ಬೆಂಗಳೂರು:ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತಬಲದ ಮೇಲೆ ಅಧಿಕಾರಕ್ಕೆ ಬರಲೇಬೇಕೆಂದು ತಂತ್ರಗಾರಿಕೆ ರೂಪಿಸುವ ಉದ್ದೇಶದಿಂದ ಎರಡು ದಿನದಿಂದ ಮುಖಂಡರೊಂದಿಗೆ ಹಲವು ಸುತ್ತಿನ ಸಭೆ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಜ್ಯ ನಾಯಕರಿಗೆ 120ರ ಗಡಿ ದಾಟುವ ಗುರಿ ನಿಗದಿ ಮಾಡಿದ್ದಾರೆ.
ಗುರುವಾರ ರಾತ್ರಿ ಬೆಂಗಳೂರಿಗೆ ಬಂದ ಅಮಿತ್ ಷಾ ಶುಕ್ರವಾರ ಮತ್ತು ಶನಿವಾರ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪಕ್ಷದ ಮುಖಂಡರೊಂದಿಗೆ ಸಭೆಯನ್ನೂ ನಡೆಸಿದ್ದು, ಹಳೆಯ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆ ಮಾಡಲು ಕೆಲವು ಸೂಚನೆಗಳನ್ನು ನೀಡಿದ್ದಾರೆ. ಮೀಸಲಾತಿ ಹೆಚ್ಚಳ ಮಾಡಿ ಪ್ರತ್ಯೇಕ ಪ್ರವರ್ಗ ಮಾಡುವ ನಿರ್ಣಯದ ಬಗ್ಗೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಪರಿಣಾಮಕಾರಿಯಾಗಿ ಬಿಂಬಿಸಿ ಬಿಜೆಪಿಯ ಕಡೆ ಸೆಳೆಯಬೇಕೆಂದು ನಿರ್ದೇಶನ ನೀಡಿದ್ದಾರೆ. ಆ ನಿಟ್ಟಿನಲ್ಲಿಯೇ ಅವರು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯನ್ನು ಭೇಟಿಯಾಗಿ ಸುಮಾರು ಎಪ್ಪತ್ತೈದು ನಿಮಿಷಗಳ ಕಾಲ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಎರಡು ಬಾರಿ ಬಿಜೆಪಿ ಸರ್ಕಾರ ರಚಿಸಿದ್ದರೂ ಸ್ವಂತಬಲದ ಮೇಲೆ ಅಧಿಕಾರ ನಡೆಸಿಲ್ಲ. ಎರಡು ಬಾರಿಯೂ ಆಪರೇಷನ್ ಕಮಲ ಮಾಡಲಾಗಿದೆ. ಈ ಬಾರಿ ಆ ರೀತಿ ಆಗಬಾರದು. 120 ಸ್ಥಾನಗಳನ್ನು ಗೆಲ್ಲಲೇಬೇಕು. ಅಲ್ಲಿಯತನಕ ಯಾರೂ ವಿಶ್ರಮಿಸಬಾರದು ಎಂದು ಅಮಿತ್ ಷಾ ಖಡಕ್ ಆಗಿ ತಿಳಿಸಿದ್ದಾರೆ.
ಮೈತ್ರಿ, ಒಳಒಪ್ಪಂದ ಇಲ್ಲ:ಬಿಜೆಪಿ ರಾಜ್ಯದಲ್ಲಿ ಜೆಡಿಎಸ್ ಜತೆ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಭಾವನೆ ಮೂಡಲಾರಂಭಿಸಿದೆ. ಸ್ಥಳೀಯ ಮುಖಂಡರು ಸಹ ಶುಕ್ರವಾರ ಅಮಿತ್ ಷಾಗೆ ಇದನ್ನು ತಿಳಿಸಿದ್ದರು. ಯಾವುದೇ ಪಕ್ಷದ ಜತೆ ಮೈತ್ರಿ ಅಥವಾ ಒಳಒಪ್ಪಂದ ಇಲ್ಲ. ಅದನ್ನು ಸ್ಪಷ್ಟಪಡಿಸಿಕೊಳ್ಳಿ. ಸ್ವಂತಬಲದ ಮೇಲೆ ಅಧಿಕಾರ ಹಿಡಿಯವುದಕ್ಕೆ ಏನೇನು ಬೇಕು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಷಾ ಕಟ್ಟುನಿಟ್ಟಾಗಿ ಹೇಳಿದರೆನ್ನಲಾಗಿದೆ.
ಸಭೆ ರದ್ದು:ರಾಜ್ಯದ ಕೆಲವು ಪ್ರಮುಖ ಮುಖಂಡರ ಜತೆ ಅಮಿತ್ ಷಾ ಶನಿವಾರ ಉಪಾಹಾರ ಸಭೆ ಕರೆದಿದ್ದರು. ಆದರೆ ಕೊನೇ ಗಳಿಗೆಯಲ್ಲಿ ಸಭೆ ರದ್ದು ಮಾಡಿದರು. ಮೊದಲಿಗೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರೊಂದಿಗೆ ಮಾತ್ರ ಚರ್ಚೆ ನಡೆಸಿದರು. ಆ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿಕೊಂಡರು.
ಸಂಪುಟ ಚರ್ಚೆ ಆಗಿಲ್ಲ:ಸಚಿವ ಸಂಪುಟ ಸೇರುವ ಆಕಾಂಕ್ಷಿಗಳಾದ ರಮೇಶ್ ಜಾರಕಿಹೊಳಿ ಹಾಗೂ ಸಿ.ಪಿ. ಯೋಗೇಶ್ವರ್ ಅವರು ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಷಾ ಮೇಲೆ ಒತ್ತಡ ಹಾಕುವಂತೆ ಮನವಿ ಮಾಡಿದ್ದರು. ಆದರೆ ಅಮಿತ್ ಷಾ ಅವರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಚರ್ಚೆಗೆ ಬರಲಿಲ್ಲವೆಂದು ಮೂಲಗಳು ಖಚಿತಪಡಿಸಿವೆ.
ಎಲ್ಲರೂ ಭಾಗವಹಿಸಿ:ಮನೆ ಮನೆ ಸಂಪರ್ಕ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರು, ಮಾಜಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಯಾರಾದರೂ ಭಾಗವಹಿಸದಿದ ಕ್ರಮ ಜರುಗಿಸಲಾಗುವುದು ಎಂದು ಷಾ ಎಚ್ಚರಿಸಿದ್ದಾರೆನ್ನಲಾಗಿದೆ.
ಶಿಸ್ತುಕ್ರಮದ ಎಚ್ಚರಿಕೆ:ಬಿಜೆಪಿಯ ಯಾವುದೇ ಮುಖಂಡರು ಸ್ಥಳೀಯ ಪಕ್ಷಗಳ ಜತೆ ಹೊಂದಾಣಿಕೆಗೆ ಮುಂದಾದರೆ ಅಥವಾ ಅಂತಹ ಪ್ರಯತ್ನ ಮಾಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಅಮಿತ್ ಷಾ ಎಚ್ಚರಿಕೆ ಸಂದೇಶ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಸ್ವಾಮೀಜಿ ಜತೆ ಚರ್ಚೆ
ಹಳೆಯ ಮೈಸೂರು ಭಾಗ, ಬೆಂಗಳೂರಿನಲ್ಲಿ 20 ಹಾಗೂ ಉಳಿದ ಜಿಲ್ಲೆಗಳಲ್ಲಿ 35 ಸ್ಥಾನಗಳನ್ನು ಗೆಲ್ಲಬೇಕೆಂದರೆ ಒಕ್ಕಲಿಗ ಸಮುದಾಯದ ಮತಗಳು ಅತ್ಯಂತ ಅಗತ್ಯ. ಇದೀಗ ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗದ ಮೂಲಕ ಮೀಸಲಾತಿ ಹೆಚ್ಚಿಸುವ ನಿರ್ಧಾರ ಮಾಡಲಾಗಿದೆ. ಆ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠಾಧೀಶರ ಜತೆ ಅಮಿತ್ ಷಾ ಒಂದೂಕಾಲು ತಾಸು ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೇ ಇದ್ದರು. ಉಳಿದೆಲ್ಲ ಮುಖಂಡರನ್ನು ಹೊರಗಡೆ ಕಳುಹಿಸಲಾಗಿತ್ತು. ಬಿಜೆಪಿ ಜತೆ ನಿಲ್ಲುವಂತೆ ಷಾ ಮನವಿ ಮಾಡಿದ್ದು ಅದಕ್ಕೆ ಸ್ವಾಮೀಜಿ ಯಾವ ಪ್ರತಿಕ್ರಿಯೆ ನೀಡಿದರು ಎಂಬುದು ತಿಳಿದುಬಂದಿಲ್ಲ.
ಷಾ ನಿಗದಿ ಮಾಡಿದ ಗುರಿಗಳೇನು?
ಎರಡು ದಿನಗಳ ಕಾಲ ಕರ್ನಾಟಕಕ್ಕೆ ಭೇಟಿ ನೀಡಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಅಮಿತ್ ಷಾ ಪ್ರವಾಸ ಯಶಸ್ವಿಯಾಗಿದೆ. ಅವರ ಭೇಟಿ ಹಾಗೂ ಮಾತುಗಳು ನಮ್ಮ ಹಾಗೂ ಪಕ್ಷದ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದ್ದು, ಮೊದಲಿಗಿಂತಲೂ ಹೆಚ್ಚು ಸ್ಪೂರ್ತಿಯಿಂದ ಕೆಲಸ ಮಾಡಲು ಸಜ್ಜಾಗಿದ್ದೇವೆ.| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 16 =
Remember me
