ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ಜನಜಾಗೃತಿ ಮೂಡಿಸುವ ಎರಡನೇ ಹಂತದ ಅಭಿಯಾನ ಜ.9ರಂದು ಆರಂಭವಾಗಲಿದೆ. ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಜ.18ರಂದು ನಡೆಯಲಿರುವ ರ‍್ಯಾಲಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸಲಿದ್ದು, ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ ಹಾಗೂ ಎನ್.ರವಿಕುಮಾರ್ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲ ಹಂತದಲ್ಲಿ 36 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ. 253 ಮಂಡಲಗಳು ಹಾಗೂ 21,000 ಬೂತ್​ಗಳ ವ್ಯಾಪ್ತಿಯಲ್ಲಿ 4.65 ಲಕ್ಷ ಮನೆಗಳಿಗೆ ಭೇಟಿ ನೀಡಿ ಸಿಎಎ ಬಗ್ಗೆ ಅರಿವು ಮೂಡಿಸಲಾಗಿದೆ. ಎರಡನೇ ಹಂತದ ಆಂದೋಲನದಲ್ಲಿ ಬಾಕಿ ಉಳಿದ 25 ಲಕ್ಷ ಮನೆಗಳಿಗೆ ಭೇಟಿ ನೀಡುವ ಗುರಿಯಿದೆ ಎಂದರು. ರಾಜ್ಯದ 300 ಮಂಡಲಗಳಲ್ಲಿ ಕರಪತ್ರಗಳ ಹಂಚಿಕೆ ಜತೆಗೆ 8866288662 ಟೋಲ್ ಫ್ರೀ ಸಂಖ್ಯೆಗೆ ಮಿಸ್ಡ್ ಕಾಲ್ ಮೂಲಕ ಸಿಎಎ ಬೆಂಬಲಿಸುವ ಅಭಿಯಾನ ನಡೆಯುತ್ತಿದೆ. ಸಹಿ ಸಂಗ್ರಹ, ಎತ್ತಿನ ಬಂಡಿ ಮೆರವಣಿಗೆ, ಭಾರತ್ ಮಾತಾ ಪೂಜನ್, ಪ್ರಬುದ್ಧರ ಸಭೆ, ಜಿಪಂ ಕೇಂದ್ರಗಳಲ್ಲಿ ಕಟ್ಟೆ ಚರ್ಚೆ, ಚಾಯ್ ಪೇ ಚರ್ಚೆ, ಬೈಕ್ ರ್ಯಾಲಿ, ಪಂಜಿನ ಮೆರವಣಿಗೆ ಇನ್ನಿತರ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಸುದ್ದಿ ಗೋಷ್ಠಿಯಲ್ಲಿ ಮಾಧ್ಯಮ ಸಂಚಾಲಕ ಎ.ಎಚ್.ಆನಂದ್, ರಾಜ್ಯ ಕಾರ್ಯದರ್ಶಿ ಭಾರತಿ ಮುಗದಮ್ ಇದ್ದರು.
ಅಭಿನಂದನಾ ರ‍್ಯಾಲಿಗಳು
ಪಕ್ಷದ ಪ್ರಣಾಳಿಕೆಯಂತೆ ಸಿಎಎ ಜಾರಿ ಮಾಡಿದ ಪ್ರಧಾನಮಂತ್ರಿಗೆ ಅಭಿನಂದನಾ ಕಾರ್ಯಕ್ರಮಗಳು ಜ.9ರಿಂದ ನಡೆಯಲಿವೆ. ಜ.11ರಂದು ಕಲಬುರಗಿ, ಯಾದಗಿರಿಗಳಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಬೆಳಗಾವಿ, ಚಿಕ್ಕೋಡಿಗಳಲ್ಲಿ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್, ಜ.12ಕ್ಕೆ ರಾಯಚೂರಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜ.13ಕ್ಕೆ ದಾವಣಗೆರೆ, ಹಾವೇರಿಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ಅಭಿಯಾನದ ರಾಜ್ಯ ಸಂಚಾಲಕರೂ ಆದ ಎಂಎಲ್ಸಿ ಎನ್.ರವಿಕುಮಾರ್ ನೇತೃತ್ವದಲ್ಲಿ ಜ.9ರಂದು ರಾಯಚೂರು ಜಿಲ್ಲೆ ಸಿಂಧನೂರು ಮತ್ತು ಮಸ್ಕಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದರು.
ನಿಜಬಣ್ಣ ಬಯಲು
ಮೊದಲ ಹಂತದ ಅಭಿಯಾನದಲ್ಲಿ ಕಾಯ್ದೆಯಲ್ಲಿನ ಅಂಶಗಳನ್ನು ಮುಸ್ಲಿಮರಿಗೆ ತಿಳಿಸಲಾಗಿದ್ದು, ದೇಶದಲ್ಲಿ ಯಾವುದೇ ಒಬ್ಬ ಮುಸ್ಲಿಂ ವ್ಯಕ್ತಿಯನ್ನೂ ದೇಶದಿಂದ ಹೊರಗೆ ಕಳುಹಿಸುವ ಅಂಶ ಕಾಯ್ದೆಯಲ್ಲಿ ಇಲ್ಲವೆಂಬುದು ಮನವರಿಕೆ ಮಾಡಿ ಕೊಡುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್, ಕಮ್ಯುನಿಸ್ಟ್ ಹಾಗೂ ಕೆಲ ಬುದ್ಧಿಜೀವಿಗಳು ತಪು್ಪ ಮಾಹಿತಿ ನೀಡಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಮುಸ್ಲಿಮರಿಗೆ ತಿಳಿದಿದ್ದು, ಪಿತೂರಿಕೋರರ ನಿಜಬಣ್ಣ ಬಯಲಾಗಿದೆ ಎಂದು ಎನ್.ರವಿಕುಮಾರ್ ಟೀಕಿಸಿದರು. ಜ.11 ಹಾಗೂ 12ರಂದು ಎರಡು ಪೂರ್ಣ ದಿನ ಮನೆಮನೆ ಭೇಟಿ ಅಭಿಯಾನ ನಿಗದಿಪಡಿಸಿದ್ದು, ಜಿಲ್ಲಾ, ತಾಲೂಕು, ಮಂಡಲ ಹಾಗೂ ಪ್ರತಿ ಬೂತ್​ಗಳಲ್ಲಿ ಜಾಗೃತಿ ಜತೆಗೆ ಕರಪತ್ರ ಹಂಚಿಕೆ ಮಾಡಲಾಗುತ್ತಿದೆ. ಎಲ್ಲ ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು, ಸೋತವರು, ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಸದಸ್ಯರು, ಮುಖಂಡರಿಗೆ ಈ ಜವಾಬ್ದಾರಿ ಒಪ್ಪಿಸಲಾಗಿದೆ ಎಂದು ರವಿಕುಮಾರ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 8 =
Remember me
