ಬೆಂಗಳೂರು:ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವ ಕುರಿತ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿರುವ ನಡುವೆಯೇ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೂಚನೆ ಮೇರೆಗೆ ಕಾಲೇಜು ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿ ಕುಂದಾಪುರ ತಾಲೂಕಿನ ಭಂಡಾರ್​ಕಾರ್ಸ್​​ ಕಲಾ ಮತ್ತು ವಿಜ್ಞಾನ ಕಾಲೇಜಿನ ಇಬ್ಬರು ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತೃತೀಯ ಬಿಬಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸುಹಾ ಮೌಲಾನಾ ಹಾಗೂ ಪ್ರಥಮ ಬಿಬಿಎ ವಿದ್ಯಾರ್ಥಿನಿ ಐಶಾ ಅಲೀಫಾ ಕೌಸರ್ ತಮ್ಮ ತಾಯಂದಿರ ಮೂಲಕ ಅರ್ಜಿ ಸಲ್ಲಿಸಿದ್ದು, ಇನ್ನಷ್ಟೇ ನ್ಯಾಯಾಲಯದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
ಅರ್ಜಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ಭಂಡಾರ್​ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು, ಶಾಸಕ ಶ್ರೀನಿವಾಸ ಶೆಟ್ಟಿ ಅವರನ್ನು ಪ್ರತಿವಾದಿಯಾಗಿಸಲಾಗಿದೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹೈಕೋರ್ಟ್‌ಗೆ 2 ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅರ್ಜಿ ಕುರಿತು ವಾದ ಮಂಡಿಸಲು ಅಡ್ವೊಕೇಟ್ ಜನರಲ್ ಕಾಲಾವಕಾಶ ಕೋರಿದ್ದರಿಂದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ವಿಚಾರಣೆಯನ್ನು ಫೆ.8ಕ್ಕೆ ಮುಂದೂಡಿದೆ.
ಕಾಲೇಜಿಗೆ ಪ್ರವೇಶ ಪಡೆದಾಗಿನಿಂದ ಈವರೆಗೆ ಯಾವುದೇ ವಿವಾದವಿರಲಿಲ್ಲ. ಫೆ.3ರಂದು ಏಕಾಏಕಿ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಹಿಜಾಬ್​ ಧರಿಸಿ ಕಾಲೇಜಿಗೆ ಪ್ರವೇಶಿಸಬಾರದು, ಈ ಸಂಬಂಧ ಸರ್ಕಾರ ಆದೇಶವಿದೆ ಎಂದು ತಿಳಿಸಿ, ಕಾಲೇಜಿಗೆ ಪ್ರವೇಶ ನಿರ್ಬಂಧಿಸಿದ್ದಾರೆ. ಈ ಕುರಿತು ಅರ್ಜಿದಾರರು ಹಾಗೂ ಇತರ ವಿದ್ಯಾರ್ಥಿಗಳ ಪಾಲಕರು ಪ್ರಶ್ನಿಸಿದಾಗ ಶಾಸಕ ಶ್ರೀನಿವಾಸ ಶೆಟ್ಟಿ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅಥವಾ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ ಅಡಿ ಕಾಲೇಜಿನ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಗಳನ್ನು ಮಾಡಲಾಗಿಲ್ಲ. ಹೀಗಿದ್ದರೂ, ತರಗತಿಗಳಿಗೆ ನಿರ್ಬಂಧಿಸಿರುವುದು ಅರ್ಜಿದಾರರ ಶಿಕ್ಷಣದ ಹಕ್ಕು ಕಸಿದುಕೊಂಡಂತಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಯಾವುದೇ ಷರತ್ತು ಮತ್ತು ನಿರ್ಬಂಧ ವಿಧಿಸದೆ ಅರ್ಜಿದಾರರು ಕಾಲೇಜು ಪ್ರವೇಶಿಸಲು ಭಂಡಾರ್ಕರ್ ಕಾಲೇಜು ಪ್ರಾಂಶುಪಾಲರಿಗೆ ನಿರ್ದೇಶಿಸಲು ಮಂಗಳೂರು ವಿವಿ ರಿಜಿಸ್ಟ್ರಾರ್‌ಗೆ ಆದೇಶಿಸಬೇಕು. ಕಾನೂನಿನ ಯಾವ ನಿಬಂಧನೆಯಡಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾಲೇಜಿನ ಆಡಳಿತದಲ್ಲಿ ಮಧ್ಯಪ್ರವೇಶಿಸುವುದಲ್ಲದೇ ತಮ್ಮ ರಾಜಕೀಯ ಅಜೆಂಡಾ ಪ್ರಚಾರ ಮಾಡುತ್ತಿದ್ದಾರೆ ಎಂಬ ಬಗ್ಗೆ ವಿವರಣೆ ಕೇಳಬೇಕು ಎಂದು ಮನವಿ ಮಾಡಿರುವ ಅರ್ಜಿದಾರ ವಿದ್ಯಾರ್ಥಿನಿಯರು, ಹಿಜಾಬ್ ಧರಿಸಿ ಕಾಲೇಜಿಗೆ ತೆರಳಲು ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಿಬ್ಬಂದಿಯ ಪಕ್ಷಪಾತದ ನಿಲುವಿನಿಂದ ಬಲವಂತವಾಗಿ ತರಗತಿಯಿಂದ ದೂರ ಉಳಿಯುವಂತೆ ಮಾಡಿರುವ ದಿನಗಳಿಗೆ ಅಥವಾ ಅರ್ಜಿ ವಿಲೇವಾರಿಯಾಗುವವರೆಗೆ ಹಾಜರಾತಿ ನೀಡಲು ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶಿಸುವಂತೆ ವಿವಿ ರಿಜಿಸ್ಟ್ರಾರ್‌ಗೆ ಆದೇಶಿಸಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eight =
Remember me
