ಬೆಂಗಳೂರು/ಹುಬ್ಬಳ್ಳಿ/ಬೆಳಗಾವಿ:ಬಿಜೆಪಿ ಪಾಲಿನ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ರಾಜ್ಯಪ್ರವಾಸ ಅದರಲ್ಲೂ ಉತ್ತರ ಕರ್ನಾಟಕದ ಹೃದಯ ಭಾಗ ಹುಬ್ಬಳ್ಳಿ ಹಾಗೂ ಬೆಳಗಾವಿ ಪ್ರದೇಶದಲ್ಲಿ ಸಂಚಲನ ಮೂಡಿಸಿದ್ದು, ಗೊಂದಲಗಳಿಗೆ ತೆರೆ ಎಳೆದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ.
ಸಚಿವ ಅಮಿತ್ ಷಾ ತಮ್ಮ ಶೈಲಿಯಲ್ಲಿ ಹೇಳಬೇಕಾದ್ದನ್ನು ಹೇಳಿ, ತಂತ್ರಗಾರಿಕೆ ಹೊಸೆದು, ಅಸಮಾಧಾನಗಳಿಗೆ ಮದ್ದು ಅರೆದು ತಮ್ಮ ಪ್ರಭಾವ ಛಾಪಿಸಿದರು. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪರ ವಾತಾವರಣ ಹೆಚ್ಚುತ್ತಿದೆ ಎನ್ನಲಾದ ಬೆಳಗಾವಿಯಲ್ಲಿ ಹೈವೋಲ್ಟೇಜ್ ಸಭೆ ನಡೆಸಿದ ಅವರು, ಬೆಳಗಾವಿ ಮಹಾನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ನಾಯಕರನ್ನು ಒಟ್ಟು ಸೇರಿಸಿ ಪಾಠ ಹೇಳಿದರು. ಏನೇ ವ್ಯತ್ಯಾಸ ಇದ್ದರೂ ಮರೆತು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಹಾಕುವಂತೆ ಸ್ಪಷ್ಟ ಸೂಚನೆ ನೀಡಿದರು. ಈ ಭಾಗದ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಗರಿಷ್ಠ ಫಸಲು ತೆಗೆಯುವ ಅವಕಾಶಗಳಿದ್ದು, ಮೈಮರೆಯದೇ ಅನಾವಶ್ಯಕವಾಗಿ ಗೊಂದಲ ಮಾಡಿಕೊಳ್ಳದೇ, ಎದುರಾಳಿಗಳನ್ನು ಹಿಮ್ಮೆಟ್ಟಿಸಿ ಎಂದು ಅಮಿತ್ ಷಾ ಉತ್ಸಾಹ ತುಂಬಿದ್ದಾರೆ. ಪ್ರಭಾಕರ ಕೋರೆ, ಜಾರಕಿಹೊಳಿ ಸಹೋದರರು, ಕತ್ತಿ ಕುಟುಂಬದ ಪ್ರತಿನಿಧಿಗಳು, ಜೊಲ್ಲೆ ದಂಪತಿ ಸಭೆಯಲ್ಲಿ ಒಟ್ಟಾಗಿ ಹಾಜರಿದ್ದರು.
ಹುಬ್ಬಳ್ಳಿಯಲ್ಲಿ ಅಲ್ಲಿನ ವಾತಾವರಣ- ಪರಿಸ್ಥಿತಿಗೆ ತಕ್ಕಂತೆ ಅವರ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಹಿಂದುತ್ವ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಣ, ಭಯೋತ್ಪಾದನೆ ವಿರುದ್ಧ ಸಮರ, ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದು ಬಿಜೆಪಿ ಬತ್ತಳಿಕೆಯಲ್ಲಿ ಇರುವ ಪ್ರಬಲ ಅಸ್ತ್ರಗಳು. ಅಮಿತ್ ಷಾ ಈ ಎಲ್ಲ ಅಸ್ತ್ರಗಳನ್ನು ಹುಬ್ಬಳ್ಳಿಯಲ್ಲಿ ಪ್ರಯೋಗಿಸಿದರು. ಇನ್ನೊಂದೆಡೆ ಸುತ್ತ ಹತ್ತು ಕ್ಷೇತ್ರದಲ್ಲಿ ಪ್ರಭಾವ ಬೀರುವಂತೆ ರೋಡ್ ಶೋ ನಡೆಸುವ ಮೂಲಕ ಡಬಲ್ ಇಂಜಿನ್ ಫೀಲ್ ಬರುವಂತೆ ಯೋಜನೆಗೆ ಮುನ್ನುಡಿಯನ್ನೂ ಬರೆದರು.
ವೇದಿಕೆಯಲ್ಲಿ ತಮ್ಮ ವಾಗ್ಝರಿಯ ಮುಖೇನ ಬಿಜೆಪಿಗೆ ರಾಷ್ಟ್ರ ಹಿತಚಿಂತನೆಯೇ ಮುಖ್ಯ ಎಂದು ಸಾರಿ ಹೇಳಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಭ್ರಷ್ಟರ ಪಕ್ಷ ಎಂದು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ಎರಡೂ ಪಕ್ಷಗಳು ರಾಜ್ಯವನ್ನು ಲೂಟಿ ಮಾಡಿದ್ದೇ ಸಾಧನೆ ಎಂದು ಛೇಡಿಸಿದರು. ದೇಶ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಬಿಜೆಪಿಯೇ ಪರಿಹಾರ ಎಂದು ಗಟ್ಟಿದನಿ ಮೊಳಗಿಸಿದರು. ಹುಬ್ಬಳ್ಳಿಯಲ್ಲಿ ಬಿವಿಬಿ ಕಾಲೇಜಿನ ಅಮೃತ ಮಹೋತ್ಸವದ ಉದ್ಘಾಟನೆ, ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ವಣದ ಶಂಕುಸ್ಥಾಪನೆ ನೆರವೇರಿಸಿದ ನಂತರ ಅವರು ಕುಂದಗೋಳದಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕರನ್ನುಉದ್ದೇಶಿಸಿ ಮಾತನಾಡಿದರು.
ಕುಟುಂಬ ರಾಜಕಾರಣವನ್ನು ಬಲವಾಗಿ ಖಂಡಿಸಿದ ಅಮಿತ್ ಷಾ, ಕಾಂಗ್ರೆಸ್ ಗಾಂಧಿ ಪರಿವಾರಕ್ಕೆ ಮಾತ್ರ ಸೀಮಿತವಾಗಿದ್ದರೆ, ಜೆಡಿಎಸ್ ತಾತ, ತಂದೆ, ಮಗ, ಮೊಮ್ಮಗ, ಸೊಸೆ, ಮಗಳ ಪಕ್ಷವಾಗಿದೆ. ಪರಿವಾರವಾದಿ, ಭ್ರಷ್ಟಾಚಾರವಾದಿಗಳನ್ನು ದೂರ ಇಡೋಣ ಎಂದು ಕರೆ ನೀಡಿದರು. ಹಾಗೆಯೇ ಜೆಡಿಎಸ್​ಗೆ ಮತ ಹಾಕಿದರೆ ಪರೋಕ್ಷವಾಗಿ ಕಾಂಗ್ರೆಸ್​ಗೆ ಮತ ಹಾಕಿದಂತೆ ಎಂದು ಸೂಚ್ಯವಾಗಿ ಹೇಳಿದ್ದು ಗಮನಾರ್ಹ ಸಂಗತಿಯಾಗಿತ್ತು.
ಹೈಪವರ್ ಮೀಟಿಂಗ್:ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಅಮಿತ್ ಷಾ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜತೆಗೂಡಿ ಸಭೆ ನಡೆಸಿದರು. ಚುನಾವಣೆ ತಂತ್ರಗಾರಿಕೆ ಕುರಿತು ಇಲ್ಲಿ ಸಣ್ಣ ಮಟ್ಟದ ಚರ್ಚೆಯಾಗಿದೆ. ಅನೌಪಚಾರಿಕ ಸಭೆಯಾದ್ದರಿಂದ ಕೆಲವು ಸಂದೇಶ ತಿಳಿಸುವುದಕ್ಕೆ ಸೀಮಿತವಾಗಿತ್ತು. ಸಚಿವರಾದ ಮುರುಗೇಶ ನಿರಾಣಿ, ಗೋವಿಂದ ಕಾರಜೋಳ, ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಇತರ ಪ್ರಮುಖರಿಗೆ ಕೂಡ ಸಭೆಗೆ ಪ್ರವೇಶ ನಿರಾಕರಿಸಲಾಗಿತ್ತು.
ಮಾರ್ಚ್​ನಲ್ಲಿ ಮತ್ತೆ ಮೋದಿ:ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 10ಕ್ಕೆ ಮತ್ತೆ ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ಐಐಟಿ ಉದ್ಘಾಟನೆ ಸೇರಿ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮಧ್ಯೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಬಿಜೆಪಿಯ ಹಲವಾರು ಮುಖಂಡರು ಧಾರವಾಡ ಜಿಲ್ಲೆಗೆ ಭೇಟಿ ನೀಡುವವರಿದ್ದಾರೆ.
ಕಾರ್ಯಕರ್ತರಲ್ಲಿ ಸಂಚಲನ:ಅಮಿತ್ ಷಾ ಧಾರವಾಡ ಜಿಲ್ಲೆಗೆ ಆಗಮಿಸಿದ್ದರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ಇಮ್ಮಡಿಗೊಂಡಿದೆ.
ತಲೆ ಮೇಲೇ ಆಕ್ಸಿಜನ್ ಸಿಲಿಂಡರ್ ಬಿದ್ದು ಸಾವಿಗೀಡಾದ 9 ವರ್ಷದ ಬಾಲಕ!

ಜ. 30ರಿಂದ ಮೂರು ವಾರ ಕಾಲ ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಕ್ಲೋಸ್; ಎಲ್ಲಿ, ಯಾಕೆ?

ಗಂಡನ ನಾಲಗೆಯನ್ನೇ ಕಚ್ಚಿ ತುಂಡರಿಸಿದ ಹೆಂಡ್ತಿ; ವಾಪಸ್​ ಬಾ ಎಂದು ತವರಿಗೆ ಹೋಗಿ ಕರೆದಿದ್ದೇ ತಪ್ಪಾಯ್ತು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 + 9 =
Remember me
