ಬೆಂಗಳೂರು:ಅದಕ್ಷ, ಭ್ರಷ್ಟ ನೌಕರರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಾವಳಿಗಳು ರಾಜ್ಯದಲ್ಲಿ 34 ವರ್ಷಗಳ ಹಿಂದೆಯೇ ಜಾರಿಯಾಗಿ ಕೆಳಹಂತದ ಕೆಲ ನೌಕರರ ವಿರುದ್ಧ ಕಡ್ಡಾಯ ನಿವೃತ್ತಿಯ ಶಿಕ್ಷೆಯೂ ಆಗಿದೆ. ಅದಕ್ಷ ನೌಕರರನ್ನು ಶಿಕ್ಷಿಸುವ ಕಠಿಣ ನಿಯಮಾವಳಿಗಳನ್ನು ಸೇರಿಸಿ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ 1986ರ ಅಕ್ಟೋಬರ್ 22 ರಂದು ಕರ್ನಾಟಕ ನಾಗರಿಕ ಸೇವಾ ನಿಯಮ (ಕೆಸಿಎಸ್​ಆರ್)ಕ್ಕೆ ತಿದ್ದುಪಡಿ ಮಾಡಿತ್ತು. ಸರ್ಕಾರಿ ಸೇವೆಯಲ್ಲಿ 25 ವರ್ಷಗಳ ಸೇವೆ ಪೂರೈಸಿದ ಅಥವಾ 50 ರಿಂದ 55 ವರ್ಷ ವಯಸ್ಸಾದ ನೌಕರರ ಸೇವಾ ಹಿನ್ನೆಲೆಯನ್ನು ಗಮನಿಸಿ ಕಾರ್ಯಕ್ಷಮತೆ ಆಧಾರದಲ್ಲಿ ಕಡ್ಡಾಯ ನಿವೃತ್ತಿಗೊಳಿಸುವುದು ನಿಯಮಾವಳಿಗಳ ಒಟ್ಟಾರೆ ಸಾರಾಂಶವಾಗಿತ್ತು. ಈ ನಿಯಮಾವಳಿ ಆಧರಿಸಿ ಇದುವರೆಗೆ ಮೂರು ಪ್ರಕರಣಗಳಲ್ಲಿ ಮಾತ್ರ ಕ್ರಮ ಕೈಗೊಂಡಿರುವ ಉದಾಹರಣೆ ಇದೆ. ನಿಯಮ ಪ್ರಕಾರ, ಅಧಿಕಾರಿ ಹಾಗೂ ನೌಕರರ ವಿರುದ್ಧ ಕ್ರಮಕ್ಕೆ ಪರಿಶೀಲನೆಗೆ ಮೂರು ಸಮಿತಿಗಳಿರಬೇಕು. ಇಲಾಖೆ ಮುಖ್ಯಸ್ಥರು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಸಮಿತಿಗಳನ್ನು ರಚನೆ ಮಾಡಬೇಕು. ಅಧಿಕಾರಿಗಳು ಈ ನಿಯಮಾವಳಿಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡದ್ದರಿಂದಾಗಿ ಅನೇಕ ಅದಕ್ಷರು, ಲಂಚಕೋರರು ಅಧಿಕಾರದಲ್ಲಿ ಮುಂದುವರಿಯುವಂತಾಯಿತು ಎಂಬುದು ನೌಕರರ ಅಭಿಪ್ರಾಯ.
ಐಎಎಸ್ ವಿರುದ್ಧ ಕ್ರಮವಿಲ್ಲ:ಈ ನಿಯಮಾವಳಿಗಳ ಪ್ರಕಾರ ಐಎಎಸ್ ಅಧಿಕಾರಿಗಳಿಗೆ ಶಿಕ್ಷೆ ನೀಡುವ ಪ್ರಯತ್ನ ನಡೆದಿಲ್ಲವೆಂಬ ದೂರುಗಳಿವೆ. ಈ ಹಿಂದೆ ಅದಕ್ಷ ಅಧಿಕಾರಿಯೊಬ್ಬರಿಗಾಗಿಯೇ ವಿಶೇಷ ಹುದ್ದೆಯನ್ನು ಸೃಷ್ಟಿಸಲಾಗಿತ್ತೆ ಹೊರತು ಅವರ ವಿರುದ್ಧ ದೂರುಗಳಿದ್ದರೂ ಕ್ರಮ ಆಗಲಿಲ್ಲವೆಂಬ ಆರೋಪಗಳೂ ಇವೆ. ಕೇಂದ್ರ ಸರ್ಕಾರದ ನಿಯಮಾವಳಿ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂಬ ಒತ್ತಾಯ ಕೇಳಿಬಂದಿದೆ.
ಜನರ ದಾರಿ ತಪ್ಪಿಸಬೇಡಿ:ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ 1969ರಿಂದಲೇ ಅದಕ್ಷ ಮತ್ತು ಭ್ರಷ್ಟ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡುವ ನಿಯಮ ಜಾರಿಯಲ್ಲಿದೆ. ಕಟ್ಟುನಿಟ್ಟಾಗಿ ಜಾರಿಗೆ ತರುವ ಬದ್ಧತೆ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಇಲ್ಲ. ಇದೀಗ ಕೇಂದ್ರ ಸರ್ಕಾರ ಅದನ್ನೇ ಹೊಸ ಕಾಯ್ದೆ ರೂಪದಲ್ಲಿ ಹೇಳುವ ಬದಲು ಜಾರಿಗೆ ತರಲಿ. ರಾಜ್ಯ ಸರ್ಕಾರ ಅದಕ್ಷ ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಜಾರಿಗೆ ತಂದು ಬಿಸಿ ಮುಟ್ಟಿಸಿದರೆ ನಾಗರಿಕ ಸಮಾಜಕ್ಕೆ ಅನುಕೂಲವಾಗಲಿದೆ. ಹೆಸರಿಗೆ ಮಾತ್ರ ಕಾಯ್ದೆ ರೂಪಿಸಿ ಜನರಿಗೆ ಮೋಸ ಮಾಡುವುದು ಬೇಡ. ಯಾವ ಅಧಿಕಾರಿ ಭ್ರಷ್ಟ, ಅದಕ್ಷ ಎಂದು ಪ್ರತಿಯೊಬ್ಬ ರಾಜಕೀಯ ವ್ಯಕ್ತಿಗಳಿಗೂ ಗೊತ್ತು. ಅಂಥವರಿಂದಲೇ ರಾಜಕಾರಣಿಗಳಿಗೂ ಲಾಭ ಇರುವುದು.| ಶಂಕರ್ ಬಿದರಿನಿವೃತ್ತ ಡಿಜಿ-ಐಜಿಪಿ
ದುರುಪಯೋಗದ ಭೀತಿ:30 ವರ್ಷ ಪೂರೈಸಿರುವ ಕೆಲ ನೌಕರರಿಗೆ ಗೇಟ್​ಪಾಸ್ ಕೊಡುವುದನ್ನು ವಿರೋಧಿಸುತ್ತೇವೆ. ಕೇಂದ್ರ ಸರ್ಕಾರ ಯಾವ ಮಾನದಂಡ ಇಟ್ಟುಕೊಂಡು ಈ ಆದೇಶ ಹೊರಡಿಸಿದೆ ಎಂಬುದು ತಿಳಿದಿಲ್ಲ. ಕೆಲ ಅಧಿಕಾರಿಗಳು ಇದನ್ನು ದುರುಪಯೋಗಪಡಿಸುವ ಸಾಧ್ಯತೆಗಳೂ ಹೆಚ್ಚಾಗಿವೆ. ಈ ಕಾಯ್ದೆ ರಾಜ್ಯ ಮತ್ತು ಕೇಂದ್ರಗಳ ನೌಕರರಿಗೆ ಅನ್ವಯವಾಗುವ ರೀತಿಗಳು ವಿಭಿನ್ನವಾಗಿರುತ್ತದೆ. ನೌಕರರು ಭ್ರಷ್ಟಾಚಾರ ಎಸಗಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ಕಾನೂನುಗಳಿವೆ. ಆಡಳಿತ ವ್ಯವಸ್ಥೆಯಲ್ಲಿ ಹಿರಿತನ ಎಂಬುದು ಬಹಳ ಮುಖ್ಯ. ಕಾನೂನು, ಕಾಯ್ದೆಗಳನ್ನು ತಿಳಿದುಕೊಳ್ಳಬೇಕಾದ ಸಂದರ್ಭದಲ್ಲಿ ಅನುಭವಗಳ ಆಧಾರದ ಮೇಲೆ ಕೆಲಸ ಮಾಡಬೇಕಾಗುತ್ತದೆ. ಸರ್ಕಾರ ಇದನ್ನು ಪುನರ್​ಪರಿಶೀಲನೆ ಮಾಡಬೇಕು.| ಷಡಾಕ್ಷರಿಸರ್ಕಾರಿ ನೌಕರರ ಸಂಘದ ಅಧ್ಯಕ್ಷ
ಸರಿಯಾದ ನಿರ್ಧಾರ:ಅಸಮರ್ಥ ಹಾಗೂ ಭ್ರಷ್ಟಚಾರದಲ್ಲಿ ಭಾಗಿಯಾದವರನ್ನು ಸೇವೆಯಿಂದ ಅಕಾಲಿಕ ನಿವೃತ್ತಿಗೊಳಿಸುವ ಕೇಂದ್ರ ಸರ್ಕಾರದ ನಿಲುವು ಸರಿಯಿದೆ. ಸರ್ಕಾರದ ಸವಲತ್ತುಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸರ್ಕಾರಿ ಅಧಿಕಾರಿಗಳ ಪಾತ್ರ ಮಹತ್ವದ್ದು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಸೇವೆ ಸಲ್ಲಿಸಬೇಕು. ಯಾರು ಈ ಕಾರ್ಯಗಳನ್ನು ಸರಿಯಾಗಿ ಮಾಡುವುದಿಲ್ಲವೋ ಅಂಥವರನ್ನು ರಕ್ಷಿಸುವ ಅಗತ್ಯವಿಲ್ಲ. ಬದಲಿಗೆ ಹದಗೆಟ್ಟಿರುವುದನ್ನು ಸರಿಪಡಿಸುವ ಕೆಲಸ ತೀರಾ ಅಗತ್ಯವಿದೆ. ಹೀಗಾಗಿ ಈ ಕಾರ್ಯವನ್ನು ಕೇವಲ ಕೇಂದ್ರ ಸರ್ಕಾರ ಮಾಡಿದರೆ ಸಾಲದು. ಎಲ್ಲ ರಾಜ್ಯಗಳ ಸರ್ಕಾರಗಳಿಂದಲೂ ಈ ಕಾರ್ಯ ಆಗಬೇಕು.| ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯಹಿರಿಯ ಸಾಹಿತಿ ಹಾಗೂ ವಿಮರ್ಶಕ
ತರಬೇತಿ ನೀಡಿ:ವಿವಿಧ ಇಲಾಖೆಗಳಲ್ಲಿ 30 ವರ್ಷ ಸೇವೆ ಪೂರೈಸಿದ ಅದಕ್ಷ, ಅಸಮರ್ಥರನ್ನು ಏಕಾಏಕಿ ಕಡ್ಡಾಯ ನಿವೃತ್ತಿಗೊಳಿಸುವುದು ಸರಿಯಲ್ಲ. ರಾಜ್ಯದಲ್ಲಿರುವ ಸರ್ಕಾರಿ ನೌಕರರಿಗೆ ಸೂಕ್ತ ತರಬೇತಿ ಕೊಟ್ಟು ಕೆಲಸ ಮಾಡಿಸುವುದು ಉತ್ತಮ. ತರಬೇತಿ ನೀಡಲು ಹೆಚ್ಚಿನ ಮಹತ್ವ ನೀಡಬೇಕು. ಕೆಲ ನೌಕರರನ್ನು ಅದಕ್ಷರೆಂದು ಪರಿಗಣಿಸಿ ನಿವೃತ್ತಿಗೊಳಿಸುವ ನಿಯಮ ಸರಿಯಲ್ಲ. ಇದನ್ನು ಜಾರಿಗೆ ತಂದರೆ ಸಮಸ್ಯೆಯಾಗುತ್ತದೆ. ಇದರ ಬದಲು ಅಂಥವರ ವಾರ್ಷಿಕ ಬಡ್ತಿಗಳನ್ನು ತಡೆಹಿಡಿಯಬೇಕು.| ಶಾಂತಾರಾಮ್ಅಧ್ಯಕ್ಷ, ಸರ್ಕಾರಿ ಎನ್​ಪಿಎಸ್ ನೌಕರರ ಸಂಘ
ಶ್ಲಾಘನೀಯ ಕ್ರಮ:ಅಸಮರ್ಥ ಹಾಗೂ ಭ್ರಷ್ಟ ಅಧಿಕಾರಿಗಳ ಹೆಡಮುರಿ ಕಟ್ಟಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಥ ಕಾಯ್ದೆ ತರಲು ಮುಂದಾಗಿರುವುದು ಶ್ಲಾಘನೀಯ. ಭ್ರಷ್ಟ ಅಧಿಕಾರಿಗಳು ಹಾಗೂ ಅಸಮರ್ಥರಿಗೆ ಖಂಡಿತವಾಗಿಯೂ ಗೇಟ್​ಪಾಸ್ ಕೊಡಲೇಬೇಕು. ಇಂಥ ಅಧಿಕಾರಿಗಳನ್ನು 60 ವರ್ಷದವರೆಗೆ ಏಕೆ ಇಟ್ಟುಕೊಳ್ಳಬೇಕು? ಆ ಹುದ್ದೆಗಳಲ್ಲಿ ಪ್ರಾಮಾಣಿಕ ಹಾಗೂ ಸಮರ್ಥ ಅಧಿಕಾರಿಗಳನ್ನು ನೇಮಿಸಬೇಕು.| ಕೆ.ಮಥಾಯಿಕೆಎಎಸ್ ನಿವೃತ್ತ ಅಧಿಕಾರಿ
ಸರಿಯಾಗಿ ಜಾರಿಯಾಗಲಿ:ಕೇಂದ್ರ ಸರ್ಕಾರದ್ದು ಒಳ್ಳೆಯ ಕ್ರಮ. ಆದರೆ, ರಾಜ್ಯದಲ್ಲಿರುವ ಇಂಥ ಸರ್ಕಾರಿ ಭ್ರಷ್ಟ ನೌಕರರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ(ಕೆಎಸ್​ಎಟಿ) ಹಾಗೂ ಕೇಂದ್ರದ ಭ್ರಷ್ಟ ನೌಕರರು ಕೇಂದ್ರ ಆಡಳಿತ ನ್ಯಾಯಮಂಡಳಿಗೆ (ಸಿಎಟಿ) ಮೊರೆ ಹೋಗಿ ತಡೆಯಾಜ್ಞೆ ತರುತ್ತಾರೆ. ರಾಜ್ಯದಲ್ಲಿ ಈ ನಿಯಮ ಇದ್ದರೂ ಪರಿಣಾಮಕಾರಿ ಜಾರಿಯಾಗಿಲ್ಲ. ಹೀಗಾಗಿ ಕಾಯ್ದೆ ಸಂಬಂಧ ಕಾನೂನು ಆಡಚಣೆಗಳನ್ನು ಪರಿಹರಿಸಬೇಕು. ಅಲ್ಲದೆ, ಜಾತಿ ಹಾಗೂ ಸ್ವಜನಪಕ್ಷಪಾತ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕು. | ಡಾ.ಸಿ.ಎಸ್.ದ್ವಾರಕನಾಥ್ಮಾಜಿ ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ಭ್ರಷ್ಟರನ್ನು ವಜಾಮಾಡಿ:ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ ಅವರನ್ನು ಮನೆಗೆ ಕಳುಹಿಸಬೇಕು. ರಾಜ್ಯದಲ್ಲೂ ಆ ಮಾದರಿ ಅನುಸರಿಸಬೇಕು. ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ, ಭ್ರಷ್ಟಾಚಾರ ಸಾಬೀತಾದವರನ್ನು ಅಮಾನತು ಮಾಡುವ ಬದಲು ವಜಾ ಮಾಡಬೇಕು. ಅದಕ್ಷರನ್ನು ಗುರುತಿಸುವುದಕ್ಕೆ ಸೇವಾ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಅದರ ಬದಲು ಅವರು ಗಳಿಸಿದ ಸಂಪತ್ತು, ಲೋಕಾಯುಕ್ತ, ಎಸಿಬಿಯಲ್ಲಿ ದಾಖಲಾದ ಪ್ರಕರಣಗಳ ಬಗೆಗಿನ ಮಾಹಿತಿ ಪಡೆಯಬೇಕು. ಅಂಥವರನ್ನು ಸೇವೆಯಿಂದ ಮುಕ್ತರನ್ನಾಗಿಸಬೇಕು.| ರವಿಕೃಷ್ಣಾರೆಡ್ಡಿಸಾಮಾಜಿಕ ಕಾರ್ಯಕರ್ತ
ಜಾರಿಗೆ ತರುವುದೇ ಕಷ್ಟ!:ರಾಜ್ಯದಲ್ಲಿಯೂ ಅದಕ್ಷ, ಭ್ರಷ್ಟ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡುವ ನಿಯಮವಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದೇ ಕಷ್ಟ. ಒಬ್ಬ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದರೆ ನೂರೆಂಟು ಅಡೆತಡೆಗಳು ಬರುತ್ತವೆ. ಯಾರೂ ಹಸ್ತಕ್ಷೇಪ ಮಾಡದಂತೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಯ್ದೆಯನ್ನು ಮತ್ತಷ್ಟು ಕಠಿಣ ಮಾಡಬೇಕು.| ಎನ್.ಎಸ್.ಮೇಘರಿಕ್ನಿವೃತ್ತ ಡಿಜಿಪಿ
ರಾಜ್ಯದಲ್ಲಿ ಹಿಂದೆಯೇ ಜಾರಿಗೆ ಬಂದ ನಿಯಮಾವಳಿಗಳ ಅನುಷ್ಠಾನದಲ್ಲಿ ಪ್ರಾಮಾಣಿಕತೆ ತೋರಿಸಿದ್ದರೆ ಆಡಳಿತದಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದಿತ್ತು. ಅದಕ್ಷರು ಮುಂದುವರಿಯುತ್ತಿರಲಿಲ್ಲ. ಈಗಲಾದರೂ ಜಾರಿಗೆ ತರಬೇಕು. ಆದರೆ ನಿಯಮಾವಳಿ ಹೆಸರಿನಲ್ಲಿ ಯಾರದೇ ವಿರುದ್ಧ ದ್ವೇಷದ ಕ್ರಮಕ್ಕೆ ಆಸ್ಪದ ನೀಡಬಾರದು.|ಮಹದೇವಯ್ಯ ಮಠಪತಿಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಒಕ್ಕೂಟ
ಯಾವುದೇ ನೌಕರ ಅದಕ್ಷ, ಭ್ರಷ್ಟಾಚಾರಿ ಅಂತ ಗುರುತಿಸುವುದು ಹೇಗೆ? ಅಧಿಕಾರಿಗಳಿಗೆ ಅಧಿಕಾರ ನೀಡಿದರೆ ಅವರು ತಮಗೆ ಆಗದ ನೌಕರರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೆಂಬ ಗ್ಯಾರಂಟಿ ಏನು? ನಿವೃತ್ತರ ಮರುನೇಮಕ ಮಾಡುವುದು ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುತ್ತಿರುವವರೇ ಭ್ರಷ್ಟಾಚಾರ ಹೆಚ್ಚಲು ಕಾರಣರಾಗಿದ್ದಾರೆ. ಸರ್ಕಾರ ಖಾಲಿ ಹುದ್ದೆಗಳಿಗೆ ಮೊದಲು ನೇಮಕ ಮಾಡಲಿ.| ಪಿ. ಗುರುಸ್ವಾಮಿಅಧ್ಯಕ್ಷ, ಸರ್ಕಾರಿ ಸಚಿವಾಲಯ ನೌಕರರ ಸಂಘ
ವಿಡಿಯೋ: ಮೂರು ವರ್ಷದ ಮಗುವನ್ನು 100 ಅಡಿ ಎತ್ತರಕ್ಕೆ ಕೊಂಡೊಯ್ದ ಗಾಳಿಪಟ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
