| ಸುನಿಲ್ ಪೊನ್ನೇಟಿ ಮಡಿಕೇರಿ
ಕರ್ನಾಟಕ ಸೇರಿ ದೇಶದಾದ್ಯಂತ ರೈತರಿಗೆ ಹವಾಮಾನ ಮುನ್ಸೂಚನೆ ನೀಡುವ ಮೂಲಕ ಕೃಷಿ ವಲಯಕ್ಕೆ ಆಪದ್ಬಾಂಧವನಂತೆ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ಕೃಷಿ ಹವಾಮಾನ ಘಟಕಗಳು ಮಾರ್ಚ್​ನಿಂದ ಕಾರ್ಯ ಸ್ಥಗಿತಗೊಳಿಸಲಿವೆ. ಇದರಿಂದಾಗಿ ರೈತರಿಗೆ ಹವಾಮಾನ ವೈಪರೀತ್ಯ, ಬಿತ್ತನೆ, ಕೊಯ್ಲು… ಹೀಗೆ ಇನ್ನಿತರ ಸೂಕ್ತ ಮಾಹಿತಿ ಸಿಗದೆ ಸಂಕಷ್ಟಕ್ಕೆ ಸಿಲುಕುವಂತಾಗಲಿದೆ. ಜತೆಗೆ ಘಟಕಗಳ ಸಿಬ್ಬಂದಿಯ ಕೆಲಸಕ್ಕೂ ಕುತ್ತು ಬಂದಿದೆ.
ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ನಿರ್ವಹಣೆ ಆಗುತ್ತಿದ್ದ ಹವಾಮಾನ ಘಟಕಗಳು ಎಲ್ಲ ಚಟುವಟಿಕೆಗಳನ್ನು ಫೆಬ್ರವರಿ ಅಂತ್ಯಕ್ಕೆ ನಿಲ್ಲಿಸುವಂತೆ ಈಗಾಗಲೆ ಭಾರತೀಯ ಹವಾಮಾನ ಇಲಾಖೆಯಿಂದ ನಿರ್ದೇಶನ ಬಂದಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞರ ಸೇವೆಯನ್ನೂ ಫೆಬ್ರವರಿ ಕೊನೆಗೆ ಸ್ಥಗಿತಗೊಳಿಸಲು ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಸರ್ಕಾರದ ಮಹತ್ವದ ಕಾರ್ಯಕ್ರಮಗಳಲ್ಲಿ ಗ್ರಾಮೀಣ ಕೃಷಿ ಮೌಸಂ ಸೇವಾ (ಜಿಕೆಎಂಎಸ್) ಯೋಜನೆ ಕೂಡ ಒಂದಾಗಿದೆ. ಜತೆಯಲ್ಲಿ ದೇಶದ 530 ಜಿಲ್ಲೆಗಳಲ್ಲಿ ಜಿಲ್ಲಾ ಕೃಷಿ ಹವಾಮಾನ ಘಟಕಗಳು ಕಾರ್ಯಾಚರಿಸುತ್ತಿವೆ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆಗಳನ್ನು ಸ್ವೀಕರಿಸಲು ಮತ್ತು ಇವುಗಳ ಆಧಾರದಲ್ಲಿ ಕೃಷಿಕರಿಗೆ ಅಗತ್ಯ ಸಲಹೆಗಳನ್ನು ನೀಡಲು ಈ ಘಟಕಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆಯಾ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಹವಾಮಾನ ಇಲಾಖೆ ವರದಿಗಳನ್ನು ಆಧರಿಸಿ ರೈತರಿಗೆ ಸಲಹೆ ನೀಡುವ ಕೆಲಸವನ್ನು ಜಿಲ್ಲಾ ಕೃಷಿ ಹವಾಮಾನ ಘಟಕಗಳು ಮಾಡುತ್ತಿವೆ.
ಜಿಲ್ಲಾ ಮಟ್ಟದಲ್ಲಿ ಘಟಕಗಳ ಕಾರ್ಯ:ಭಾರತೀಯ ಹವಾಮಾನ ಇಲಾಖೆ ರಾಜ್ಯದ 12 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಆಯಾ ಭಾಗಕ್ಕೆ ಅನುಸಾರವಾಗಿ ಕೇಂದ್ರೀಕೃತ ಮಾಹಿತಿ ನೀಡುವ ಉದ್ದೇಶದಿಂದ ಜಿಲ್ಲಾ ಮಟ್ಟದ ಕೃಷಿ ಹವಾಮಾನ ಘಟಕ ಸ್ಥಾಪಿಸಿದೆ.
2019ರಿಂದ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಕೃಷಿ ಹವಾಮಾನ ಘಟಕಗಳು ಕಾರ್ಯಾಚರಿಸುತ್ತಿವೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ತಾಲೂಕುವಾರು ಪ್ರತ್ಯೇಕ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಈ ಘಟಕಗಳು ತಯಾರಿಸಿ ಬಿಡುಗಡೆ ಮಾಡುತ್ತವೆ. ಹವಾಮಾನ ಆಧಾರಿತ ಕೃಷಿ ಸಲಹೆಗಳು ರೈತರಿಗೆ ಸಮಗ್ರ ಮಾರ್ಗದರ್ಶನ ನೀಡುವಂತಿದ್ದು, ಮುಂದಿನ ಐದು ದಿನಗಳ ಹವಾಮಾನ ಮುನ್ಸೂಚನೆ, ನಾಟಿ, ಬಿತ್ತನೆ, ಹಂತವಾರು ಕೀಟ ಹಾಗೂ ರೋಗಗಳ ಮಾಹಿತಿ, ತಡೆಗಟ್ಟುವ ಕ್ರಮಗಳು, ಕೃಷಿ ಉತ್ಪನ್ನಗಳ ಕಟಾವು, ಸಂಸ್ಕರಣೆ ಕುರಿತು ಸಮಗ್ರ ಮಾಹಿತಿ ಒದಗಿಸುತ್ತವೆ. ಅಲ್ಲದೆ, ಗ್ರಾಮಾಂತರ ಮಟ್ಟದಲ್ಲಿ ರೈತರಿಗೆ ಹಾಗೂ ವಿಸ್ತರಣಾ ಅಧಿಕಾರಿಗಳಿಗೆ ಹವಾಮಾನ ಮುನ್ಸೂಚನೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತದೆ. ಈ ರೀತಿಯಲ್ಲಿ ಕೃಷಿಕರಿಗೆ ಸಾಕಷ್ಟು ಉಪಯೋಗ ಇರುವ ಜಿಲ್ಲಾ ಕೃಷಿ ಹವಾಮಾನ ಘಟಕಗಳನ್ನು ಮುಚ್ಚಲು ಸಿದ್ಧತೆ ನಡೆದಿದೆ. ಈ ತಿಂಗಳಾಂತ್ಯಕ್ಕೆ ಘಟಕದ ಎಲ್ಲ ಚಟುವಟಿಕೆ ನಿಲ್ಲಿಸುವಂತೆ ಇಲ್ಲಿನ ಸಿಬ್ಬಂದಿಗೆ ಭಾರತೀಯ ಹವಾಮಾನ ಇಲಾಖೆ ಸೂಚನೆ ಬಂದಿದೆ. ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಹವಾಮಾನ ತಜ್ಞ ಮತ್ತು ಹವಾಮಾನ ಪರೀವೀಕ್ಷಕರು ಕೂಡ ಫೆಬ್ರವರಿ ಕೊನೆಗೆ ಕೆಲಸ ಕಳೆದುಕೊಳ್ಳಲಿದ್ದಾರೆ.
ಜ.17ರಂದೇ ಸೂಚನೆ?:ಕೇಂದ್ರ ಭೂ ವಿಜ್ಞಾನ ಸಚಿವಾಲಯದ, ಭಾರತೀಯ ಹವಾಮಾನ ಇಲಾಖೆ ಹಾಗೂ ಕೃಷಿ ಸಚಿವಾಲಯದ ಅಡಿಯಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಈ ಘಟಕಗಳನ್ನು ಸ್ಥಾಪಿಸಿದೆ. ಈ ಘಟಕಗಳನ್ನು ಮುಚ್ಚುವಂತೆ ಜ.17ರಂದೇ ಭಾರತೀಯ ಹವಾಮಾನ ಇಲಾಖೆಯಿಂದ ಪತ್ರ ರವಾನೆ ಆಗಿದೆ. ಆರ್ಥಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳ ಕಾರಣಕ್ಕೆ ಘಟಕಗಳನ್ನು ಮುಚ್ಚುವ ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿಸಿದ ಇಲಾಖೆಗಳ ನಡುವಿನ ಒಪ್ಪಂದದ ಅವಧಿ ಮುಗಿದಿರುವುದರಿಂದ ಜಿಲ್ಲಾ ಕೃಷಿ ಹವಾಮಾನ ಘಟಕ ಗಳನ್ನು ಮುಚ್ಚಲಾಗುತ್ತಿದೆ ಎನ್ನಲಾಗುತ್ತಿದೆ. ಈ ಘಟಕದದಿಂದ ಕೃಷಿಕರಿಗೆ ಸಾಕಷ್ಟು ಪ್ರಯೋಜನ ಆಗುತ್ತಿತ್ತು. ರೈತರ ಹಿತದೃಷ್ಟಿಯಿಂದ ಈ ಘಟಕದ ಕಾರ್ಯಚಟುವಟಿಕೆ ಹೀಗೆಯೇ ಮುಂದುವರಿಯಬೇಕು.
| ಡಾ.ವೀರೇಂದ್ರ ಕುಮಾರ್, ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ

ಜಿಲ್ಲಾ ಕೃಷಿ ಹವಾಮಾನ ಘಟಕಗಳನ್ನು ಮುಚ್ಚುವ ನಿರ್ಧಾರ ಸರಿಯಲ್ಲ. ಇದರಿಂದ ರೈತರಿಗೆ ಸಾಕಷ್ಟು ಉಪಯೋಗ ಇದೆ. ಅಲ್ಲಿನ ತಜ್ಞರು ಕೊಡುವ ಮಾಹಿತಿಗಳು ಸಾಕಷ್ಟು ಉಪಯುಕ್ತವಾಗಿದ್ದವು. ಈ ಘಟಕಗಳ ಸೇವೆ ಕೃಷಿಕರಿಗೆ ತುಂಬಾ ಅಗತ್ಯವಿದೆ.
| ಪಿ. ರವಿಶಂಕರ್ ಬಾರಿತ್ತಾಯ,  ಪ್ರಗತಿಪರ ಕೃಷಿಕ, ಪೊನ್ನಂಪೇಟೆ

ವಿವಾದದ ನಡುವೆ ಮತ್ತೆರಡು ಫೋಟೊ ಹಂಚಿಕೊಂಡ ಪವಿತ್ರಾಗೌಡ! ನಟ ದರ್ಶನ್​ ಫ್ಯಾನ್ಸ್​ ಹೇಳಿದ್ದೇನು?
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × four =
Remember me
