ಉಗ್ರರು, ನಕ್ಸಲರು ಮತ್ತು ಸಂಚುಕೋರರ ದಾಳಿಯಿಂದ ಗಣ್ಯವ್ಯಕ್ತಿಗಳ ಜೀವ ಉಳಿಸಲು ರಾಜ್ಯ ಪೊಲೀಸ್ ಇಲಾಖೆ ಬಳಿಯಿರುವ ಬುಲೆಟ್ ಪ್ರೂಫ್ ಕಾರುಗಳ ಪೈಕಿ 5 ಕಾರುಗಳನ್ನು ನಿಯಮಬಾಹಿರವಾಗಿ ರೂಪಾಂತರಿಸಲಾಗಿದೆ ಎಂಬ ವಿಚಾರ ಆರ್​ಟಿಒ ಅಧಿಕಾರಿಗಳ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ.
ಸಾಮಾನ್ಯ ವಿನ್ಯಾಸದ ಪಜೆರೊ ಕಾರುಗಳನ್ನು ಬುಲೆಟ್ ಪ್ರೂಫ್ ವಾಹನಗಳಾಗಿ ಪೊಲೀಸ್ ಇಲಾಖೆ ರೂಪಾಂತರಗೊಳಿಸಿ ಅವುಗಳನ್ನು ಗಣ್ಯವ್ಯಕ್ತಿಗಳ ಬೆಂಗಾವಲಿಗೆ ಬಳಸುತ್ತಿದೆ. ಈ ಕಾರುಗಳಿಂದ ಭದ್ರತೆಗಿಂತ ಅಭದ್ರತೆಯೇ ಜಾಸ್ತಿ. ಆದ್ದರಿಂದ ಈ ವಾಹನಗಳು ವಿವಿಐಪಿ ಕರ್ತವ್ಯಕ್ಕೆ ಬಳಸಲು ಯೋಗ್ಯವಾಗಿಲ್ಲ ಎಂದು ಆರ್​ಟಿಒ ಅಧಿಕಾರಿಗಳು ಷರಾ ಬರೆದಿದ್ದಾರೆ. ಆದ್ದರಿಂದ ರೂಪಾಂತರಕ್ಕಾಗಿ ಖರ್ಚು ಮಾಡಿರುವ ಕೋಟ್ಯಂತರ ರೂ. ಇದೀಗ ವ್ಯರ್ಥವಾದಂತಾಗಿದೆ.
ಅಜಗಜಾಂತರ ವ್ಯತ್ಯಾಸ:ಸಾಮಾನ್ಯ ವಾಹನದ ವಿನ್ಯಾಸ ಹಾಗೂ ಬುಲೆಟ್ ಬ್ರೂಫ್ ವಾಹನದ ವಿನ್ಯಾಸಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಸಾಮಾನ್ಯ ವಾಹನವನ್ನು ಬುಲೆಟ್ ಪ್ರೂಫ್ ವಾಹನವಾಗಿ ಮಾರ್ಪಡಿಸಿದರೆ ಅದರ ತೂಕ ಮೊದಲಿಗಿಂತ ಬರೋಬ್ಬರಿ 1 ಟನ್ ಹೆಚ್ಚಾಗುತ್ತದೆ. ಇದರಿಂದ ಮೊದಲು ನಿಗದಿಪಡಿಸಿದ್ದ ವಾಹನದ ಇಂಧನ ಕ್ಷಮತೆ ಹಾಗೂ ವೇಗ (ಬ್ರೇಕ್) ನಿಯಂತ್ರಣದ ಲೆಕ್ಕಾಚಾರ ಏರುಪೇರಾಗಿ ಅಪಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಅವೈಜ್ಞಾನಿಕ ಗಾಜು:ಅಲ್ಲದೆ, ಕಾರುಗಳ ಕಿಟಕಿಗಳಿಗೆ ಅಳವಡಿಸಿರುವ ಬುಲೆಟ್ ಪ್ರೂಫ್ ಗಾಜುಗಳೂ ವೈಜ್ಞಾನಿಕವಾಗಿಲ್ಲ. ಒಳಗೆ ಕುಳಿತವರಿಗೆ ಹೊರಗಿನ ದೃಶ್ಯ ಕಾಣುವುದಿಲ್ಲ. ಈ ವಾಹನಗಳನ್ನು ವಿವಿಐಪಿ ಭದ್ರತೆಗೆ ಬಳಸಬಾರದು. ಆದರೆ, ವಾಹನಗಳ ಸ್ಥಿತಿ ಉತ್ತಮವಾಗಿರುವುದರಿಂದ ಬುಲೆಟ್ ಪ್ರೂಫ್ ವಿನ್ಯಾಸ ತೆಗೆದು ಸಾಮಾನ್ಯ ವಾಹನಗಳಾಗಿ ಬಳಸುವಂತೆ ಆರ್​ಟಿಒ ಅಧಿಕಾರಿಗಳು ಸೂಚಿಸಿದ್ದಾರೆ.
ಒಂದು ಕಾರಿಗೆ 40 ಲಕ್ಷ ರೂ. ಖರ್ಚು
ಒಂದು ಕಾರನ್ನು ಬುಲೆಟ್ ಪ್ರೂಫ್ ವಾಹನವಾಗಿ ಮಾರ್ಪಡಿಸಲು 40 ರಿಂದ 60 ಲಕ್ಷ ರೂ. ವೆಚ್ಚವಾಗುತ್ತದೆ. ಕಂಪನಿಯಿಂದಲೇ ಆರ್ಡರ್ ಕೊಟ್ಟು ಮಾಡಿಸಿದರೆ ಅಂದಾಜು ಒಂದೂವರೆ ಕೋಟಿ ರೂ.ನಿಂದ 2 ಕೋಟಿ ರೂ. ಆಗುತ್ತದೆ. ಕಾರಿಗೆ ಅಳವಡಿಸುವ ತಾಂತ್ರಿಕ ಸಲಕರಣೆಗಳ ಮೇಲೆ ವಾಹನ ಬೆಲೆ ನಿಗದಿಯಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ವಿಮೆಯೂ ಕ್ಲೇಮ್ ಆಗಲ್ಲ!
ನಿಯಮದ ಪ್ರಕಾರ ಸಾಮಾನ್ಯ ಕಾರುಗಳನ್ನು ಬುಲೆಟ್ ಪ್ರೂಫ್ ಕಾರುಗಳಾಗಿ ಮಾರ್ಪಡಿಸಲು ಅವಕಾಶವಿಲ್ಲ. ಬುಲೆಟ್ ಪ್ರೂಫ್ ಕಾರ್​ಗಾಗಿ ತಯಾರಿಕಾ ಕಂಪನಿಗೇ ಆರ್ಡರ್ ಕೊಟ್ಟು ಖರೀದಿಸಬೇಕು. ಒಂದು ವೇಳೆ ರೂಪಾಂತರಿಸಿ ಕಾರು ಅಪಘಾತವಾದರೆ ವಿಮೆ ಹಣವೂ ದೊರೆಯುವುದಿಲ್ಲ. ಕಂಪನಿ ಅನುಮತಿ ಇಲ್ಲದೆ ನಿಯಮಬಾಹಿರವಾಗಿ ಕಾರಿನ ವಿನ್ಯಾಸ ಮಾರ್ಪಾಡು ಮಾಡಲಾಗಿದೆ ಎಂದು ವಿಮಾ ಕಂಪನಿಗಳು ವಿಮೆಯನ್ನು ತಿರಸ್ಕರಿಸುತ್ತವೆ.
ಆರ್​ಟಿಒ ಪರಿಶೀಲನೆ ಬಳಿಕ ಬಳಕೆ
ಗಣ್ಯರಿಗೆ ಬುಲೆಟ್ ಪ್ರೂಫ್ ವಾಹನ ನೀಡುವ ಮುನ್ನ ಆರ್​ಟಿಒ ಹಾಗೂ ಬಾಂಬ್ ನಿಷ್ಕ್ರಿಯ ದಳ ಅದನ್ನು ಪರಿಶೀಲಿಸಿ ಅನುಮತಿ ಕೊಡಬೇಕು. ಬಾಂಬ್ ನಿಷ್ಕ್ರಿಯ ದಳ ಸ್ಪೋಟದ ತೀವ್ರತೆಯಿಂದ ರಕ್ಷಣೆ ಕೊಡುವುದನ್ನು ಪರಿಶೀಲಿಸುತ್ತದೆ. ವಾಹನದ ಸ್ಥಿತಿಗತಿ ಬಗ್ಗೆ ಆರ್​ಟಿಒ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ. ತಪಾಸಣೆ ಸಂದರ್ಭದಲ್ಲಿ ವಾಹನಗಳ ರೂಪಾಂತರ ವಿಚಾರ ಬೆಳಕಿಗೆ ಬಂದಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯಕ್ಕೆ ಬೇಕು 30 ವಾಹನ
ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ 10 ಬುಲೆಟ್ ಪ್ರೂಫ್ ವಾಹನಗಳಿವೆ. ಗುಪ್ತದಳ ವಿಭಾಗದಲ್ಲಿ 3, ಬೆಂಗಳೂರು ನಗರ ಕಮಿಷನರೇಟ್​ನಲ್ಲಿ 3, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಬಳ್ಳಾರಿ ಕಮಿಷನರೇಟ್​ಗಳಲ್ಲಿ ತಲಾ 1 ಕಾರುಗಳಿವೆ. ಹೊರರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬುಲೆಟ್ ಪ್ರೂಫ್ ಕಾರುಗಳ ಸಂಖ್ಯೆ ತೀರಾ ಕಡಿಮೆ. ಆಂಧ್ರಪ್ರದೇಶದಲ್ಲಿ 60, ತಮಿಳುನಾಡಲ್ಲಿ 40 ಬುಲೆಟ್ ಪ್ರೂಫ್ ವಾಹನಗಳಿವೆ. ಕರ್ನಾಟಕಕ್ಕೂ ಕನಿಷ್ಠ 30 ವಾಹನಗಳು ಬೇಕೆಂಬ ಬೇಡಿಕೆ ಹಲವು ದಿನಗಳಿಂದ ಬಾಕಿ ಇದೆ.
| ಕೀರ್ತಿನಾರಾಯಣ ಸಿ. ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
