ಬೆಂಗಳೂರು:ನನ್ನ ಪ್ರೀತಿ ಸಂಪೂರ್ಣ ಭಾರತದ್ದಾಗಿದೆ. ನಾನು ಕನ್ನಡಿಗ ಹೌದು. ಭಾರತೀಯನಾಗಿ ಕನ್ನಡಿಗನಾಗಿದ್ದೇನೆ. ನನ್ನೆಲ್ಲ ಬರವಣಿಗೆ, ಕಾದಂಬರಿಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇಡೀ ಭಾರತದ ಕಥೆಗಳಾಗಿವೆ ಎಂದು ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಎಸ್.ಎಲ್. ಭೈರಪ್ಪ ರಚಿಸಿರುವ ‘ಪರ್ವ’ ಕಾದಂಬರಿಯನ್ನು ನಾಟಕಕಾರ ಪ್ರಕಾಶ್ ಬೆಳವಾಡಿ ಇಂಗ್ಲಿಷ್​ಗೆ ಭಾಷಾಂತರ ಮಾಡಿ ನಾಟಕ ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ವೈಯಾಲಿಕಾವಲ್​ನಲ್ಲಿನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
ವಿದೇಶ ಪ್ರವಾಸ ಕೈಗೊಳ್ಳುವ ವೇಳೆ ವಿಮಾನವು ದೇಶದ ಗಡಿ ದಾಟುತ್ತಿದ್ದಂತೆ ಮನಸ್ಸಿಗೆ ದುಃಖ, ಖಿನ್ನತೆಯಾಗುತ್ತದೆ. ಮತ್ತೆ ಹಿಂತಿರುಗಿ ಭಾರತದ ಗಡಿ ಮುಟ್ಟುತ್ತಿದ್ದಂತೆ ಖುಷಿಯಾಗುತ್ತದೆ. ಇದು ಭಾರತದ ಮೇಲಿರುವ ಪ್ರೀತಿಯಾಗಿದೆ ಎಂದು ವಿಶ್ಲೇಷಿಸಿದರು.
ಲೇಖಕನಾದವನು ಸೀಮಿತಗೊಳ್ಳದೆ ವಿಸ್ತಾರವಾಗಬೇಕು. ತನ್ನ ಅನುಭವವನ್ನು ಹೆಚ್ಚಿಕೊಳ್ಳುತ್ತಾ ಸಾಗಿದಾಗ ಅವನ ಬರವಣಿಗೆ ಕೂಡ ಉನ್ನತವಾಗಿ ಸಾಗುತ್ತದೆ. ದೇಶದ ಹಳ್ಳಿಗಳಲ್ಲಿ ಸಂಚರಿಸಿದಾಗ ನಿಜವಾದ ದೇಶದ ರಾಜಕೀಯ ಪರಿಸ್ಥಿತಿಗಳು ತಿಳಿಯಲಿವೆ. ಆದರೆ, ಇಂದಿನ ಸಾಹಿತಿಗಳು, ಕಲಾವಿದರು ಹೋಟೆಲ್​ಗಳಲ್ಲಿಯೇ ವಾಸ್ತವ್ಯ ಹೂಡುತ್ತಿರುವುದರಿಂದ ನೈಜ ಜೀವನ ತಿಳಿಯುವುದಿಲ್ಲ ಎಂದು ಹೇಳಿದರು. ‘ದಾಟು’ ಕಾದಂಬರಿ ರಾಜ್ಯಕ್ಕೆ ಸೀಮಿತವಾಗಿಲ್ಲ, ಇಡೀ ಭಾರತದ ಕತೆಯಾಗಿದೆ. ದಾಟು ಓದಿದ ಪಂಜಾಬಿಗಳು, ಮಧ್ಯ ಪ್ರದೇಶದವರು ನಮ್ಮೂರಿನ ಕತೆ ಎಂದು ಹೇಳುತ್ತಾರೆ. ಆದ್ದರಿಂದ ನಮ್ಮ ಕಾದಂಬರಿಗಳು ಇಡೀ ಭಾರತದ ಕತೆಯಾಗಿರಬೇಕು. ಪ್ರಸ್ತುತ ಮಾತ್ರವಲ್ಲದೆ, ಮುಂದಿನ ತಲೆಮಾರಿಗೂ ಪ್ರಸ್ತುತವಾದಾಗ ಸಾರ್ಥಕತೆ ಎನಿಸುವ ಜತೆಗೆ ನಮ್ಮ ಬರವಣಿಗೆ ಕೂಡ ಉಳಿಯಲಿದೆ. ಇಲ್ಲವಾದಲ್ಲಿ 10-20 ವರ್ಷಗಳಲ್ಲಿ ಅವನತಿ ಹೊಂದುತ್ತದೆ ಎಂದರು.
ರಷ್ಯಗಿಂತ ಭಾರತದ ಶ್ರೀಮಂತಿಕೆ ಹೆಚ್ಚು:ರಷ್ಯನ್ ಸಾಹಿತಿಗಳಾದ ಟಾಲ್​ಸ್ಟಾಯ್, ದಾಸ್ಕೊವಸ್ಕಿ ಸೇರಿ ಇತರರು ರಷ್ಯನ್​ನಲ್ಲಿ ಆಕಾಶ ಬಹಳ ವಿಶಾಲವಾಗಿ ಕಾಣುತ್ತದೆ ಎಂದು ಬರೆಯುತ್ತಾರೆ. ಹಾಗೆಯೇ, ಅಲ್ಲಿನ ಶಿಲ್ಪಕಲೆಯನ್ನು ಬಹಳ ಶ್ರೀಮಂತವಾಗಿದೆ ಎಂದು ಬಿಂಬಿಸುತ್ತಾರೆ. ವಾಸ್ತವ ಏನೆಂದರೆ, ರಷ್ಯ ಮತ್ತು ಯುರೋಪಿಗಿಂತ ಭಾರತದ ವೈವಿಧ್ಯತೆ, ಭೂಗೋಳಿಕ ಸಂಪತ್ತು, ಸಾಂಸ್ಕೃತಿಕತೆ, ಶಿಲ್ಪಕಲೆಯು ಶ್ರೀಮಂತವಾಗಿದೆ ಎಂದು ಹೇಳಿದರು.
ದೇಶದ ಪ್ರತಿ ಜನಾಂಗಕ್ಕೂ ಅದರದ್ದೇ ಆದ ಕಲೆ ಇದೆ. ಈ ಕಲೆಯನ್ನು ದನಿಯಾಗಿ ಅಭಿವ್ಯಕ್ತಪಡಿಸದಿದ್ದರೆ, ಅದು ಕಲೆಯಾಗಿ ಉಳಿಯುವುದಿಲ್ಲ. ರಾಮಾಯಣವು ವಾಲ್ಮೀಕಿಯ ಪರಿಕಲ್ಪನೆ. ಆದರೆ, ಅದನ್ನು ರಾಮ, ಸೀತೆಯಾಗಿ ರೂಪ ಕೊಟ್ಟಿದ್ದು ಮಾತ್ರ ಶಿಲ್ಪಿ. ದೇಶದಲ್ಲಿ ಅಂತಹ ಸಾಕಷ್ಟು ಶ್ರೀಮಂತವಾದ ಶಿಲ್ಪಕಲೆ ಇದೆ. ದೇಶದ ಪ್ರತಿ ಜನಾಂಗವು ತನ್ನದೇ ಆದ ಕಲೆಯನ್ನು ಹೊಂದಿದೆ. ಈ ಕಲೆಯನ್ನು ದನಿಯಾಗಿ ಆಭಿವ್ಯಕ್ತಪಡಿಸದಿದ್ದರೆ ಪ್ರಯೋಜನವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಮಹಾರಾಷ್ಟ್ರವು ಹಿಂದೂಸ್ಥಾನಿ ಸಂಗೀತದ ಕೇಂದ್ರ ಸ್ಥಳವಾಗಿದೆ. ಅಂತಹ ಕೇಂದ್ರ ಸ್ಥಳದಲ್ಲಿರುವವರಿಗೆ ಭಕ್ತಿ-ಭಾವ, ಪ್ರೀತಿ-ಪ್ರಣಯ, ದುಃಖ ಎಲ್ಲವನ್ನೂ ಒಳಗೊಂಡಿರುವ ಭೈರವಿ ರಾಗ ಹಾಡಲು ಬರುವುದಿಲ್ಲ. ಅದನ್ನು ಲಕ್ನೋ, ರಾಜಸ್ಥಾನದ ಮೀರಾಬಾಯಿ ಚೆನ್ನಾಗಿ ಹಾಡುತ್ತಾರೆ. ಶಿವಾಜಿ ಮಹಾರಾಜರ ಕಾಲದಿಂದಲೂ ಯುದ್ಧವನ್ನೇ ಮಾಡಿಕೊಂಡು ಬಂದಿರುವುದರಿಂದ ಮಹಾರಾಷ್ಟ್ರದವರಿಗೆ ಭೈರವಿ ರಾಗ ಹಾಡಲು ಸಾಧ್ಯವಿಲ್ಲ. ಹಾಗೆಯೇ ಬಂಗಾಳಿಯ ಸತ್ಯಜಿತ್ ರೇ ಸಿನಿಮಾಗಳಲ್ಲಿನ ಸೂಕ್ಷ್ಮತೆ ಕೂಡ ಮಹಾರಾಷ್ಟ್ರದಲ್ಲಿ ಇಲ್ಲ ಎಂದರು.
ಸಂಘರ್ಷದ ಭಾವ ತಲ್ಲಣಗಳನ್ನು ಹಿಡಿದಿಟ್ಟ ಪರ್ವ:ಎಸ್.ಎಲ್. ಭೈರಪ್ಪ ಅವರ ಬರಹಗಳನ್ನು ಪರ್ವ ಪೂರ್ವ ಮತ್ತು ಪವೋತ್ತರ ಎಂದು ವಿಂಗಡಿಸಬಹುದು. ಯುಗ ಸಂಧಿಯ ಸಂಘರ್ಷದ ಎಲ್ಲ ಭಾವ ತಲ್ಲಣಗಳನ್ನು ಪದರ ಪದರವಾಗಿ ಹಿಡಿದಿಟ್ಟ. ಕಾಣಿಸುವ ಕೃತಿ ಪರ್ವ. ಇಂಗ್ಲಿಷ್​ನಲ್ಲಿ ಪರ್ವ 13 ಮುದ್ರಣ ಕಂಡಿದೆ. ಮೂಲದಲ್ಲಿರುವ ಭಾವ ತೀವ್ರತೆಗೆ ಚ್ಯುತಿಯಾಗದಂತೆ ಪ್ರಕಾಶ ಬೆಳವಾಡಿ ಅವರು ರಂಗಕ್ಕೆ ತಂದಿದ್ದಾರೆ ಎಂದು ಸಂವಾದ ನಡೆಸಿಕೊಟ್ಟ ಲೇಖಕಿ ಸಹನಾ ವಿಜಯಕುಮಾರ್ ಅಭಿನಂದನೆ ಸಲ್ಲಿಸಿದರು. ಅ.19 ರಿಂದ 22 ರವರೆಗೆ ‘ಪರ್ವ’ (ಇಂಗ್ಲಿಷ್) ನಾಟಕ ಪ್ರದರ್ಶನವಾಗಲಿದೆ. 8 ಗಂಟೆ ಅವಧಿಯ ನಾಟಕ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶನಗೊಳ್ಳಲಿದೆ.
ಪರ್ವ ಕಾದಂಬರಿಯನ್ನು ಕನ್ನಡದಲ್ಲಿ ಓದುವುದಕ್ಕೂ ಇಂಗ್ಲಿಷ್​ನಲ್ಲಿ ಓದುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಭೈರಪ್ಪ ಅವರು ಕನ್ನಡದಲ್ಲಿ ಬಳಸಿರುವ ಭಾಷೆಯನ್ನು ಯಥಾವತ್ತಾಗಿ ಇಂಗ್ಲಿಷ್​ಗೆ ತರ್ಜುಮೆ ಮಾಡುವುದು ಬಹಳ ಕಷ್ಟ. ಅದನ್ನು ಕಾವ್ಯಾತ್ಮಕವಾಗಿ ಹೇಳಲು ಹೋದರೆ, ಅದು ಪರಿಣಾಮಕಾರಿಯಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಪರ್ವವನ್ನು ನಾಟಕವನ್ನಾಗಿಸಿದ್ದು ನನ್ನ ಜೀವನ ಸಾಧನೆ ಎಂದರೆ ತಪ್ಪಾಗಲಾರದು ಎಂದು ನಾಟಕಕಾರ ಪ್ರಕಾಶ್ ಬೆಳವಾಡಿ ತಿಳಿಸಿದರು. ಪ್ರತಿ ಮನುಷ್ಯನು ತನ್ನದೇ ಸಿದ್ಧಾಂತಗಳನ್ನು ಹೊಂದಿರುತ್ತಾನೆ. ಆರಂಭದಲ್ಲಿ ನನ್ನ ತಿಳಿವಳಿಕೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಇದ್ದೆ. ನಿಜ ಹೇಳಬೇಕೆಂದರೆ, ನನಗೆ ಬುದ್ಧಿ ಬಂದಿದ್ದೇ ಸ್ವಲ್ಪ ತಡವಾಗಿ ಎನ್ನಬಹುದು. ರವೀಂದ್ರನಾಥ ಟ್ಯಾಗೋರ್ ಅವರ ‘ಗೋರ’ ನಾಟಕ ಮಾಡುವ ತನಕ ನನ್ನ ನಿಲುವುಗಳು ಬೇರೆಯಾಗಿದ್ದವು. ಕ್ರಮೇಣ ನನ್ನ ನಿಲುವುಗಳು ಬದಲಾಗುತ್ತಾ ಸಾಗಿದವು ಎಂದು ಹೇಳಿದರು.
ಕಾರು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು; ವಾಹನ ಚಲಾಯಿಸುತ್ತಿದ್ದ ಚಿತ್ರನಟ ನಾಗಭೂಷಣ್ ಮದ್ಯಪಾನ ಮಾಡಿದ್ದರಾ?

ತೆನೆ ಹೊತ್ತ ಕಮಲ: ಎಚ್​ಡಿಕೆ ನಡೆಗೆ ಬೇಸತ್ತ ಅಲ್ಪಸಂಖ್ಯಾತ ಮುಖಂಡರಿಂದ ಜೆಡಿಎಸ್​ಗೆ ಸಾಮೂಹಿಕ ರಾಜೀನಾಮೆ ನಿರ್ಧಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
