ಬೆಂಗಳೂರು:ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್‌ನಲ್ಲಿ ಸಾಲು ಸಾಲು ಸವಾಲು ಎದುರಾಗಿವೆ. ಪಕ್ಷದ ಶಾಸಕರು, ಮುಖಂಡರಲ್ಲೇ ಈ ಮೈತ್ರಿ ಬಗ್ಗೆ ಅಸಮಾಧಾನವಿದೆ. ಜಾತ್ಯತೀತ ಪಕ್ಷ ಎಂಬ ಕಾರಣಕ್ಕೆ ಪಕ್ಷದಲ್ಲಿದ್ದ ಮುಸ್ಲಿಂ ಮುಖಂಡರಂತೂ ಬೂದಿ ಮುಚ್ಚಿದ ಕೆಂಡಂತಿದ್ದಾರೆ.
ಇನ್ನು ಕೆಲವರು ಮೈತ್ರಿ ವಿರೋಧಿಸಿ ಆಕ್ರೋಶ ಕೂಡ ಹೊರ ಹಾಕಿದ್ದಾರೆ. ಒಂದಿಬ್ಬರು ಮೈತ್ರಿ ಬೆನ್ನಲ್ಲೇ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಪಕ್ಷದ ರಾಜ್ಯ ಉಪಾಧ್ಯಕ್ಷ ಸಯ್ಯದ್ ಶಫೀವುಲ್ಲಾ ರಾಜೀನಾಮೆ ನೀಡಿದ್ದಾರೆ. ಸದಾ ಬಿಜೆಪಿ ವಿರುದ್ಧ ಕೆಂಡ ಕಾರುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮೈತ್ರಿ ಬಗ್ಗೆ ಮೌನವಾಗಿರುವುದು ಕೂಡ ಪಕ್ಷದಲ್ಲಿ ತಳಮಳ ಉಂಟು ಮಾಡಿದೆ. ಜೆಡಿಎಸ್ ದೆಹಲಿ ಮಾಜಿ ಪ್ರತಿನಿಧಿ ಮೋಹಿದ್ ಅಲ್ತಾಪ್, ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ನಾಸೀರ್ ಹುಸೇನ್, ಎನ್.ಬಿ.ನಬಿ ಹಾಗೂ ಅವರ ಪುತ್ರ ಒಳಗೊಂಡಂತೆ ಮುಸ್ಲಿಂ ನಾಯಕರು ಈಗಾಗಲೇ ಒಂದು ಸುತ್ತಿನ ರಹಸ್ಯ ಮಾತುಕತೆ ನಡೆಸಿದ್ದು, ಅವರೆಲ್ಲ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಬಿಜೆಪಿ ಜತೆಗಿನ ಮೈತ್ರಿ ಬಹುತೇಕ ದೆಹಲಿ ಹೈಕಮಾಂಡ್ ಹಂತದಲ್ಲೇ ಆಗಿರುವುದರಿಂದ ರಾಜ್ಯ ಬಿಜೆಪಿ ನಾಯಕರ ವಿಶ್ವಾಸಗಳಿಸುವ ಅನಿವಾರ್ಯತೆ ಜೆಡಿಎಸ್ ನಾಯಕರಿಗಿದೆ. ಒಂದನೇ ಹಂತದ ನಾಯಕರು ಸಲೀಸಾಗಿ ಮೈತ್ರಿಗೆ ಮುಗುಳು ನಗೆ ತೋರಿಸಬಹುದು. ಆದರೆ ಎರಡು ಹಾಗೂ ಮೂರು ಮತ್ತು ಕಾರ್ಯಕರ್ತರ ಹಂತದಲ್ಲಿ ಹೊಂದಾಣಿಕೆ ಸಲೀಸಲ್ಲ ಎಂಬುದು ಉಭಯ ಪಕ್ಷಗಳ ನಾಯಕರಿಗೂ ಮನವರಿಕೆಯಾಗಿದೆ.
ನೂರು ದಿನಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿದ್ದಾ ಜಿದ್ದಿ ಹೋರಾಟ ಮಾಡಿ ಈಗ ಏಕಾಏಕಿ ಬಿಜೆಪಿ ಜತೆ ಕೈಜೋಡಿಸಲು ಕಾರ್ಯಕರ್ತರು ಒಪ್ಪುತ್ತಾರೆಯೆ? ವರಿಷ್ಠರ ತಾಳಕ್ಕೆ ತಕ್ಕಂತೆ ಕಾರ್ಯಕರ್ತರು ಕುಣಿಯುತ್ತಾರೆಯೆ ಎಂಬ ಜಿಜ್ಞಾಸೆ ಜೆಡಿಎಸ್‌ನಲ್ಲಿ ಮನೆ ಮಾಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರೆ ಮುಗಿಯಿತು ಎಂಬ ಸ್ಥಿತಿ ತಳ ಮಟ್ಟದಲ್ಲಿಲ್ಲ. ಸ್ಥಳೀಯ ಸಮಸ್ಯೆಗಳು, ಜಾತಿ ಸಮೀಕರಣ, ವಿಧಾನಸಭೆ ಚುನಾವಣೆಯಲ್ಲಿ ಹಣಾಹಣಿ, ಮತ್ತಿತರ ಕಾರಣಗಳಿಂದ ಕಾರ್ಯಕರ್ತರ ನಡುವೆ ಕೆಲವೇ ತಿಂಗಳಲ್ಲಿ ಬರುವ ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಕಾಣುವುದು ಸಲೀಸಲ್ಲ ಎಂಬ ಅಭಿಪ್ರಾಯ ಉಭಯ ಪಕ್ಷಗಳಲ್ಲೂ ಇದೆ.
ಎರಡು ಪ್ರಬಲ ಸಮುದಾಯಗಳು ಬಿಜೆಪಿ ಹಾಗೂ ಜೆಡಿಎಸ್ ಪರ ನಿಂತಿವೆ. ಬಹುತೇಕ ಲಿಂಗಾಯತರು ಬಿಜೆಪಿಗೆ ಬೆಂಬಲಿಸಿದರೆ, ಒಕ್ಕಲಿಗರು ಜೆಡಿಎಸ್ ಪರ ಇದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಒಂದು ವೇಳೆ, ಇವೆರಡು ಸಮುದಾಯಗಳು ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದರೆ ಬಿಜೆಪಿ ಹಾಗೂ ಜೆಡಿಎಸ್‌ಗೆ ಲಾಭವಾಗಲಿದೆ ಎಂಬ ವಾದವೂ ಇದೆ.
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಪ್ರಾಬಲ್ಯವಿದ್ದರೆ, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಲಿಂಗಾಯತರ ಪ್ರಾಬಲ್ಯವಿದೆ. ಹಳೇ ಮೈಸೂರು ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ಹೆಚ್ಚು ಮತಗಳು ಲಭ್ಯವಾಗಿದ್ದರೆ, ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ. ಈ ಮೈತ್ರಿಯಿಂದ ಕರ್ನಾಟಕದ ಎರಡು ಪ್ರಬಲ ಪ್ರಾಂತ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಎನ್‌ಡಿಎ ಗುರಿ. ಈ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಮೈತ್ರಿಗೆ ಒಲವು ತೋರಿದ್ದಾರೆ ಎನ್ನಲಾಗಿದೆ.
ಜೆಡಿಎಸ್‌ಗೆ ಮೂರು ಇಲ್ಲವೆ ನಾಲ್ಕು ಲೋಕಸಭೆ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಒಪ್ಪಿದೆ. ಆದರೆ, ಈ ಕ್ಷೇತ್ರಗಳಲ್ಲೂ ಮೈತ್ರಿ ವರ್ಕ್ ಔಟ್ ಆಗುತ್ತದೆಯೇ ಎಂಬ ಅನುಮಾನ ಒಳಗೊಳಗೇ ಬಿಜೆಪಿ ಮತ್ತು ಜೆಡಿಎಸ್ ಮುಖಂಡರಲ್ಲೂ ಇದೆ.ಜಾತ್ಯತೀತ ನಿಲವು ಪ್ರತಿಪಾದನೆಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಾಗಲಿ, ಮಾಜಿ ಸಿಎಂ ಕುಮಾರಸ್ವಾಮಿ ಅವರಾಗಲಿ ಇದುವರೆಗೆ ಜಾತ್ಯತೀತ ನಿಲುವು ಪ್ರತಿಪಾದನೆ ಮಾಡುತ್ತಲೇ ಪ್ರಾದೇಶಿಕ ಪಕ್ಷಕ್ಕೆ ಜೀವ ಕಳೆ ತುಂಬಿದ್ದರು. ಆದರೆ ಈಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಜಾತ್ಯತೀತ ಸಿದ್ಧಾಂತ ಪ್ರತಿಪಾದನೆ ಮಾಡಿ ವೋಟು ಕೇಳುವುದು ಸಾಧ್ಯವಿಲ್ಲ. ಹಾಗಾಗಿ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಯಾವುದೇ ಪಕ್ಷಗಳ ಜತೆ ಗುರುತಿಸಿಕೊಳ್ಳದ ವೋಟುಗಳನ್ನು ಗಿಟ್ಟಿಸಿಕೊಳ್ಳುವ ಸವಾಲು ಜೆಡಿಎಸ್ ಮುಂದಿದೆ.
ವಿಜಯೇಂದ್ರ-ನಿಖಿಲ್ ಜೋಡೆತ್ತು…ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜೋಡೆತ್ತಿನಂತೆ ಚುನಾವಣೆಯಲ್ಲಿ ಧುಮುಕುವ ಸಾಧ್ಯತೆಗಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
