ಬೆಂಗಳೂರು:ಸಿದ್ದರಾಮಯ್ಯ ಸರ್ಕಾರವಿದ್ದ ಸಂದರ್ಭದಲ್ಲಿ ಸಂಚಲನ ಮೂಡಿಸಿದ್ದ ಒಂದಂಕಿ ಲಾಟರಿ ಹಗರಣದಲ್ಲಿ ಎಡಿಜಿಪಿ ಅಲೋಕ್​ಕುಮಾರ್​ಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ಜತೆಗೆ ಸುಳ್ಳು ಕೇಸು ದಾಖಲಿಸಿದ ಆರೋಪದಡಿ ನಿವೃತ್ತ ಐಜಿಪಿ ಸೇರಿ 10 ಪೊಲೀಸರ ವಿರುದ್ಧ ಕೋರ್ಟ್​ಗೆ ಆರೋಪಪಟ್ಟಿ ಸಲ್ಲಿಸಿದೆ.
ಲಾಟರಿ ದಂಧೆಕೋರ ಪಾರಿರಾಜನ್​ನಿಗೆ ಪೊಲೀಸರು ಸಹಕರಿಸಿದ ಆರೋಪ ಪ್ರಕರಣ ಸಂಬಂಧ ಕಳೆದ 5 ವರ್ಷ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು, ಜ.22ರಂದು ನಗರದ ಸಿಬಿಐ ವಿಶೇಷ ಕೋರ್ಟ್​ಗೆ 60 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಪಾರಿ ರಾಜನ್ ಮನೆಯಲ್ಲಿ ತಾವೇ ಲಾಟರಿ ಟಿಕೆಟ್​ಗಳನ್ನು ಇಟ್ಟು ಸುಳ್ಳು ಕೇಸ್ ದಾಖಲಿಸಿದ್ದ ಅಂದಿನ ಲಾಟರಿ ನಿಷೇಧ ದಳದ ಐಜಿಪಿ ಬಿ.ಎ. ಪದ್ಮನಯನ, 6 ಇನ್​ಸ್ಪೆಕ್ಟರ್​ಗಳು ಸೇರಿ 10 ಅಧಿಕಾರಿಗಳ ಹೆಸರನ್ನು ಆರೋಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಲಾಟರಿ ದಂಧೆಯಲ್ಲಿ ಕೈಜೋಡಿಸಿದ ಆರೋಪಕ್ಕೆ ಸಿಲುಕಿ ಅಮಾನತುಗೊಂಡಿದ್ದ ಎಡಿಜಿಪಿ ಅಲೋಕ್​ಕುಮಾರ್ ಹಾಗೂ ಅಂದಿನ ರಾಜ್ಯ ಲಾಟರಿ ಮತ್ತು ಮದ್ಯ ನಿಷೇಧ ಘಟಕ ಎಸ್​ಪಿ ಧರಣೇಂದ್ರ ಅವರನ್ನು ಸಿಬಿಐ ದೋಷಮುಕ್ತಗೊಳಿಸಿದೆ.
ಕೆಜಿಎಫ್​ನ ಪಾರಿರಾಜನ್ 2015ರ ಏಪ್ರಿಲ್​ನಲ್ಲಿ ಅಕ್ರಮ ಲಾಟರಿ ದಂಧೆಯಲ್ಲಿ ತೊಡಗಿರುವ ಬಗ್ಗೆ ಬಂಗಾರ ಪೇಟೆ ಎಸ್​ಐ ಪ್ರಕಾಶ್​ಗೆ ಮಾಹಿತಿ ಸಿಕ್ಕಿತು. ಈ ಬಗ್ಗೆ ಲಾಟರಿ ನಿಷೇಧ ಘಟಕದ ಐಜಿಪಿ ಪದ್ಮನಯನಗೆ ಎಸ್​ಐ ವಿಷಯ ತಿಳಿಸಿದ್ದರು. ನಂತರ ಐಜಿಪಿ ಸೂಚನೆ ಮೇರೆಗೆ ತನಿಖೆ ಕೈಗೊಂಡಿದ್ದರು. ಅಷ್ಟರಲ್ಲಿ ಪಾರಿ ರಾಜನ್, ಮಾಧ್ಯಮದಲ್ಲಿ ತನಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸ್ನೇಹವಿದೆ ಎಂದು ಹೇಳಿದ್ದ. ಅದನ್ನು ಗಂಭೀರವಾಗಿ ಪರಿಗಣಿಸಿದ ಲಾಟರಿ ನಿಷೇಧ ದಳದ ಅಧಿಕಾರಿಗಳು, 2015ರ ಮೇ 1ರಂದು ಎಫ್​ಐಆರ್ ದಾಖಲಿಸಿ ತನಿಖೆ ಶುರು ಮಾಡಿದ್ದರು.
ಇನ್​ಸ್ಪೆಕ್ಟರ್ ಕನಕಲಕ್ಷ್ಮೀಯನ್ನು ತನಿಖಾಧಿಕಾರಿ ಯಾಗಿ ನೇಮಿಸಲಾಗಿತು. ಮೇ 1ರಂದು ಪಾರಿರಾಜನ್ ಮನೆ ಮೇಲೆ ಐಜಿಪಿ ಪದ್ಮನಯನ, ಇನ್​ಸ್ಪೆಕ್ಟರ್ ಕನಕಲಕ್ಷ್ಮೀ ತಂಡ ದಾಳಿ ನಡೆಸಿತ್ತು. ಪಾರಿರಾಜನ್ ಮಗಳ ಬೆಡ್ ರೂಮ್ೆ ತೆರಳಿದ ಕನಕಲಕ್ಷ್ಮೀ, ತಾನೇ ಬ್ಯಾಗ್​ನಲ್ಲಿ ತಂದಿದ್ದ ಲಾಟರಿ ಟಿಕೆಟ್​ಗಳನ್ನು ಇಟ್ಟು ಹೊರಬಂದಿದ್ದರು. ಕೆಲ ಹೊತ್ತಿಗೆ 3ನೇ ವ್ಯಕ್ತಿಗಳನ್ನು ಕರೆಸಿ ಪರಿಶೀಲನೆ ನಡೆಸಿ ಲಾಟರಿ ಟಿಕೆಟ್ ಜಪ್ತಿ ಮಾಡಿಸಿ ಸಹಿ ಪಡೆದಿದ್ದರು. ವಶಕ್ಕೆ ಪಡೆದಿದ್ದ ಹಾರ್ಡ್​ಡಿಸ್ಕ್ ಅನ್ನು ಎಫ್​ಎಸ್​ಎಲ್​ಗೆ ಕಳುಹಿಸಿರಲಿಲ್ಲ. ಲಾಟರಿ ನಿಷೇಧ ಘಟಕದ ಸಂಗ್ರಹಿಸಿದ ದಾಖಲೆಗಳನ್ನು ಆಧರಿಸಿ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಪಾರಿರಾಜನ್ ಮೇಲೆ ಆರೋಪಪಟ್ಟಿ ಸಹ ದಾಖಲಿಸಿದ್ದರು. ಇದರ ಬಗ್ಗೆ ಅನುಮಾನ ಬಂದು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಯಿತು ಎಂದು ಸಿಬಿಐ ತಿಳಿಸಿದೆ.
ಒಳಸಂಚಿಗೆ ಬಲಿಯಾಗಿದ್ದೆ..
ಪೊಲೀಸ್ ಇಲಾಖೆ ಮತ್ತು ಆಡಳಿತದಲ್ಲಿ ಇದ್ದವರ ಒಳಸಂಚಿಗೆ ನಾನು ಬಲಿಪಶು ಆಗಿದ್ದೆ. 5 ವರ್ಷಗಳ ಬಳಿಕ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಗುರುವಾರ ಎಡಿಜಿಪಿ ಅಲೋಕ್​ಕುಮಾರ್ ಭಾವುಕರಾಗಿ ನುಡಿದರು. ಪ್ರಕರಣದಲ್ಲಿ ಆರೋಪ ಮುಕ್ತರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್, ಒಳ್ಳೆಯ ಚಾರಿತ್ರ್ಯವಿದ್ದರೆ ಡಿಜಿ-ಐಜಿಪಿ ಹುದ್ದೆ ಸೇರಿ ಉನ್ನತ ಹುದ್ದೆ ಸಿಗುತ್ತದೆ ಎಂಬ ಕಾರಣಕ್ಕೆ ಕೆಲವರು ದ್ವೇಷ, ಅಸೂಯೆ ಕಾರುತ್ತಿರಬಹುದು ಎಂದು ಹೇಳಿದರು. ಪಾರಿರಾಜನ್​ನ ಜತೆ ಸ್ನೇಹ ಇದ್ದದ್ದು ನಿಜ. ಸ್ನೇಹಕ್ಕೂ ಆತನ ವ್ಯವಹಾರಕ್ಕೂ ತಳಕು ಹಾಕಿ ಅಪರಾಧಿ ಎಂದು ಬಿಂಬಿಸಲಾಗಿತ್ತು. ಡಿಸಿಪಿ ಆಗಿ ಕರ್ತವ್ಯ ನಿರ್ವಹಿಸುವಾಗ ಎಲ್ಲವೂ ಚೆನ್ನಾಗಿತ್ತು. ಸಿಸಿಬಿ ಜಂಟಿ ಆಯುಕ್ತನಾದ ಮೇಲೆ ಕುತಂತ್ರಕ್ಕೆ ತುತ್ತಾಗುತ್ತಿದ್ದೇನೆ. ಕಳೆದ 10 ವರ್ಷಗಳಲ್ಲಿ ನನ್ನ ಮೇಲೆ ಕೆಲವರು ಹಗೆತನ ಸಾಧಿಸುತ್ತಿದ್ದಾರೆ. 26 ವರ್ಷಗಳ ಸೇವೆಯಲ್ಲಿ ನನಗೆ ರಾಷ್ಟ್ರಪತಿ ಪದಕ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಲಾಟರಿ ಪ್ರಕರಣದಲ್ಲಿ ಪಾರಿ ರಾಜನ್ ಪತ್ತೆಯಾದ 3 ದಿನಗಳ ಬಳಿಕ ಎಫ್​ಐಆರ್ ದಾಖಲಾಗಿತ್ತು. ಪಾರಿ ರಾಜನ್ ಜತೆ ಅಲೋಕ್​ಕುಮಾರ್ ಸ್ನೇಹವಿದೆ ಎಂಬುದು ಗೊತ್ತಾದ ಮೇಲೆ ಪ್ರಕರಣದ ದಿಕ್ಕು ಬದಲಾಯಿತು. ನೆಪ ಮಾತ್ರಕ್ಕೆ ಸಿಐಡಿ ವರದಿ ಪಡೆದು ಅಮಾನತು ಮಾಡಲಾಗಿತ್ತು ಎಂದರು.
ಕಳೆದ 5 ವರ್ಷ ಅರ್ಧವೇತನ ನೀಡಲಾಯಿತು. ನನ್ನ ಕುಟುಂಬ ಸದಸ್ಯರು ಹಿಂಸೆ ಅನುಭವಿಸಿದರು. ಇನ್ನೂ ಇಲಾಖಾ ತನಿಖೆ ಮುಗಿದಿಲ್ಲ. ಸಿಬಿಐ ಅಧಿಕಾರಿಗಳೇ ಪತ್ರ ನೀಡಿದ ಮೇಲೆ ಬಡ್ತಿ ಸಿಕ್ಕಿತು. ಇದೀಗ ಇನ್ನೊಂದು ಕೇಸ್​ನಲ್ಲಿ ಸಿಲುಕಿಸ ಬೇಕೆಂದು ವಿರೋಧಿಗಳು ಕುತಂತ್ರ ಮಾಡುತ್ತಿದ್ದಾರೆ.
| ಅಲೋಕ್ ಕುಮಾರ್ ಎಡಿಜಿಪಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − three =
Remember me
