| ಮೇಧಾ ಪ್ರಹ್ಲಾದಾಚಾರ್ಯ ಜೋಶಿಧರ್ಮ ಭಾರತೀಯರ ಸಹಜ ಪ್ರವೃತ್ತಿ. ಭಗವಂತನೊಂದಿಗೆ ಜೀವ ಜಡಗಳ ಸಂಬಂಧಗಳನ್ನು ಬೆಸೆಯುವುದೇ ಈ ಸನಾತನ ಧರ್ಮ. ಪ್ರತಿಯೊಂದು ಧರ್ವಚರಣೆಯ ಹಿಂದೆಯೂ ಋಷಿಮುನಿಗಳ ಅದ್ಭುತ ಚಿಂತನೆ ಇದೆ. ಇತಿಹಾಸವಿದೆ. ಕಾಲಚಕ್ರಕ್ಕೆ ನಿಯಾಮಕರಾದ ಆದಿತ್ಯಾದಿ ಗ್ರಹಗಳನ್ನು ನಿಯಮನ ಮಾಡುವ, ಕಾಲ ಪ್ರವರ್ತಕನಾದ ಪಕ್ಷ, ಮಾಸ, ಋತು, ವರ್ಷ, ಹಗಲು, ರಾತ್ರಿ, ಮುಹೂರ್ತ ಮೊದಲಾದ ಕಾಲದ ಅಂಗಗಳಿಗೆ ನಿಯಾಮಕನಾದ, ಕಾಲನಾಮಕನಾದ ಸಾಕ್ಷಾತ್ ನಾರಾಯಣನ ಇನ್ನೊಂದು ರೂಪವೇ ಅನಂತ. ದೇಶತಃ ಕಾಲತಃ ಗುಣತಃ ಅನಂತನಾಗಿರುವನೆಂದೇ ಆ ಭಗವಂತನನ್ನು ಅನಂತನೆಂದು ಕರೆದಿದ್ದಾರೆ. ಸಮಸ್ತ ಬ್ರಹ್ಮಾಂಡಕ್ಕೆ ಆಧಾರನಾದ ಆದಿಶೇಷನ ಮೇಲೆ ಪವಡಿಸಿದ ಕ್ಷೀರಸಾಗರಶಾಯಿಯಾದ ಭಗವಂತನ ಮೂಲ ರೂಪವೇ ಶ್ರೀ ಅನಂತ ಪದ್ಮನಾಭ ರೂಪ.
ವ್ರತದ ಹಿನ್ನೆಲೆ:ಮಹಾಭಾರತದಲ್ಲಿ ಒಂದು ಪ್ರಸಂಗ. ದುರ್ಯೋಧನನಿಂದ ಮೋಸಕ್ಕೊಳಗಾಗಿ ಪಾಂಡವರು ತಮ್ಮ ರಾಜ್ಯ ಅಧಿಕಾರ ಸಂಪತ್ತನ್ನೆಲ್ಲ ಕಳೆದುಕೊಂಡು ವನವಾಸಕ್ಕೆಂದು ಕಾಡಿಗೆ ಬಂದರು. ಆ ಸಂದರ್ಭದಲ್ಲಿ ಶ್ರೀಕೃಷ್ಣ ಪರಮಾತ್ಮ ಪಾಂಡವರ ಭೇಟಿಗೆಂದು ಕಾಡಿಗೆ ಬಂದ. ಕೃಷ್ಣನನ್ನು ಕಂಡ ಧರ್ಮರಾಜನು ‘‘ನಿನ್ನ ಭಕ್ತರಾದ ನಾವು ಹೀಗೆ ಪಾಂಚಾಲಿಯೊಂದಿಗೆ ಕಾಡಿನಲ್ಲಿ ವನವಾಸದಲ್ಲಿದ್ದೇವೆ, ಇದರಿಂದ ಹೇಗೆ ಮುಕ್ತಿ? ಕಳೆದು ಹೋದ ಸಂಪತ್ತನ್ನು ಹೇಗೆ ಪಡೆಯುವುದು? ಕೇಶವ! ನೀನು ಉಪದೇಶಿಸಬೇಕು’’ ಎಂದು ಪ್ರಾರ್ಥಿಸಿದ. ಆಗ ಶ್ರೀಕೃಷ್ಣ ‘‘ಅವಶ್ಯವಾಗಿ ಹೇಳುವೆ ಕೇಳು. ಅನಂತಪದ್ಮನಾಭ ಎಂಬ ಸಕಲ ಸಿದ್ಧಿಪ್ರದವಾದ ವ್ರತವಿದೆ. ಇದನ್ನು ಯಾರು ಶ್ರದ್ಧಾಭಕ್ತಿಗಳಿಂದ ಆಚರಿಸುವರೋ ಅವರು ಇಹಪರಂಗಳಲ್ಲಿ ಸಕಲ ಸಂಪತ್ತು ಸೌಖ್ಯಗಳನ್ನು ಪಡೆಯುವರು. ಹಿಂದೊಮ್ಮೆ ಸುಮಂತು ಮತ್ತು ದೀಕ್ಷಾ ಎಂಬ ಮಹರ್ಷಿ ದಂಪತಿಗಳಿದ್ದರು. ಅವರಿಗೆ ಸುಶೀಲೆ ಎಂಬ ಸರ್ವಗುಣ ಸಂಪನ್ನಳಾದ ಮಗಳಿದ್ದಳು. ಅವಳನ್ನು ಕೌಂಡಿನ್ಯರಿಗೆ ವಿವಾಹ ಮಾಡಿದರು. ಕೌಂಡಿನ್ಯರು ಪತ್ನಿ ಸುಶೀಲೆಯನ್ನು ಕರೆದುಕೊಂಡು ತಮ್ಮ ಆಶ್ರಮಕ್ಕೆ ಹೊರಟರು. ಮಧ್ಯದಲ್ಲಿ ಯಮುನಾ ನದಿ ತಟದಲ್ಲಿ ಆನ್ಹೇಕಕ್ಕೆಂದು ತೆರಳುತ್ತಾರೆ. ಅಲ್ಲಿ ಯಮುನಾತಟದಲ್ಲಿ ಅನೇಕ ಜನ ದಂಪತಿಗಳು ಭಕ್ತಿಯಿಂದ ಪೂಜೆ ಮಾಡುವುದನ್ನು ನೋಡುತ್ತಾಳೆ. ತಕ್ಷಣವೇ ಅವರ ಹತ್ತಿರ ಹೋಗಿ ನೀವೆಲ್ಲರೂ ಯಾವ ಪೂಜೆಯನ್ನು ಮಾಡುತ್ತಿದ್ದೀರಿ? ಏನು ಇದರ ಫಲ? ಎಂದು ಕೇಳುತ್ತಾಳೆ. ಆಗ ಆ ಸ್ತ್ರೀಯರು, ‘ಇದು ಅನಂತಪದ್ಮನಾಭ ವ್ರತ. ಸಕಲ ಸಮೃದ್ಧಿಯನ್ನು ಕರುಣಿಸುವ ಸಾಕ್ಷಾತ್ ಭಗವಂತನನ್ನೇ ಕುರಿತು ಮಾಡುವ ವ್ರತ’ ಎಂದು ಹೇಳಿ ಸುಶೀಲೆಗೂ ಒಂದು ಅನಂತನ ಕೆಂಪು ದಾರವನ್ನು ಕೊಡುತ್ತಾರೆ. ಸುಶೀಲೆ ಅದನ್ನು ವಿಶ್ವಾಸದಿಂದ ಧರಿಸುತ್ತಾಳೆ. ನಂತರ ಪತಿ ಕೌಂಡಿನ್ಯರೊಂದಿಗೆ ಆಶ್ರಮಕ್ಕೆ ತೆರಳುತ್ತಾಳೆ. ಅನಂತನ ಅನುಗ್ರಹದಿಂದ ಆಶ್ರಮದಲ್ಲಿ ಗೋ, ಧಾನ್ಯ ಸಂಪತ್ತಿನ ಭಾರೀ ವೃದ್ಧಿಯಾಗುತ್ತದೆ. ಸುಶೀಲೆಯ ವಿಶ್ವಾಸ ಇನ್ನೂ ಹೆಚ್ಚುತ್ತದೆ.
ಒಂದು ದಿನ ಕೌಂಡಿನ್ಯರು ಸುಶೀಲೆಯ ಕೈಯಲ್ಲಿರುವ ದಾರವನ್ನು ನೋಡಿ, ಇದು ತಮ್ಮನ್ನು ವಶಪಡಿಸಿಕೊಳ್ಳಲೆಂದು ಯಾವುದೋ ಮಾಟಮಂತ್ರದ ದಾರವಿರಬಹುದೆಂದು ಕೋಪಗೊಂಡು ಆ ದಾರವನ್ನು ಕಿತ್ತಿ ಬಿಸಾಡುತ್ತಾರೆ. ಈ ಅಪಚಾರದಿಂದ ಕೆಲವೇ ದಿನಗಳಲ್ಲಿ ಸಮಸ್ತ ಸಂಪತ್ತಿನಿಂದ ವರ್ಜಿತರಾಗುತ್ತಾರೆ. ಆಗ ಸುಶೀಲೆ ಅನಂತನ ವ್ರತದ ಮಹತ್ವ ಹಾಗೂ ಅನಂತನ ದಾರದ ಮಹಿಮೆಯನ್ನು ಕೌಂಡಿನ್ಯರಿಗೆ ತಿಳಿಸುತ್ತಾಳೆ. ಪಶ್ಚಾತ್ತಾಪದಿಂದ ಬೆಂದ ಕೌಂಡಿನ್ಯರು ‘ಸಾಕ್ಷಾತ್ ಅನಂತನನ್ನೇ ಕಂಡು ಪ್ರಾಯಶ್ಚಿತ್ತ ಮಾಡಿಕೊಳ್ಳುವೆ’ ಎಂದು ಕಾಡಿಗೆ ತೆರಳುತ್ತಾರೆ. ಎಲ್ಲಿಯೂ ಅನಂತನನ್ನು ಕಾಣದೆ ಪ್ರಾಣತ್ಯಾಗ ಮಾಡಲು ಸಿದ್ಧರಾದಾಗ ಭಗವಂತನೇ ವೃದ್ಧ ವೇಷದಲ್ಲಿ ಬಂದು ಕೌಂಡಿನ್ಯನನ್ನು ಕರೆದುಕೊಂಡು ಒಂದು ಗುಹೆಯಲ್ಲಿ ಅನಂತಪದ್ಮನಾಭನ ದರ್ಶನವನ್ನು ಮಾಡಿಸುತ್ತಾನೆ. ಕಳೆದು ಹೋದ ಸಕಲ ಸಂಪತ್ತು ಲಭ್ಯವಾಗುತ್ತದೆ.’’ ಹೀಗೆ ಶ್ರೀಕೃಷ್ಣ ಪರಮಾತ್ಮ ಧರ್ಮರಾಜನಿಗೆ ಕಥೆಯನ್ನು ತಿಳಿಸಿ ಅವನಿಂದ ಈ ವ್ರತವನ್ನು ಮಾಡಿಸುತ್ತಾನೆ. ಅನೇಕ ಕಾರಣಗಳಿಂದ ವಿಹಿತಕಾಲದಲ್ಲಿ ಈ ವ್ರತವನ್ನು ಆಚರಿಸಲು ಸಾಧ್ಯವಾಗದಿದ್ದರೆ ನವರಾತ್ರಿಯಲ್ಲಿಯೂ ಇದನ್ನು ಮಾಡಬಹುದು. ಭಗವಂತನನ್ನು ಅವನ ಮೂಲ ರೂಪದಲ್ಲಿ ಪೂಜಿಸುವುದೇ ಈ ವ್ರತ. ತಿರುವನಂತಪುರ, ಶ್ರೀರಂಗಂ, ಶ್ರೀರಂಗಪಟ್ಟಣ ಹೀಗೆ ಅನೇಕ ಕಡೆ ಅನಂತಪದ್ಮನಾಭ ರೂಪದ ಪೂಜಾ ಸ್ಥಾನಗಳು ಇವೆ.
ದರ್ಭಮಯ ಫಣಿರಾಜ ಪರಮ ಪವಿತ್ರವಾದ ದರ್ಭೆಯಿಂದ ಏಳು ಹೆಡೆಗಳ ಶೇಷನನ್ನು ಮಾಡಿ ಕಲಶದ ಮೇಲಿಟ್ಟು, ಮಧ್ಯದಲ್ಲಿ ದೇವರ ಪ್ರತಿಮೆಯನ್ನಿಟ್ಟು ಪೂಜಿಸಬೇಕು. ಭಾದ್ರಪದ ಶುದ್ಧ ಚತುರ್ದಶೀ ದಿನದಂದು ಈ ವ್ರತದ ಆಚರಣೆ. ಪೂಜೆಯ ನಿರ್ವಿಘ್ನತೆಗಾಗಿ ವಿಘ್ನೕಶ್ವರನನ್ನು ಪೂಜಿಸಿ, ನಂತರ ಕಲಶದಲ್ಲಿ ವಿಶೇಷವಾಗಿ ಯಮುನಾ ಪೂಜೆಯನ್ನು ಮಾಡಬೇಕು. ಅನಂತರ ಪೀಠ ಪೂಜಾ, ಪ್ರಾಣ ಪ್ರತಿಷ್ಠಾಪನೆ, ಧ್ಯಾನ, ಅಂಗಪೂಜೆ, ಆವರಣ ಪೂಜೆ, ಪತ್ರ ಪುಷ್ಪಗಳಿಂದ ಪೂಜೆ, ನಾಮ ಪೂಜೆ, ಮತ್ತು ದೋರದ ಪೂಜೆಯನ್ನು ಮಾಡಬೇಕು.
ಇಬ್ಬರು ಮಹಿಳಾ ಕಾನ್​ಸ್ಟೆಬಲ್​ಗಳಿಗೆ ಠಾಣೆಯಲ್ಲೇ ಶಾಸ್ತ್ರೋಕ್ತ ಸೀಮಂತ!

ಮಾಜಿ ಪ್ರಧಾನಿ ದೇವೇಗೌಡ, ಇಸ್ರೋ ಸೋಮನಾಥ್​ಗೆ ಗೌರವ ಡಾಕ್ಟರೇಟ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − five =
Remember me
