ಬೆಂಗಳೂರು: ‘ನಾಡಿನ ಅಸ್ಮಿತೆಯಾದ ಕನ್ನಡ ಬಾವುಟ ಆದಷ್ಟು ಬೇಗ ಅಂತಿಮಗೊಳ್ಳಲಿ. ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ವರ್ಷದಲ್ಲಿ ಪ್ರತಿಯೊಬ್ಬ ಕನ್ನಡಿಗರ ಮನೆ ಮೇಲೆ ಹಾರಾಡಲಿ’.ಇದು, ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಆಚರಣೆಗೆ ಸಂಬಂಧಿಸಿದಂತೆ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮೊಳಗಿದ ಧ್ವನಿ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಕರೆದಿದ್ದ ಸಭೆಯ ಅಧ್ಯಕ್ಷತೆವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪ್ರತಿಯೊಬ್ಬರ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಆಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಖಾತೆ ಮಾಜಿ ಸಚಿವೆ ಉಮಾಶ್ರೀ ಅವರು ನನ್ನ ಆಡಳಿತಾವಧಿಯಲ್ಲಿ ಕನ್ನಡ ಬಾವುಟ ಅಂತಿಮ ಸ್ಪರ್ಶದ ಹಂತಕ್ಕೆ ಬಂದಿತ್ತು. ಈಗಿನ ಸ್ಥಿತಿ ಏನಿದೆಯೋ ಗೊತ್ತಿಲ್ಲ, ಆದಷ್ಟು ಬೇಗ ಅಂತಿಮಗೊಳಿಸಿರಿ ಎಂದು ಸಲಹೆ ನೀಡಿದರು.
ಈ ಮಾತಿಗೆ ಸಭೆಯಲ್ಲಿ ಉಳಿದವರೂ ಧ್ವನಿಗೂಡಿಸಿ, ಕನ್ನಡ ಬಾವುಟ ಆದಷ್ಟು ಬೇಗ ಅಂತಿಮಗೊಳ್ಳಲಿ, ಕನ್ನಡಿಗರ ಪ್ರತಿ ಮನೆಯ ಮೇಲೂ ಹಾರಾಡುವಂತಾಗಲಿ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಿ.ಟಿ.ಲಲಿತಾನಾಯಕ್ ಮಾತನಾಡಿ ವರ್ಷ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಸಿ, ಕನ್ನಡ ನಾಮಲಕ ಕಡ್ಡಾಯ ಪರಿಣಾಮಕಾರಿ ಅನುಷ್ಠಾನಕ್ಕೆ ತರಬೇಕು. ಪ್ರತಿಯೊಂದು ಸರ್ಕಾರ ಸಮಾರಂಭದ ಆಹ್ವಾನಪತ್ರಿಕೆ, ಬ್ಯಾನರ್ ಮೇಲೆ ‘ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ವರ್ಷ’ವೆಂಬ ಬರಹ ಇರುವಂತೆ ನೋಡಿಕೊಳ್ಳಬೇಕು ಎಂದರು.
ಕನ್ನಡ ರಥ ಸಂಚಾರ
ಕರ್ನಾಟಕದ ಪರಂಪರೆ, ಇತಿಹಾಸ, ಸಂಸ್ಕೃತಿ ಬಿಂಬಿಸುವ ಕನ್ನಡ ರಥ ಅಥವಾ ಕನ್ನಡ ಜ್ಯೋತಿ ರಾಜ್ಯದ ನಾಲ್ಕು ದಿಕ್ಕುಗಳಿಂದ ಏಕಕಾಲಕ್ಕೆ ಸಂಚಾರ ಆರಂಭಿಸಿ, ಉದ್ಘಾಟನಾ ಸಮಾರಂಭದ ಸ್ಥಳಕ್ಕೆ ಸೇರುವಂತೆ ನೋಡಿಕೊಳ್ಳಬೇಕು.
ಶಾಲೆ-ಕಾಲೇಜುಮಟ್ಟದ ರಸಪ್ರಶ್ನೆ ಸ್ಪರ್ಧೆ, ರಾಜ್ಯದ ಸಿದ್ಧಾಪುರದಲ್ಲಿರುವ ಏಕೈಕ ಭುವನೇಶ್ವರಿ ದೇವಾಲಯ ಪ್ರವಾಸಿ ತಾಣವಾಗಿ ಅಭಿವೃದ್ಧಿ, ಕನ್ನಡದ ಮಾಹಿತಿ ಒಳಗೊಂಡ ವಾಹನ ಸಂಚಾರ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗಿಯಾಗಿದ್ದ ಗಣ್ಯರ ಸನ್ಮಾನ ಇತ್ಯಾದಿ ಅಭಿಪ್ರಾಯಗಳು ವ್ಯಕ್ತವಾದವು.
ಕರ್ನಾಟಕ ಸಾಂಸ್ಕೃತಿಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಎಸ್.ಜಯಸಿಂಹ ಅವರು, ಮೂಲ ಜಾನಪದ ಕಲಾವಿದರಿಗೆ ಅವಕಾಶ, ಪ್ರತಿ ಗ್ರಾಮಕ್ಕೆ ಕೊಂಡೊಯ್ಯುವ ಕೆಲಸವಾಗಬೇಕು ಎಂದರು.ಹೋರಾಟಗಾರ ಪಿ.ಜೆ.ಗೋವಿಂದರಾಜು ಮಾತನಾಡಿ ಬೆಂಗಳೂರು ಹಬ್ಬದ ಭ್ರಷ್ಟಾಚಾರವು ಸುವರ್ಣ ಮಹೋತ್ಸವ ವರ್ಷಾಚರಣೆಯಲ್ಲಿ ಮರುಕಳಿಸದಂತೆ ಎಚ್ಚರಿಕೆವಹಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವರಾದ ಲೀಲಾದೇವಿ ಆರ್.ಪ್ರಸಾದ್, ಜಯಮಾಲಾ, ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ್ ಜೋಶಿ, ಹಿರಿಯ ಸಾಹಿತಿಗಳಾದ ಡಾ.ಚಂದ್ರಶೇಖರ್ ಕಂಬಾರ, ಪ್ರೊ.ಎಸ್.ಸಿದ್ದರಾಮಯ್ಯ, ಮನುಬಳಿಗಾರ್, ನರಹಳ್ಳಿ ಬಾಲಕೃಷ್ಣ, ಡುಂಡಿರಾಜ್, ಹಂಸಲೇಖ, ಸಿನಿಮಾ ನಿರ್ದೇಶಕರಾದ ಟಿ.ಎನ್.ಸೀತಾರಾಮ್, ರಾಜೇಂದ್ರ ಸಿಂಗ್ ಬಾಬು, ಸಂಗೀತ ಕಲಾವಿದೆ ಸಂಗೀತಾ ಕಟ್ಟಿ, ರಂಗಕರ್ಮಿಗಳಾದ ಕಪ್ಪಣ್ಣ, ನಾಗರಾಜ್ ಮೂರ್ತಿ, ಪ್ರೊ.ಕೆ.ಇ.ರಾಧಾಕೃಷ್ಣ, ಇಲಾಖೆ ನಿರ್ದೇಶಕ ವಿಶ್ವನಾಥ ಹಿರೇಮಠ್ ಇದ್ದರು.
ಅನುದಾನದ ಅಭಯ
ನಾಡಿನ ಭಾಷೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ತೆಗೆದಿರಿಸುವ ಅನುದಾನವೇ ಕಡಿಮೆಯಿದೆ. ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಒದಗಿಸಬೇಕು ಎಂದು ಸಿನಿಮಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮನವಿ ಮಾಡಿದರು.ಇಲಾಖೆಗೆ 250 ಕೋಟಿ ರೂ. ಅನುದಾನವನ್ನು ಸಿಎಂ ಒದಗಿಸಿದ್ದಾರೆ. ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಅಗತ್ಯಬಿದ್ದರೆ ಇನ್ನಷ್ಟು ಅನುದಾನ ನೀಡುವ ಅಭಯ ನೀಡಿದ್ದಾರೆ ಎಂದು ಶಿವರಾಜ್ ತಂಗಡಗಿ ತಿಳಿಸಿ, ವಿಶ್ವಾಸ ಮೂಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 20 =
Remember me
