|ಕೀರ್ತಿನಾರಾಯಣ ಸಿ.ಬೆಂಗಳೂರು
ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯರೆಂದು ನಿರೂಪಿಸಲು ವ್ಯಾಪಕವಾಗಿ ಬಳಕೆಯಲ್ಲಿರುವುದು ವಿಶಿಷ್ಟ ಗುರುತಿನ ಸಂಖ್ಯೆ ಅಥವಾ ಆಧಾರ್ ಕಾರ್ಡ್. ವಿಪರ್ಯಾಸವೆಂದರೆ ಇದನ್ನು ಪಡೆಯುವುದು ಸುಲಭವಾಗಿರುವುದರಿಂದ ದುರ್ಬಳಕೆಯೂ ಹೆಚ್ಚುತ್ತಿವೆ. ಪರಿಣಾಮವಾಗಿ ಹೆಣ್ಣು ಮಕ್ಕಳು, ಬಾಲಕಾರ್ವಿುಕರ ಕಳ್ಳಸಾಗಾಣಿಕೆ ಹಾಗೂ ನೇಪಾಳ, ಬಾಂಗ್ಲಾದೇಶ ಇನ್ನಿತರ ದೇಶಗಳ ಅಕ್ರಮ ನುಸುಳುಕೋರರನ್ನು ಸ್ಥಳೀಯರೆಂದು ನಿರೂಪಿಸುವ ನಕಲಿ ಆಧಾರ್ ಕಾರ್ಡ್​ಗಳನ್ನು ಬರೀ 500, 1000 ರೂ.ಗೆ ಮಾರಾಟ ಮಾಡುವ ಜಾಲಗಳು ಸಕ್ರಿಯವಾಗಿವೆ.
ಆಧಾರ್ (ದಾಖಲಾತಿ ಮತ್ತು ನವೀಕರಣ) ನಿಯಮಗಳು 2016ರ ಕಲಂ 28ರ ಅನ್ವಯ, 2019ರಿಂದ 2022ರ ಜು.29ರವರೆಗೆ ರಾಜ್ಯದಲ್ಲಿ ಪತ್ತೆಯಾಗಿರುವ 12,552 ನಕಲಿ ಆಧಾರ್ ಕಾರ್ಡ್​ಗಳನ್ನು ರದ್ದುಪಡಿಸಲಾಗಿದೆ. ದೇಶಾದ್ಯಂತ 1,25,454 ನಕಲಿ ಕಾರ್ಡ್​ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ವೈಯಕ್ತಿಕ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರ್ಕಾರಿ ಗೆಜೆಟೆಡ್ ಅಧಿಕಾರಿಗಳ ನಕಲಿ ಸಹಿ, ಸೀಲ್​ಗಳನ್ನೇ ಬಳಸಿ ಆಧಾರ್ ಕಾರ್ಡ್​ಗಳನ್ನು ಸೃಷ್ಟಿಸಲಾಗುತ್ತಿರುವುದರಿಂದ ಕಾರ್ಡ್ ಅಸಲಿಯೋ, ನಕಲಿಯೋ ಎಂದು ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ.
ನಕಲಿ ಆಧಾರ್ ನಂಬರ್ ಹಾಗೂ ಬೆರಳಚ್ಚುಗಳನ್ನು ಕೊಟ್ಟು ವಿವಿಧ ಬ್ಯಾಂಕ್​ಗಳಲ್ಲಿ 10 ಕೋಟಿ ರೂ. ಗೂ ಅಧಿಕ ವಂಚನೆ ಮಾಡಿರುವ ವಿಚಾರವನ್ನು ನ್ಯಾಷನಲ್ ಪೇಮೆಂಟ್ಸ್ ಕಾಪೋರೇಷನ್ ಆಫ್ ಇಂಡಿಯಾ ಬಹಿರಂಗಪಡಿಸಿದೆ. ಆಧಾರ್ ನಂಬರ್ ದುರ್ಬಳಕೆಯ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್​ಐಆರ್​ಗಳು ದಾಖಲಾಗಿವೆ. ಆಯಾ ಸ್ಥಳೀಯ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ಬಿಹಾರ, ಉತ್ತರಪ್ರದೇಶ ಇತ್ಯಾದಿ 10 ರಾಜ್ಯಗಳಲ್ಲಿ ಹೆಚ್ಚು ನಕಲಿ ಆಧಾರ್ ಕಾರ್ಡ್​ಗಳು ಪತ್ತೆಯಾಗಿದ್ದು, ಅವುಗಳನ್ನು ಕೇಂದ್ರ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ರದ್ದುಗೊಳಿಸಿದೆ. ಇದಲ್ಲದೆ, ಸಮ ರ್ಪಕ ಮಾಹಿತಿ ಒದಗಿಸದ ಹಿನ್ನೆಲೆಯಲ್ಲಿ ಅಪ್​ಡೇಟ್ ಅಗತ್ಯವಿದೆ ಎಂಬ ಕಾರಣ ಕೊಟ್ಟು ದೇಶಾದ್ಯಂತ 38.16 ಲಕ್ಷ ಆಧಾರ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಗ್ಯಾಂಗ್ ರೇಪ್ ಕೇಸಲ್ಲೂ ನಕಲಿ ಆಧಾರ್!:ರಾಮಮೂರ್ತಿನಗರದಲ್ಲಿ ನಡೆದಿದ್ದ ಬಾಂಗ್ಲಾದೇಶದ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ವೇಶ್ಯಾವಾಟಿಕೆಗೆ ದೂಡಿದ ಪ್ರಕರಣದಲ್ಲಿ ಬಂಧಿತ ಬಾಂಗ್ಲಾದೇಶದ 12 ಆರೋಪಿಗಳು ನಕಲಿ ದಾಖಲೆ ಸಲ್ಲಿಸಿ ಆಧಾರ್ ಕಾರ್ಡ್ ಪಡೆದಿರುವುದು ಎನ್​ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಕಾರ್ಡ್ ಪಡೆಯಲು ಏನೆಲ್ಲ ದಾಖಲೆ ಸಲ್ಲಿಸಲಾಗಿದೆ ಎಂಬ ಮಾಹಿತಿ ನೀಡುವಂತೆ ಯುಐಡಿಎಐಗೆ ಎನ್​ಐಎ ಮನವಿ ಮಾಡಿತ್ತು. ಆದರೆ, ಆಧಾರ್ ಕಾಯ್ದೆಯ ಸೆ.33 ರಡಿ ಗೌಪ್ಯತೆ ನಿಯಮದ ದಾಖಲೆ ನೀಡಲಾಗಲ್ಲ ಎಂದಿತ್ತು. ಎನ್​ಐಎ ಹೈಕೋರ್ಟ್ ಮೆಟ್ಟಿಲೇರಿದ ನಂತರ ನ್ಯಾಯಪೀಠ ದಾಖಲೆ ಪರಿಶೀಲನೆಗೆ ಇತ್ತೀಚೆಗೆ ಅನುಮತಿ ನೀಡಿದೆ.
11 ವರ್ಷ ನಕಲಿ ಆಧಾರ್ ಮಾಫಿಯಾ!:ಇತ್ತೀಚೆಗೆ ಮಾದನಾಯಕನಹಳ್ಳಿಯಲ್ಲಿ ಎಟಿಎಂನ 18 ಲಕ್ಷ ರೂ. ಲೂಟಿ ಪ್ರಕರಣದಲ್ಲಿ ಮಾದನಾಯಕನಹಳ್ಳಿ ಪೊಲೀಸರು, ಬಾಂಗ್ಲಾದೇಶದ ಪ್ರಜೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಕಲಿ ದಾಖಲೆ ಸೃಷ್ಟಿಸುವ ಜಾಲದ ಬಗ್ಗೆ ಸುಳಿವು ಸಿಕ್ಕಿತ್ತು. ಪ್ರಮುಖ ಆರೋಪಿ ಸೈದುಲ್ ಅಕೂನ್ ಎಂಬಾತ 2011ರಲ್ಲಿ ಬೆಂಗಳೂರಿಗೆ ಬಂದು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದ. ಈತ 2011ರಿಂದ ಇಲ್ಲಿವರೆಗೂ ಬಾಂಗ್ಲಾದಿಂದ ಬರುವ ನುಸುಳುಕೋರರಿಗೆ ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಕಾರ್ಡ್ ಮಾಡಿಸಿಕೊಡುತ್ತಿದ್ದ. ಒಂದು ಕಾರ್ಡ್​ಗೆ 500 ರಿಂದ 1000 ರೂ. ಪಡೆಯುತ್ತಿದ್ದ. ಪೊಲೀಸರ ದಾಳಿ ವೇಳೆ 31 ಆಧಾರ್ ಕಾರ್ಡ್​ಗಳು ಪತ್ತೆಯಾಗಿವೆ. 90ಕ್ಕೂ ಹೆಚ್ಚು ಆಧಾರ್​ಗೆ ನೋಂದಣಿ ಮಾಡಿರುವ ಪ್ರತಿಗಳು ಸಿಕ್ಕಿದ್ದವು.
ಬಾಂಗ್ಲಾದವರದ್ದೇ ದೊಡ್ಡ ಸಮಸ್ಯೆ:ಬಾಂಗ್ಲಾ ನುಸುಳುಕೋರರು ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಮಾಡಿಸಿಕೊಂಡು ಅಕ್ರಮವಾಗಿ ವಾಸವಿದ್ದಾರೆ. ಮೊದಲಿಗೆ ರಸ್ತೆಬದಿ ಅಥವಾ ಖಾಲಿ ನಿವೇಶನಗಳಲ್ಲಿ ಗುಡಿಸಲು ನಿರ್ವಿುಸಿಕೊಂಡು ವಾಸ ಆರಂಭಿಸುತ್ತಾರೆ. ಚಿಂದಿ ಆಯ್ದು ಜೀವನ ನಿರ್ವಹಿಸಿ, ದಿನ ಕಳೆದಂತೆ ಡ್ರಗ್ಸ್ ಮಾರಾಟ, ವೇಶ್ಯಾವಾಟಿಕೆಯಂಥ ದಂಧೆ ಶುರು ಮಾಡುತ್ತಾರೆ. ಸ್ಥಳೀಯರಂತೆ ಕಾಣುವುದರಿಂದ ಅವರ ಮೇಲೆ ಯಾರಿಗೂ ಅನುಮಾನ ಬರುವುದಿಲ್ಲ. ಎಲ್ಲ ದಾಖಲೆ ಇರುವುದರಿಂದ ಯಾವುದೇ ಭಯವಿಲ್ಲದೆ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − two =
Remember me
