ಬೆಂಗಳೂರು:ಹಿಂದಿಯನ್ನು ಇಂಗ್ಲಿಷ್​ಗೆ ಪರ್ಯಾಯ ಭಾಷೆಯಾಗಿ ಒಪ್ಪಿಕೊಳ್ಳಬೇಕೆಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಿಂದಿ ಹೇರಿಕೆ ಗುಲಾಮಗಿರಿತನದ ಹೆಗ್ಗುರುತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರೆ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ನಡುವೆ ಹುಳಿ ಹಿಂಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಈ ನಡುವೆ, ರಾಜ್ಯದಲ್ಲಿ ಯಾವ ಕಾರಣಕ್ಕೂ ಹಿಂದಿ ಹೇರಿಕೆ ಆಗಲ್ಲ. ಅಮಿತ್ ಷಾ ಹೇಳಿಕೆ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ಕಲಬುರಗಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಷಾ ಅವರು ಹಿಂದಿ ಹೇರುವಂತೆ ಎಲ್ಲೂ ಹೇಳಿಲ್ಲ. ಆದರೆ ಅವರ ಮಾತನ್ನು ತಪ್ಪಾಗಿ ಅರಿತು ಸಮಾಜದಲ್ಲಿ ಗೊಂದಲ ಮೂಡಿಸುವಂಥ ಹೇಳಿಕೆಗಳನ್ನು ಪ್ರತಿಪಕ್ಷಗಳು ನೀಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಭಿಯಾನಕ್ಕೆ ಬೆಂಬಲ:ಅಮಿತ್ ಷಾ ಹಿಂದಿ ಹೇರಿಕೆ ಹೇಳಿಕೆ ಆಘಾತಕಾರಿ. ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಕಳೆದ 75 ವರ್ಷಗಳಿಂದ ಒಂದೇ ತಾಯಿಯ ಮಕ್ಕಳಂತೆ ಇರುವ ರಾಜ್ಯಗಳ ನಡುವೆ ಷಾ ಹುಳಿ ಹಿಂಡುತ್ತಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಪ್ರತಿಯೊಂದಕ್ಕೂ ಹಿಂದುತ್ವದ ಜಪ ಮಾಡಿ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದು ಸಮಾಜ ಮತ್ತು ಜನರನ್ನು ಒಡೆಯುತ್ತಿರುವ ಬಿಜೆಪಿ, ಈಗ ಭಾಷೆಯನ್ನೂ ಟೂಲ್ ಕಿಟ್ ಮಾಡಿಕೊಂಡು ವಿಭಜನೆಗೆ ಹೊರಟಿರುವುದು ದೇಶಕ್ಕೆ ಗಂಡಾಂತರಕಾರಿ ಎಂದು ಹೇಳಿದ್ದಾರೆ. ಅಮಿತ್ ಷಾ ಅವರಿಗೆ ಇಂಗ್ಲಿಷ್ ಬರಲ್ವಾ? ಅವರಿಗೆ ಪ್ರಾದೇಶಿಕ ಭಾಷೆಗಳ ಮೇಲೆ ಯಾಕೆ ಈ ಪರಿ ದ್ವೇಷ? ನಮ್ಮ ಭಾಷೆ ನಮಗೆ ಮುಖ್ಯ. ಮಾತೃಭಾಷೆಗೇ ಅಗ್ರಸ್ಥಾನ. ಕರ್ನಾಟಕದಲ್ಲಿ ಕನ್ನಡವೇ ಮೊದಲು. ಹಿಂದಿ ನಮ್ಮ ಭಾಷೆಯಲ್ಲ. ಹಿಂದಿ ಹೇರಿಕೆ ವಿರುದ್ದ ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲ ಇದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕನ್ನಡ, ದೇಶದಲ್ಲಿ ಹಿಂದಿ:ರಾಜ್ಯದಲ್ಲಿ ಕನ್ನಡ, ದೇಶದಲ್ಲಿ ಹಿಂದಿ ಭಾಷೆ ಮೊದಲು. ಈ ನಿಲುವಿಗೆ ಬಿಜೆಪಿ ಕಟಿಬದ್ಧವಾಗಿದ್ದು, ಅಮಿತ್ ಷಾ ಅಭಿಪ್ರಾಯವನ್ನು ತಪ್ಪಾಗಿ ಗ್ರಹಿಸುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಂಎಲ್ಸಿ ಎನ್.ರವಿಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಆದ್ಯತೆಯಿದೆ. ದೇಶದ ಶೇ. 80 ಹಿಂದಿ ಭಾಷೆ ಮಾತನಾಡುತ್ತಿದ್ದು, ಅಲಿಖಿತ ರಾಷ್ಟ್ರಭಾಷೆಯಾಗಿದೆ. ಆಯಾ ರಾಜ್ಯಗಳ ಭಾಷೆಗಳು ಆಯಾ ರಾಜ್ಯಕ್ಕೆ ಮೊದಲ ಭಾಷೆಯಾಗಿವೆ. ದೇಶದ ಎಲ್ಲ ಜನರ ಜತೆಗೆ ಸಂವಹನ, ಸಂಪರ್ಕಕ್ಕೆ ಹಿಂದಿ ಭಾಷೆ ಸೂಕ್ತವಾಗಿದೆ. ಹಿಂದಿ ಭಾಷೆ ಹೇರಲಾಗುತ್ತಿದೆ ಎಂಬ ಅರ್ಥದ ಹೇಳಿಕೆಗಳೇ ಅರ್ಥಹೀನವೆಂದು ಟೀಕಿಸಿದ್ದಾರೆ.
ಕುಷ್ಟಗಿ(ಕೊಪ್ಪಳ):ಹಿಂದಿಯನ್ನು ಇಂಗ್ಲಿಷ್​ಗೆ ಪರ್ಯಾಯ ಭಾಷೆಯಾಗಿ ಒಪ್ಪಿಕೊಳ್ಳಬೇಕೆಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸಂಪರ್ಕ ಭಾಷೆ. ಮನುಷ್ಯರ ಹಾಗೂ ಮನಸ್ಸುಗಳ ನಡುವೆ ಪರಸ್ಪರ ಸಂಪರ್ಕ ಬೆಳೆಸುವ ಶಕ್ತಿ ಆಯಾ ಮಾತೃ/ಪ್ರಾದೇಶಿಕ ಭಾಷೆಗಿದೆ. ಅದರ ಬದಲು ಹಿಂದಿ ಭಾಷೆ ಬಳಕೆ ಮಾಡಬೇಕೆನ್ನುವುದು ಯಾವ ರಾಜ್ಯದವರೂ ಒಪ್ಪುವುದಿಲ್ಲ. ನಮ್ಮ ಮನೆಗೆ ಬೆಂಕಿ ಹಚ್ಚಿ ಇನ್ನೊಬ್ಬರ ಮನೆಗೆ ಬೆಳಕು ನೀಡುವ ಮೂರ್ಖರು ಕನ್ನಡಿಗರಲ್ಲ ಎಂದು ಕಟುವಾಗಿ ಟೀಕಿಸಿದರು.
ಹಿಂದು ಧಾರ್ವಿುಕ ಕ್ಷೇತ್ರಗಳಿಗೆ ಮುಸ್ಲಿಂ ಚಾಲಕರ ಬಾಯ್ಕಾಟ್ ವಿಚಾರದಲ್ಲಿ ಭಾರತೀಯ ರಕ್ಷಣಾ ಸಮಿತಿ ನೀಡಿರುವ ಅಭಿಯಾನದ ಹೇಳಿಕೆಗೆ ಸರ್ಕಾರ ಒಪ್ಪಲ್ಲ. ಸರ್ವಧರ್ಮ ಸಮನ್ವಯ ಸರ್ಕಾರದ ಧ್ಯೇಯವಾಗಿದೆ. ಅರ್ಚಕರ ಬಗ್ಗೆ ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ನಮಗೆ ಅರ್ಚಕರ ಬಗ್ಗೆ ಅಪಾರ ಗೌರವವಿದೆ.
|ಬಸವರಾಜ ಬೊಮ್ಮಾಯಿಸಿಎಂ
ನಮ್ಮ ರಾಜ್ಯದಲ್ಲಿ ಸಾವಿರಾರು ಹಳ್ಳಿಗಳಲ್ಲಿ ದೇವಸ್ಥಾನ ಕಟ್ಟಿದ್ದೇವೆ. ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ವಿಗ್ರಹ ಕೆತ್ತಿದ್ದಾರೆ. ಈಗ ಅವುಗಳನ್ನು ಏನು ಮಾಡಬೇಕು? ಶಾಸ್ತ್ರದ ಪ್ರಕಾರವಾಗಿ ದೇವಸ್ಥಾನಗಳನ್ನು ಕಟ್ಟಲಾಗಿದೆಯೇ ಅದರ ಬಗ್ಗೆ ಚರ್ಚೆ ಮಾಡಲಿ. ನಮ್ಮ ಕುಟುಂಬ ಪುರೋಹಿತರಿಗೆ ಗೌರವ ಕೊಟ್ಟಷ್ಟು ಈ ರಾಜ್ಯದಲ್ಲಿ ಬೇರೆ ಯಾರೂ ಕೊಟ್ಟಿಲ್ಲ. ಆದರೆ ಈಗ ಪುರೋಹಿತರ ಮನಸ್ಸಿನಲ್ಲಿ ಕಲ್ಮಶ ತುಂಬಿದೆ. ನಿಸ್ವಾರ್ಥದಿಂದ ದೇವರ ಪೂಜೆ ಮಾಡಬೇಕು.
|ಎಚ್.ಡಿ.ಕುಮಾರಸ್ವಾಮಿಮಾಜಿ ಸಿಎಂ
ಬೆಂಗಳೂರು:ದೇಶದಲ್ಲಿ ವಿವಿಧ ರಾಜ್ಯಗಳ ನಿವಾಸಿಗಳು ಒಂದೆಡೆ ಸೇರಿದಾಗ ಇಂಗ್ಲೀಷ್ ಬದಲು ಹಿಂದಿಯಲ್ಲಿ ಮಾತನಾಡುವಂತೆ ಹೇಳಿರುವ ಕೇಂದ್ರ ಸಚಿವ ಅಮಿತ್​ಷಾ ಅವರ ಮಾತಿನಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಮರ್ಥಿಸಿಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ಅಮಿತ್​ಷಾ ಅವರು ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತನಾಡಿ. ಬೇರೆ ರಾಜ್ಯಗಳಿಗೆ ಹೋದಾಗ ಹಿಂದಿಯಲ್ಲಿ ಮಾತನಾಡುವಂತೆ ಹೇಳಿರುವುದು ಸಮಂಜಸವಾಗಿದೆ. ದೇಶದಲ್ಲಿ 67 ವರ್ಷ ಆಡಳಿತ ನಡೆಸಿದ ಸರ್ಕಾರಗಳು ತಾಂತ್ರಿಕ ಶಿಕ್ಷಣದ ಪಠ್ಯಕ್ರಮವನ್ನು ಸ್ಥಳೀಯ ಭಾಷೆಗಳಲ್ಲಿ ರೂಪಿಸಿಲ್ಲ. ಬಿಜೆಪಿ ಸರ್ಕಾರ ಹೊಸ ಶಿಕ್ಷಣ ನೀತಿ ಮೂಲಕ ಇಂಜಿನಿಯರಿಂಗ್ ತಾಂತ್ರಿಕ ಶಿಕ್ಷಣವನ್ನು ಹಿಂದಿ, ಕನ್ನಡ, ತಮಿಳು ಭಾಷೆಗಳಲ್ಲಿ ನೀಡಲು ಚರ್ಚೆ ಮಾಡಲಾಗಿದೆ. ನಮ್ಮ ದೇಶದಲ್ಲಿ ಶೇ.98 ಜನರಿಗೆ ಇಂಗ್ಲೀಷ್ ಬರುವುದಿಲ್ಲ. ಚೀನಾ, ರಷ್ಯಾ, ಜಪಾನ್, ಜರ್ಮನಿ ಸೇರಿ ಅನೇಕ ರಾಷ್ಟ್ರಗಳಲ್ಲಿ ಇಂಗ್ಲಿಷ್​ನಲ್ಲಿ ಪಠ್ಯಕ್ರಮಗಳಿಲ್ಲದಿದ್ದರೂ ಸ್ಥಳೀಯ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣ ನೀಡುತ್ತಿದ್ದರಿಂದ ತಾಂತ್ರಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿವೆ. ಈಗ ದೇಶದಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡುತ್ತಿರುವುದಕ್ಕೆ ಅಮಿತ್​ಷಾ ಮತ್ತು ಬಿಜೆಪಿ ಸರ್ಕಾರ ಜಾರಿಗೊಳಿಸುತ್ತಿದೆ ಎಂಬ ನೆಪಮಾತ್ರಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಹೇಳಿದರು.
ಹಿಂದಿ ಹೇರಿಕೆಗೆ ದಕ್ಷಿಣದ ನಾಯಕರ ತೀವ್ರ ವಿರೋಧ:ಹಿಂದಿ ಹೇರಿಕೆಯನ್ನು ದಕ್ಷಿಣ ಭಾರತದ ಅನೇಕ ನಾಯಕರು ವಿರೋಧಿಸಿದ್ದಾರೆ. ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್, ಎಐಎಡಿಎಂಕೆ ನಾಯಕ ಒ.ಪನ್ನೀರ ಸೆಲ್ವಂ, ಎಂಡಿಎಂಕೆ ಪಕ್ಷದ ನಾಯಕ ವೈಕೊ, ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್, ಕೇರಳ ಸಿಎಂ ಪಿಣರಾಯಿ ವಿಜಯನ್, ಎಡಪಕ್ಷಗಳ ನಾಯಕರು, ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರು ಅಮಿತ್ ಷಾ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. ಸ್ವ ಇಚ್ಛೆಯಿಂದ ಹಿಂದಿ ಕಲಿಯುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಇದನ್ನು ಸಾರ್ವತ್ರಿಕವಾಗಿ ಹೇರುವ ಪ್ರಯತ್ನ ಸಲ್ಲ ಎಂದು ಹೇಳಿದ್ದಾರೆ.
ಈಶಾನ್ಯ ರಾಜ್ಯಗಳ ವಿರೋಧ:10ನೇ ತರಗತಿಯಲ್ಲಿ ಹಿಂದಿಯನ್ನು ಕಡ್ಡಾಯ ಮಾಡುವ ಕೇಂದ್ರದ ನಿರ್ಧಾರವನ್ನು ವಿರೋಧಿಸುವುದಾಗಿ ಈಶಾನ್ಯದ ಎಂಟು ರಾಜ್ಯಗಳು ಹೇಳಿವೆ. ಇದು ಈಶಾನ್ಯ ಸಾಮ್ರಾಜ್ಯಶಾಹಿ ಧೋರಣೆಯ ದ್ಯೋತಕ ಎಂದು ಟೀಕಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
