ಹೊಸತನವನ್ನು ಸದಾ ಸ್ವೀಕರಿಸುವ, ವಿವಿಧ ರೀತಿಯ ಚಿಂತನೆಗಳೊಡನೆ, ಭಿನ್ನ ಜ್ಞಾನವಾಹಿನಿಗಳೊಡನೆ ಬೆರೆತು ಸಹಜೀವನವನ್ನು ನಡೆಸುವ ಶಕ್ತಿ ಮತ್ತು ಹಿರಿಮೆ ಈ ದೇಶಕ್ಕೆ ಮತ್ತು ಸನಾತನ ಧರ್ಮಕ್ಕಿದೆ. ಸನಾತನ ಚಿಂತನಾಕ್ರಮದಲ್ಲಿ ಅಶಾಶ್ವತವಾದ ದೇಹ, ಮನಸ್ಸುಗಳಿಗೆ ಅತೀತವಾದ ಆತ್ಮಶಕ್ತಿಯ ಅನ್ವೇಷಣೆ ಹಾಗೂ ಅನುಭೂತಿಗೆ ಹೆಚ್ಚು ಪ್ರಾಶಸ್ತ್ಯವಿದೆ.
ಜ್ಞಾನಪೋಷಕವೂ ಚಿಂತನಶೀಲವೂ ಆದ ಸನಾತನ ಸಂಸ್ಕೃತಿಯ ಪರಂಪರೆ ಭಾರತೀಯ ಜನಮಾನಸದಲ್ಲಿ ಸಹಸ್ರಾರು ವರ್ಷಗಳಿಂದ ಅವಿಚ್ಛಿನ್ನವಾಗಿ ಹರಿದುಬಂದಿದ್ದು, ಸಹಜವಾಗಿಯೇ ಅದು ನಮ್ಮ ದೇಶದ ಮುಖ್ಯ ಚಿಂತನಧಾರೆಯಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಸನಾತನ ಸಂಸ್ಕೃತಿಯು ಎಲ್ಲ ರೀತಿಯ ಸಕಾರಾತ್ಮಕ ಬೆಳವಣಿಗೆಗೆ ಸಹಕಾರಿಯಾಗಿದ್ದು, ಅದು ಎಲ್ಲರನ್ನೂ ಸಲಹಬಲ್ಲ ಪ್ರಕೃತಿಯ ಒಂದು ಸಮರ್ಥ ಅಭಿವ್ಯಕ್ತಿ ಎನ್ನಬಹುದು. ಅದರಲ್ಲಿ ವೈಜ್ಞಾನಿಕ, ಧಾರ್ವಿುಕ ಮತ್ತು ಸಾಂಸ್ಕೃತಿಕ ಪ್ರಗತಿಪರ ಜ್ಞಾನರಾಶಿಯನ್ನು ಪರಿಶೀಲಿಸುವ ಹಾಗೂ ಸಮನ್ವಯಿಸುವ ಮತ್ತು ಸ್ವೀಕರಿಸುವ ಶಕ್ತಿ ಅಡಗಿದೆ ಎಂಬುದನ್ನು ನಮ್ಮ ಇತಿಹಾಸ ಮತ್ತು ವರ್ತಮಾನ ಭಾರತ ಸ್ಪಷ್ಟೀಕರಿಸುತ್ತದೆ.
ಇದು ಸಾಮಾಜಿಕ ಮತ್ತು ಐತಿಹಾಸಿಕ ವಾಸ್ತವ ಸತ್ಯವಾಗಿದ್ದರೂ, ಬುದ್ಧಿಯ ವಿಕಾಸಕ್ಕೆ ಹಾಗೂ ಜ್ಞಾನದ ಬೆಳವಣಿಗೆಗೆ ಪ್ರೋತ್ಸಾಹಕಾರಿಯಾದಂತಹ ಸನಾತನ ಸಂಸ್ಕೃತಿಯ ಬಗೆಗೆ ಆಧುನಿಕ ಸಮಾಜದ ಹಲವು ತಥಾಕಥಿತ ಪ್ರಗತಿಪರ ವ್ಯಕ್ತಿಗಳಿಂದ, ವರ್ಗಗಳಿಂದ ಎಡಬಿಡದೆ ವಿಕೃತ ಆರೋಪ, ನಿಂದನೆ ಹಾಗೂ ಅನಾವಶ್ಯಕ ವಿರೋಧ ವ್ಯಕ್ತಗೊಳಿಸುತ್ತಿರುವುದು ವಿಷಾದನೀಯ ಮಾತ್ರವಲ್ಲ, ಈ ದೇಶದಲ್ಲಿ ಶಾಂತಿ-ಸಾಮರಸ್ಯದ ಸಮಾಜನಿರ್ವಣಕ್ಕೆ ಬಾಧಕವೂ ಆಗಿದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳುವ ಅಗತ್ಯವಿದೆ.
ಬೇರೆ ಬೇರೆ ಮೂಲಗಳಿಂದ ಸನಾತನ ಸಂಸ್ಕೃತಿಯ ಬಗ್ಗೆ ಸಕಾರಾತ್ಮಕ, ನಕಾರಾತ್ಮಕ ಮತ್ತು ಇನ್ನಿತರ ರೀತಿಯ ಅರೆಬೆಂದ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಇಂದು ಆವೃತವಾಗಿ ಗೊಂದಲವನ್ನು ಉಂಟು ಮಾಡುತ್ತಿರುರುವುದನ್ನು ಎಲ್ಲರೂ ಗಮನಿಸಬಹುದು. ಇಂತಹ ನಕಾರಾತ್ಮಕ ಶಕ್ತಿಗಳ ಅಬ್ಬರ, ಅವುಗಳಿಂದಾಗುವ ದುಷ್ಪರಿಣಾಮಗಳನ್ನು ಕಂಡೂ ನಾವು ಅವಕ್ಕೆ ಮೂಕಸಾಕ್ಷಿಗಳಾಗಿ ಅವಿವೇಕಿಗಳಂತೆ ಸುಮ್ಮನಿದ್ದರೆ, ಆದರ್ಶ ಸಮಾಜದ ನಿರ್ವಣಕ್ಕೆ ಹಿನ್ನಡೆಯಾಗುತ್ತದೆ. ಈ ದೇಶದ ಸುಭದ್ರ ಅಡಿಪಾಯವಾದ ಸರ್ವಜನಹಿತಕಾರಿಯಾದ ಈ ಸನಾತನ ಸಂಸ್ಕೃತಿಯನ್ನು ನಮ್ಮ ನಿತ್ಯ ಆಚರಣೆಯಿಂದ ಎಲ್ಲ ವರ್ಗಗಳಿಗೆ ತಾರತಮ್ಯವಿಲ್ಲದೆ ಜ್ಞಾನಪ್ರಸಾರ ಮಾಡುವುದರಿಂದ ಸೇವೆಗಳ ಮತ್ತು ಐಕ್ಯತಾ ಮನೋಭಾವದ ಮೂಲಕ ಸಂರಕ್ಷಿಸಲು ಭಾರತೀಯರೆಲ್ಲರೂ ಸನ್ನದ್ಧರಾಗಬೇಕಾಗಿರುವುದು ಪರಿಸ್ಥಿತಿಯ ಅವಶ್ಯಕತೆ.
ಸನಾತನ ಧರ್ಮದ ಸತ್ತ ್ವ ಏನು? ಅದರ ಶಕ್ತಿ ಮತ್ತು ಜ್ಞಾನದ ಸಾಮರ್ಥ್ಯ ಎಂತಹುದು? ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವಂಥ ವಿಶ್ವಾತ್ಮಕ ಗುಣಲಕ್ಷಣಗಳು ಈ ಸಂಸ್ಕೃತಿಯಲ್ಲಿದೆ ಎಂಬುದು ವಾಸ್ತವಿಕ ಸತ್ಯ. ಸಾವಿರಾರು ವರ್ಷಗಳ ಇತಿಹಾಸದುದ್ದಕ್ಕೂ ನಡೆದ ಅಸಂಖ್ಯಾತ ಆಕ್ರಮಣಗಳನ್ನು ಎದುರಿಸಿಯೂ, ಇದು ಅವಿನಾಶಿಯಾಗಿ, ಚೈತನ್ಯಭರಿತವಾಗಿ ಪುಟಿದೆದ್ದು ನಿಲ್ಲಲು ಕಾರಣವೇನು? ಆಧುನಿಕ ಜನಮಾನಸದಲ್ಲಿ ಇದು ಚಿರಸ್ಥಾಯಿಯಾಗಿ ಇನ್ನೂ ಹೇಗೆ ಉಳಿದಿದೆ? ಇದೆಲ್ಲವನ್ನೂ ಕೂಲಂಕಷವಾಗಿ, ಅರ್ಥಪೂರ್ಣವಾಗಿ ಪರಿಶೀಲಿಸಬೇಕು. ಕೂಪಮಂಡೂಕದಂತಿರದೆ ವಿಕೃತ ಭಾವನೆಗಳನ್ನು ಬದಿಗಿಟ್ಟು ಸತ್ಯ, ನ್ಯಾಯ, ನೀತಿಯ ಆಧಾರದಲ್ಲಿ ಸಮಾಜಪರಿವರ್ತನೆ ಮತ್ತು ಅಭ್ಯುದಯವನ್ನು ಧ್ಯೇಯವಾಗಿಟ್ಟುಕೊಂಡು ಈ ಪ್ರಾಚೀನ ಉದಾತ್ತ ಮೌಲ್ಯಗಳನ್ನು ಪರಿಶೀಲಿಸಬೇಕಾದ ಕಾಲ ಒದಗಿಬಂದಿದೆ. ಹಾಗೆ ವಸ್ತುನಿಷ್ಠವಾಗಿ ಪರಿಶೀಲಿಸಿದಾಗ ಎಲ್ಲ ರೀತಿಯ ಆಕ್ರಮಣಗಳ ನಡುವೆಯೂ ಬದುಕಿ ಉಳಿಯುವ ಒಂದು ಚಿರಂಜೀವಿ ಶಕ್ತಿ ಈ ಸನಾತನ ಸಂಸ್ಕೃತಿಗೆ ಇದೆ ಎಂಬುದು ಗೋಚರವಾಗುತ್ತದೆ. ಆ ವಿಶೇಷ ಶಕ್ತಿ ಯಾವುದೆಂದರೆ, ಮನುಷ್ಯಚಿಂತನೆಯ ಎಲ್ಲ ವಿಚಾರಗಳನ್ನು ಸ್ವೀಕರಿಸಿ, ಮಾನವನ ವಿಕಾಸಕ್ಕೆ ಮತ್ತು ಬೆಳವಣಿಗೆಗೆ ಅನುವು ಮಾಡಿಕೊಡುವ ಮುಕ್ತ ಚಿಂತನಾ ವ್ಯವಸ್ಥೆ (ಟಟಛ್ಞಿ ಛ್ಞಿಛಛಿಛ ಠಿಜಟ್ಠಜಜಠಿ ಠಢಠಠಿಛಿಞ) ಈ ಸಂಸ್ಕೃತಿಯಲ್ಲಿ ಇರುವುದೇ ಆಗಿದೆ.
ಭರತಖಂಡವು, ಒಂದು ಗ್ರಂಥ, ಓರ್ವ ಸಂತ, ಓರ್ವ ಸಮಾಜಸುಧಾರಕ, ಒಂದು ವ್ಯವಸ್ಥೆ, ಒಂದು ಜೀವನಪದ್ಧತಿ ಅಥವಾ ಒಂದು ರೀತಿಯ ಆಚಾರ ವಿಚಾರಗಳಿಗೆ ಸೀಮಿತವಾದುದಲ್ಲ. ಹೊಸತನವನ್ನು ಸದಾ ಸ್ವೀಕರಿಸುವ, ವಿವಿಧ ರೀತಿಯ ಚಿಂತನೆಗಳೊಡನೆ, ವಿಭಿನ್ನ ವಿಚಾರಗಳೊಡನೆ, ಭಿನ್ನ ಜ್ಞಾನವಾಹಿನಿಗಳೊಡನೆ ಬೆರೆತು ಸಹಜೀವನವನ್ನು ನಡೆಸುವ ಶಕ್ತಿ ಮತ್ತು ಹಿರಿಮೆ ಈ ದೇಶಕ್ಕೆ ಮತ್ತು ಸನಾತನ ಧರ್ಮಕ್ಕಿದೆ ಎಂಬುದನ್ನು ಇತಿಹಾಸವೇ ತೋರಿಸಿಕೊಟ್ಟಿದೆ.
ಸನಾತನ ಚಿಂತನಾಕ್ರಮದಲ್ಲಿ ಅಶಾಶ್ವತವಾದ ದೇಹ, ಮನಸ್ಸುಗಳಿಗೆ ಅತೀತವಾದ ಆತ್ಮಶಕ್ತಿಯ ಅನ್ವೇಷಣೆ ಹಾಗೂ ಅನುಭೂತಿಗೆ ಹೆಚ್ಚು ಪ್ರಾಶಸ್ತ್ಯವಿರುವುದೊಂದು ವಿಶೇಷ. ಅದರ ಜೊತೆಜೊತೆಗೆ ಮನುಷ್ಯ ತನ್ನ ಪ್ರಕೃತಿಯ ನಿಯಮಕ್ಕೆ ಮತ್ತು ಧರ್ಮದ ಅನುಸಾರ ರಚನಾತ್ಮಕ ಆವಿಷ್ಕಾರಗಳನ್ನು ಪಾಲಿಸುತ್ತ, ದೀರ್ಘಾಯುವಾಗಿ, ಧನಾರ್ಜನೆ ಮಾಡುತ್ತ, ಆರೋಗ್ಯಕರ ಮತ್ತು ಶ್ರೀಮಂತಿಕೆಯಳ್ಳ ಆನಂದಮಯ ಜೀವನವನ್ನು ನಡೆಸುವ ಪ್ರೇರಣೆ ಈ ಸನಾತನ ಸಂಸ್ಕೃತಿಯಲ್ಲಿ ಉದಾತ್ತವಾಗಿ ಅಭಿವ್ಯಕ್ತವಾಗಿದೆ. ಪ್ರವೃತ್ತಿ ಮತ್ತು ನಿವೃತ್ತಿ ಜೀವನ ಪದ್ಧತಿಯ ಎರಡೂ ಆದರ್ಶಗಳು ಪರಸ್ಪರ ಪೂರಕವಾಗಿ ಆದರ್ಶ ಸಮಾಜದ ನಿರ್ವಣಕ್ಕೆ ಅನುವು ಮಾಡಿಕೊಡುವುದು ಈ ನಮ್ಮ ಸನಾತನ ಸಂಸ್ಕೃತಿ.
ಸನಾತನ ಸಂಸ್ಕೃತಿಯ ಜಾಗತಿಕ ಉತ್ಕರ್ಷ: ಇತ್ತೀಚಿನ ವಿದ್ಯಮಾನಗಳನ್ನು ಅವಲೋಕಿಸಿದಾಗ ನಮ್ಮ ಸನಾತನ ಸಂಸ್ಕೃತಿಯು ಜಗತ್ತಿನಾದ್ಯಂತ ಹೆಚ್ಚು ಹೆಚ್ಚು ಜನರ ಗಮನವನ್ನು ವಿವಿಧ ರೀತಿಗಳಲ್ಲಿ ಪ್ರಭಾವಿಸುತ್ತಿರುವುದನ್ನು ಕಾಣಬಹುದು. ಇದು ಜಾತಿ, ಮತಗಳಿಗೆ ಅತೀತವಾದ, ಪರಿಣಾಮಕಾರಿಯಾದ ಆಧ್ಯಾತ್ಮಿಕ, ಬೌದ್ಧಿಕ ಮತ್ತು ಸಾಮಾಜಿಕ ಶಕ್ತಿಯಾಗಿ ಅಂಗೀಕೃತವಾಗುತ್ತಿರುವುದನ್ನೂ ಗಮನಿಸಬಹುದು. ಈ ದೇಶದ ಸಂಸ್ಕೃತಿ ಮತ್ತು ಜನಜೀವನದ ಆಧಾರವಾಗಿರುವ ಜ್ಞಾನರಾಶಿಯು ಉನ್ನತ ಮೌಲ್ಯಗಳಿಂದ ಒಡಗೂಡಿದ್ದು, ಅದರ ಪ್ರಸ್ತುತತೆಯನ್ನು ಆಧುನಿಕ ಸಮಾಜದಲ್ಲಿ ಕೂಡ ಯಾರೂ ಅಲ್ಲಗಳೆಯಲಾಗುವುದಿಲ್ಲ. ಅನೇಕ ಚಿಂತಕರ, ಸಮಾಜ ಸುಧಾರಕರ, ಶಿಕ್ಷಣತಜ್ಞರ, ಪಾಶ್ಚಾತ್ಯ ಮತ್ತು ಪೌರಸ್ತ್ಯ ಚಿಂತಕರ ಹಾಗೂ ಸತ್ಯಶೋಧಕರ ಅಷ್ಟೇ ಏಕೆ, ಉದಾತ್ತ ಮನೋಭಾವವುಳ್ಳ ಅನ್ಯಧರ್ವಿುಯರ ಗಮನವನ್ನೂ ಅದು ಸೆಳೆಯುತ್ತಿದ್ದು, ಆಧುನಿಕ ವೈಜ್ಞಾನಿಕ ವಿಮರ್ಶೆಗೆ ಒಳಪಟ್ಟು ಜನಮನವನ್ನು ಆರ್ಕ‚ಸುತ್ತಿದೆ.
ವೇದೋಪನಿಷತ್ತುಗಳು, ಭಾಷಾವಿಜ್ಞಾನ, ಜಾನಪದ, ಗಣಿತ, ಸಂಗೀತ, ಆಯುರ್ವೆದ, ಯೋಗ, ಅಧ್ಯಾತ್ಮ ಮೊದಲಾದ ವಿವಿಧ ಜ್ಞಾನರಾಶಿಗಳು, ವೈಜ್ಞಾನಿಕ ಸಂಶೋಧನೆಗಳು, ಕೃಷಿ ವಿಜ್ಞಾನ ಹಾಗೂ ನಾನಾ ವಿಧದ ವಾಣಿಜ್ಯ ವಿಷಯಗಳು, ಬೇರೆ ಬೇರೆ ವೃತ್ತಿಜ್ಞಾನದ ಶಾಖೆಗಳು ಸನಾತನ ಸಂಸ್ಕೃತಿ ಮತ್ತು ನಾಗರಿಕತೆಯ ಅಂಗವಾಗಿ ಸಮೃದ್ಧವಾಗಿ ಬೆಳೆದಿದ್ದು, ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ವಿವೇಕವನ್ನೂ, ಸಮಗ್ರ ಜೀವನದರ್ಶನವನ್ನೂ ನೀಡುತ್ತಿವೆ. ಕಾಲದಿಂದ ಕಾಲಕ್ಕೆ ಬೆಳೆದು ಬಂದ ಈ ಜ್ಞಾನಸಂಪತ್ತು, ಅರ್ಥಶಾಸ್ತ್ರ, ಧರ್ಮ, ವಿಜ್ಞಾನ, ಆರೋಗ್ಯಶಾಸ್ತ್ರ, ಮನಶ್ಶಾಸ್ತ್ರ, ಸಾಮರಸ್ಯದ ಜೀವನ ಪದ್ಧತಿ, ಶಾಂತಿ, ತಾಳ್ಮೆ, ಪ್ರೀತಿ ಮುಂತಾದ ಸಹಜೀವನದ ಜಾಗತಿಕ ಅಂಶಗಳನ್ನೊಳಗೊಂಡಿದೆ. ಸರ್ವವ್ಯಾಪಕವಾದ ವಿಜ್ಞಾನದ ತತ್ತ ್ವಂತೆಯೇ ಈ ಸನಾತನ ಸಂಸ್ಕೃತಿಯ ಜ್ಞಾನವು ಇಡೀ ಆಧುನಿಕ ಜಗತ್ತಿಗೆ ಇಂದು ಅತ್ಯಾವಶ್ಯಕವಾಗಿ ಬೇಕಾಗಿದೆ. ಎಂದೂ ಆಕ್ರಮಣಕಾರಿ ಪ್ರವೃತ್ತಿ ಹೊಂದಿರದ, ಎಲ್ಲರನ್ನೂ ನಮ್ಮವರೆಂದು ತಿಳಿಯುವ ‘ವಸುಧೈವ ಕುಟುಂಬಕಂ’ ಮತ್ತು ‘ಸರ್ವೆ ಜನಾಃ ಸುಖಿನೋ ಭವಂತು’ ಎಂಬ ಲೋಕಹಿತದ ಆದರ್ಶದ ಮೇಲೆ ನೆಲೆನಿಂತ ಈ ಮಹಾನ್ ಹಿಂದೂ ಸಂಸ್ಕೃತಿಯ ಮೌಲ್ಯಗಳು ಕಿಂಚಿತ್ತೂ ಕುಗ್ಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಾವೆಲ್ಲರೂ ವಹಿಸಬೇಕಾಗಿದೆ.
ಸನಾತನ ಸಂಸ್ಕೃತಿಯ ಮುಖ್ಯ ವೈಶಿಷ್ಟ್ಯದ ಅರಿವು ನಮಗಿರಬೇಕು: ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಅದು ಮನುಷ್ಯ ಜೀವನದ ಮೂಲಭೂತ ಸತ್ಯವನ್ನು ಆಧರಿಸಿದ್ದಾಗಿದೆ. ಇದು ಸಾವಿರಾರು ವರ್ಷಗಳ ಚಿಂತನ-ಮಂಥನ ಹಾಗೂ ಜೀವನಾನುಭವದ ಆಧಾರದ ಮೇಲೆ ಲೋಕಕಲ್ಯಾಣಕ್ಕೋಸ್ಕರ ರೂಪಿತವಾದ ಒಂದು ಯಶಸ್ವಿ ಜೀವನಕ್ರಮವಾಗಿದೆ.
ಜನಮಾನಸಕ್ಕೆ ರಾಷ್ಟ್ರೀಯತೆಯ ಅಸ್ಮಿತೆಯನ್ನೊದಗಿಸುವ ಉನ್ನತ ಆಧ್ಯಾತ್ಮಿಕ ಮೌಲ್ಯಗಳ ನೆಲೆಗಟ್ಟುಳ್ಳ ಈ ಸಂಸ್ಕೃತಿಗೆ ತಾಳಿ-ಬಾಳುವ, ಹೊಂದಾಣಿಕೆಯ ವಿಶೇಷ ಗುಣವಿದೆ. ಕಾಲದ ಆವಶ್ಯಕತೆಗೆ ತಕ್ಕಂತೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ಜೊತೆಗೆ ಮೇಳೈಸಿಕೊಳ್ಳುವ ಅಪೂರ್ವ ಶಕ್ತಿಯನ್ನು ಹೊಂದಿದೆ. ಅಷ್ಟೇ ಅಲ್ಲ, ಯೋಗ, ಆಯುರ್ವೆದ, ಅಧ್ಯಾತ್ಮ, ಧ್ಯಾನ ಮುಂತಾದ ನಮ್ಮ ಜ್ಞಾನಪ್ರಕಾರಗಳ ಜೊತೆಗೆ, ಎಲ್ಲ ಮತೀಯ, ಜಾತೀಯ ಹಾಗೂ ಸಂಕುಚಿತ ಅಡ್ಡಗೋಡೆಗಳನ್ನು ದಾಟಿ, ಎಲ್ಲ ಜನಾಂಗಗಳ ಜೀವನಪದ್ಧತಿ ಮತ್ತು ನಂಬಿಕೆಗಳನ್ನು, ಶ್ರೇಷ್ಠ, ರಚನಾತ್ಮಕ ಮೌಲ್ಯಗಳನ್ನು ಸ್ವೀಕರಿಸಿ, ಅಳವಡಿಸಿಕೊಳ್ಳುವ ವಿಶಾಲ ನಿಲುವು ಭಾರತೀಯ ಸಂಸ್ಕೃತಿಯ ಸಹಜ ಗುಣವಾಗಿದೆ.
ಆದರೆ ಎಲ್ಲ ಧರ್ಮೀಯರು ತಮ್ಮ ತಮ್ಮ ಸಂಕುಚಿತ ಮತ್ತು ಸಾರ್ವಭೌಮ ಮನೋಭಾವಗಳನ್ನು ತೊರೆದು ಸಾಮರಸ್ಯದಿಂದ ಬಾಳಿದರೆ ಮಾತ್ರ ಮಾನವ ಕುಲವು ಹಿಂದೆಂದೂ ಕಂಡರಿಯದ ಶಾಂತಿ, ಸೌಹಾರ್ದದ ನೂತನ ಸಮಾಜದ ನಿರ್ವಣಕ್ಕೆ ನಾಂದಿಯಾಗುತ್ತದೆ. ನಮ್ಮ ಈ ದೇಶದ ವಿಶಾಲ ಮನೋಭಾವದ ಸಂಸ್ಕೃತಿಯ ಅಡಿಪಾಯದಲ್ಲಿ ಮಾತ್ರ ಇಂತಹ ಸೌಹಾರ್ದದ ನೂತನ ಸಮಾಜ ನಿರ್ಮಾಣ ಸಾಧ್ಯ.
ಪ್ರಪಂಚದ ವಿವಿಧ ನಾಗರಿಕತೆಗಳನ್ನು ಅಧ್ಯಯನ ಮಾಡಿದ ಶ್ರೇಷ್ಠ ಚಿಂತಕರೂ ಮತ್ತು ಬ್ರಿಟಿಷ್ ಇತಿಹಾಸಕಾರರೂ ಆದ ಡಾ. ಅರ್ನಾಲ್ಡ್ ಟಾಯ್್ನಯವರು ಹೀಗೆ ಹೇಳಿದ್ದಾರೆ: “It is already becoming clear that a chapter which had a Western beginning will have to have an Indian ending if it is not to end in the self- destruction of the human race. At this supremely dangerous moment in history, the only way of salvation for mankind is the Indian way.’
ಹೀಗೆ ಸತ್ಯದ ಬೆಳಕಿನಲ್ಲಿ ಅರಳಿ ನಿಂತ ಭಾರತೀಯ ಜ್ಞಾನಪರಂಪರೆ ಮಾನವಕುಲದ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಬಲ್ಲ, ಎಲ್ಲ ರೀತಿಯ ವಿನಾಶಕಾರಿ ಶಕ್ತಿಗಳಿಂದ ಮಾನವಕುಲವನ್ನು ರಕ್ಷಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಇತಿಹಾಸ ತಜ್ಞರ ನಿಲುವು.
(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)
ಕಚೇರಿ ಒಳಗಡೆ ಕೊಡೆ ಹಿಡಿದು ಕೆಲಸ ಮಾಡುವ ಸಿಬ್ಬಂದಿ; ಕಾರಣ ಕೇಳಿದ್ರೆ ಹೀಗೂ ಉಂಟಾ ಅಂತಿರಾ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − two =
Remember me
