|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಕರೊನಾ ಲಾಕ್​ಡೌನ್ ತೆರವಿನ ಬಳಿಕ ಚೇತರಿಕೆಯ ಹಾದಿಗೆ ಹೊರಳಿದ್ದ ರಾಜ್ಯದ ಉದ್ಯಮ ವಲಯಕ್ಕೆ ಮತ್ತೆ ಗರ ಬಡಿದಂತಾಗಿದೆ. ಒಂದೆಡೆ ನಿರಂತರ ತೈಲ ಬೆಲೆ ಏರಿಕೆ, ಮತ್ತೊಂದೆಡೆ ಕರೊನಾ ಎರಡನೇ ಅಲೆಯ ಭೀತಿ ಆರ್ಥಿಕ ಸುಧಾರಣೆ ಮೇಲೆ ಗಂಭೀರ ಗ್ರಹಣ ಕವಿಯುವಂತೆ ಮಾಡಿದೆ. ಲಾಕ್​ಡೌನ್ ತೆರವಿನ ಬಳಿಕ ಉದ್ಯಮ ಚೇತರಿಸಿಕೊಳ್ಳುತ್ತಿತ್ತು. ಆದರೆ ಡಿಸೆಂಬರ್ ಕೊನೆಯ ವಾರದಿಂದ ಮತ್ತೆ ಎಲ್ಲ ರಂಗಗಳಲ್ಲೂ ವಹಿವಾಟು ಕುಸಿತವಾಗುತ್ತಿರುವುದು ಉದ್ಯಮಿಗಳನ್ನು ಚಿಂತೆಗೆ ದೂಡಿದೆ. ಕೈಗಾರಿಕೆ, ಎಂಎಸ್​ಎಂಇ, ಆತಿಥ್ಯ, ಪ್ರವಾಸೋದ್ಯಮ, ನಿರ್ವಣ, ಎಫ್​ಎಂಸಿಜಿ, ಸಾರಿಗೆ ಹೀಗೆ ಎಲ್ಲ ವಲಯಗಳಲ್ಲಿಯೂ ಚಟುವಟಿಕೆ ಕುಂಠಿತವಾಗುತ್ತಿವೆ. ಚೇತರಿಕೆ ಕಂಡಿದ್ದ ಪ್ರಮಾಣದಲ್ಲೇ ಶೇ.40ರಿಂದ 50 ವಹಿವಾಟು ಕುಸಿತವಾಗುತ್ತಿದೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಈಗಾಗಲೇ ವಸ್ತುಗಳನ್ನು ಕಾಯ್ದಿರಿಸಿರುವವರು ಹೊಸದಾಗಿ ದರ ಹೆಚ್ಚಳಕ್ಕೆ ಒಪು್ಪತ್ತಿಲ್ಲ. ಪರಿಣಾಮ ಕೈಗಾರಿಕೆಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಹೊಸ ಒಪ್ಪಂದವೂ ಏರ್ಪಡುತ್ತಿಲ್ಲ. ಊರುಗಳಿಗೆ ತೆರಳಿದ್ದ ಬಹಳಷ್ಟು ಕಾರ್ವಿುಕರು ವಾಪಸ್ ಆಗಿಲ್ಲ. ಕಾಪರ್ ಬೆಲೆ ಹೆಚ್ಚಳದಿಂದ ಆಟೋಮೊಬೈಲ್, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ಸ್ ಕೈಗಾರಿಕೆಗಳಲ್ಲಿ ಸಮಸ್ಯೆಯಾಗಿದೆ. ಬೆಲೆ ಹೆಚ್ಚಳದ ಮೂಲಕ ಗ್ರಾಹಕರಿಗೂ ಇದರಿಂದ ಸಮಸ್ಯೆ ಆಗಬಹುದು. ಜವಳಿ ಹಾಗೂ ಸಿದ್ಧ ಉಡುಪು ಕ್ಷೇತ್ರದಲ್ಲಿ ಶೇ.50 ಕುಸಿತವಾಗಿದೆ. ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆ ಸುಧಾರಣೆ ಕಂಡಿಲ್ಲ. ರಫ್ತು ಪ್ರಮಾಣ ಕೂಡ ಶೇ.40 ಕಡಿಮೆಯಾಗಿದೆ.
ವಲಯ ಸಂಕಷ್ಟ:ಕೈಗಾರಿಕೆ, ಎಂಎಸ್​ಎಂಇ, ಆತಿಥ್ಯ, ಪ್ರವಾಸೋದ್ಯಮ, ನಿರ್ವಣ, ಎಫ್​ಎಂಸಿಜಿ ಸಾರಿಗೆ ವಲಯ
ಎಂಎಸ್​ಎಂಇ ವಲಯ:ಅತಿ ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆ ವಲಯ ಐಸಿಯುನಿಂದ ಹೊರ ಬರುವ ಹಂತದಲ್ಲೇ ಮತ್ತೆ ಕುಸಿತವಾಗಿದೆ. ಉತ್ಪಾದನಾ ವೆಚ್ಚ ಶೆ.30 ರಿಂದ 40 ಹೆಚ್ಚಾಗಿದೆ. ಮೂಲಸೌಕರ್ಯ ವಲಯಕ್ಕೆ ಸಣ್ಣ ಕೈಗಾರಿಕೆಗಳು ವಸ್ತುಗಳನ್ನು ಸರಬರಾಜು ಮಾಡುತ್ತವೆ. ಆದರೆ ಗುತ್ತಿಗೆದಾರರಿಗೆ ಸರ್ಕಾರಗಳು ಸರಿಯಾದ ಸಂದರ್ಭಕ್ಕೆ ಹಣ ಪಾವತಿಸದ ಕಾರಣಕ್ಕೆ ತೊಂದರೆಗೆ ಒಳಗಾಗಿವೆ. ಇಲಾಖೆಗಳಿಗೆ ಆಗಿರುವ ಅನುದಾನ ಕಡಿತ ಪರೋಕ್ಷವಾಗಿ ಈ ವಲಯದ ಮೇಲೆ ತನ್ನ ಪರಿಣಾಮವನ್ನು ಬೀರಿದೆ.
ನಿರ್ಮಾಣ ಕ್ಷೇತ್ರ ಸ್ಥಗಿತ:ಜಲ್ಲಿ, ಮರಳು, ಕೆಂಪುಕಲ್ಲು, ಸಿಮೆಂಟ್, ಕಬ್ಬಿಣ, ಮರಳು ಬೆಲೆ ಹೆಚ್ಚಳವಾಗಿರುವ ಪರಿಣಾಮ ನಿರ್ಮಾಣ ಕ್ಷೇತ್ರದಲ್ಲಿ ಕಾಮಗಾರಿ ಶೇ.70 ನಿಂತು ಹೋಗಿವೆ. ಕೂಲಿ ಕಾರ್ವಿುಕರ ಸಮಸ್ಯೆ ಇದೆ. ಒಪ್ಪಿಕೊಂಡಿರುವ ಕಾಮಗಾರಿಗಳನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲಾಗದ ಒತ್ತಡದಲ್ಲಿ ಗುತ್ತಿಗೆದಾರರಿದ್ದಾರೆ.
ಮೇಲೇಳದ ಪ್ರವಾಸೋದ್ಯಮ:ಲಾಕ್​ಡೌನ್​ನಲ್ಲಿ ಸ್ಥಗಿತಗೊಂಡಿದ್ದ ಪ್ರವಾಸೋದ್ಯಮ ಮತ್ತೆ ಪುನಶ್ಚೇತನಗೊಳ್ಳಲಿಲ್ಲ. ಇದೀಗ ಕರೊನಾ ಎರಡನೇ ಅಲೆ ಭೀತಿ ಇರುವುದರಿಂದ ಪರೀಕ್ಷೆಗಳು ಮುಗಿದ ನಂತರ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದ ಸಾಂಪ್ರದಾಯಿಕ ಪ್ರವಾಸಿಗರು ಈ ಬಾರಿ ಬರುವ ನಿರೀಕ್ಷೆ ಇಲ್ಲ. ಇದರಿಂದಾಗಿ ಹೋಟೆಲ್, ಸಾರಿಗೆ ಸೇರಿ ಇತರ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಲಕ್ಷಾಂತರ ಪ್ರವಾಸಿ ವಾಹನಗಳು, ಟೂರಿಸ್ಟ್ ಗೈಡ್​ಗಳು, ಏಜೆಂಟರು ತೊಂದರೆ ಅನುಭವಿಸುತ್ತಿದ್ದಾರೆ.
ಸಾರಿಗೆ ವಲಯ:ಖಾಸಗಿ ಬಸ್​ಗಳು ಓಡುತ್ತಿದ್ದರೂ ಜನ ಪೂರ್ತಿ ಇರುವುದಿಲ್ಲ. ಇಂಧನ ಬೆಲೆ ಏರಿಕೆಯಿಂದ ನಿರ್ವಹಣೆ ವೆಚ್ಚ ಹೆಚ್ಚುತ್ತಿದೆ. ಇದರ ಜತೆಗೆ ಕಾಪೋರೇಟ್ ವಲಯದಲ್ಲಿ ಶೇ.50 ವಾಹನಗಳು ಕಡಿಮೆಯಾಗಿವೆ. ಅಂತಾರಾಷ್ಟ್ರೀಯ ವಿಮಾನಗಳು ಬರದಿರುವುದರಿಂದ ಏರ್​ಪೋರ್ಟ್ ವಾಹನಗಳಿಗೆ ಬೇಡಿಕೆ ಇಲ್ಲ. ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮುಂದುವರಿಸಿರುವ ಪರಿಣಾಮ ಬಾಡಿಗೆ ವಾಹನಗಳ ಬಳಕೆ ಕಡಿಮೆಯಾಗಿದೆ. 2 ಲಕ್ಷ ಟ್ಯಾಕ್ಸಿಗಳಲ್ಲಿ 50 ಸಾವಿರ ಸಹ ಓಡುತ್ತಿಲ್ಲ. ಶಾಲಾ ವಾಹನಗಳು ನಿಂತು ವರ್ಷವಾಗಿದೆ.
ಹೋಟೆಲ್​ಗಳಲ್ಲಿ ಸಮಸ್ಯೆ:ಹೋಟೆಲ್ ಉದ್ಯಮ ಸಹಜ ಸ್ಥಿತಿಗೆ ಬರುತ್ತಿತ್ತಾದರೂ ಹೋಟೆಲ್ ಮಾಲೀಕರಿಗೆ ಈಗ 2ನೇ ಅಲೆಯ ಭೀತಿ ಇದೆ. ಇದರ ಜತೆಗೆ ಇಂಧನ ಬೆಲೆ ಏರಿಕೆಯೂ ಸಮಸ್ಯೆ ಸೃಷ್ಟಿಸಿದೆ. ಎಲ್ಲ ವಸ್ತುಗಳ ಬೆಲೆ ಏರಿದೆ, ಆದರೆ ತಿಂಡಿಗಳ ಬೆಲೆ ಜಾಸ್ತಿ ಮಾಡಲಾಗದ ಸ್ಥಿತಿಯಲ್ಲಿ ಹೋಟೆಲ್ ಮಾಲೀಕರಿದ್ದಾರೆ. ಲಾಡ್ಜ್​ಗಳಲ್ಲಿ ವಹಿವಾಟಿಲ್ಲ. ಜನ ಲಾಡ್ಜ್​ಗಳಿಗೆ ಬರುತ್ತಿಲ್ಲ. ಇದರ ಜತೆಗೆ ಹೋಟೆಲ್ ನೌಕರರಿಗೆ ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಿರುವುದು ಹೋಟೆಲ್ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂಧನ ಬೆಲೆ ಹೆಚ್ಚಳದಿಂದಾಗಿ ತಿಂಡಿಗಳ ಬೆಲೆ ಹೆಚ್ಚಿಸುವ ಕುರಿತು ಏಪ್ರಿಲ್​ನಲ್ಲಿ ಹೋಟೆಲ್ ಮಾಲೀಕರು ಸಭೆ ಸೇರಿ ನಿರ್ಧಾರ ಮಾಡಲಿದ್ದಾರೆ. ಶೇ. 20 ಬೆಲೆ ಹೆಚ್ಚಳದ ಬಗ್ಗೆ ಚರ್ಚೆ ನಡೆದಿದೆ.
ಹಣದುಬ್ಬರ ಹೆಚ್ಚಳ:ದೇಶದಲ್ಲಿ ಬೆಲೆ ಏರಿಕೆಯಿಂದಾಗಿ ಹಣದುಬ್ಬರದ ಪ್ರಮಾಣ ಹೆಚ್ಚಾಗಿದೆ. ಫೆಬ್ರವರಿಯಲ್ಲಿ ಹಣದುಬ್ಬರ 5.03 ಇತ್ತು. ಮಾರ್ಚ್​ನಲ್ಲಿ 0.20 ಅಶ ಹೆಚ್ಚಳವಾಗಿದೆ. ಆಹಾರ, ಇಂಧನ ಬೆಲೆ ನಿರಂತರ ಏರಿಕೆ ಇದಕ್ಕೆ ಕಾರಣವಾಗಿದೆ.
ಇಂಧನ ಬೆಲೆ ಹೆಚ್ಚಳದಿಂದಾಗಿ ಎಲ್ಲ ವಲಯ ಗಳಲ್ಲೂ ವಹಿವಾಟು ಕುಸಿದಿದೆ. ಉದ್ಯಮದ ಮೇಲೂ ಪರಿಣಾಮ ಬೀರುತ್ತದೆ. ವಿವಿಧ ವಲಯಗಳಲ್ಲಿ ಸರ್ಕಾರ ಉದಾರವಾಗಿರಬೇಕು.
|ಪೆರಿಕಲ್ ಸುಂದರ್​ ಅಧ್ಯಕ್ಷರು, ಎಫ್​ಕೆಸಿಸಿಐ
ಸರ್ಕಾರ ಗುತ್ತಿಗೆದಾರರಿಗೆ ಸರಿಯಾಗಿ ಬಿಲ್ ನೀಡಿದರೆ ಸಣ್ಣ ಕೈಗಾರಿಕೆಗಳು ಉಳಿಯಲು ಸಹಕಾರಿ. ಆ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ.
|ಜೆ. ಕ್ರಾಸ್ಟಮಾಜಿ ಅಧ್ಯಕ್ಷ, ಅಸೋಚಾಮ್
ಸಾರಿಗೆ ವಲಯ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಈ ವಲಯದಲ್ಲಿದ್ದ ಅನೇಕರು ಹ್ಯಾಂಡಿಕ್ರಾಪ್ಟ್ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸುವ ಸ್ಥಿತಿಗೆ ಬಂದಿದ್ದೇವೆ.
|ರಾಧಾಕೃಷ್ಣ ಹೊಳ್ಳಅಧ್ಯಕ್ಷ, ರಾಜ್ಯ ಟ್ರಾವೆಲ್ ಆಪರೇಟರ್​ಗಳ ಸಂಘ
ಸಂಕಷ್ಟದಲ್ಲೇ ಹೋಟೆಲ್​ಗಳನ್ನು ನಡೆಸುವಂತಾಗಿದೆ. ಇಂಧನ ಬೆಲೆ ಏರಿಕೆ ನಮಗೆ ಸಾಕಷ್ಟು ಸಮಸ್ಯೆ ತಂದಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡದೆ ಹೋಟೆಲ್ ಕಾರ್ವಿುಕರನ್ನು ಕರೊನಾ ವಾರಿಯರ್ಸ್ ಎಂದು ಪರಿಗಣಿಸಿ ಕಡ್ಡಾಯ ಲಸಿಕೆ ಕೊಡಿಸಲಿ.
|ಸಿ.ಪಿ. ರಾವ್ಅಧ್ಯಕ್ಷ, ಬೆಂಗಳೂರು ಹೋಟೆಲ್ ಮಾಲೀಕರ ಸಂಘ
ನಿರ್ಮಾಣ ಕ್ಷೇತ್ರಕ್ಕೆ ಮುದ್ರಾಂಕ ಶುಲ್ಕವನ್ನು ಮಹಾರಾಷ್ಟ್ರ ರೀತಿಯಲ್ಲಿ ಮನ್ನಾ ಮಾಡುವಂತೆ ಮನವಿ ಮಾಡಿದ್ದೆವು, ಕೆಲವು ನಿಯಮಗಳಲ್ಲಿಯೂ ಬದಲಾವಣೆ ಕೇಳಿದ್ದೇವೆ. ಸರ್ಕಾರ ಇನ್ನೂ ಗಮನ ಹರಿಸಿಲ್ಲ.
|ಸುರೇಶ್ ಹರಿಕ್ರೆಡಾಯ್
ಕರೊನಾ ಪ್ರಕರಣ ಸಾವಿರ ಗಡಿ ದಾಟಿದರೆ ಲಾಕ್‌ಡೌನ್ ಸಾಧ್ಯತೆ; ಮತ್ತೆ ಹೆಚ್ಚಾಯಿತು ಕೋವಿಡ್-19 ಪಾಸಿಟಿವ್ ಕೇಸ್

ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ; ಸುಳ್ಳು ಸುತ್ತೋಲೆ ಸೃಷ್ಟಿಸಿದವರ ವಿರುದ್ಧ ಕ್ರಿಮಿನಲ್ ಕೇಸ್-ಡಿಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
