ಬೆಂಗಳೂರು:ಮೇಕೆದಾಟು ರಾಜಕೀಯ ಮತ್ತೊಂದು ಘಟ್ಟಕ್ಕೆ ಹೊರಳಿದ್ದು, ನಾಡಿಗಾಗಿ ಒಟ್ಟಿಗೆ ಹೆಜ್ಜೆ ಇಡುವ ತೀರ್ವನಕ್ಕೆ ರಾಜಕೀಯ ಪಕ್ಷಗಳು ಬಂದಿವೆ. ಇನ್ನೊಂದು ವಾರದಲ್ಲಿ ಸರ್ವಪಕ್ಷ ಸಭೆ ಕರೆಯಲು ನಿರ್ಧರಿಸಿರುವ ಸರ್ಕಾರ ಮುಕ್ತವಾಗಿ ಅಭಿಪ್ರಾಯ ಕೊಡುವಂತೆ ಪ್ರತಿಪಕ್ಷಕ್ಕೆ ಆಹ್ವಾನ ನೀಡಿದೆ.
ಪಾದಯಾತ್ರೆ ಮೂಲಕ ಸರ್ಕಾರ ಹಾಗೂ ಜೆಡಿಎಸ್​ಗೆ ಬಿಸಿ ಮುಟ್ಟಿಸಿದ್ದ ಕಾಂಗ್ರೆಸ್, ಈ ವಿಷಯವನ್ನು ಹಸಿಯಾಗಿಡಲು ಬಯಸಿತ್ತು. ಸರ್ಕಾರ ಯೋಜನೆಗೆಂದು ಬಜೆಟ್​ನಲ್ಲಿ ಒಂದು ಸಾವಿರ ಕೋಟಿ ರೂ. ಘೋಷಿಸುವ ಮೂಲಕ ರಕ್ಷಣಾತ್ಮಕ ನಡೆ ಅನುಸರಿಸಿತ್ತು. ಇದೀಗ ಮುಂದುವರಿದು ಸರ್ವ ಪಕ್ಷ ಸಭೆಗೆ ಮುಂದಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಳೆದ ವಾರವಷ್ಟೇ ಸರ್ವಪಕ್ಷ ಕರೆಯುವಂತೆ ಸರ್ಕಾರವನ್ನು ಆಗ್ರಹಿಸಿದ್ದರು.
ಮಂಗಳವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೇಕೆದಾಟು ಯೋಜನೆ ಕುರಿತು ವಿಷಯ ಪ್ರಸ್ತಾಪಿಸಿದಾಗ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು. ಮೇಕೆದಾಟು ಯೋಜನೆ ಸಂಬಂಧ ಸಮಗ್ರ ಯೋಜನಾ ವರದಿ, ಪರಿಸರ ನಿರಾಕ್ಷೇಪಣಾ ಪತ್ರಕ್ಕೆ ಅನುಮತಿ ಬಾಕಿ ಇದೆ. ಈ ಬಗ್ಗೆ ನಮ್ಮ ಕಾನೂನು ತಂಡದ ಜತೆಗೆ ಎರಡು ಸುತ್ತಿನ ಸಭೆ ನಡೆಸಿದ್ದೇನೆ ಎಂದರು. ಸರ್ವಪಕ್ಷ ಸಭೆಗೆ ಕಾನೂನು ತಜ್ಞರನ್ನೂ ಕರೆಸುತ್ತೇನೆ. ಅವರೂ ವಿಚಾರ ಹಂಚಿಕೊಳ್ಳಲಿ. ನಾವೆಲ್ಲರೂ ಸೇರಿ ಒಟ್ಟಾಗಿ ಸೇರಿ ಅಭಿಪ್ರಾಯ ರೂಪಿಸಿ ಮುಂದುವರಿಯಬೇಕೆಂದರು.
ದೆಹಲಿಗೆ ಹೋಗ್ತೀನಿ:ಈಗಾಗಲೇ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರಕ್ಕೆ 5-6 ಪತ್ರ ಬರೆಯಲಾಗಿದೆ. ಸರ್ವಪಕ್ಷ ನಿರ್ಣಯದ ವಿಚಾರವನ್ನೂ ಪತ್ರ ಮುಖೇನ ಸರ್ಕಾರದ ಗಮನಕ್ಕೆ ತರುತ್ತೇನೆ. ಜತೆಗೆ ನಾನೇ ದೆಹಲಿಗೆ ಹೋಗಿ ಸಮಗ್ರ ಯೋಜನಾ ವರದಿಗೆ ಅನುಮತಿ ಪಡೆಯಲು, ಪರಿಸರ ನಿರಾಕ್ಷೇಪಣಾ ಪತ್ರ ಪಡೆಯಲು ಸರ್ವ ಪ್ರಯತ್ನ ಮಾಡುವೆ ಎಂದು ಸಿಎಂ ಘೋಷಿಸಿದರು.
ತಮಿಳ್ನಾಡಿಗೆ ಹಕ್ಕಿಲ್ಲ:ಇದೇ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಮೇಕೆದಾಟು ಯೋಜನೆ ಜಾರಿಯಾಗಬೇಕೆಂದು ಪಾದಯಾತ್ರೆ ಮಾಡಿದೆವು, ಈ ಯೋಜನೆ ಜಾರಿ ಮಾಡಬಾರದೆಂದು ಸುಪ್ರೀಂ ಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ 2018ರ ಫೆ.16ರಂದು ಅಂತಿಮ ತೀರ್ಪು ನೀಡಿದೆ, ಅದರ ಪ್ರಕಾರ ತಮಿಳುನಾಡಿಗೆ 177.75 ಟಿಎಂಸಿ ನೀರನ್ನು ಒಂದು ಸಾಮಾನ್ಯ ವರ್ಷದಲ್ಲಿ ಬಿಡಬೇಕು. ಮೇಕೆದಾಟು ಯೋಜನೆ ಜಾರಿಯಾಗದಂತೆ ತಕರಾರು ಮಾಡಲು ತಮಿಳುನಾಡಿಗೆ ಯಾವುದೇ ಸಂವಿಧಾನಾತ್ಮಕ ಹಕ್ಕುಗಳಿಲ್ಲ ಎಂದು ಪ್ರತಿಪಾದಿಸಿದರು.
ಒಂದು ಸಾಮಾನ್ಯ ವರ್ಷದಲ್ಲಿ ಬಿಡುವ ಅವರ ಪಾಲಿನ ನೀರನ್ನು ಹೊರತುಪಡಿಸಿ ಕಳೆದ ಏಳು ವರ್ಷಗಳಲ್ಲಿ 582 ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಇದು ನಮಗಾದ ನಷ್ಟವಲ್ಲದೆ ಇನ್ನೇನು? ತಮಿಳುನಾಡಿನ ಸರ್ಕಾರ ರಾಜಕೀಯ ಕಾರಣಕ್ಕೆ ಸುಪ್ರೀಂಕೋರ್ಟ್​ನಲ್ಲಿ ಮೊಕದ್ದಮೆ ದಾಖಲಿಸಿದೆ, ಆದರೆ ಸುಪ್ರೀಂಕೋರ್ಟ್ ಈವರೆಗೆ ಯಾವುದೇ ರೀತಿಯ ತಡೆಯಾಜ್ಞೆ ನೀಡಿಲ್ಲ ಎಂದರು.
ಮೇಕೆದಾಟು ತಮಿಳುನಾಡು ಮತ್ತು ಕರ್ನಾಟಕದ ನಡುವಿನ ವಿವಾದಾತ್ಮಕ ವಿಚಾರ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವರು ಹೇಳಿಕೆ ನೀಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾಗಲೀ ಅಥವಾ ನೀರಾವರಿ ಸಚಿವರಾಗಲೀ ತಕ್ಷಣ ಅವರ ಹೇಳಿಕೆ ಖಂಡಿಸಬೇಕಿತ್ತು. ರಾಜ್ಯ ಸರ್ಕಾರ ಸುಮ್ಮನಿರುವುದರಿಂದ ಇದು ವಿವಾದಾತ್ಮಕ ವಿಷಯ ಎಂದು ಪರಿಗಣಿಸಿ ನಾಳೆ ಪರಿಸರ ಅನುಮತಿಯನ್ನು ಕೇಂದ್ರ ಸರ್ಕಾರ ನೀಡಲ್ಲ. ಆಗೇನು ಮಾಡಬೇಕು? ಎಂದು ಪ್ರಶ್ನಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಸಿಎಂ, ಕೇಂದ್ರ ಸಚಿವರು ಆ ಹೇಳಿಕೆ ನೀಡಿದಾಗ ನಾನು ಆ ವೇದಿಕೆಯಲ್ಲಿ ಇರಲಿಲ್ಲ. ಸುದ್ದಿಗೋಷ್ಠಿಯಲ್ಲಿ ಆ ರೀತಿ ಹೇಳಿದ್ದಾರೆ. ಈಗಾಗಲೇ ನಮ್ಮ ನಿಲುವನ್ನು ಕೇಂದ್ರಕ್ಕೆ ತಿಳಿಸಿದ್ದೇವೆ ಎಂದು ಹೇಳಿದರು.
ಮೇಕೆದಾಟು ವಿಷಯದಲ್ಲಿ ಮುಂದಿನ ತೀರ್ಮಾನ ಕುರಿತಂತೆ ಈ ವಾರದಲ್ಲೇ ಸರ್ವಪಕ್ಷ ಸಭೆ ಕರೆಯಲಾಗುತ್ತದೆ. ಅಲ್ಲಿ ಕೈಗೊಂಡ ನಿರ್ಣಯದಂತೆ ಸರ್ಕಾರ ಹೆಜ್ಜೆ ಮುಂದಿಡಲಿದೆ .
|ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
2022ರಲ್ಲೇ ಚಾಲನೆ?:ಪ್ರಸಕ್ತ ವರ್ಷದಲ್ಲೇ ಮೇಕೆದಾಟು ಯೋಜನೆ ಪ್ರಾರಂಭಿಸುವ ವಿಶ್ವಾಸವನ್ನು ಸಿಎಂ ವ್ಯಕ್ತಪಡಿಸಿದ್ದಾರೆ. ವಿಸõತ ಯೋಜನಾ ವರದಿ ಈಗಾಗಲೇ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ತಲುಪಿದ್ದು, ಶೀಘ್ರ ಒಪ್ಪಿಗೆ ಸಿಗಲಿದೆ. ಪರಿಸರ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಲು ಸ್ವಲ್ಪ ಸಮಯ ಹಿಡಿಯಬಹುದು, ಆದರೆ ಪ್ರಸಕ್ತ ವರ್ಷದಲ್ಲಿ ಯೋಜನೆ ಪ್ರಾರಂಭಿಸುವ ವಿಶ್ವಾಸವಿದೆ ಎಂದು ಹೇಳಿಕೊಂಡಿದ್ದಾರೆ.
ಮೇಕೆದಾಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ಸರ್ಕಾರ ಅಣೆಕಟ್ಟೆ ಕಟ್ಟುವುದನ್ನು ಶತಾಯಗತಾಯ ತಡೆಯಬೇಕು ಎಂದು ತಮಿಳುನಾಡಿನ ವಿರೋಧ ಪಕ್ಷಗಳು ಡಿಎಂಕೆ ಸರ್ಕಾರಕ್ಕೆ ಆಗ್ರಹಿಸಿವೆ. ಈ ಯೋಜನೆ ಕೈಗೂಡದಂತೆ ಮಾಡಲು ಏನೇನು ಕಾರ್ಯತಂತ್ರ ರೂಪಿಸಬೇಕು ಎಂಬುದರ ಬಗ್ಗೆ ರ್ಚಚಿಸಲು ಸರ್ಕಾರ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಎಐಎಡಿಎಂಕೆಯ ನಾಯಕ ಓ.ಪನ್ನೀರ್​ಸೆಲ್ವಂ ಮತ್ತು ಪಿಎಂಕೆ ಮುಖಂಡ ಅನ್ಬುಮಣಿ ರಾಮದಾಸ್ ಒತ್ತಾಯಿಸಿದ್ದಾರೆ. ಮೇಕೆದಾಟು ಯೋಜನೆ ವಿರುದ್ಧದ ಯಾವುದೇ ಹೋರಾಟವನ್ನು ತಮ್ಮ ಪಕ್ಷಗಳು ಬೆಂಬಲಿಸಲಿವೆ ಎಂದು ಪ್ರತ್ಯೇಕವಾಗಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಭಯ ನಾಯಕರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
