ಅರವತ್ತೇಳು ವರ್ಷ ವಯಸ್ಸಿನ ಭಾರತಿ ಚೆನ್ನೈ ನಗರದ ನಿವಾಸಿ. ಹಿರಿಯ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದ ಅವರ ಪತಿ ದೈವಾಧೀನರಾಗಿ ಎರಡು ವರ್ಷ ಕಳೆದಿದ್ದು, ಆಕೆ ಸ್ವಂತ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರ ಇಬ್ಬರೂ ಮಕ್ಕಳು ಅಮೆರಿಕದಲ್ಲಿ ವಾಸಿಸುತ್ತಿದ್ದ ಕಾರಣ ಭಾರತಿ ಪ್ರತಿವರ್ಷವೂ ಅಮೆರಿಕಕ್ಕೆ ಹೋಗಿ ಅಲ್ಲಿ ಆರು ತಿಂಗಳು ಮಕ್ಕಳು, ಮೊಮ್ಮಕ್ಕಳ ಜತೆ ಕಳೆದು ಚಳಿಗಾಲ ಪ್ರಾರಂಭವಾದಾಗ ಚೆನ್ನೆ ೖಗೆ ಮರಳುತ್ತಿದ್ದರು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ಅವರು ಪ್ರತಿದಿನವೂ ಯಾವುದಾದರೊಂದು ಕಾರ್ಯಕ್ರಮಕ್ಕೆ ಹೋಗಿ ಸಮಯ ವಿನಿಯೋಗಿಸುತ್ತಿದ್ದರು. ಫೇಸ್​ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಹೀಗಾಗಿ ಅವರಿಗೆ ತಮ್ಮ ಜೀವನವು ಒಬ್ಬಂಟಿ ಎಂದೆನಿಸುತ್ತಿರಲಿಲ್ಲ.
ಒಂದು ದಿನ ಅವರಿಗೆ ಇ-ಮೇಲ್ ಮೂಲಕ ‘ಶುಭಾಶಯಗಳು’ ಎಂಬ ವಿಷಯವಿದ್ದ ಮೇಲ್ ಬಂದಿತು. ರೇಮಂಡ್ ಹಿಲ್ಲರ್ ಎಂಬಾತ ಬರೆದಿದ್ದ ಆ ಪತ್ರವನ್ನು ತೆರೆದು ನೋಡಿದಾಗ ಅದರಲ್ಲಿ ಹೀಗೆ ಬರೆದಿತ್ತು: ‘ಪ್ರತಿಷ್ಠಿತ ಕೋಕಾಕೋಲಾ ಕಂಪನಿ ಪ್ರತಿವರ್ಷವೂ ಅಮೆರಿಕಕ್ಕೆ ಬರುವ ವಿದೇಶಿ ಪ್ರವಾಸಿಗರ ಹೆಸರಿನಲ್ಲಿ ಲಕ್ಕಿ ಡಿಪ್ ಏರ್ಪಡಿಸುತ್ತದೆ. ಈ ವರ್ಷ ಅಮೆರಿಕಕ್ಕೆ ಪ್ರವಾಸ ಬಂದವರಲ್ಲಿ ನಿಮಗೆ ಲಕ್ಕಿ ಡಿಪ್​ನ ಪ್ರಥಮ ಬಹುಮಾನ ಬಂದಿದೆ. ಒಂದು ಲಕ್ಷ ಡಾಲರ್​ಗಳ ಈ ಬಹುಮಾನ ಪಡೆದುದಕ್ಕೆ ನಿಮಗೆ ಶುಭಾಶಯಗಳು. ನಮ್ಮ ಮುಂದಿನ ಪತ್ರದಲ್ಲಿ ಈ ಬಹುಮಾನ ಹೇಗೆ ಪಡೆಯಬೇಕೆನ್ನುವ ಬಗ್ಗೆ ವಿವರಗಳನ್ನು ನೀಡುತ್ತೇವೆ’.
ಈ ಸಂದೇಶ ನೋಡಿದ ಕೂಡಲೇ ಅದೊಂದು ಮೋಸದ ಇ-ಮೇಲ್ ಎಂದು ಮನಗಂಡ ಭಾರತಿ ಅದನ್ನು ಡಿಲೀಟ್ ಮಾಡಿದರು. ಇದಾದ ಒಂದು ವಾರದ ನಂತರ ಅದೇ ವ್ಯಕ್ತಿಯಿಂದಲೇ ಮತ್ತೊಂದು ಇ-ಮೇಲ್ ಬಂದಿತು. ‘ಇನ್ನು ಕೆಲವೇ ದಿನಗಳಲ್ಲಿ ನಮ್ಮ ಕಂಪನಿಯ ಪ್ರತಿನಿಧಿ ನಿಮ್ಮನ್ನು ಭೇಟಿಯಾಗುತ್ತಾರೆ’ ಎಂದಷ್ಟೇ ಅದರಲ್ಲಿ ಬರೆಯಲಾಗಿತ್ತು. ಅದನ್ನೂ ಡಿಲೀಟ್ ಮಾಡಿದರು ಭಾರತಿ. ಸರಿಯಾಗಿ ಒಂದು ವಾರದ ನಂತರ ಅವರ ಮನೆಯ ಕರೆಗಂಟೆ ಬಾರಿಸಿತು. ಬಾಗಿಲನ್ನು ತೆರೆದಾಗ ಒಬ್ಬ ಸೂಟ್​ಧಾರಿ ವ್ಯಕ್ತಿ ಬಾಗಿಲಲ್ಲಿ ನಿಂತಿದ್ದ. ಇಂಗ್ಲಿಷಿನಲ್ಲಿ ಸಂಭಾಷಣೆ ಮಾಡಲಾರಂಭಿಸಿದ ಆತ, ‘ಮೇಡಂ, ನಾನು ಕೋಕಾಕೋಲಾ ಕಂಪನಿಯನ್ನು ಪ್ರತಿನಿಧಿಸುತ್ತಿರುವೆ. ನಿಮಗೆ ನಮ್ಮ ಕಂಪನಿಯಿಂದ ಈಗಾಗಲೇ ಎರಡು ಇ-ಮೇಲ್ ಮೆಸೇಜ್ ಕಳುಹಿಸಿದ್ದೇವೆ. ನೀವು ಲಕ್ಕಿ ಡಿಪ್​ನ ಪ್ರಥಮ ಬಹುಮಾನದ ವಿಜೇತೆಯಾಗಿರುವ ಕಾರಣ ನಿಮ್ಮನ್ನು ಖುದ್ದಾಗಿ ಕಂಡುಬರಲು ನಮ್ಮ ಕಂಪನಿ ನನ್ನನ್ನು ಕಳುಹಿಸಿದೆ. ಸದ್ಯಕ್ಕೆ ನಿಮಗೆ ಒಂದು ಸಣ್ಣ ಉಡುಗೊರೆ ಕಳುಹಿಸಿದ್ದಾರೆ. ಕೆಲ ದಿನಗಳ ನಂತರ ನಿಮಗೆ ನೀವು ಗೆದ್ದಿರುವ ಬಹುಮಾನ ಬರುತ್ತದೆ’ ಎಂದು ಹೇಳಿ ಅವರ ಕೈಗೆ ಒಂದು ಲಕೋಟೆ ಕೊಟ್ಟು ಹೊರಟುಹೋದ.
ಅವನು ಹೋದ ಕೂಡಲೇ ಭಾರತಿ ಆ ಲಕೋಟೆ ಒಡೆದು ನೋಡಿದರು. ಅದರಲ್ಲಿ ಒಂದು ನೂರು ಅಮೆರಿಕ ಡಾಲರ್​ಗಳ ಎರಡು ಗರಿಗರಿ ನೋಟುಗಳು ಇದ್ದವು. ಅವು ಖಂಡಿತವಾಗಿಯೂ ನಕಲಿ ನೋಟುಗಳೇ ಇರಬೇಕು ಎಂದು ಭಾರತಿ ಆರಂಭದಲ್ಲಿ ಭಾವಿಸಿದರು. ಆದರೆ ಅವರೇ ಕಳೆದ ಹಲವಾರು ವರ್ಷಗಳಿಂದ ಅಮೆರಿಕದ ಡಾಲರ್​ಗಳನ್ನು ಚಲಾವಣೆ ಮಾಡಿದ್ದ ಕಾರಣ ಅವರಿಗೆ ಅವು ಅಸಲಿ ನೋಟುಗಳು ಎಂದೇ ಎನಿಸಿತು. ತಮ್ಮ ಅನುಮಾನ ದೃಢಪಡಿಸಿಕೊಳ್ಳಲು ಭಾರತಿ ಮಾರನೆಯ ದಿನವೇ ಬ್ಯಾಂಕಿಗೆ ಹೋಗಿ ಆ ನೋಟುಗಳು ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು ಅಲ್ಲಿದ್ದವರನ್ನು ವಿನಂತಿಸಿದರು. ಬ್ಯಾಂಕಿನ ಅಧಿಕಾರಿಗಳು ಅವನ್ನು ನೋಡಿ ಅವು ಅಸಲಿ ನೋಟುಗಳೆಂದೇ ದೃಢೀಕರಿಸಿದಾಗ ಭಾರತಿಯವರಿಗೆ ಆಶ್ಚರ್ಯ ಮತ್ತು ಸಂತಸ ಒಟ್ಟಿಗೆಯೇ ಉಂಟಾದವು. ಆ ಹಣವನ್ನು ಅದೇ ಬ್ಯಾಂಕಿನಲ್ಲಿಯೇ ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿದಾಗ ಅವರ ಕೈಗೆ ಸುಮಾರು 15000 ರೂ.ಗಳು ಬಂದವು. ಖುಷಿಯಿಂದ ಬೀಗಿದ ಭಾರತಿ ಕೂಡಲೇ ಅಂಗಡಿಗೆ ಹೋಗಿ ರೇಷ್ಮೆ ಸೀರೆ ಖರೀದಿಸಿದರು. ಅದೇ ರಾತ್ರಿಯೇ ಭಾರತಿ ಈ ಶುಭಸಮಾಚಾರವನ್ನು ಇಬ್ಬರೂ ಮಕ್ಕಳಿಗೆ ತಿಳಿಸಿದರು.
ಅವರಿಬ್ಬರೂ ‘ನೋಡಮ್ಮ, ಇದರಲ್ಲೇನೋ ಮೋಸವಿರಬೇಕು ಎನಿಸುತ್ತಿದೆ. ಸುಮ್ಮಸುಮ್ಮನೆ ಅಪರಿಚಿತರು ಯಾರ ಮನೆಯ ಬಾಗಿಲಿಗೂ ಬಂದು ಬಹುಮಾನ ಎಂದು ಹೇಳಿ ಹಣ ಕೊಡುವುದಿಲ್ಲ, ಇದು ಮೋಸದ ಜಾಲವಾಗಿರಬಹುದು. ನೀನು ಹುಷಾರಾಗಿರು’ ಎಂದು ಎಚ್ಚರಿಸಿದರು. ಆದರೂ ಭಾರತಿ ಎಚ್ಚೆತ್ತುಕೊಳ್ಳಲಿಲ್ಲ. ಎರಡು ದಿನಗಳ ನಂತರ ಅವರಿಗೆ ಮತ್ತೊಂದು ಇ-ಮೇಲ್ ಬಂದಿತು. ‘ನಿಮ್ಮ ಗಿಫ್ಟ್ ಭಾರತವನ್ನು ತಲುಪಿದೆ, ಕೆಲವೇ ದಿನಗಳಲ್ಲಿ ಅದು ನಿಮ್ಮ ಕೈಸೇರಲಿದೆ’ ಎಂದಷ್ಟೇ ಅದರಲ್ಲಿ ಬರೆದಿತ್ತು. ಅದೇ ಸಂಜೆ ಒಬ್ಬ ವ್ಯಕ್ತಿ ಭಾರತಿಯವರಿಗೆ ಕರೆ ಮಾಡಿ ತನ್ನನ್ನು ಥಾಮ್ಸನ್ ಎಂದು ಪರಿಚಯಿಸಿಕೊಂಡು ತಾನು ದೆಹಲಿಯಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ. ‘ನಿಮಗೆ ಕೋಕಾಕೋಲಾ ಕಂಪನಿಯಿಂದ ಒಂದು ಲಕ್ಷ ಡಾಲರ್ ಬೆಲೆಯ ಬಹುಮಾನವಿರುವ ಪಾರ್ಸೆಲ್ ನಮ್ಮ ಕಚೇರಿಯನ್ನು ಬಂದು ತಲುಪಿದೆ. ಆದರೆ ನಿಮ್ಮ ದೇಶದ ಕಾನೂನಿನ್ವಯ ಅದರ ಮೌಲ್ಯದ ಶೇಕಡ 3ರಷ್ಟು ಗಿಫ್ಟ್ ತೆರಿಗೆಯನ್ನು ನಾವು ಮುರಿದು ನಿಮ್ಮ ಸರ್ಕಾರಕ್ಕೆ ಕಟ್ಟಬೇಕಾಗಿದೆ. ಹೀಗಾಗಿ ನೀವು 3,000 ಡಾಲರ್​ಗಳನ್ನು ನಿಮ್ಮ ಬಹುಮಾನದಿಂದ ಸರ್ಕಾರಕ್ಕೆ ತುಂಬಬೇಕಾಗಿದೆ. ನೀವು ತತ್ಸಮಾನವಾದ ಭಾರತೀಯ ಹಣ, ಅಂದರೆ 2.4 ಲಕ್ಷ ರೂಪಾಯಿಗಳನ್ನು ನಾನು ನನ್ನ ಮುಂದಿನ ಇ-ಮೇಲ್​ನಲ್ಲಿ ತಿಳಿಸುವ ಬ್ಯಾಂಕ್ ಅಕೌಂಟ್​ಗೆ ಜಮಾ ಮಾಡಿ’ ಎಂದು ಹೇಳಿ ಫೋನ್ ಕೆಳಗಿಟ್ಟ.
ಇದಾದ ನಂತರ ಬಂದ ಇ-ಮೇಲ್​ನಲ್ಲಿ ಯಾವ ಬ್ಯಾಂಕ್ ಅಕೌಂಟ್​ಗೆ ಹಣ ಕಳುಹಿಸಬೇಕು ಎಂಬ ವಿವರಗಳಿದ್ದವು. ಅದರ ಮೇರೆಗೆ ಭಾರತಿ ಎರಡು ಲಕ್ಷ ರೂಪಾಯಿಗಳನ್ನು ಅವರು ತೋರಿಸಿದ ಬ್ಯಾಂಕ್ ಖಾತೆಗೆ ಹಾಕಿದರು. ಇದಾದ ಒಂದು ವಾರದ ನಂತರವೂ ಅವರಿಗೆ ಯಾವುದೇ ಪಾರ್ಸಲ್ ಬರಲಿಲ್ಲ. ಅಷ್ಟರಲ್ಲಿ ಅದೇ ವ್ಯಕ್ತಿ ಅವರಿಗೆ ಇನ್ನೊಮ್ಮೆ ಕರೆ ಮಾಡಿ, ‘ಮೇಡಂ, ವಿನಿಮಯ ದರದಂತೆ ನೀವು 2,40,000 ರೂ.ಗಳನ್ನು ತುಂಬಬೇಕಾಗಿತ್ತು. 40 ಸಾವಿರ ರೂ. ಕಡಿಮೆ ತುಂಬಿರುವಿರಿ. ಇದಲ್ಲದೆ ಇತ್ತೀಚೆಗೆ ನಿಮ್ಮ ದೇಶವು ವಿದೇಶಗಳಿಂದ ಬರುವ ಬಹುಮಾನಗಳ ಮೇಲೆ ಇನ್ನಷ್ಟು ತೆರಿಗೆ ಹಾಕಿದೆ. ಹೀಗಾಗಿ ನೀವು ಇನ್ನೂ 12 ಸಾವಿರ ರೂ. ಸೇರಿ ಒಟ್ಟಾರೆ 52 ಸಾವಿರ ರೂ.ಗಳನ್ನು ನೀವು ತುಂಬಿದ ನಂತರವೇ ನಮ್ಮ ರಾಯಭಾರಿ ಕಚೇರಿ ನಿಮ್ಮ ಗಿಫ್ಟ್ ಇರುವ ಬಾಕ್ಸನ್ನು ಬಿಡುಗಡೆ ಮಾಡುತ್ತದೆ’ ಎಂದ. ಮಾರನೆಯ ದಿನವೇ ಆ ಹಣವನ್ನೂ ಭಾರತಿ ತುಂಬಿದರು. ಇಂದು, ನಾಳೆ ತಮ್ಮ ಬೆಲೆಬಾಳುವ ಗಿಫ್ಟ್ ಬರುತ್ತದೆ ಎಂದು ಚಾತಕಪಕ್ಷಿಯಂತೆ ಕಾಯುತ್ತ ಕೂತರು. ಆದರೆ ಬಹುಮಾನದ ಸುಳಿವೇ ಇರಲಿಲ್ಲ.
ಕಾದು ಕಾದು ಬೇಸರಗೊಂಡ ಭಾರತಿ ತಮ್ಮ ಫೋನಿನಲ್ಲಿ ಸೇವ್ ಮಾಡಿದ್ದ ರಾಯಭಾರಿ ಕಚೇರಿಯ ನಂಬರ್​ಗೆ ಕರೆ ಮಾಡಿದರು. ‘ಮೇಡಂ, ನೀವು ಇನ್ನು ಸ್ವಲ್ಪ ದಿನ ಕಾಯಬೇಕು. ನಿಮಗೆ ನಾವು ಕಳುಹಿಸಿದ ಪಾರ್ಸಲ್ ಅನ್ನು ಭಾರತದ ಕಸ್ಟಮ್್ಸ ಅಧಿಕಾರಿಗಳು ಅದಕ್ಕೆ ತುಂಬಬೇಕಾದ ಪೂರ್ತಿ ತೆರಿಗೆಯನ್ನು ಕಟ್ಟಿಲ್ಲವೆಂದು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅದನ್ನು ಬಿಡಿಸಿಕೊಳ್ಳಬೇಕಾದರೆ 75000 ರೂ. ಕೂಡಲೇ ಕಟ್ಟಬೇಕು. ಈ ಹಣವನ್ನು ನಾಳೆಯೇ ನಾವು ತಿಳಿಸಿರುವ ಅಕೌಂಟಿಗೆ ವರ್ಗಾಯಿಸಿ’ ಎಂದ. ಆಗ ಭಾರತಿಗೆ ತಾವು ಮೋಸಹೋದದ್ದು ಅರಿವಾಯಿತು.
ಕೂಡಲೇ ಅವರು ಚೆನ್ನೈನಲ್ಲಿಯೇ ಇರುವ ಅಮೆರಿಕದ ಕಾನ್ಸುಲೇಟ್​ಗೆ ಹೋಗಿ ಅಲ್ಲಿನ ಅಧಿಕಾರಿಗಳನ್ನು ಭೇಟಿಯಾಗಿ ನಡೆದ ವಿಷಯ ತಿಳಿಸಿದರು. ‘ನಮ್ಮ ರಾಯಭಾರಿ ಕಚೇರಿಗೂ, ಖಾಸಗಿ ಸಂಸ್ಥೆಯಾದ ಕೋಕಾಕೋಲಾಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಲು ಸೂಚಿಸಿದರು. ಆದರೂ ದೂರು ನೀಡಲು ಹಿಂಜರಿದ ಭಾರತಿ ತಮಗೆ ಈಗಾಗಲೇ ಬಂದಿದ್ದ ಕರೆಗಳ ನಂಬರ್​ಗಳಿಗೆ ಫೋನ್ ಮಾಡಿದರು. ಅವೆರಡೂ ಸ್ವಿಚ್ ಆಫ್ ಆಗಿದ್ದವು. ಆಗ ಭಾರತಿ ಪೊಲೀಸ್ ಠಾಣೆಗೆ ಹೋಗಿ ದೂರನ್ನು ದಾಖಲಿಸಿದರು. ಮುಂದಿನ ತನಿಖೆಯಲ್ಲಿ ಭಾರತಿ ಹಣವನ್ನು ವರ್ಗಾಯಿಸಿದ್ದ ಒಂದು ಬ್ಯಾಂಕ್ ಶಾಖೆ ಜಾರ್ಖಂಡ್ ರಾಜ್ಯದ ಒಂದು ಸಣ್ಣ ಪಟ್ಟಣದಲ್ಲಿದ್ದು, ಆ ಅಕೌಂಟನ್ನು ಒಬ್ಬ ಕೂಲಿಕಾರ್ವಿುಕನ ಹೆಸರಿನಲ್ಲಿ ತೆರೆಯಲಾಗಿತ್ತು. ಇನ್ನೊಂದು ಅಕೌಂಟ್ ಬಿಹಾರದ ಪಟ್ಟಣವೊಂದರ ಶಾಖೆಯದಾಗಿದ್ದು, ಅದನ್ನು ಒಬ್ಬ ಸೆಕ್ಯೂರಿಟಿ ಗಾರ್ಡ್​ನ ಹೆಸರಲ್ಲಿ ತೆರೆಯಲಾಗಿತ್ತು. ಭಾರತಿಯವರ ಹಣ ಬಂದ ಕೂಡಲೇ ಎರಡೂ ಅಕೌಂಟುಗಳನ್ನು ಮುಚ್ಚಲಾಗಿತ್ತು.
ಒಂದು ವರ್ಷದ ತನಿಖೆಯ ಬಳಿಕ ಪೊಲೀಸರು ಪ್ರಕರಣವನ್ನು ನಾಪತ್ತೆಯೆಂದು ಮುಕ್ತಾಯಗೊಳಿಸಿದರು. ವಿದ್ಯಾವಂತೆಯಾಗಿದ್ದ ಭಾರತಿ ಒಟ್ಟು 2,52,000 ರೂ.ಗಳನ್ನು ಕಳೆದುಕೊಂಡರು. ಈ ವಿಷಯವನ್ನು ಅವರ ಮಕ್ಕಳು ಅರಿತಾಗ, ‘ಪರವಾಗಿಲ್ಲ ಬಿಡಮ್ಮ. 15 ಸಾವಿರ ರೂ. ಮೌಲ್ಯದ ರೇಷ್ಮೆ ಸೀರೆಯನ್ನಾದರೂ ನೀವು ಖರೀದಿಸುವಂತಾಯಿತು. ಕಳೆದ ಎರಡು ವರ್ಷಗಳಲ್ಲಿ ನೀವು ನಿಮಗಾಗಿ ಏನನ್ನೂ ಖರೀದಿಸಿರಲಿಲ್ಲ’ ಎಂದು ಹಂಗಿಸಿದರು. ಒಂದು ಲಕ್ಷ ಡಾಲರ್​ಗಳ ಉಡುಗೊರೆ ಅಂದರೆ ಸುಮಾರು 80 ಲಕ್ಷ ರೂ. ಮೌಲ್ಯದ ಸ್ವತ್ತು. ಅಷ್ಟು ಭಾರಿ ಮೌಲ್ಯದ ವಸ್ತು ಪಾರ್ಸೆಲ್ ರೂಪದಲ್ಲಿ ಬಂದಿದೆ ಎಂದಾಗಲೇ ಭಾರತಿ ಸಂಶಯ ಪಡಬೇಕಾಗಿತ್ತು. ಅಮೆರಿಕದ ರಾಯಭಾರಿ ಕಚೇರಿಗೆ ಪಾರ್ಸಲ್ ಬಂದಿದೆ ಎಂದು ಹೇಳಿದಾಗಲೂ ಅವರು ಅನುಮಾನ ಪಡಬೇಕಾಗಿತ್ತು. ಎರಡನೆಯದಾಗಿ ಅವರ ಮಕ್ಕಳೂ ಈ ಬಗ್ಗೆ ಎಚ್ಚರಿಕೆ ನೀಡಿದರೂ ಅವರು ಎಚ್ಚರಗೊಳ್ಳದೆ ಹಣವನ್ನು ಮೋಸಗಾರರಿಗೆ ರವಾನಿಸಿದರು. ಹಣವೆಂದರೆ ಹೆಣವೂ ಬಾಯಿಬಿಡುತ್ತದೆ ಎನ್ನುವ ಗಾದೆಮಾತಿಗೆ ಭಾರತಿ ಉದಾಹರಣೆಯಾದರು. ಇದೇ ಕಾರಣಕ್ಕೇ ಡಿ.ವಿ.ಜಿಯವರು, ‘ಎಲ್ಲವನ್ನೂ ಸದ್ವಿವೇಕದ ಬೆಳಕಿನಲ್ಲಿ ಪರೀಕ್ಷಿಸಬೇಕು’ ಎಂದಿದ್ದಾರೆ: ‘ಧರ್ಮಸಂಕಟದಿ ಮನ ತಲ್ಲಣಿಸತಿರುವಂದು, ನಿರ್ಮಥಿಸು ನಿನ್ನಾತ್ಮವನೆ ಮಮತೆ ಬಿಟ್ಟು; ನಿರ್ಮಮದ ಸದ್ವಿವೇಕದ ದೀಪಕಿಂತ ನೀಂ, ನೆಮ್ಮಲಿನ್ನೇನಿಹುದೋ? ಮಂಕುತಿಮ್ಮ’.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)
ರಾಜ್ಯದ ನೂತನ ಉಪ ಲೋಕಾಯುಕ್ತರಾಗಿ ನ್ಯಾಯಾಮೂರ್ತಿ ಬಿ.ವೀರಪ್ಪ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eleven =
Remember me
