ಕೈಗೆ ಟಫ್ ಫೈಟ್ ಸಂದೇಶ ರವಾನಿಸಿದ ಸೋಮಣ್ಣ | ಮುದ್ದಹನುಮೇಗೌಡರನ್ನು ಗೆಲ್ಲಿಸಲು ಪರಂ, ಕೆಎನ್​ಆರ್ ಪಣ
ಜಗನ್ನಾಥ್ ಕಾಳೇನಹಳ್ಳಿ ತುಮಕೂರು
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಸೋಲಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲೀಗ ಜಿದ್ದಾಜಿದ್ದಿ ಅಖಾಡ ಸಿದ್ಧವಾಗಿದೆ! ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಮಾಜಿ ಸಚಿವ ವಿ.ಸೋಮಣ್ಣ ತೊಡೆತಟ್ಟಿದ್ದು, ಸದ್ಯ ‘ಸಮಬಲ’ ಸೆಣಸಾಟದ ಚಿತ್ರಣವಿದೆ.
ಎರಡೂ ಪಕ್ಷಗಳು ಪ್ರಬಲ ಸಮುದಾಯಗಳಿಗೆ ಮಣೆ ಹಾಕಿರುವುದರಿಂದ ವೀರಶೈವ-ಲಿಂಗಾಯತ, ಒಕ್ಕಲಿಗರ ಪ್ರತಿಷ್ಠೆ ಮತ್ತೊಮ್ಮೆ ಪಣಕ್ಕಿಟ್ಟಂತಾಗಿದೆ. ಕ್ಷೇತ್ರದಲ್ಲಿ ಮತ್ತೆ ಸಾಂಪ್ರದಾಯಿಕ ಎದುರಾಳಿಗಳಾದ ಲಿಂಗಾಯತ-ಒಕ್ಕಲಿಗರ ನಡುವೆ ಫೈಟ್ ಏರ್ಪಟ್ಟಿದೆ. ಕಳೆದ ಬಾರಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇತ್ತು. ಈ ಬಾರಿ ಜೆಡಿಎಸ್-ಬಿಜೆಪಿ ‘ದೋಸ್ತಿ’ ಕಾಂಗ್ರೆಸ್​ಗೆ ಪ್ರಬಲ ಪೈಪೋಟಿ ಒಡ್ಡಿವೆ.

4 ದಶಕಗಳಿಂದ ರಾಜಕೀಯ ದೈತ್ಯ ಶಕ್ತಿ ಎನಿಸಿರುವ ಬಿಜೆಪಿಯ ಹಾಲಿ ಸಂಸದ ಜಿ.ಎಸ್.ಬಸವರಾಜು ವಯಸ್ಸಹಜ ಕಾರಣದಿಂದ ಹಿಂದೆ ಸರಿದಿದ್ದು, ಸಾಕಷ್ಟು ವಿರೋಧದ ನಡುವೆಯೂ ಆಪ್ತ ವಿ.ಸೋಮಣ್ಣಗೆ ಟಿಕೆಟ್ ಕೊಡಿಸಿ ರಣಕಣ ರಂಗೇರಿಸಿದ್ದಾರೆ. ಕ್ಷೇತ್ರವನ್ನು ಇಂಚಿಂಚೂ ಬಲ್ಲ ಜಿಎಸ್ಬಿ ಸಾರಥ್ಯದಲ್ಲೇ ಪಾಂಚಜನ್ಯ ಮೊಳಗಿಸಿರುವ ಸೋಮಣ್ಣ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ‘ವಲಸಿಗ’ ಅಪವಾದ ಅಳಿಸಿಹಾಕುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಬಂಡಾಯ ಶಮನದ ಜತೆಯಲ್ಲೇ ಜೆಡಿಎಸ್-ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟ್ರೆಂಡ್ ಸೆಟ್ಟಿಂಗ್​ನಲ್ಲಿ ತೊಡಗಿದ್ದಾರೆ. ಚುನಾವಣಾ ಪಟ್ಟುಗಳನ್ನು ಬಲ್ಲ ಸೋಮಣ್ಣ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿ ಕಾಂಗ್ರೆಸ್​ಗೆ ಪ್ರಬಲ ಎದುರಾಳಿ ಎಂಬ ಸಂದೇಶ ರವಾನಿಸಿರುವುದು ಕದನ ಕುತೂಹಲ ಹೆಚ್ಚಿಸಿದೆ.
ಅಭ್ಯರ್ಥಿಗಳ ಪ್ಲಸ್- ಮೈನಸ್ :ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣಗೆ ಕ್ಷೇತ್ರ ಪರಿಚಯ ಇದೆ. ಮೈತ್ರಿ ಪಕ್ಷದ ಕಾರ್ಯಕರ್ತರನ್ನು ಒಟ್ಟಿಗೆ ತೆಗೆದುಕೊಂಡ ಹೋಗಬಲ್ಲ ಛಾತಿಯುಳ್ಳವರು. ಜತೆಗೆ ಮೋದಿ-ರಾಮನಾಮ ಬಲವಿದೆ. ಇನ್ನು ವಲಸಿಗನೆಂಬುದು ವಿರೋಧಿಗಳಿಗೆ ಅಸ್ತ್ರ, ಪಕ್ಷದೊಳಗಿನ ಭಿನ್ನಮತ, ಅಹಿಂದ ನಿರ್ಣಾಯಕ ಮೈನಸ್ ಅಂಶಗಳು. ಕ್ರಿಯಾಶೀಲ ಸಂಸದನೆಂಬ ಹೆಗ್ಗಳಿಕೆ. ಅಹಿಂದ ಮತಗಳು ಕೈಹಿಡಿಯುವ ವಿಶ್ವಾಸ ಎಸ್.ಪಿ.ಮುದ್ದಹನುಮೇಗೌಡ ಅವರದು. ಸಜ್ಜನ, ಸರಳ, ಸ್ಥಳೀಯ, ಉತ್ತಮ ಕೆಲಸಗಾರ ಎಂಬ ಅಭಿಪ್ರಾಯದ ಜತೆಗೆ ಸಚಿವದ್ವಯರ ಬಲ ವಿದೆ. ಕಾಂಗ್ರೆಸ್ ಗ್ಯಾರಂಟಿ ಭರವಸೆಯೂ ಇದೆ. ಆದರೆ, ಕಾರ್ಯಕರ್ತರೊಂದಿಗೆ ಇವರ ಒಡನಾಟ ಅಷ್ಟಕಷ್ಟೇ. ಕೈ ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ ಸಿಗದಿರುವುದು, ಚುನಾವಣಾ ತಂತ್ರಗಾರಿಕೆಯಲ್ಲಿ ಹಿನ್ನಡೆ ಇವರಿಗೆ ಮೈನಸ್.
ಸಚಿವದ್ವಯರಿಗೆ ಪ್ರತಿಷ್ಠೆ:ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣಗೆ ಲೋಕ ಸಮರ ಪ್ರತಿಷ್ಠೆ ಕಣವೆನಿಸಿದೆ. ಮುದ್ದಹನುಮೇಗೌಡರನ್ನು ಮಾತೃಪಕ್ಷಕ್ಕೆ ಸೆಳೆಯು ವುದಲ್ಲದೆ ಟಿಕೆಟ್ ಕೊಡಿಸಿದ್ದು, ಗೆಲ್ಲಿಸಿಕೊಂಡು ಹೈಕಮಾಂಡ್ ಮುಂದೆ ‘ಮುಖ’ ಉಳಿಸಿಕೊಳ್ಳುವ ದೊಡ್ಡ ಸವಾಲಿದೆ. 2019ರಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿಯಿಂದಾಗಿ ಕ್ಷೇತ್ರವನ್ನೇ ತ್ಯಾಗ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಮುದ್ದಹನುಮೇಗೌಡ ವರಿಷ್ಠರ ವಿರುದ್ಧ ಅಸಮಾಧಾನಗೊಂಡು 5 ವರ್ಷ ರಾಜಕೀಯ ವನವಾಸದಲ್ಲಿದ್ದರು. ಸ್ಥಳೀಯ ಮುಖಂಡರ ಸ್ವಾರ್ಥ ನಡವಳಿಕೆಯಿಂದ ಬೇಸತ್ತು ವಿಧಾನಸಭಾ ಚುನಾವಣೆ ವೇಳೆ ಪಕ್ಷ ತೊರೆದು ಬಿಜೆಪಿ ಸೇರಿ, 13 ತಿಂಗಳಲ್ಲೇ ಮಾತೃ ಪಕ್ಷಕ್ಕೆ ಮರಳಿದ್ದರು. ಕ್ರಿಯಾಶೀಲ ಎಂಪಿ ಎಂಬ ಕಾರಣಕ್ಕಾಗಿ ಆರಂಭದಲ್ಲೇ ಕ್ಷೇತ್ರದಲ್ಲಿ ಒಲವು ಕಂಡುಬಂದಿತ್ತು. ಕಾಂಗ್ರೆಸ್​ನ ಗ್ಯಾರಂಟಿ- ಮೋದಿ ಗ್ಯಾರಂಟಿ ಚುನಾವಣೆ ಅಸ್ತ್ರಗಳು. ಸರಳ, ಸಜ್ಜನ ಮುದ್ದಹನುಮೇಗೌಡ ಎದುರು ಸಂಘಟನಾಚತುರ ಸೋಮಣ್ಣ ಸಮಬಲ ಸ್ಪರ್ಧೆಯೊಡ್ಡಬಲ್ಲರು. ದಿನಕಳೆದಂತೆ ಚಿತ್ರಣ ಬದಲಾಗಬಲ್ಲದು.
ಒಕ್ಕಲಿಗ-ಲಿಂಗಾಯತ ಪ್ರಾಬಲ್ಯ:1952ರಿಂದ 2024ರವರೆಗೂ ಕ್ಷೇತ್ರದಲ್ಲಿ ಒಕ್ಕಲಿಗ-ಲಿಂಗಾಯತರದ್ದೇ ಪ್ರಾಬಲ್ಯ. ಒಮ್ಮೆ ಉಪ ಚುನಾವಣೆ (1962)ಯಲ್ಲಿ ಅಜಿತ್ ಪ್ರಸಾದ್ ಜೈನ್ ಗೆಲುವು ಸಾಧಿಸಿದ್ದು ಬಿಟ್ಟರೆ 1996ರ ಸಾರ್ವತ್ರಿಕ ಚುನಾವಣೆಯಲ್ಲಿ ಕುರುಬ ಸಮುದಾಯದ ಸಿ.ಎನ್.ಭಾಸ್ಕರಪ್ಪ ಜನತಾದಳದಿಂದ ಗೆದ್ದಿದ್ದರು. ಇನ್ನುಳಿದಂತೆ ಒಕ್ಕಲಿಗ ಸಮುದಾಯದ ಕೆ.ಲಕ್ಕಪ್ಪ 1967ರಿಂದ 1984ರವರೆಗೆ 4 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದರು. ಬಳಿಕ 1984ರಲ್ಲಿ ಕಾಂಗ್ರೆಸ್​ನಲ್ಲಿ ಟಿಕೆಟ್ ಪಡೆದ ಲಿಂಗಾಯತ ಸಮುದಾಯದ ಜಿ.ಎಸ್.ಬಸವರಾಜು ಕ್ಷೇತ್ರ ವನ್ನು ಒಕ್ಕಲಿಗರ ಹಿಡಿತದಿಂದ ಬಿಡಿಸಿದರು. 2014ರಲ್ಲಿ ಎಸ್.ಪಿ.ಮುದ್ದಹನುಮೇಗೌಡ ಗೆದ್ದಿದ್ದು ಹೊರತುಪಡಿಸಿ, 5 ಬಾರಿ ಜಿಎಸ್ಬಿ, 3 ಬಾರಿ ಎಸ್.ಮಲ್ಲಿಕಾರ್ಜುನಯ್ಯ(ಬಿಜೆಪಿ) ಗೆದ್ದು ಕ್ಷೇತ್ರ ಲಿಂಗಾಯತ ಸಮಾಜದಿಂದ ಕೈತಪ್ಪದಂತೆ ನೋಡಿಕೊಂಡಿದ್ದಾರೆ.
ಜೆಸಿಎಂ ಬೇಗುದಿ:ಟಿಕೆಟ್ ಕೈ ತಪ್ಪಿದ್ದರಿಂದ ಬಹಿರಂಗವಾಗೇ ಸಿಡಿದೆದ್ದಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ನಡೆ ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಸಂಧಾನದ ಬಳಿಕವೂ ಜೆಸಿಎಂ ತಟಸ್ಥರಾಗಿ ಉಳಿಯುವ ಸಾಧ್ಯತೆಯೇ ಹೆಚ್ಚು. ಬಹುತೇಕ ಕ್ಷೇತ್ರದಲ್ಲಿ ಬಂಡಾಯ ತಣ್ಣಗಾಗಿಸಿರುವ ಸೋಮಣ್ಣಗೆ ಜೆಸಿಎಂ ತಲೆನೋವು ಎನಿಸಿದ್ದಾರೆ. ಆದರೆ, ಅದನ್ನೂ ಮೆಟ್ಟಿನಿಲ್ಲುವ ಶಕ್ತಿಯೂ ಸೋಮಣ್ಣಗಿದೆ.
ಅಹಿಂದ ನಿರ್ಣಾಯಕ :ಒಕ್ಕಲಿಗ-ಲಿಂಗಾಯತ ಜನ ಸಂಖ್ಯೆ ಸಮಬಲ ಇದ್ದು, ಅಹಿಂದ ಮತಗಳು ನಿರ್ಣಾಯಕ ಎನಿಸಿವೆ. 6-7 ಲಕ್ಷದಷ್ಟು ಈ ಸಮುದಾಯಗಳ ಮತ ಇದ್ದರೆ ಉಳಿದ 10 ಲಕ್ಷ ಮತಗಳು ಅಭ್ಯರ್ಥಿಗಳ ಗೆಲುವಿನ ನಿರ್ಣಾಯಕ ಎನಿಸಲಿವೆ. ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗದ ಮತಗಳನ್ನು ‘ಕೈ’ ನೆಚ್ಚಿಕೊಂಡಿದೆಯಾದರೂ ಲೋಕ ಚುನಾವಣೆ ಸಮೀಕರಣವೇ ಬೇರೆ. 814555 ಪುರುಷರು, 836775 ಮಹಿಳೆಯರು, ಇತರ 73 ಮಂದಿ ಮತ ಚಲಾವಣೆ ಹಕ್ಕು ಹೊಂದಿದ್ದಾರೆ.
ಕೈನಿಂದ ವಲಸಿಗ ಅಸ್ತ್ರ:ಕಳೆದ ಬಾರಿ ಹೇಮೆ ಅಸ್ತ್ರ ಬಳಸಿ ಎಚ್.ಡಿ.ದೇವೇಗೌಡರನ್ನು ಕಟ್ಟಿಹಾಕಿದ್ದ ಬಿಜೆಪಿ ವಿರುದ್ಧ ಈ ಬಾರಿ ಕಾಂಗ್ರೆಸ್ ವಲಸಿಗ ಅಸ್ತ್ರ ಪ್ರಯೋಗಿಸಲಿದೆ. ಸಚಿವರಾದ ಪರಮೇಶ್ವರ, ಕೆಎನ್ನಾರ್ ಶಕ್ತಿಮೀರಿ ಹೋರಾಟ ನಡೆಸಬೇಕಿದೆ. ಸೋಮಣ್ಣರ 24/7 ರಾಜಕಾರಣ ಎದುರಾಳಿಯ ನಿದ್ದೆಗೆಡಿಸಿದೆ.
ಕರ್ನಾಟಕ: ಎಸ್ಎಸ್ಎಲ್​ಸಿ ಪರೀಕ್ಷೆ ಮೊದಲ ದಿನವೇ ಮೂವರು ವಿದ್ಯಾರ್ಥಿಗಳು ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
