|ನವೀನ್ ಬಿಲ್ಗುಣಿಶಿವಮೊಗ್ಗ
ಸ್ವಾತಂತ್ರೊ್ಯೕತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ರಾಜ್ಯದ 750 ಗ್ರಾಪಂ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಬೇಕಿದ್ದ ವಸತಿರಹಿತ ಮತ್ತು ಆಶ್ರಯರಹಿತರಿಗೆ ವಸತಿ ಕಲ್ಪಿಸುವ ಅಮೃತ ಗ್ರಾಮೀಣ ಯೋಜನೆಗೆ ಗ್ರಹಣ ಹಿಡಿದಿದೆ. ಅನುದಾನ ಮತ್ತು ಜಾಗದ ಸಮಸ್ಯೆಯಿಂದ ಯೋಜನೆ ನನೆಗುದಿಗೆ ಬಿದ್ದಿದ್ದು, ಮುಖ್ಯಮಂತ್ರಿಗಳ ಮಹತ್ವದ ಯೋಜನೆ ಒಂದು ವರ್ಷ ಕಳೆಯುತ್ತ ಬಂದರೂ ಕಾರ್ಯಗತಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
2021ರ ಸ್ವಾತಂತ್ರ್ಯ ದಿನದಂದು 750 ಗ್ರಾಪಂಗಳಲ್ಲಿ ಅಮೃತ ಗ್ರಾಮೀಣ ವಸತಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೊಷಣೆ ಮಾಡಿದ್ದರು. ಅದರ ಜತೆಗೆ ಅಮೃತ ಕೆರೆ, ಅಮೃತ ಸೊಸೈಟಿ, ರೈತ ಉತ್ಪಾದಕ ಸಂಸ್ಥೆಗಳು, ನಿರ್ಮಲ ನಗರ, ಶಾಲಾ ಸೌಲಭ್ಯ ಯೋಜನೆ, ಅಂಗನವಾಡಿ ಕೇಂದ್ರಗಳು, ಸಮುದಾಯ ಅಭಿವೃದ್ಧಿ, ಸ್ವಸಹಾಯ ಕಿರು ಉದ್ದಿಮೆ, ಆರೋಗ್ಯ ಮೂಲಸೌಕರ್ಯ ಉನ್ನತೀಕರಣ, ಕೌಶಲ ತರಬೇತಿ, ಕ್ರೀಡಾ ದತ್ತು ಯೋಜನೆ ಸೇರಿ ಹಲವು ಯೋಜನೆಗಳನ್ನು ಸರ್ಕಾರ ಘೊಷಿಸಿತ್ತು. ಅವುಗಳಲ್ಲಿ ಬಹುತೇಕ ಎಲ್ಲ ಯೋಜನೆಗಳು ಅನುಷ್ಠಾನಗೊಂಡು ಯಶಸ್ವಿಯೂ ಆಗಿವೆ. ಆದರೆ, ಗ್ರಾಮೀಣ ಭಾಗದ ಲಕ್ಷಾಂತರ ಜನರಿಗೆ ವಸತಿ ಕಲ್ಪಿಸಬೇಕಿದ್ದ ಯೋಜನೆಗೆ ಮಾತ್ರ ಗ್ರಹಣ ಹಿಡಿದಿದೆ.
ರಾಜ್ಯದ ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲೂ ವಸತಿ ರಹಿತರು ಮತ್ತು ನಿವೇಶನ ರಹಿತರನ್ನು ಗುರುತಿಸಿ ಒಂದು ವರ್ಷದೊಳಗೆ ಸೂರು ಕಲ್ಪಿಸುವ ಗುರಿ ಹೊಂದಲಾಗಿತ್ತು. ಅಂದುಕೊಂಡಂತೆ ಯೋಜನೆ ಘೊಷಣೆಯೂ ಆಯಿತು. ಆದರೆ ಘೊಷಣೆಯಾಗಿ ವರ್ಷ ಕಳೆಯುವುದಕ್ಕೆ ಇನ್ನೊಂದು ತಿಂಗಳು ಬಾಕಿ ಇದ್ದು, ಯೋಜನೆ ಅನುಷ್ಠಾನದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ಸೂರು ಸಿಗಲಿದೆ ಎಂದು ಕನಸು ಕಾಣುತ್ತಿದ್ದ ಗ್ರಾಮೀಣ ಭಾಗದ ವಸತಿ ರಹಿತರಿಗೆ ನಿರಾಸೆ ಉಂಟುಮಾಡುತ್ತಿದೆ.
3.5 ಲಕ್ಷ ಮನೆಗಳಿಗೆ ಗ್ರಾಪಂಗಳಿಂದ ಬೇಡಿಕೆ: ಸರ್ಕಾರ 2021-22ನೇ ಸಾಲಿನಲ್ಲೇ ಒಂದು ಲಕ್ಷ ಮನೆಗಳನ್ನು ನಿರ್ವಿುಸುವ ಗುರಿ ಹಾಕಿಕೊಂಡಿತ್ತು. ಈಗಾಗಲೇ 750 ಗ್ರಾಪಂಗಳಿಂದ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪ್ರಸ್ತಾವನೆ ಬಂದಿದ್ದು 3.5 ಲಕ್ಷ ಮನೆಗಳಿಗೆ ಬೇಡಿಕೆ ಬಂದಿದೆ. ನಿಗಮದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹಲವು ತಿಂಗಳುಗಳೇ ಕಳೆದಿವೆ. ಆದರೆ, ಒಂದಿಲ್ಲೊಂದು ಕಾರಣಗಳಿಂದ ಯೋಜನೆ ಟೇಕ್​ಆಫ್ ಆಗಿಲ್ಲ ಎಂಬುದು ವಿಪರ್ಯಾಸ.
ಅಮೃತ ಗ್ರಾಮೀಣ ವಸತಿ ಯೋಜನೆಯಡಿ 750 ಗ್ರಾಪಂಗಳಿಂದ 3.5 ಲಕ್ಷ ಮನೆಗಳಿಗೆ ಬೇಡಿಕೆ ಬಂದಿದೆ. ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಹಣಕಾಸು ಅನುಮೋದನೆ ಪಡೆಯಬೇಕಿದ್ದು, ಇನ್ನೂ ಸರ್ಕಾರದ ಮಟ್ಟದಲ್ಲೇ ಇದೆ. ಸರ್ಕಾರ ಅನುಮತಿ ನೀಡಿದರೆ ವಸತಿರಹಿತರಿಗೆ ಸೂರು ಕಲ್ಪಿಸಲಾಗುವುದು.
|ಡಾ.ಎಸ್. ಬಸವರಾಜುರಾಜೀವ್​ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕ
ಅನುಷ್ಠಾನಕ್ಕೆ ಹತ್ತಾರು ವಿಘ್ನ:ಯೋಜನೆಗೆ ಆರಂಭದಲ್ಲೇ ಹಲವು ವಿಘ್ನಗಳು ಎದುರಾಗಿವೆ. ಹಣಕಾಸಿನ ತೊಂದರೆ ಹೊರತಾಗಿ ಆಯ್ಕೆಯಾಗಿರುವ ಬಹಳಷ್ಟು ಗ್ರಾಮ ಪಂಚಾಯ್ತಿಗಳಲ್ಲಿ ಜಾಗದ ಸಮಸ್ಯೆ ಎದುರಾಗಿದೆ. ವಸತಿರಹಿತರಿಗೆ ಅಗತ್ಯವಾದಷ್ಟು ಜಮೀನು ಇಲ್ಲ. ಇದ್ದರೂ ಕೆಲವೆಡೆ ವ್ಯಾಜ್ಯದಲ್ಲಿವೆ. ಖಾಸಗಿ ಜಮೀನು ಖರೀದಿಯೂ ಕೆಲವೆಡೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನುಷ್ಠಾನಕ್ಕೆ ಮುನ್ನವೇ ಹತ್ತಾರು ಅಡ್ಡಿ ಆತಂಕಗಳು ಎದುರಾಗಿವೆ ಎನ್ನುತ್ತಾರೆ ಅಧಿಕಾರಿಗಳು.
ಗ್ರಾಪಂ ಸದಸ್ಯರಿಗೆ ಜವಾಬ್ದಾರಿ:ಒಂದು ಜಿಲ್ಲೆಗೆ ಕನಿಷ್ಠ ಇಂತಿಷ್ಟೇ ಗ್ರಾಪಂಗಳನ್ನು ಆಯ್ಕೆ ಮಾಡಬೇಕು ಎಂದು ಸರ್ಕಾರ ಸೂಚಿಸಿತ್ತು. ಅದರಂತೆ ಪ್ರತಿ ಜಿಲ್ಲೆಯಿಂದಲೂ ಸರ್ಕಾರಕ್ಕೆ ಗ್ರಾಪಂಗಳ ಪಟ್ಟಿ ಹೋಗಿತ್ತು. ಹಾಲಿ ಗ್ರಾಪಂ ಸದಸ್ಯರಿಗೆ ವಸತಿರಹಿತರನ್ನು ಗುರುತಿಸುವ ಜವಾಬ್ದಾರಿ ನೀಡಲಾಗಿತ್ತು. ಬಹಳಷ್ಟು ಸದಸ್ಯರಿಗೆ ಇಂಥದ್ದೊಂದು ಯೋಜನೆ ಘೊಷಣೆ ಆಗಿರುವುದೇ ಗೊತ್ತಿಲ್ಲ. ಪಿಡಿಒಗಳಾಗಲಿ, ಕಾರ್ಯದರ್ಶಿಗಳಾಗಲಿ ಯೋಜನೆ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟಿಲ್ಲ. ಸರ್ಕಾರಕ್ಕೆ ವಸತಿರಹಿತರ ಪಟ್ಟಿ ಹೋಗಿದೆ ಎಂಬುದೂ ತಿಳಿದಿಲ್ಲ.
ಬೇಕಿದೆ 4 ಸಾವಿರ ಕೋಟಿ ರೂ.?:750 ಗ್ರಾಪಂಗಳಲ್ಲೂ ಯೋಜನೆ ಅನುಷ್ಠಾನಗೊಳ್ಳಬೇಕಿದ್ದರೆ ಕನಿಷ್ಠ 4 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ಅಷ್ಟೊಂದು ಅನುದಾನವನ್ನು ಕೇವಲ ಅಮೃತ ವಸತಿ ಯೋಜನೆಗೆ ಹೊಂದಿಸುವುದೂ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ. ಹಂತ ಹಂತವಾಗಿ ಅನುಷ್ಠಾನಗೊಳಿಸಲು ಮುಂದಾದರೂ ಯೋಜನೆ ಆರಂಭಿಕ ಯಶಸ್ಸು ಕಾಣುವುದು ಕಷ್ಟಸಾಧ್ಯ ಎಂಬ ಮಾತುಗಳೂ ಕೇಳಿಬರುತ್ತಿವೆ.
ಆಭರಣದ ಅಂಗಡಿ ಮಾಲೀಕನ ಪತ್ನಿಯ ಕೊಲೆ; ಮನೆಯಲ್ಲಿ ಒಂಟಿಯಾಗಿದ್ದಾಗ ನಡೆಯಿತು ಹತ್ಯೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 9 =
Remember me
