ಮೈಸೂರು:ಬೇಸಾಯ ಸಂಸ್ಕೃತಿಗೆ ಸಾಕ್ಷಿಯಾಗಲು ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಕನ್ನಡದ ನಂ. 1 ದಿನಪತ್ರಿಕೆ “ವಿಜಯವಾಣಿ’ ಹಾಗೂ “ದಿಗ್ವಿಜಯ’ ಸುದ್ದಿವಾಹಿನಿ ಆಯೋಜಿಸಿರುವ ಮೂರು ದಿನಗಳ “ರಾಜ್ಯಮಟ್ಟದ ಕೃಷಿ ಮೇಳ’ವನ್ನು ಶುಕ್ರವಾರ (ಜ.27) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಅರಮನೆ ನಗರಿಯಲ್ಲಿ ಕೃಷಿ ಸಂಸ್ಕೃತಿ ಅನಾವರಣಗೊಳ್ಳಲಿದೆ. ರಾಜ್ಯ ಸರ್ಕಾರದ ಸಹಕಾರ ಮತ್ತು ಮೈಸೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ನಗರದ ಮಹಾರಾಜ ಕಾಲೇಜು ಮೈದಾನ ಭಾನುವಾರದವರೆಗೆ ನಡೆಯುವ ಮೇಳದಲ್ಲಿ 120 ಮಳಿಗೆಗಳನ್ನು ತೆರೆಯಲಾಗಿದೆ. ಸಮಗ್ರ ಕೃಷಿ, ಸಾವಯವ ಕೃಷಿ, ಆಧುನಿಕ ಬೇಸಾಯ, ಉತ್ತಮ ಬಿತ್ತನೆ ಬೀಜಗಳು, ಕೃಷಿ ಅನ್ವೇಷಣೆ ಇನ್ನಿತರ ಮಾಹಿತಿ ಸಿಗಲಿವೆ. ಬೀಜೋತ್ಪಾದನೆ, ಬೀಜ ಪೂರೈಕೆ ಮಾಡುವ ಪ್ರತಿನಿಧಿಗಳ ಸಮಾಗಮವೂ ಆಗಲಿದೆ. ಇದರೊಂದಿಗೆ ಕೃಷಿಯ ಸಂಕಷ್ಟಗಳ ಕುರಿತು ವಿಚಾರ ಮಂಥನವಾಗಲಿದೆ.
ಸಿಎಂ ಉದ್ಘಾಟನೆ:ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್​ ಅಧ್ಯಕ್ಷತೆ ವಹಿಸುವರು. ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ.ವಿಜಯ ಸಂಕೇಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕೃಷಿ ಮೇಳದ ಹಿನ್ನೆಲೆಯಲ್ಲಿ “ವಿಜಯವಾಣಿ’ ಹೊರತಂದಿರುವ “ನೇಗಿಲಯೋಗಿ’ ವಿಶೇಷ ಸಂಚಿಕೆಯನ್ನು ಕಂದಾಯ ಸಚಿವ ಆರ್​. ಅಶೋಕ್​ ಬಿಡುಗಡೆಗೊಳಿಸುವರು. ಕೃಷಿ ಸಂಸತಿ ಕಟ್ಟಿಕೊಡುವ ಮಳಿಗೆಗಳ ಉದ್ಘಾಟನೆಯನ್ನು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ನೆರವೇರಿಸುವರು. ಗ್ರಾಮೀಣ ಕ್ರೀಡೆಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಚಾಲನೆ ನೀಡಲಿದ್ದು, ಜಾನುವಾರು ಪ್ರದರ್ಶನವನ್ನು ತೋಟಗಾರಿಕೆ ಸಚಿವ ಮುನಿರತ್ನ ಉದ್ಘಾಟಿಸುವರು. ಜಿಲ್ಲೆಯ ಶಾಸಕರು ಸಾಕ್ಷಿಯಾಗಲಿದ್ದಾರೆ.
ಮೆರವಣಿಗೆ ಮೆರುಗು:“ಸುಸ್ಥಿರ ಅಭಿವೃದ್ಧಿ ನಮ್ಮ ಗುರಿ’ ಆಶಯದೊಂದಿಗೆ ಹಮ್ಮಿಕೊಂಡಿರುವ ಮೇಳದ ಅಂಗವಾಗಿ ಶುಕ್ರವಾರ ಬೆಳಗ್ಗೆ 8.30ಕ್ಕೆ ನಗರದ ಸುಣ್ಣದಕೇರಿಯ ಮಹದೇಶ್ವರಸ್ವಾಮಿ ದೇವಸ್ಥಾನ ಮುಂಭಾಗದಿಂದ ಮಹಾರಾಜ ಕಾಲೇಜು ಮೈದಾನದವರೆಗೆ ಅದ್ದೂರಿ ಮೆರವಣಿಗೆ ನಡೆಯಲಿದೆ. ಮೇಯರ್​ ಶಿವಕುಮಾರ್​ ಮೆರವಣಿಗೆಗೆ ಚಾಲನೆ ನೀಡುವರು. ನಂದಿಕಂಬ, ವೀರಭದ್ರ ಕುಣಿತ, ಡೊಳ್ಳುಕುಣಿತ, ಪೂಜಾಕುಣಿತ, ಕಂಸಾಳೆ, ತಮಟೆ, ಕೀಲುಕುದುರೆ, ಕೋಲಾಟ ಮತ್ತು ನಗಾರಿ ಕಲಾ ತಂಡಗಳು ಭಾಗಿಯಾಗಿ ಮೆರವಣಿಗೆಗೆ ಮೆರುಗು ನೀಡಲಿವೆ.
ಸಾಂಸ್ಕೃತಿಕ ವೈಭವ:ಕೃಷಿ ಮೇಳದಲ್ಲಿ ಸಾಂಸ್ಕೃತಿಕ ಕಲರವವೂ ಮೇಳೈಸಲಿದೆ. ಮೊದಲ ದಿನ ಬೆಳಗ್ಗೆ 9ರಿಂದ 11ರ ವರೆಗೆ ಗೀತಗಾಯನ, ಸಂಜೆ 5ರ ಬಳಿಕ ಚಂಡೆ ವಾದನ, ಸುಗಮ ಸಂಗೀತ, ಕಂಸಾಳೆ ನೃತ್ಯ, ಮಿಮಿಕ್ರಿ, ಜಾನಪದ ಗೀತೆಗಳ ಗಾಯನ, ಸಮೂಹನೃತ್ಯ ಮತ್ತು ನಾಟಕ ಪ್ರದರ್ಶನ ಜರುಗಲಿದೆ. 2ನೇ ದಿನ ಜ.28ರಂದು ಸಂಜೆ 4.30ಕ್ಕೆ ಕರೋಕೆ ಗಾಯನ, ವೀರಗಾಸೆ ನೃತ್ಯಪ್ರದರ್ಶನ, ಜಾನಪದ ಗೀತೆಗಳ ಗಾಯನ, ಸುಗಮ ಸಂಗೀತ, ಸುಗ್ಗಿ ಕುಣಿತ, ಶಕ್ತಿಧಾಮ ಮಕ್ಕಳಿಂದ “ಕಿಂದರಿ ಜೋಗಿ’ ನಾಟಕ ಪ್ರದರ್ಶನ ನಡೆಯಲಿದೆ. ಕೊನೆಯ ದಿನ 29ರಂದು ಸಂಜೆ 5ರ ಬಳಿಕ ಡೊಳ್ಳು ಕುಣಿತ, ಕೊಡವ ಸಾಂಸತಿಕ ವೈಭವ, ಜಾನಪದ ಗೀತ ವೈಭವ ಕಾರ್ಯಕ್ರಮ ಸಭಿಕರನ್ನು ರಂಜಿಸಲಿವೆ.
ಕೃಷಿ ಸಾಧಕರಿಗೆ ಸನ್ಮಾನ:29ರಂದು ಮಧ್ಯಾಹ್ನ 2ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೃಷಿ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಫ್ರೀಡಂ ಆ್ಯಪ್​ನ ಸಿಇಒ ಸಿ.ಎಸ್​. ಸುಧೀರ್​ ಸಮಾರೋಪ ಭಾಷಣ ಮಾಡುವರು. ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್​, ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​, ಕೈಮಗ್ಗ ಮತ್ತು ಜವಳಿ, ಸಕ್ಕರೆ ಸಚಿವ ಶಂಕರ್​ ಪಾಟೀಲ ಮುನೇನಕೊಪ್ಪ, ಕೆಎಂಎಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಪ್ರತಾಪ್​ ಸಿಂಹ, ವಿ. ಶ್ರೀನಿವಾಸ ಪ್ರಸಾದ್​, ಸುಮಲತಾ ಅಂಬರೀಷ್​, ಪ್ರಜ್ವಲ್​ ರೇವಣ್ಣ, ಮೈಸೂರು ವಿವಿ ಕುಲಸಚಿವೆ ವಿ.ಆರ್​. ಶೈಲಜಾ ಪಾಲ್ಗೊಳ್ಳಲಿದ್ದಾರೆ.
ಜಾನುವಾರು ಪ್ರದರ್ಶನ:ಜಾನುವಾರು, ಕೋಳಿ, ಬಾತುಕೋಳಿ, ಬಂಡೂರು ಕುರಿ ಸೇರಿ ವಿವಿಧ ತಳಿಯ ಕುರಿಗಳ ಪ್ರದರ್ಶನದ ಜತೆಗೆ, ಹೊಸ ತಳಿಯ ಜಾನುವಾರುಗಳ ಪ್ರದರ್ಶನ ಇರಲಿದೆ.ಆಹಾರ ಮೇಳ: ಪ್ರದರ್ಶನ ವೀಕ್ಷಣೆ, ವಿಚಾರ&ಮಂಥನ, ಸಾಂಸತಿಕ ಕಾರ್ಯಕ್ರಮಗಳ ಸೊಬಗು ಸವಿಯುವುದ ರೊಂದಿಗೆ, ಮೇಳದಲ್ಲಿ ಆಹಾರ ರುಚಿಯನ್ನೂ ಆಸ್ವಾದಿಸ ಬಹುದು. ತರಹೇವಾರಿ ತಿನಿಸು ಮಾರಾಟ ಮಾಡುವ ಅಂಗಡಿಗಳು ಗ್ರಾಹಕರನ್ನು ಕೈಬಿಸಿ ಕರೆಯಲಿವೆ. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಬೆಣ್ಣೆದೋಸೆ, ರುಮಾಲಿ ರೋಟಿ, ಗೋಬಿ ಮಂಚೂರಿಯಂತಹ ತಿನಿಸುಗಳ ರುಚಿ ನೋಡಬಹುದು. ಮಾಂಸಾಹಾರ ಪ್ರಿಯರಿಗಾಗಿ ವಿವಿಧ ಬಗೆಯ ಖಾದ್ಯ ಇರಲಿವೆ. ಮೀನು ಪ್ರಿಯರೂ ತಮ್ಮಿಷ್ಟದ ಆಹಾರ ಸೇವಿಸಬಹುದು.
ಕ್ರೀಡಾ ಕಲರವದೇಸಿ ಆಟ ಸಂಭ್ರಮ ಮೇಳದ ಮತ್ತೊಂದು ವಿಶೇಷವಾಗಿದೆ. ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಜ.28ರಂದು ಬೆಳಗ್ಗೆ 10 ಗಂಟೆಗೆ ಪುರುಷರಿಗೆ ಬಾಳೆಹಣ್ಣು ತಿನ್ನುವ ಸ್ಪರ್ಧೆ, ಒಂಟಿಕಾಲಿನ ಓಟ, ಗೊಬ್ಬರಮೂಟೆ ಹೊತ್ತು ಓಡುವ ಸ್ಪರ್ಧೆ ಇರಲಿದೆ. ಬೆಳಗ್ಗೆ 11.30ಕ್ಕೆ ಮಹಿಳೆಯರಿಗೆ ಬಾಳೆಹಣ್ಣು ತಿನ್ನುವ ಸ್ಪರ್ಧೆ, ಲೆಮನ್​ ಆ್ಯಂಡ್​ ಸ್ಪೂನ್​ ಸ್ಪರ್ಧೆ ನಡೆಯಲಿದೆ. ಜ.29ರಂದು ಬೆಳಗ್ಗೆ ರಂಗೋಲಿ ಸ್ಪರ್ಧೆ ನಡೆಯಲಿದ್ದು, ಬಳಿಕ ಬೆಳಗ್ಗೆ 9.30ಕ್ಕೆ ಮಕ್ಕಳಿಗೆ ಸ್ಕಿಪ್ಪಿಂಗ್​ ಸ್ಪರ್ಧೆ ಆಯೋಜಿಸಲಾಗಿದೆ. 10 ಗಂಟೆಗೆ ನಡೆಯುವ ಶ್ವಾನ ಪ್ರದರ್ಶನ ಜನರನ್ನು ಆಕರ್ಷಿಸಲಿದೆ.
ಕೃಷಿ ಮೇಳದಲ್ಲಿ ವಿವಿಧ ತಳಿಯ ಶ್ವಾನ ಪ್ರದರ್ಶನಮೈಸೂರು: ನಂ.1 ಕನ್ನಡ ದಿನಪತ್ರಿಕೆ “ವಿಜಯವಾಣಿ’ ಮತ್ತು “ದಿಗ್ವಿಜಯ’ ಸುದ್ದಿವಾಹಿನಿ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರದಿಂದ (ಜ.27ರಿಂದ 29) ಮೂರು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಕೃಷಿ ಮೇಳದ ಅಂಗವಾಗಿ ವಿವಿಧ ತಳಿಯ ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ.
ಶ್ವಾನಪ್ರಿಯರನ್ನು ಉತ್ತೇಜಿಸುವ ಸಲುವಾಗಿ ಜ.29ರ ಭಾನುವಾರ ಬೆಳಗ್ಗೆ 9ರಿಂದ ಶ್ವಾನ ಪ್ರದರ್ಶನ ನಡೆಯಲಿದೆ. ಬೆಲ್ಜಿಯಂ ಶೆರ್ಡ್​, ಜರ್ಮನ್​ ಶೆರ್ಡ್​, ಡಾಬರ್​ಮನ್​, ಗ್ರೇಟ್​ಡೇನ್​, ಮಿನಿಯೇಚರ್​, ರಾಟ್​ ವಿಲ್ಲರ್​, ಯಾರ್ಕ್​ ಶೈರ್​, ಪೊಮೊಮಿರಿಯನ್​, ಸೈಬರಿಯನ್​ ಹಸ್ಕಿ, ಜಾಕ್​ ರಸ್ಸೆಲ್​ ಟೆರಿರಿರ್​, ರಾಕ್ಸ್​ ಟೆರಿರಿರ್​, ಬುಲ್​ ಟೆರಿರಿರ್​, ಚೌಚೌ, ಊರೋಡಿಯಸಿನ್​ ಸೇರಿ ವಿವಿಧ ತಳಿಯ ಶ್ವಾನಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಲ್ಲ ವಿಭಾಗಗಳಿಂದ ಭಾಗವಹಿಸುವ ಒಟ್ಟು ಶ್ವಾನಗಳ ಪೈಕಿ “ಬೆಸ್ಟ್​ ಇನ್​ ಶೋ’ ಅಡಿ 3 ಶ್ವಾನಗಳಿಗೆ ಪ್ರಥಮ 3 ಸಾವಿರ ರೂ., ದ್ವೀತಿಯ 2 ಸಾವಿರ ರೂ. ಹಾಗೂ ತೃತೀಯ ಒಂದು ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಸ್ಥಳದಲ್ಲಿಯೂ ನೋಂದಣಿಗೆ ಅವಕಾಶವಿದೆ. ಆಸಕ್ತರು ಮೊ.9845150702 ಸಂಪರ್ಕಿಸಬಹುದು.
ರಂಗೋಲಿ ಸ್ಪರ್ಧೆಜ.28ರಂದು ಬೆಳಗ್ಗೆ 7 ಗಂಟೆಗೆ ರಂಗೋಲಿ ಸ್ಪರ್ಧೆ ನಡೆಯಲಿದೆ. ರಂಗೋಲಿ ಬಿಡಿಸಲು 2 ಗಂಟೆ ಸಮಯ ನಿಗದಿ ಮಾಡಲಾಗಿದೆ. ಸ್ಪರ್ಧೆಗೂ ಅರ್ಧ ಗಂಟೆ ಮುಂಚೆಯೇ ಸ್ಥಳದಲ್ಲಿ ಹಾಜರಿರಬೇಕು. ಪ್ರಕೃತಿ, ರೈತ, ವ್ಯವಸಾಯ, ಸೈನಿಕರು, ದೇಶಾಭಿಮಾನ ವಿಷಯಗಳಿಗೆ ಸಂಬಂಧಿಸಿ ರಂಗೋಲಿ ಬಿಡಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವರು ರಂಗೋಲಿ ಪುಡಿ ಸೇರಿ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ತರಬೇಕು. ಜತೆಗೆ, ಒಂದೇ ಮಾದರಿಯನ್ನು ಬಳಸಬೇಕು. ಬಣ್ಣಗಳು, ಪುಷ್ಪ ದಳಗಳು, ಪುಡಿ, ಧಾನ್ಯಗಳು, ಅಕ್ಕಿ ಇತ್ಯಾದಿಗಳ ಪೈಕಿ ಒಂದು ವಸ್ತುವನ್ನು ಮಾತ್ರ ಬಳಸಿ ರಂಗೋಲಿ ಹಾಕಬೇಕು. ರಂಗೋಲಿ ಬಿಡಿಸಲು ಮುದ್ರಿತ ವಸ್ತು ಉಪಯೋಗಿಸಬಾರದು. ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ. ಹೆಸರು ನೋಂದಣಿಗಾಗಿ ಮೊ. 99000 23022/ 99861 41198 ಸಂಪರ್ಕಿಸ
ವಿಶೇಷಗಳು* ಕೃಷಿ ಮಳಿಗೆಗಳು* ವಿಚಾರಗೋಷ್ಠಿ* ಸಾಂಸ್ಕೃತಿಕ ಕಾರ್ಯಕ್ರಮ* ನಾಟಕ ಪ್ರದರ್ಶನ ಕೊಡವ* ಸಾಂಸ್ಕೃತಿಕ ವೈಭವ ಸಮೂಹ* ನೃತ್ಯ, ಗೀತಗಾಯನ ರಂಗೋಲಿ ಸ್ಪರ್ಧೆ ದೇಸಿ ಆಟಗಳು* ಶ್ವಾನ ಪ್ರದರ್ಶನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 16 =
Remember me
