ಬೆಂಗಳೂರು:ನಿಗಮ-ಮಂಡಳಿಗಳಿಗೆ ಹಠಾತ್ ನೇಮಕ ಪ್ರಕ್ರಿಯೆಯು ಆಡಳಿತಾರೂಢ ಭಾರತೀಯ ಜನತಾ ಪಕ್ಷದಲ್ಲಿ ಸಂಚಲನ ಹುಟ್ಟು ಹಾಕಿದ್ದು, ತೀವ್ರ ಅಸಮಾಧಾನ ಹಾಗೂ ಅತೃಪ್ತಿಯ ಹೊಗೆಯಾಡಲು ಪುಷ್ಠಿ ನೀಡಿದೆ. ಕರೊನಾ ಸೋಂಕು ಸಂಕಷ್ಟ, ಆರ್ಥಿಕ ಮುಗ್ಗಟ್ಟು, ಸಂಪುಟ ಬಿಕ್ಕಟ್ಟಿನ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಂದು ಸವಾಲು ಮೈಮೇಲೆ ಎಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಪೇಕ್ಷಿತರಿಗೆಲ್ಲ ಅಸ್ತು ಎಂಬ ರೀತಿಯಲ್ಲಿ ಮತ್ತಷ್ಟು ನಿಗಮ-ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರ ನೇಮಕ ಆದೇಶಗಳು ಹೊರ ಬಿದ್ದಿವೆ. ಈ ಸರಣಿ ಗುರುವಾರವೂ ಯಥಾರೀತಿ ಸಾಗುವ ಮುನ್ಸೂಚನೆ ದೊರೆತಿದೆ. ಮಾಜಿ ಶಾಸಕರಾದ ಮಾಜಪ್ಪ ವಜ್ಜಲ್ ಅವರು ಹಟ್ಟಿ ಚಿನ್ನದ ಗಣಿ ಕಂಪನಿ, ಡಾ.ವಿಶ್ವನಾಥ್ ಇ. ಪಾಟೀಲ್ ಅವರು ರಾಜ್ಯ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳದ ಅಧ್ಯಕ್ಷರಾಗಿ ನೇಮಕ ಆಗಿರುವುದು ಸೇರಿ 20 ನಿಗಮ-ಮಂಡಳಿಗಳಿಗೆ ನೇಮಕಗಳಾಗಿವೆ.
ತೀವ್ರ ಆಕ್ಷೇಪ:ಬಾಕಿ ಉಳಿದ ನಿಗಮ-ಮಂಡಳಿಗಳಿಗೆ ನೇಮಕವು ಪಕ್ಷದಲ್ಲಿ ಸಮ್ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಹರ್ಷಕ್ಕಿಂತ ಆಕ್ಷೇಪದ ಪ್ರಮಾಣವೇ ಹೆಚ್ಚಿರುವುದು ಗಮನಾರ್ಹ ಅಂಶ. ಬಿಎಸ್​ವೈ ಬೆಂಬಲಿಗರಿಗೆ ಹೆಚ್ಚಿನ ಪ್ರಾತಿನಿಧ್ಯ, ಪ್ರಮುಖ ನಿಗಮ- ಮಂಡಳಿ ನೀಡಲಾಗಿದೆ ಎಂಬ ಅಪಸ್ವರ ಕೇಳಿ ಬರುತ್ತಿದೆ. ಪಕ್ಷ ನಿಷ್ಠೆ, ಸೇವಾ ಹಿರಿತನ ಸರಿದೂಗುವಂತಹ ಅಧಿಕಾರದ ಸ್ಥಾನಮಾನ ನೀಡಿಲ್ಲ. ಈಚೆಗೆ ಪಕ್ಷಕ್ಕೆ ಬಂದವರಿಗೆ ಅನಾಯಾಸವಾಗಿ ಸ್ಥಾನಮಾನ ದೊರೆತಿದ್ದಕ್ಕೆ ಅಸೂಯೆ ಇಲ್ಲ. ಅದೇ ಕಾಲಕ್ಕೆ ಪಕ್ಷದ ಸಂಘಟನೆ ವಿಸ್ತರಿಸಲು ದುಡಿದವರ ಘನತೆ-ಗೌರವಕ್ಕೆ ತಕ್ಕುದಾದ ರೀತಿಯಲ್ಲಿ ನೇಮಕಗಳಾಗಿಲ್ಲ ಎಂಬ ವ್ಯಥೆ ಹಿರಿಯರಲ್ಲಿ ಮನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಕಾದು ನೋಡುವ ತಂತ್ರ:ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ನೇಮಕವಾಗಿರುವ ವಿಧಾನಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ ಅಧಿಕಾರ ಸ್ವೀಕರಿಸುವುದಿಲ್ಲ ಎಂದಿದ್ದಾರೆ. ಅದೇ ರೀತಿ ಇನ್ನೂ ಕೆಲವು ಹಾಲಿ, ಮಾಜಿ ಶಾಸಕರು ಕಾದು ನೋಡುವ ತಂತ್ರ ಅನುಸರಿಸಿ ದ್ದಾರೆ. ಕಾರ್ವಿುಕ ಕಲ್ಯಾಣ ಮಂಡಳಿ ಅಧ್ಯಕ್ಷರಾಗಿ ನೇಮಕವಾಗಿರುವ ತಿಪಟೂರು ಶಾಸಕ ಬಿ.ಸಿ.ನಾಗೇಶ್ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಆದೇಶ ಪತ್ರ ಇನ್ನೂ ತಲುಪಿಲ್ಲ, ಕೈಗೆ ಸೇರಿದ ಬಳಿಕ ಅಭಿಪ್ರಾಯ ತಿಳಿಸುವೆ ಎಂದು ಸ್ಪಷ್ಟಪಡಿಸಿದರು. ನಿಗಮಗಳಿಗೆ ನೇಮಕವಾಗಿರುವ ಇನ್ನೂ ಕೆಲವರದು ತಟಸ್ಥ ನಿಲುವು. ಹೀಗಾಗಿ ಅಧಿಕಾರ ಸಿಕ್ಕ ಖುಷಿಯಿಲ್ಲ, ಒಪ್ಪಿಕೊಳ್ಳುವ ಸಾಧ್ಯತೆಯೂ ಕಡಿಮೆ ಎಂಬ ಪರೋಕ್ಷ ಸುಳಿವು ನೀಡಿದರು.
ರಾಜ್ಯದಲ್ಲಿ ಪಕ್ಷ ಬೆಳೆಸಿದ ಬೆರಳೆಣಿಕೆಯಷ್ಟು ನಾಯಕರ ಪೈಕಿ ನಾನೂ ಒಬ್ಬ. ಪಕ್ಷದ ಸೂಚನೆ ಪ್ರಕಾರ, ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ 8-10 ವರ್ಷಗಳಾಗಿವೆ. ಸ್ಥಾನಮಾನ ಕೊಡಿ ಎಂದು ಕೇಳಿಲ್ಲ, ಕೇಳುವುದೂ ಇಲ್ಲ. ಜಾತಿ ಆಧಾರಿತ ನಿಗಮಕ್ಕೆ ನೇಮಿಸಿ ಅಪಮಾನಿಸಿರುವುದು ಬೇಸರ, ನೋವು ತಂದಿದೆ. ಯಾವುದೇ ಕಾರಣಕ್ಕೂ ಅಧಿಕಾರ ಸ್ವೀಕರಿಸುವುದಿಲ್ಲ.
|ಎನ್.ಶಂಕ್ರಪ್ಪವಿಧಾನಪರಿಷತ್ ಮಾಜಿ ಸದಸ್ಯ
ಬೆಂಗಳೂರು:ರಾಜ್ಯ ಸರ್ಕಾರ ದಿವಾಳಿಯಾಗಿದೆ. ವೃದ್ಧಾಪ್ಯ, ವಿಧವಾ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲ. ಇಂತಹ ಆರ್ಥಿಕ ಸಂಕಷ್ಟದ ನಡುವೆ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಸರ್ಕಾರ ಇನ್ನಷ್ಟು ದುಂದುವೆಚ್ಚಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ತರಾತುರಿಯ ನೇಮಕದ ಅಗತ್ಯವೇನಿತ್ತು ಎಂದು ಪ್ರಶ್ನಿಸಿರುವ ಅವರು, ಈ ನೇಮಕ ಅಧಿಕಾರ ಉಳಿಸಿಕೊಳ್ಳುವ ಬಿಎಸ್​ವೈ ಅವರ ಸರ್ಕಸ್ಸಲ್ಲದೆ ಬೇರೇನಲ್ಲ. ಅವರು ಹೋಗುವುದು ಗ್ಯಾರಂಟಿ ಆಗಿರಬೇಕು. ಅದಕ್ಕೆ ಈ ನೇಮಕ ನಡೆಯುತ್ತಿದೆ ಎಂದಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ಆರ್. ಶಂಕರ್ ಹಾಗೂ ಎಂಟಿಬಿ ನಾಗರಾಜ್​ಗೆ ಸಚಿವ ಸ್ಥಾನ ನೀಡದಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಗುರುವಾರಕ್ಕೆ ಮುಂದೂಡಿದೆ. ಎಂಟಿಬಿ ನಾಗರಾಜ್, ಆರ್. ಶಂಕರ್ ಚುನಾವಣೆಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗಿಲ್ಲ. ಎ.ಎಚ್ ವಿಶ್ವನಾಥ್ ಪರಿಷತ್​ಗೆ ನಾಮ ನಿರ್ದೇಶನಗೊಂಡಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಈ ಮೂವರೂ ಜನರಿಂದ ಆಯ್ಕೆಯಾಗಿಲ್ಲ. ಬದಲಿಗೆ ಚುನಾಯಿತ ಶಾಸಕರಿಂದ ಆಯ್ಕೆಯಾಗಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಆದ್ದರಿಂದ ಅವರಿಗೆ ಸಚಿವ ಸ್ಥಾನ ನೀಡದಂತೆ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ನಿರ್ದೇಶಿಸಬೇಕು ಎಂದು ಬೆಂಗಳೂರಿನ ವಕೀಲ ಎ. ಹರೀಶ ಹಾಗೂ ಜಿ. ಮೋಹನ್ ಕುಮಾರ್ ಪ್ರತ್ಯೇಕವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + two =
Remember me
