ಬೆಂಗಳೂರು:ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೇಂದ್ರದ ಸಹಕಾರ ಸಚಿವ ಅಮಿತ್ ಷಾ ಪರಿಹಾರ ನೀಡುವರೇ? ಕೇಂದ್ರದಲ್ಲಿ ಸಹಕಾರ ಸಚಿವಾಲಯ ಪ್ರತ್ಯೇಕವಾಗಿ ಸ್ಥಾಪನೆಯಾಗಿ ಅದರ ಪ್ರಥಮ ಸಚಿವರಾದ ನಂತರ ಅಮಿತ್ ಷಾ ಮೊದಲ ಬಾರಿಗೆ ಶುಕ್ರವಾರ ಬೆಂಗಳೂರಿನಲ್ಲಿ ಸಹಕಾರಿಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅದರಿಂದಾಗಿಯೇ ಸಹಕಾರಿ ಕ್ಷೇತ್ರದ ನಿರೀಕ್ಷೆ ಅಪಾರವಾಗಿದೆ. ಬೇಡಿಕೆಗಳ ಮನವಿಯನ್ನು ಅವರಿಗೆ ಸಲ್ಲಿಸಲು ತಯಾರಿ ನಡೆದಿದೆ. ಅಮಿತ್ ಶಾ ಅವರು ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹು ನಿರೀಕ್ಷಿತ ಯಶಸ್ವಿನಿ ಯೋಜನೆ ಮರು ಜಾರಿಗೆ ಸಂಬಂಧಿಸಿದಂತೆ ಹಾಗೂ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ಲಾಂಛನ ಬಿಡುಗಡೆ ಮಾಡಲಿದ್ದಾರೆ. ಆ ಸಂದರ್ಭದಲ್ಲಿಯೇ ಸಹಕಾರಿಗಳು ತಮ್ಮ ಬೇಡಿಕೆ ಈಡೇರಿಸುತ್ತಾರೆಂಬ ನಿರೀಕ್ಷೆ ಮಾಡುತ್ತಿದ್ದಾರೆ.
ಬೇಡಿಕೆಗಳೇನು?:ಪ್ರಮುಖವಾಗಿ ನಾಲ್ಕು ಪ್ರಮುಖ ಬೇಡಿಕೆಗಳಿವೆ. ಮೊದಲನೆಯದು ಸಹಕಾರ ಸಂಘಗಳಿಗೆ ವಿಧಿಸುವ ಶೇ.22 ಆದಾಯ ತೆರಿಗೆ ರದ್ದು ಮಾಡಬೇಕು, ಎರಡನೆಯದು ಟಿಡಿಎಸ್ ವಿಧಿಸುವುದರಿಂದ ವಿನಾಯ್ತಿ ನೀಡಬೇಕು. ಮೂರನೇಯದು ಕೇಂದ್ರ ಸರ್ಕಾರ ತರಲು ಮುಂದಾಗಿರುವ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ವಾಪಾಸು ಪಡೆಯಬೇಕು ಹಾಗೂ ನಾಲ್ಕನೆಯದು ಕೋರ್ ಬ್ಯಾಂಕಿಂಗ್ ಮಾಡಲು ಸಾಫ್ಟ್​ವೇರ್ ಅಭಿವೃದ್ಧಿಪಡಿಸಿ ಉಚಿತವಾಗಿ ನೀಡಬೇಕು. ಸಹಕಾರ ಸಂಘಗಳ ಲಾಭದ ಮೇಲೆ ಶೇ.22 ಆದಾಯ ತೆರಿಗೆ ಮತ್ತು ಶೇ.4 ಸೆಸ್ ವಿಧಿಸಲಾಗುತ್ತದೆ. ಸಹಕಾರ ಸಂಸ್ಥೆಗಳಲ್ಲಿ ಠೇವಣಿಯನ್ನಿಟ್ಟರೆ ಅದರ ಬಡ್ಡಿಯ ಮೇಲೆ ಶೇ.10 ಟಿಡಿಎಸ್ ಕಡಿತ ಮಾಡಲಾಗುತ್ತದೆ. ಇದರಿಂದ ಈ ಎರಡು ಬೇಡಿಕೆಗಳ ಬಗ್ಗೆ ಸಹಕಾರಿಗಳು ಸಾಕಷ್ಟು ಒತ್ತಡ ಹಿಂದೆ ತಂದಿದ್ದಾರೆ. ಆದರೆ ಕೇಂದ್ರ ಸ್ಪಂದಿಸಿರಲಿಲ್ಲ. ಆದ್ದರಿಂದ ಈಗ ಮತ್ತೊಮ್ಮೆ ಮನವಿ ಮಾಡುತ್ತಿದ್ದಾರೆ.
ಯಶಸ್ವಿನಿ ಟ್ರಸ್ಟ್ ಪುನಾರಂಭಗೆ ಆದೇಶ:ಸಹಕಾರ ಸಂಘಗಳ ಸದಸ್ಯರು ಹಾಗೂ ಕುಟುಂಬದವರಿಗೆ ಆರೋಗ್ಯ ಸೌಲಭ್ಯ ನೀಡುವ ಯಶಸ್ವಿನಿ ಯೋಜನೆ ಮರು ಜಾರಿ ಮಾಡುವುದಕ್ಕಾಗಿ ಟ್ರಸ್ಟ್ ಪುನಾರಚನೆ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಸಹಕಾರ ಸಂಘಗಳ ನಿಬಂಧಕರಿಗೆ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್​ನಲ್ಲಿ ಯಶಸ್ವಿನಿ ಯೋಜನೆ ಆರಂಭಿಸಲು ಪ್ರಕಟಿಸಿದ್ದರು. ಅದರ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಯಶಸ್ವಿನಿ ಟ್ರಸ್ಟ್ ಪುನಾರಚನೆ, ಆಡಳಿತ ಮಂಡಳಿಯ ನಿಯಂತ್ರಣ, ಸದಸ್ಯತ್ವ ನೋಂದಣಿ, ಚಿಕಿತ್ಸೆ ವೆಚ್ಚ ಪರಿಷ್ಕರಣೆ, ಸೇವಾ ಸಮಲೋಚಕರ ನೇಮಕ ಒಳಗೊಂಡಂತೆ ಪ್ರಸ್ತಾವನೆ ಸಿದ್ಧಪಡಿಸಲು ಸರ್ಕಾರ ಆದೇಶದಲ್ಲಿ ಹೇಳಿದೆ. ಬೊಮ್ಮಾಯಿ ಬಜೆಟ್​ನಲ್ಲಿ ಯಶಸ್ವಿನಿ ಯೋಜನೆ ಜಾರಿಗೆ 300 ಕೋಟಿ ರೂ.ಗಳನ್ನು ಮೀಸಲಿರಿಸಿದ್ದಾರೆ. ರಾಜ್ಯ ಸರ್ಕಾರ ಸಹಕಾರ ಸಂಸ್ಥೆಗಳಲ್ಲಿ ಸದಸ್ಯರಾಗಿರುವ ಗ್ರಾಮೀಣ ರೈತರಿಗೆ ಆರೋಗ್ಯ ಸೇವೆಯ ವಿಮೆ ಸೌಲಭ್ಯ ಒದಗಿಸುವ ಸಲುವಾಗಿ 2003ರಲ್ಲಿ ಯಶಸ್ವಿನಿ ಯೋಜನೆ ಜಾರಿಗೆ ತಂದಿತ್ತು. 14 ವಿಭಾಗಗಳಲ್ಲಿ 823 ವಿಧದ ಶಸ್ತ್ರಚಿಕಿತ್ಸೆಗಳ ಸೌಲಭ್ಯ ನೀಡಲಾಗಿತ್ತು. ರಾಜ್ಯದ 726 ಆಸ್ಪತ್ರೆಗಳಲ್ಲಿ ಯಶಸ್ವಿನಿ ಬಳಸಿಕೊಂಡು ಚಿಕಿತ್ಸೆ ಪಡೆಯಬಹುದಾಗಿತ್ತು. ನಗರ ಸಹಕಾರ ಸಂಸ್ಥೆಗಳ ಸದಸ್ಯರಿಗೂ ಸೌಲಭ್ಯ ವಿಸ್ತರಿಸಲಾಗಿತ್ತು. ರಾಜ್ಯ ಸರ್ಕಾರ 2018ರಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತಂದಿದ್ದರಿಂದ ಯಶಸ್ವಿನಿಯನ್ನು ಅದರಲ್ಲಿ ವಿಲೀನ ಮಾಡಲಾಗಿತ್ತು. ಆದರೆ ಆರೋಗ್ಯ ಕರ್ನಾಟಕ-ಆಯುಷ್ಮಾನ್ ಭಾರತ ಯೋಜನೆಯಲ್ಲಿ ಸರಿಯಾಗಿ ಚಿಕಿತ್ಸೆ ಸೌಲಭ್ಯ ಸಿಗದೆ ಇರುವುದರಿಂದ ಮತ್ತೆ ಯಶಸ್ವಿನಿ ಆರಂಭಿಸಲು ಒತ್ತಡ ಇತ್ತು.
ಲಾಭವಾಗಿದ್ದೆಷ್ಟು?:ಯಶಸ್ವಿನಿ ಯೋಜನೆ ರಾಜ್ಯದಲ್ಲಿ 15 ವರ್ಷಗಳ ಕಾಲ ಜಾರಿಯಲ್ಲಿತ್ತು. ಆರಂಭದಲ್ಲಿ 16.01 ಲಕ್ಷ ಸಹಕಾರಿಗಳು ಸದಸ್ಯರಾಗಿದ್ದರು. ಯೋಜನೆ ನಿಲ್ಲುವ ಸಂದರ್ಭದಲ್ಲಿ 43.73 ಲಕ್ಷ ಸದಸ್ಯರಾಗಿದ್ದರು. ಸದಸ್ಯರ ವಂತಿಕೆ 730.26 ಕೋಟಿ ರೂ.ಗಳು ಹಾಗೂ ಸರ್ಕಾರ 972.91 ಕೋಟಿ ರೂ.ಗಳನ್ನು ಭರಿಸಿದೆ. ಹದಿನೈದು ವರ್ಷಗಳಲ್ಲಿ ಯೋಜನೆಯಿಂದ 24,48,496 ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದರೆ, 13,64,087 ವಿವಿಧ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಯಶಸ್ವಿನಿ ಸೌಲಭ್ಯ ಪಡೆದಿದ್ದಾರೆ.
ಲಾಂಛನ ಬಿಡುಗಡೆ:ಯಶಸ್ವಿನಿ ಯೋಜನೆ ಮರು ಜಾರಿಯ ಲಾಂಛನವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಅವರು ಶುಕ್ರವಾರ ಮಧ್ಯಾಹ್ನ ಅರಮನೆ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಏನಿದು ಕ್ಷೀರ ಸಮೃದ್ಧಿ ಬ್ಯಾಂಕ್?:ಹೈನೋದ್ಯಮದಲ್ಲಿ ತೊಡಗಿರುವವರಿಗೆ ನೆರವಾಗುವ ಉದ್ದೇಶದಿಂದ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ಸರ್ಕಾರ ಬಜೆಟ್​ನಲ್ಲಿ ಪ್ರಕಟಿಸಿ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಶುಕ್ರವಾರ ಲಾಂಛನ ಬಿಡುಗಡೆ ಮಾಡಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ 12 ವರ್ಷಗಳಿಂದ ಸಹಕಾರ ವಲಯದಲ್ಲಿ ಯಾವುದೇ ಬ್ಯಾಂಕ್ ಸ್ಥಾಪನೆಗೆ ಒಪ್ಪಿಗೆ ನೀಡಿಲ್ಲ. ಆದ್ದರಿಂದ ಆರ್​ಬಿಐನಿಂದ ಅಧಿಕೃತವಾಗಿ ಒಪ್ಪಿಗೆ ಸಿಕ್ಕ ನಂತರ ಉದ್ಘಾಟನೆ ನಡೆಯಲಿದೆ. ಕ್ಷೀರ ಸಮೃದ್ಧಿ ಬ್ಯಾಂಕ್​ಗೆ ರಾಜ್ಯ ಸರ್ಕಾರ 100 ಕೋಟಿ ರೂ.ಗಳ ಅನುದಾನ ನೀಡಿದರೆ, ಕೆಎಂಎಫ್, ಜಿಲ್ಲಾ ಹಾಲು ಒಕ್ಕೂಟಗಳು ಹಾಗೂ ರಾಜ್ಯದಲ್ಲಿರುವ 15 ಸಾವಿರ ಹಾಲು ಉತ್ಪಾದಕರ ಸಂಘಗಳಿಂದ 260 ಕೋಟಿ ರೂ.ಗಳ ಬಂಡವಾಳ ಹೂಡಲಾಗುತ್ತದೆ. ಹಾಲು ಉತ್ಪಾದಕರು ಹಾಗೂ ಹಾಲು ಉದ್ಯಮದಲ್ಲಿ ತೊಡಗಿರುವ ಸುಮಾರು 25 ಲಕ್ಷ ಖಾತೆಗಳಿವೆ. ಆ ಎಲ್ಲ ಖಾತೆಗಳು ರಾಷ್ಟ್ರೀಯ ಬ್ಯಾಂಕ್​ಗಳು ಹಾಗೂ ಡಿಸಿಸಿ ಬ್ಯಾಂಕ್​ಗಳಲ್ಲಿ ಇವೆ. ಆ ಎಲ್ಲ ಖಾತೆಗಳು ಮುಂದೆ ಕ್ಷೀರ ಸಮೃದ್ಧಿ ಬ್ಯಾಂಕ್​ಗೆ ವರ್ಗಾವಣೆಯಾದರೆ ಡಿಸಿಸಿ ಮತ್ತು ರಾಷ್ಟ್ರೀಯ ಬ್ಯಾಂಕ್​ಗಳಲ್ಲಿ ನಿಷ್ಕೃಿಯವಾಗಲಿವೆ. ಈ ಖಾತೆಗಳಲ್ಲಿ ವರ್ಷಕ್ಕೆ ಸುಮಾರು 17 ರಿಂದ 18 ಸಾವಿರ ಕೋಟಿ ರೂ.ಗಳ ವಹಿವಾಟು ನಡೆಯುತ್ತದೆ. ಇದರಿಂದ ಡಿಸಿಸಿ ಬ್ಯಾಂಕ್​ಗಳ ವಹಿವಾಟಿನ ಹಾಗೂ ಲಾಭದ ಮೇಲೆ ಪರಿಣಾಮ ಬೀರುವ ಅಪಾಯವೂ ಇದೆ. ಬಡ್ಡಿ ಸಹಾಯಧನದ ಮೇಲೆ ಮಾತ್ರ ಅವಲಂಬಿತವಾಗಬೇಕಾಗುತ್ತದೆ.
ನಾಯಕತ್ವ ಬದಲಾವಣೆ ಇಲ್ಲ:ಕರ್ನಾಟಕದಲ್ಲಿ ಪಕ್ಷದ ಅಥವಾ ಸರ್ಕಾರದ ನಾಯಕತ್ವದಲ್ಲಿ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ಸಿಂಗ್ ಸ್ಪಷ್ಟಪಡಿಸುವ ಮೂಲಕ, ವದಂತಿಗಳಿಗೆ ತೆರೆ ಎಳೆದಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದ ಜನಪರ ಕೆಲಸಗಳನ್ನು ಮತದಾರರಿಗೆ ತಿಳಿಸಲಾಗುವುದು. ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸಿ ಗೆದ್ದು ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಚಿವ ಸಂಪುಟ ವಿಸ್ತರಣೆ ಮತ್ತು ಸೇರ್ಪಡೆ ಆಗುವವರ ಕುರಿತು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರ ಗಳಿಸಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 5 ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲಿನ ನಂತರವೂ ರಾಹುಲ್ ಗಾಂಧಿಗೆ ಇಲ್ಲಿ ಪ್ರಚಾರ ಮಾಡುವ ತಾಕತ್ತಿದೆಯೇ ಎಂದು ಅರುಣ್ ನಗುತ್ತಲೇ ಪ್ರಶ್ನಿಸಿದರು.
ಶಾಂತಿ ಕಾಪಾಡಲು ಸಹಕರಿಸಿ:ರಾಜ್ಯದಲ್ಲಿ ಹಲವಾರು ವಿಷಯಗಳು ಚರ್ಚೆಗೆ ಬಂದಿವೆ. ಸಾರ್ವಜನಿಕ ವಲಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಂತಿ ಮತ್ತು ಪ್ರಗತಿಗೆ ಕರ್ನಾಟಕ ಹೆಸರುವಾಸಿ. ಎಲ್ಲರೂ ಸಂಯಮದಿಂದ ವರ್ತಿಸಬೇಕು ಎಂದರು. ಕೋಮುವಾದ ಜಾಗತಿಕ ಸಂಘರ್ಷವಾಗುತ್ತಿದೆ ಎಂದು ರಾಜ್ಯದ ಬೆಳವಣಿಗೆಗಳ ಬಗ್ಗೆ ಕಿರಣ ಮಜುಂದಾರ್ ಷಾ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಸಮವಸ್ತ್ರದ ವಿಷಯ ಈಗಾಗಲೆ ಇತ್ಯರ್ಥವಾಗಿದೆ. ಬೇರೆ ಬೇರೆ ವಿಷಯಗಳ ಬಗ್ಗೆ ತಮ್ಮ ತಮ್ಮ ನಂಬಿಕೆಗಳ ಆಧಾರದ ಮೇಲೆ ಇಷ್ಟು ವರ್ಷ ನಾವೆಲ್ಲರೂ ಬದುಕು ನಡೆಸುತ್ತಿದ್ದೇವೆ. ಕರ್ನಾಟಕ ರಾಜ್ಯ ಶಾಂತಿಗೆ ಮತ್ತು ಪ್ರಗತಿಗೆ ಹೆಸರಾಗಿದೆ. ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲರೂ ಸಂಯಮ ತಾಳಬೇಕು. ಸಾಮಾಜಿಕವಾಗಿ ಹಲವಾರು ಸಮಸ್ಯೆಗಳು ಉದ್ಭವವಾಗುವ ಸಂದರ್ಭದಲ್ಲಿ ಕೂತು ಚರ್ಚೆ ಮಾಡಿ ಬಗೆಹರಿಸಲು ಸಾಧ್ಯವಿದೆ. ಆದ್ದರಿಂದ ಎಲ್ಲರೂ ಸಂಯಮದಿಂದ ವರ್ತಿಸಬೇಕು ಎಂದರು.
ನಶೆಯಲ್ಲಿ ನೇಪಾಳಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ; ಡಿಜೆ ಹಳ್ಳಿ ಪೊಲೀಸರಿಂದ ನಟೋರಿಯಸ್ ರೌಡಿಶೀಟರ್ ಬಂಧನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 18 =
Remember me
