ಬೆಂಗಳೂರು:ಕೃಷಿಗಾಗಿ ಅರಣ್ಯ ಒತ್ತುವರಿ ಮಾಡಿಕೊಂಡಿರುವವರ ಒಕ್ಕಲೆಬ್ಬಿಸುವುದನ್ನು ತಡೆಯಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಶೂನ್ಯವೇಳೆಯಲ್ಲಿ ಕಾಂಗ್ರೆಸ್​ನ ಎಚ್.ಕೆ.ಪಾಟೀಲ್ ಪ್ರಸ್ತಾಪಕ್ಕೆ ಸಚಿವರು ಉತ್ತರಿಸಿದರು.
ಭೂ ಕಬಳಿಕೆಯೇ ಬೇರೆ, ಕೃಷಿಗಾಗಿ ಅರಣ್ಯ ಜಮೀನು ಒತ್ತುವರಿಯೇ ಬೇರೆ. ಆದರೆ, ಇವೆರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿರುವುದರಿಂದ ಸಣ್ಣ ಸಣ್ಣ ಒತ್ತುವರಿ ಮಾಡಿಕೊಂಡಿರುವ ರೈತರು ಕೋರ್ಟ್​ಗೆ ಅಲೆಯಬೇಕಿದೆ. ಇದನ್ನು ತಪ್ಪಿಸಲು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು. ಬೆಂಗಳೂರನ್ನು ದೃಷ್ಟಿಯಲ್ಲಿಟ್ಟುಕೊಂಡು ಭೂಗಳ್ಳರನ್ನು ಮಟ್ಟ ಹಾಕಲು ಕಾಯ್ದೆ ಜಾರಿಗೆ ತರಲಾಗಿತ್ತು. ಅಂತಹ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನ್ಯಾಯಾಲಯ ಸ್ಥಾಪಿಸಲಾಗಿದೆ. ಆದರೆ, ರಾಜ್ಯದ ಮೂಲೆ ಮೂಲೆಗಳಿಂದ ನಿತ್ಯ ನೂರಾರು ಜನರು ಸಣ್ಣಪುಟ್ಟ ತಪ್ಪಿಗಾಗಿ ಕೋರ್ಟ್​ಗೆ ಅಲೆಯಬೇಕಿದೆ ಎಂದರು.
ಭೂ ಕಬಳಿಕೆಯೇ ಬೇರೆ:ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯವಾಸಿಗಳನ್ನು ರಕ್ಷಣೆ ಮಾಡುವುದೇ ಬೇರೆ. ಭೂ ಕಬಳಿಕೆ ಮಾಡುವುದೇ ಬೇರೆ. ಈಗಾಗಲೆ ಸರ್ಕಾರ ಸೂಚನೆ ಕೊಟ್ಟಿದ್ದು, ಕೃಷಿಗಾಗಿ ಮಾಡಿರುವ ಒತ್ತುವರಿ ಬಿಟ್ಟು ಕ್ರಮ ಕೈಗೊಳ್ಳುವಂತೆ ಸೂಚಿಸ ಲಾಗಿದೆ. ಆದರೂ ಕೆಲವೆಡೆ ಆ ಜಾಗದಲ್ಲಿ ಬೆಳೆದ ಬೆಳೆಯನ್ನು ನಾಶ ಪಡಿಸಲಾಗಿದೆ. ಅಂತಹ ಕೃತ್ಯವನ್ನು ಸಹಿಸಲಾಗದು ಎಂದು ಹೇಳಿದರು.
ಸದನ ಸಮಿತಿ ರಚಿಸಲು ಆಗ್ರಹ:ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಎಚ್.ಕೆ.ಪಾಟೀಲ್, ಪಾರಂಪರಿಕ ಅರಣ್ಯವಾಸಿಗಳ ಹಕ್ಕು ಜಾರಿಯಲ್ಲಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಮುಂಡರಗಿಯಲ್ಲಿ ಹಲವು ತೋಟ ನಾಶ ಮಾಡಿದ್ದಾರೆ. ನಾಶ ಮಾಡುವಾಗ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಒಬ್ಬ ಮಹಿಳೆ ಮೃತಪಟ್ಟು ಮತ್ತೊಬ್ಬ ಮಹಿಳೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಗಮನ ಸೆಳೆದರು. ಬಗರ್​ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದು ಜನ ವಿರೋಧಿ, ಕಾನೂನು ವಿರೋಧಿಯಾಗಿದೆ. ರೈತರನ್ನು ಒಕ್ಕಲೆಬ್ಬಿಸಬಾರದೆಂಬ ಆದೇಶವಿದ್ದರೂ ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು. ಗದಗ ಜಿಲ್ಲೆಯಲ್ಲಿ ಸಣ್ಣ ಸಣ್ಣ ಸಾಗುವಳಿದಾರರ ಮೇಲೆ ಕೇಸು ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅಧಿಕಾರಿಗಳು ದರ್ಪ, ಬಲಪ್ರಯೋಗ ಮಾಡಿರುವುದು ಖಂಡನಾರ್ಹ. ಈ ವಿಚಾರದ ಬಗ್ಗೆ ಸದನ ಸಮಿತಿ ರಚಿಸಬೇಕು ಎಂದು ಪಾಟೀಲ್ ಆಗ್ರಹಿಸಿದರು.
6 ಗುಂಟೆ ಜಮೀನಿಗೆ ಜೈಲು!:ಕಾಂಗ್ರೆಸ್​ನ ರಮೇಶ್ ಕುಮಾರ್ ಮಾತನಾಡಿ, ನನ್ನ ಕ್ಷೇತ್ರದಲ್ಲಿ 6 ಗುಂಟೆ ಜಮೀನು ಒತ್ತುವರಿಗೆ ಜೈಲಿಗೆ ಹಾಕಿದ್ದಾರೆ. 30/40 ಅಡಿ ಅಳತೆ ಸೈಟ್ ವಿಚಾರದಲ್ಲಿ ಇನ್ನೊಬ್ಬ ಮಹಿಳೆ ಕೋರ್ಟ್ ಅಲೆಯುತ್ತಿದ್ದಾಳೆ. ಈ ಸಮಸ್ಯೆಗೆ ಮುಖ್ಯಮಂತ್ರಿ ಮತ್ತು ಕಾನೂನು ಸಚಿವರು ಸಭೆ ಕರೆದು ಪರಿಹಾರ ಕಂಡುಹಿಡಿಯಬೇಕು ಎಂದು ಸಲಹೆ ನೀಡಿದರು. ಬಿಜೆಪಿಯ ಕಳಕಪ್ಪ ಬಂಡಿ ಮಾತನಾಡಿ, ಅರಣ್ಯ ಇಲಾಖೆ ಬ್ರಿಟಿಷರ ಪಳೆಯುಳಿಕೆಯಾಗಿದೆ. ಕಬ್ಬು, ಶೇಂಗಾ ಎಲ್ಲ ಬೆಳೆಯನ್ನು ನಾಶ ಮಾಡುತ್ತಿದ್ದು, ಲಕ್ಷ ಲಕ್ಷ ಕೋಟಿ ರೂ.ಗಳಷ್ಟು ಭೂ ಕಬಳಿಕೆ ಮಾಡಿರುವ ಒತ್ತುವರಿ ತೆರವುಗೊಳಿಸಲು ಅಂತಹ ಅರಣ್ಯ ಅಧಿಕಾರಿಯನ್ನು ನೇಮಿಸಿ ಎಂದು ವ್ಯಂಗ್ಯವಾಡಿದರು.
ಸಣ್ಣ ಸಣ್ಣ ಒತ್ತುವರಿ ಮಾಡಿಕೊಂಡ ರೈತರನ್ನು ಒಕ್ಕಲೆಬ್ಬಿಸುವುದರಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ. ಎಚ್.ಕೆ.ಪಾಟೀಲ್ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ಬಗರ್ ಹುಕುಂ ಸಾಗುವಳಿದಾರರನ್ನು ಉಳಿಸುವ ಪ್ರಯತ್ನ ಮಾಡಿದ್ದೇವೆ. ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸುತ್ತಿ ರುವುದು ದುರ್ದೈವದ ಸಂಗತಿ. ಈ ಸಮಸ್ಯೆ ಪರಿಹರಿಸಲು ವಿಶೇಷ ಸಭೆ ನಡೆಸಿ ಬಡವರಿಗೆ ರಕ್ಷಣೆ ನೀಡಲು ಅರಣ್ಯ ಇಲಾಖೆ ಸೂಚನೆ ನೀಡಬೇಕು. ಸದನ ಸಮಿತಿ ರಚಿಸುವುದು ಸೂಕ್ತ.
|ಬಿ.ಎಸ್.ಯಡಿಯೂರಪ್ಪಮಾಜಿ ಮುಖ್ಯಮಂತ್ರಿ
ಪಾರಂಪರಿಕ ಸಾಗುವಳಿದಾರರಿಗೆ ಕಿರುಕುಳ ನೀಡಲಾಗುತ್ತಿದೆ. ಅನೇಕ ಭಾಗಗಳ ಸಮಸ್ಯೆ ಪರಿಶೀಲಿಸಿ ವರದಿ ನೀಡಲು ಸದನ ಸಮಿತಿ ರಚಿಸಬೇಕು.
|ಸಿದ್ದರಾಮಯ್ಯಪ್ರತಿಪಕ್ಷ ನಾಯಕ
ಭೂ ಕಬಳಿಕೆ ವಿರುದ್ಧ ಪ್ರಕರಣ ದಾಖಲಿಸಿ ಸಣ್ಣ ಸಣ್ಣ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಅಧಿಕಾರಿಗಳು ಮನುಷ್ಯತ್ವವಿಲ್ಲದೆ ತೆಂಗು, ಬಾಳೆ ಬೆಳೆ ನಾಶ ಮಾಡಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು.
|ವಿಶ್ವೇಶ್ವರ ಹೆಗಡೆಕಾಗೇರಿ ಸ್ಪೀಕರ್
ಗದಗ:ಮುಂಡರಗಿ ತಾಲೂಕಿನ ಕೆಲೂರು ಗ್ರಾಮದಲ್ಲಿ ಸೋಮವಾರ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಮಹಿಳೆ ಯೊಬ್ಬರು ವಿಷ ಸೇವಿಸಿ ಮೃತಪಟ್ಟ ಪ್ರಕರಣ ಕುರಿತು ಮುಖ್ಯಮಂತ್ರಿ ಯವರೊಂದಿಗೆ ರ್ಚಚಿಸಿದ್ದು, ಮಾನವೀಯ ದೃಷ್ಟಿಯಿಂದ 5 ಲಕ್ಷ ರೂ. ಪರಿಹಾರ ಘೊಷಿಸಲು ಸೂಚಿಸಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ತಿಳಿಸಿದ್ದಾರೆ. ಸೋಮವಾರ ಕೆಲೂರು ಗ್ರಾಮದಲ್ಲಿ ಇಬ್ಬರು ರೈತ ಮಹಿಳೆಯರು ವಿಷ ಸೇವಿಸಿದ್ದರು. ಅವರಲ್ಲಿ ನಿರ್ಮಲಾ ಪಾಟೀಲ ಎಂಬುವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇನ್ನೊಬ್ಬ ಮಹಿಳೆ ಗದಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರದ ನೌಕರರಿಗೆ ನಿಗದಿ ಪಡಿಸಿರುವ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯಿಸುವ ಪ್ರಶ್ನೆಯೇ ಇಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ವಿಧಾನಸಭೆಯಲ್ಲಿ ಸ್ಪಷ್ಟಪಡಿಸುವ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಮ್ಮೆ ನಿರಾಸೆ ಮಾಡಿದ್ದಾರೆ. ಕಾಂಗ್ರೆಸ್​ನ ಅಜಯ್ಸಿಂಗ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿ ಅವರು, ಕೇಂದ್ರ ಸರ್ಕಾರದ ನಿಯಮಗಳು, ವೇತನ ಶ್ರೇಣಿ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯ ಆಗುವುದಿಲ್ಲವೆಂದು ಹೇಳಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ ಹೋಲಿಕೆ ಮಾಡಿದರೆ ರಾಜ್ಯ ಸರ್ಕಾರಿ ನೌಕರರಿಗೆ ಅನ್ಯಾಯ ಆಗುತ್ತಿರುವುದು ಸರ್ಕಾರದ ಗಮನದಲ್ಲಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವೇತನ ಆಯೋಗಗಳ ಶಿಫಾರಸು, ವೇತನ ಪರಿಷ್ಕರಣೆ ಅವಧಿ ಅನುಸರಿಸುವುದಿಲ್ಲ. ತನ್ನದೇ ಆದ ವೇತನ ಆಯೋಗ ಅಥವಾ ಸಮಿತಿಗಳ ಮೂಲಕ ವೇತನ ಹಾಗೂ ತುಟ್ಟಿಭತ್ಯೆಗಳನ್ನು ಪರಿಷ್ಕರಿಸುತ್ತಿರುತ್ತದೆ ಎಂದಿದ್ದಾರೆ.
ರಾಜ್ಯದ 5 ವಲಯಗಳಲ್ಲಿ ಕೈಗಾರಿಕಾ ಟೌನ್​ಶಿಪ್ ಸ್ಥಾಪನೆ ಮಾಡುವ ಜತೆಗೆ 2ನೇ ಹಂತದ ನಗರಗಳಿಗೂ ಕೈಗಾರಿಕೆಗಳನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮೇಲ್ಮನೆಯಲ್ಲಿ ತಿಳಿಸಿದ್ದಾರೆ. ಕೈಗಾರಿಕಾ ಟೌನ್​ಶಿಪ್​ಗಳ ಬಳಿಯೇ ಜನವಸತಿ ಪ್ರದೇಶಗಳನ್ನು ನಿರ್ಮಾಣ ಮಾಡುವ ಮೂಲಕ ವಾಕ್ ಟು ವರ್ಕ್​ಗೆ ಆದ್ಯತೆ ನೀಡಲಾಗುವುದು ಎಂದು ಜೆಡಿಎಸ್​ನ ಸಿ.ಎನ್. ಮಂಜೇಗೌಡ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು. ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮುಂದೆ ಬರುವ ಹೂಡಿಕೆದಾರರಿಗೆ ಸೌಲಭ್ಯಗಳು ಮತ್ತು ರಿಯಾಯಿತಿ ನೀಡುವುದನ್ನು ಕಡಿಮೆ ಮಾಡಲಾಗುವುದು. 2ನೇ ಹಂತದ ನಗರಗಳಾದ ತುಮಕೂರು, ಕಲ್ಬುರ್ಗಿ, ಬೆಳಗಾವಿ ಸೇರಿ ವಿವಿಧ ನಗರಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹ ನೀಡಲಾಗುವುದು. ಸರ್ಕಾರದಿಂದ ಎಲ್ಲ ರೀತಿಯ ಸಹಾಯ, ನೆರವು, ರಿಯಾಯಿತಿ ನೀಡಲಾಗುವುದು ಎಂದರು.
ಕನ್ನಡಿಗರಿಗೆ ಆದ್ಯತೆ:ಹೊಸ ಕೈಗಾರಿಕಾ ನೀತಿ 2020-25ರ ಅನ್ವಯ ರಿಯಾಯ್ತಿ ಹಾಗೂ ಉತ್ತೇಜನ ಪಡೆಯಲು ಕೈಗಾರಿಕಾ ಘಟಕಗಳು ಡಿ ವೃಂದದಲ್ಲಿ ಶೇ.100 ಹಾಗೂ ಘಟಕದಲ್ಲಿ ಒಟ್ಟಾರೆ ಶೇ.70 ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಡಾ. ಸರೋಜಿನಿ ಮಹಿಷಿ ವರದಿಯನ್ವಯ ರಾಜ್ಯದ ಕೈಗಾರಿಕೆಗಳಲ್ಲಿ ಶೇ. 85 ಉದ್ಯೋಗ ಕನ್ನಡಿಗರಿಗೆ ನೀಡಬೇಕು. ಇದರಲ್ಲಿ ಯಾವುದೇ ಲೋಪವಾಗಿದ್ದರೆ ಅಂತಹ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
