ಬೆಂಗಳೂರು:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟು ಆತಂಕ ಸೃಷ್ಟಿಸಿರುವ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮೂರು ದಿನ ಕಾಲ ವಾಯು ಗುಣಮಟ್ಟ ಸೂಚ್ಯಂಕ( ಎಕ್ಯೂಐ) ಹೆಚ್ಚಳವಾಗಿ ಕಳಪೆ ಮಟ್ಟಕ್ಕೆ ತಲುಪಿದೆ. ದೀಪಾವಳಿ ನಿಮಿತ್ತ ಸಾರ್ವಜನಿಕರು ಪಟಾಕಿ ಸುಟ್ಟ ಪರಿಣಾಮ ನ.12ರಿಂದ ನ.14ರವರೆಗೆ ರಾಜ್ಯದ ಇತರ ಜಿಲ್ಲೆಗಳಗಿಂತ ಬೆಂಗಳೂರಿನ ಜಯನಗರದಲ್ಲಿ ಅತಿ ಹೆಚ್ಚು ಎಕ್ಯೂಐ ದಾಖಲಾಗಿದೆ. ಮಂಗಳೂರು, ಬೀದರ್, ತುಮಕೂರು ಕ್ರಮವಾಗಿ ನಂತರ ಸ್ಥಾನಗಳಿವೆ. ಮಡಿಕೇರಿಯಲ್ಲಿ ಎಕ್ಯೂಐ ವ್ಯಾಲ್ಯೂ 49 ದಾಖಲಾಗಿದ್ದು, ಗಾಳಿ ಗುಣಮಟ್ಟ ಉತ್ತಮವಾಗಿತ್ತು.
ಕಳೆದ ವರ್ಷದ ದೀಪಾವಳಿ ಅವಧಿಗೆ ಉಂಟಾಗಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ ಈ ಬಾರಿ ಇದೇ ಅವಧಿಯಲ್ಲಿ ಎಕ್ಯೂಐ ಮಟ್ಟ ಕಡಿಮೆ ಆಗಿರುವುದು ಗಮನಾರ್ಹ. 2022ರಲ್ಲಿ ಅತಿ ಹೆಚ್ಚು 313 ಎಕ್ಯೂಐ ದಾಖಲಾಗಿತ್ತು. ಈ ಬಾರಿ 268ಎಕ್ಯೂಐ ದಾಖಲಾಗಿದೆ.
ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿ ದೇಶದ ಇತರ ಕಡೆಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಪಟಾಕಿ ಸರಬರಾಜು ತಡೆಗೆ ಗಡಿಭಾಗಗಳಲ್ಲಿ ಚೆಕ್​ಪೋಸ್ಟ್​ಗಳನ್ನು ನಿರ್ವಿುಸಲಾಗಿತ್ತು. ಕಡ್ಡಾಯವಾಗಿ ಮಳಿಗೆಗಳಲ್ಲಿ ಅಗ್ನಿನಂದಕ ಹೊಂದಿರಬೇಕು ಮತ್ತು ಪರವಾನಗಿದಾರರು ರಾತ್ರಿ ವೇಳೆ ಪಟಾಕಿ ಮಾರಾಟ ಮಾಡದಂತೆ ವಿವಿಧ ಕಟ್ಟುನಿಟ್ಟಿನ ಷರತ್ತುಗಳನ್ನು ಹಾಕಲಾಗಿತ್ತು. ಪಟಾಕಿ ಮಳಿಗೆಗೆ ಅನುಮತಿ ನೀಡುವ ಜವಾಬ್ದಾರಿಯನ್ನು ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆಗೆ ನೀಡಿತ್ತು. ಬೆಂಗಳೂರಿನ 62 ಮೈದಾನಗಳಲ್ಲಿ ಹಸಿರು ಪಟಾಕಿ ಮಾರಲು ಮಾತ್ರ ಪೊಲೀಸ್ ಇಲಾಖೆ ಅನುಮತಿ ನೀಡಿತ್ತು. ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸುವ ಬಗ್ಗೆ ಎಚ್ಚರಿಕೆ ಕೊಡಲಾಗಿತ್ತು. ಸಾರ್ವಜನಿಕರಿಗೆ ಹಸಿರು ಪಟಾಕಿ ಬಗ್ಗೆ ಅರಿವು ಬಂದಿರುವ ಕಾರಣ ಈ ಬಾರಿ ಅಷ್ಟೇನೂ ವಾಯು ಮಾಲಿನ್ಯ ಉಂಟಾಗಿಲ್ಲ.
ಬೆಂಗಳೂರು ನಗರವೇ ಹೆಚ್ಚು ಮಲಿನ:ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಗಾಳಿಯ ಮಟ್ಟ ಕುಸಿತವಾಗಿದ್ದು, ಕಳಪೆ ಮಟ್ಟಕ್ಕೆ ತಲುಪಿತು. ನ.12ರಿಂದ ನ.14ರವರೆಗೆ ನಗರದ ಹಲವು ಪ್ರದೇಶಗಳಲ್ಲಿ ಎಕ್ಯೂಐ 150ರಿಂದ 268ವರೆಗೆ ದಾಖಲಾಗಿದೆ.
ಶಬ್ದ ಮಾಲಿನ್ಯ ಹೆಚ್ಚು:ಈ ಬಾರಿ ದೀಪಾವಳಿಯಲ್ಲಿ ಶಬ್ದ ಮಾಲಿನ್ಯ ಹೆಚ್ಚಿತ್ತು. ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಇದೇ ಅವಧಿಯಲ್ಲಿ ಶಬ್ದ ಮಾಲಿನ್ಯವು ಜನರಿಗೆ ಹೆಚ್ಚು ಕಿರಿಕಿರಿ ಉಂಟು ಮಾಡಿತ್ತು. ರಾಜ್ಯದಲ್ಲೇ ಮಂಗಳೂರಿನಲ್ಲೇ ಪಟಾಕಿಗಳಿಂದ ಅತಿ ಹೆಚ್ಚು ಶಬ್ದ ಮಾಲಿನ್ಯ ಉಂಟಾಗಿದೆ. ಬೆಂಗಳೂರು,ರಾಮನಗರ, ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಮೈಸೂರು, ದಾವಣಗೆರೆ, ಬೀದರ್, ಕಲಬುರಗಿಯಲ್ಲಿ ಶಬ್ದ ತೀವ್ರತೆ ಇತ್ತು.
ಎಕ್ಯೂಐ ವ್ಯಾಲ್ಯೂ ಲೆಕ್ಕಾಚಾರ ಹೇಗೆ?:ಎಕ್ಯೂಐ ವ್ಯಾಲ್ಯೂ 50ರ ಒಳಗಡೆ ಇದ್ದರೆ ಗಾಳಿ ಗುಣಮಟ್ಟ ಉತ್ತಮ, 51ರಿಂದ 100ರೊಳಗೆ ಇದ್ದರೆ ತೃಪ್ತಿಕರ, 101 ರಿಂದ 200ರವರೆಗೆ ಇದ್ದರೆ ಸಾಧಾರಣ, 201 ರಿಂದ 300 ಇದ್ದರೆ ಕಳಪೆ ಹಾಗೂ 401ಗಿಂತ ಮೇಲ್ಪಟ್ಟ ಸೂಚ್ಯಂಕವಿದ್ದರೆ ಅತಿ ಕಳಪೆ ಎಂದು ಗುರುತಿಸಲಾಗುತ್ತದೆ.
ತರೀಕೆರೆ:ತಾಲೂಕಿನ ಸುಣ್ಣದಹಳ್ಳಿಯಲ್ಲಿ ಪಟಾಕಿ ಸ್ಪೋಟಕ್ಕೆ ಯುವಕ ಬಲಿಯಾಗಿದ್ದು, ಮೂವರಿಗೆ ಗಾಯಗಳಾಗಿವೆ. ಸುಣ್ಣದಹಳ್ಳಿ ಪ್ರದೀಪ್(38) ಮೃತ. ಜತೆಗಿದ್ದ ಕುಶಾಲ್(12), ಷಣ್ಮುಖ(12) ಹಾಗೂ ದರ್ಶನ್(19) ಎಂಬುವರಿಗೆ ಗಾಯಗಳಾಗಿವೆ. ಮಂಗಳವಾರ ರಾತ್ರಿ ಪಟಾಕಿ ಸಿಡಿಸುತ್ತಿದ್ದಾಗ ಮನೆಯ ಜಗುಲಿಯಲ್ಲಿಟ್ಟಿದ್ದ ಪಟಾಕಿ ಬಾಕ್ಸ್​ಗೆ ಆಕಸ್ಮಿಕವಾಗಿ ಬೆಂಕಿ ಕಿಡಿ ತಗುಲಿ ಸ್ಪೋಟಿಸಿದೆ. ಸಿಡಿತದ ರಭಸಕ್ಕೆ ಪ್ರದೀಪ್ ಬಿದ್ದಿದ್ದು, ಮರ್ವಂಗಕ್ಕೆ ತೀವ್ರ ಪೆಟ್ಟಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮೂವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಸ್ಪೋಟದ ರಭಸಕ್ಕೆ ಮನೆ ಛಾವಣಿ, ಗೋಡೆ ಹಾನಿಯಾಗಿದೆ.
‘ದೇವ್ರು’ ಮೆಚ್ಚೋ ಆಟ ಆಡಿದ ವಿರಾಟ್​: ‘ಆ ದಿನ ನನಗೆ ನಗು ತಡೆಯಲು ಆಗಲಿಲ್ಲ’ ಎಂದ ಸಚಿನ್

ಶಮಿಗೆ ಏಳು ವಿಕೆಟ್: ಏನಿದು ಅಚ್ಚರಿ.. ಆತನೊಬ್ಬ ನಿನ್ನೆ ಕಂಡ ಕನಸು ಇಂದು ನಿಜವಾಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
