ಬೆಂಗಳೂರು:ನೂತನ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಬದಲಿಸಲು ಹೊರಟಿರುವ ರಾಜ್ಯ ಸರಕಾರವು ಖಾಸಗಿ ಶಿಕ್ಷಣ ಮಾಫಿಯಕ್ಕೆ ಶರಣಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್‌ಇಪಿಯಲ್ಲಿನ ಲೋಪ ದೋಷಗಳನ್ನು ಸರಿಪಡಿಸುವ ಬದಲು ಈ ನೀತಿಯನ್ನೆ ರದ್ದು ಮಾಡಲು ಹೊರಟಿರುವುದು ಸರಿಯಾದ ಕ್ರಮ ಅಲ್ಲ ಎಂದು ವಾಗ್ದಾಳಿ ನಡೆಸಿದರು.ರಾಜ್ಯ ಸರಕಾರದಲ್ಲಿ ಯಾರು ಶಿಕ್ಷಣ ಸಚಿವ ಎಂಬುದೇ ಗೊತ್ತಾಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಧು ಬಂಗಾರಪ್ಪ ಅಥವಾ ತೆರೆಯ ಹಿಂದೆ ಇರುವ ಬುದ್ದಿಜೀವಿಗಳೇ? ಇವರಲ್ಲಿ ಯಾರು ಶಿಕ್ಷಣ ಸಚಿವರು? ಎನ್ನುವುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.ದೇಶೀಯ ಚಿಂತನೆಗೆ ಅನುಗುಣವಾಗಿ ಶಿಕ್ಷಣ ಪದ್ಧತಿ ಇರಬೇಕೆಂದು ಗಾಂಧೀಜಿ, ಡಾ.ಅಂಬೇಡ್ಕರ್, ನೇತಾಜಿ ಸೇರಿದಂತೆ ಹಲವರು ಮಾತನಾಡಿದ್ದಾರೆ. ಅದರಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿತ್ತು. ಶಿಕ್ಷಣ ತಜ್ಞರ ಸಮಿತಿ ಮಾಡಿ ಪಠ್ಯಕ್ರಮ, ಪಾಠದಲ್ಲಿ ಬದಲಾವಣೆ ಮಾಡಲಾಗುತ್ತಿತ್ತು. ಇದೀಗ ಕಾಂಗ್ರೆಸ್ ರಿಸರ್ಚ್ ಟೀಮಿನಿಂದ ಬಂದ ಸಲಹೆ ಮತ್ತು ಪಾಠಗಳನ್ನು ಸೇರಿಸಲಾಗುತ್ತಿದೆ ಎಂದು ಆರೋಪಿಸಿದರು.ಮೋದಿ ಸರಕಾರವು ಶ್ರೇಷ್ಠ ವಿಜ್ಞಾನಿ ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅದು 6 ವರ್ಷಗಳ ಕಾಲ ಅಧ್ಯಯನ ನಡೆಸಿ ಶಿಫಾರಸು ನೀಡಿತ್ತು. ಈ ಶಿಫಾರಸುಗಳನ್ನು ಜನರ ಮುಂದಿಡಲಾಗಿತ್ತು. 2 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಅವುಗಳನ್ನೂ ಸೇರಿಸುವ ಪ್ರಯತ್ನ ಮಾಡಲಾಗಿತ್ತು. ಸದುದ್ದೇಶದಿಂದ ಈ ಬಗ್ಗೆ ಚಿಂತನೆ ಮಾಡದೆ, ವಿರೋಧಕ್ಕಾಗಿಯೇ ವಿರೋಧ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದರು.ಸಿದ್ದರಾಮಯ್ಯ ಅವರ ಮೊಮ್ಮಗನನ್ನು ಇಂಟರ್ ನ್ಯಾಶನಲ್ ಸ್ಕೂಲಿನಲ್ಲಿ ಓದಿಸುತ್ತಿದ್ದಾರೆ. ರಾಜಕಾರಣಿಗಳ ಮಕ್ಕಳು ಸಿಬಿಎಸ್‌ಇ, ಐಸಿಎಸ್‌ಇ ಶಿಕ್ಷಣದಲ್ಲಿ ಓದಿಸುತ್ತಿದ್ದಾರೆ. ಆದರೆ, ಬಡ ಮಕ್ಕಳು ಮಾತ್ರ ಮೆಕಾಲೆಯ ಗುಲಾಮಿ ಶಿಕ್ಷಣ ಪದ್ಧತಿಯಡಿ ಓದಲಿ ಎಂದರೆ ಹೇಗೆ? ಎಂದು ಕೇಳಿದರು.1968ರಲ್ಲಿ ಮೊದಲನೇ ಶಿಕ್ಷಣ ನೀತಿ, 1986ರಲ್ಲಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಶಿಕ್ಷಣ ನೀತಿಯನ್ನು ತರಲಾಯಿತು. ಕೊಠಾರಿಯ ಆಯೋಗದ ಅಧ್ಯಯನದ ಬಳಿಕ ಅನೇಕ ಶಿಫಾರಸುಗಳನ್ನು ಮಾಡಿತ್ತು. ಶಿಕ್ಷಣ ಕ್ಷೇತ್ರದ ಕೊರತೆಗಳನ್ನು ಅಧ್ಯಯನ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿ ಇರಬೇಕೆಂದು ತಿಳಿಸಲಾಗಿತ್ತು. ಅಲ್ಲಿನವರೆಗೆ ರಾಜ್ಯಗಳಿಗೆ ಬೇಕಾದಂತೆ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಅನ್ವಯಿಸಲಾಗುತ್ತಿತ್ತು ಎಂದರು.ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಹಿಂದಿನ ಸರ್ಕಾರದ ತೀರ್ಮಾನ ಜಾರಿಗೆ ತರಲು ಪ್ರಯತ್ನಿಸಿದ್ದರು. ಅದನ್ನು ಇಂದಿರಾ ಗಾಂಧಿ ಮಾಡಿದ್ದೆಂದು ಯೋಚಿಸಿರಲಿಲ್ಲ. ಅಲ್ಲಿ ಅವರು ರಾಜಕೀಯ ಮಾಡಲಿಲ್ಲ ಎಂದರು.ಬಿಜೆಪಿ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡಿರಲಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 12 =
Remember me
