ಎಟಿಎಂಗೆ ಕನ್ನ ಹಾಕಿದ್ದೇನೆ. ಕದ್ದ 18 ಲಕ್ಷ ರೂ.ನಲ್ಲಿ ನನಗೆ ಹಾಗೂ ನನ್ನ ಸಚಹರನಿಗೆ 2 ಲಕ್ಷ ರೂ. ಅನ್ನು ತಲೆಮರೆಸಿಕೊಂಡಿರುವ ಐವರು ಆರೋಪಿಗಳು ನೀಡಿದ್ದರು. ಉಳಿದ 16 ಲಕ್ಷ ರೂ. ಜತೆಗೆ ಅವರು ಕೋಲ್ಕತ್ತಾಗೆ ಪರಾರಿಯಾಗಿದ್ದಾರೆ. ಇದೀಗ ಕೋಲ್ಕತ್ತಾದಿಂದ ಹಣವನ್ನು ಪಶ್ಚಿಮ ಬಂಗಾಳ ಬಾರ್ಡರ್​ಗೆ ತಲುಪಿಸಲು ನನ್ನ ಸಹಾಯ ಕೇಳಿದ್ದಾರೆ ಎಂದು ವಿಚಾರಣೆ ವೇಳೆ ಇಸ್ಮಾಯಿಲ್ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಬಂಧಿತ ಇಸ್ಮಾಯಿಲ್​ನೊಂದಿಗೆ ಪೊಲೀಸರು ಕೋಲ್ಕತ್ತಾಗೆ ಹೋಗಿದ್ದರು. ಆದರೆ, ಆರೋಪಿಗಳಿಗೆ ಅನುಮಾನ ಬಂದು ಎಸ್ಕೇಪ್ ಆಗಿದ್ದರು. ಇಸ್ಮಾಯಿಲ್​ನನ್ನು ತೀವ್ರ ವಿಚಾರಣೆ ನಡೆಸಿದಾಗ ಆಧಾರ್ ಕಾರ್ಡ್ ದಂಧೆಯ ಕಿಂಗ್​ಪಿನ್ ಸೈದುಲ್ ಅಕೂನ್ ಬಗ್ಗೆ ಮಾಹಿತಿ ನೀಡಿದ್ದ. ಸೈದುಲ್ ಅಕೂನ್​ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಕ್ರಮ ಆಧಾರ್ ಕಾರ್ಡ್ ದಂಧೆ ಪ್ರಕರಣ ಬೆಳಕಿಗೆ ಬಂದಿದೆ. ಸೈದುಲ್ ಕೊಟ್ಟ ಮಾಹಿತಿ ಮೇರೆಗೆ ಇತರ ಆರೋಪಿಗಳನ್ನು ಬಂಧಿಸಲಾಗಿದೆ.
1 ವರ್ಷದಲ್ಲಿ 4 ಕೋಟಿ ವರ್ಗಾವಣೆ:ಸೈದುಲ್ ಅಕೂನ್ ಬೆಂಗಳೂರು ಹೊರ ವಲಯದಲ್ಲಿ ಎಸ್.ಎ.ಪ್ಲಾಸ್ಟಿಕ್ ಹೆಸರಿನ ಕಂಪನಿ ಹೊಂದಿದ್ದು, ಭಾರತದ ರೂಪಾಯಿಯನ್ನು ಬಾಂಗ್ಲಾ ದೇಶದ ಟಾಕಾ ಕರೆನ್ಸಿ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡುತ್ತಿದ್ದ. ಎಸ್​ಬಿಐ ಹಾಗೂ ಆಕ್ಸಿಸ್ ಬ್ಯಾಂಕ್​ಗಳಲ್ಲಿ 13 ಖಾತೆಗಳನ್ನು ಹೊಂದಿದ್ದ. ಈ ಖಾತೆಗಳ ಮೂಲಕ 1 ವರ್ಷದಲ್ಲಿ 4 ಕೋಟಿ ರೂ.ಗಳನ್ನು ಬಾಂಗ್ಲಾ ದೇಶಕ್ಕೆ ಅಕ್ರಮವಾಗಿ ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಸಂಬಂಧ ದೇಶದ ವಿವಿಧೆಡೆ 13 ಖಾತೆಗಳನ್ನು ಫ್ರೀಜ್ ಮಾಡಲಾಗಿದೆ.
ಇಡಿ ಎಂಟ್ರಿ?:ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಕ್ಕೆ (ಇಡಿ) ಪತ್ರ ಬರೆಯಲು ಪೊಲೀಸರು ಮುಂದಾಗಿದ್ದಾರೆ. ಪ್ರಕರಣದ ಸಂಬಂಧ ಸಂಬಂಧಿಸಿದ ತನಿಖಾ ಸಂಸ್ಥೆಗೆ ಮಾಹಿತಿ ನೀಡುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ವ್ಯವಸ್ಥೆ ದುರ್ಬಳಕೆ:ಸ್ಥಳೀಯ ತಹಸೀಲ್ದಾರ್, ಪಂಚಾಯತ್ ಅಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳು ಕೆಲ ಪ್ರಕ್ರಿಯೆ ಮೂಲಕ ಒಬ್ಬ ವ್ಯಕ್ತಿಗೆ ಸ್ಥಳೀಯರು ಎಂಬ ಪ್ರಮಾಣಪತ್ರ ಕೊಟ್ಟರೆ, ಈ ದಾಖಲೆಗಳ ಆಧಾರದ ಮೇಲೆ ಸರ್ಟಿಫಿಕೇಟ್ ಫಾರ್ ಆಧಾರ್ ಎನ್ರೋಲ್​ವೆುಂಟ್ ಫಾಮ್ರ್ ಮೂಲಕ ಅರ್ಜಿ ಸಲ್ಲಿಸಿ ಆಧಾರ್ ಕಾರ್ಡ್ ಪಡೆಯಲು ಅವಕಾಶವಿದೆ. ಈ ಮೂಲಕ ವಾಸದ ಮನೆಯ ವಿಳಾಸ ಇಲ್ಲದವರಿಗೂ ಆಧಾರ್ ಕಾರ್ಡ್ ಮಾಡಿಸಬಹುದಾಗಿದೆ. ಇದನ್ನೇ ಬಾಂಗ್ಲಾ ವಲಸಿಗರು ದುರ್ಬಳಕೆ ಮಾಡುತ್ತಿದ್ದಾರೆ.
ಅಕ್ರಮ ನೆಲಸಿಗರು ಮತ್ತು ಅವರಿಗೆ ಆಶ್ರಯ ಹಾಗೂ ಇನ್ನಿತರ ಸಹಕಾರ ಒದಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿರುವವರ ಬಗ್ಗೆ ಸಮೀಕ್ಷೆ ನಡೆಸಿ ಕ್ರಮ ತೆಗೆದುಕೊಳ್ಳಲು ನಿರ್ದೇಶಿಸಲಾಗಿದೆ. ಈ ಅಕ್ರಮ ದಂಧೆ ಬಯಲಿಗೆಳೆದ ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
|ಆರಗ ಜ್ಞಾನೇಂದ್ರಗೃಹ ಸಚಿವ
26 ವೈದ್ಯರ ಹೆಸರಲ್ಲಿ ನಕಲಿ ಸೀಲ್:ಇನ್ನು ಆರೋಪಿಗಳು 26 ಬಿಬಿಎಂಪಿ ವೈದ್ಯರ ಹೆಸರಿನಲ್ಲಿ ನಕಲಿ ಸೀಲ್ ಮತ್ತು ಸಹಿಯನ್ನು ಮೊದಲೇ ಸಿದ್ಧಪಡಿಸಿದ್ದರು. ಕಮರ್ಷಿಯಲ್ ಸ್ಟ್ರೀಟ್​ನಲ್ಲಿರುವ ಅಂಗಡಿಯೊಂದರಲ್ಲಿ ನಕಲಿ ಸೀಲ್ ಸಿದ್ದಪಡಿಸಿರುವುದು ಗೊತ್ತಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ರಾಕೇಶ್ ಈ ಹಿಂದೆ ಐಬಿಎಂನಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದ. ಕೆಲ ಸಮಯದ ಹಿಂದೆ ಕೆಲಸ ಬಿಟ್ಟು ಸೈಬರ್ ಸೆಂಟರ್​ನಲ್ಲಿ ಕುಳಿತು ಇಂತಹ ಕೃತ್ಯ ಎಸಗುತ್ತಿದ್ದ. ಆಯೇಷಾ ಬ್ರೋಕರ್ ಆಗಿದ್ದಾಳೆ.
ಅಡ್ಡ ಮತದಾನ ಮಾಡಿದ ಶಾಸಕನನ್ನು ಪಕ್ಷದಿಂದ ಉಚ್ಚಾಟಿಸಿದ ಕಾಂಗ್ರೆಸ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
