| ಕೆ.ಸತೀಶ ಮೈದೊಳಲು ಹೊಳೆಹೊನ್ನೂರು
ಬೆಂಗಳೂರು ಭಾಗದ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಅಂಗನವಾಡಿಗಳಲ್ಲಿ ಎರಡು ತಿಂಗಳಿಂದ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಕಿಚಡಿ ಬಿಟ್ಟರೆ ಬೇರೇನೂ ಕೊಡುತ್ತಿಲ್ಲವಾದ್ದರಿಂದ ತಿನ್ನಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ಕೆಲ ಮಕ್ಕಳು ಮಧ್ಯಾಹ್ನ ಊಟ ಮಾಡದೆ ಮಲಗುತ್ತಿರುವುದು ಹಾಗೂ ಪಾಲಕರು ಅನ್ನ-ಸಾಂಬಾರು ನೀಡಿ ಎಂದು ಒತ್ತಡ ಹಾಕುತ್ತಿರುವುದು ಕಾರ್ಯಕರ್ತೆಯರನ್ನು ಅಡಕತ್ತರಿಗೆ ಸಿಲುಕಿಸಿದೆ.
ನೆನೆಸಿದ ಕಾಳುಗಳು, ಅನ್ನ-ಸಾಂಬಾರು, ರೈಸ್​ಬಾತ್ ಮೆನುವಿನಿಂದ ನಾಪತ್ತೆಯಾಗಿವೆ. ಜನವರಿ ಆರಂಭದಲ್ಲಿ ಕಿಚಡಿ ಪೊಟ್ಟಣಗಳನ್ನು ಬಿಟ್ಟರೆ ಮತ್ತೇನನ್ನೂ ಸರಬರಾಜು ಮಾಡಿಲ್ಲ. ಬಹುತೇಕ ಅಂಗನವಾಡಿಗಳಲ್ಲಿ ಮೂರ್ನಾಲ್ಕು ತಿಂಗಳಿನಿಂದ ಮೊಟ್ಟೆ ವಿತರಿಸುತ್ತಿಲ್ಲ. ಮಕ್ಕಳು ಕಡಿಮೆ ಇರುವ ಕೇಂದ್ರಗಳಲ್ಲಿ ಕಾರ್ಯಕರ್ತೆಯರೇ ವಾರದಲ್ಲಿ ಒಂದೆರಡು ದಿನ ಅರ್ಧ ಮೊಟ್ಟೆ ನೀಡಿ ಸಾಗಹಾಕುತ್ತಿದ್ದಾರೆ. ಮಕ್ಕಳು ರಚ್ಚೆ ಹಿಡಿದಾಗ ಸಮಾಧಾನಪಡಿಸಲು ಶೇಂಗಾ ಮಿಠಾಯಿಯೂ ವಿತರಣೆಯಾಗಿಲ್ಲ.
ದಿನಸಿ ವಿತರಣೆ ಕೈಬಿಟ್ಟಿರುವ ಇಲಾಖೆ ಎಲ್ಲದಕ್ಕೂ ಕಿಚಡಿ ಕಡೆ ಬೆರಳು ತೋರಿಸುತ್ತಿದೆ. ಮಕ್ಕಳು ಕಿಚಡಿ ತಿನ್ನುತ್ತಿಲ್ಲ. ಮಾಡಿದ ಅಡುಗೆ ತಿಪ್ಪೆ ಸೇರುತ್ತಿದೆ. ಅಧಿಕಾರಿಗಳಿಗೆ ತಿಳಿಸಿದರೆ ದಿನ ಬಿಟ್ಟು ದಿನ ನೀಡಿ ಎನ್ನುತ್ತಾರೆ. ಕೇಂದ್ರದ ಅಡುಗೆ ಮನೆಯಲ್ಲಿ ಕಿಚಡಿ ಪೊಟ್ಟಣ ಬಿಟ್ಟರೆ ಮತ್ತೇನೂ ಇಲ್ಲ. ಕಿಚಡಿ ತಿನ್ನದ ಮಕ್ಕಳಿಗೆ ಮೊಟ್ಟೆ ಹಾಗೂ ಶೇಂಗಾ ಮಿಠಾಯಿ ಆಸೆ ತೋರಿಸಿ ಊಟ ತಿನ್ನಿಸುತ್ತಿದ್ದೆವು. ಕಳೆದ ತಿಂಗಳಿಂದ ಶೇಂಗಾ ಮಿಠಾಯಿಯನ್ನೂ ನೀಡುತ್ತಿಲ್ಲ. ಬಹುತೇಕ ಮಕ್ಕಳು ಖಾಲಿ ಹೊಟ್ಟೆಯಲ್ಲೇ ಮನೆಗೆ ಹೋಗುತ್ತಿದ್ದಾರೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಕಾರ್ಯಕರ್ತೆಯರು.
ಜನವರಿ ಆರಂಭದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಿಚಡಿ ಪೊಟ್ಟಣ ಪೂರೈಕೆ ಮಾಡಲಾಗಿತ್ತು. ಪೂರೈಕೆ ಆಗಿರುವ ಕಿಚಡಿ ಪ್ಯಾಕೆಟ್​ಗಳನ್ನು ಮಾರ್ಚ್ ಅಂತ್ಯದವರೆಗೆ ಬಳಸಬಹುದು. ಮುಂದಿನ ತಿಂಗಳಿನಿಂದ ಎಂದಿನಂತೆ ದಿನಸಿ ವಿತರಣೆ ಮಾಡಲಾಗುವುದು. ಬಹುತೇಕ ಮಕ್ಕಳು ಕಿಚಡಿ ತಿನ್ನುತ್ತಿಲ್ಲ ಎನ್ನಲಾಗುತ್ತಿದೆ. ಬೇಡಿಕೆ ನೋಡಿಕೊಂಡು ಒಂದೆರಡು ದಿನ ಅನ್ನ, ಸಾಂಬಾರು ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಗರ್ಭಿಣಿ, ಬಾಣಂತಿಯರಿಗೆ ಮುಂದಿನ ತಿಂಗಳು ದಿನಸಿ ವಿತರಣೆಯಾಗಲಿದೆ.
| ಕೃಷ್ಣಪ್ಪ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ
ಕ್ಷಣಾರ್ಧದಲ್ಲಿ ರೆಡಿಕಿಚಡಿ ತಯಾರಿಗೆ ಒಗ್ಗರಣೆ ಕೂಡ ಬೇಕಾಗಿಲ್ಲ. ಇಲಾಖೆ ವಿತರಿಸಿರುವ ಕಿಚಡಿ ಪೊಟ್ಟಣವನ್ನು ಕತ್ತರಿಸಿ ಕುಕ್ಕರ್​ಗೆ ಹಾಕಿ ನೀರು ಸೇರಿಸಿ ಎರಡು ಸೀಟಿ ಕೂಗಿಸಿದರೆ ಕಿಚಡಿ ತಯಾರಾಗುತ್ತದೆ. ಈ ಪೌಷ್ಟಿ ಕಾಂಶಯುಕ್ತ ಕಿಚಡಿ ಮಕ್ಕಳಿಗೆ ಇಷ್ಟವಾಗುತ್ತಿಲ್ಲ. ಕಿಚಡಿಯಲ್ಲಿ ಅಕ್ಕಿ, ತೊಗರಿಬೇಳೆ, ಹೆಸರು ಕಾಳು, ಕೆಲ ದ್ವಿದಳ ಧಾನ್ಯಗಳ ನುಚ್ಚಿನ ಮಿಶ್ರಣಕ್ಕೆ ಮಸಾಲೆಯೊಂದಿಗೆ ಎಣ್ಣೆ ಹಾಕಿ ಒಣ ಮಿಶ್ರಣದ ಪೊಟ್ಟಣ ಸಿದ್ಧಪಡಿಸಲಾಗಿದೆ. ಜನವರಿ ಕೊನೆಯ ವಾರದಿಂದ ಅಂಗನವಾಡಿಗಳಲ್ಲಿ ಬಿಸಿಯೂಟಕ್ಕೆ ಕಿಚಡಿ ನೀಡಲಾಗುತ್ತಿದ್ದು, ಮಾರ್ಚ್ ಅಂತ್ಯದವರೆಗೂ ಇದನ್ನೇ ತಿನ್ನಬೇಕಾದ ಅನಿವಾರ್ಯತೆ ಇದೆ. ಕಡಿಮೆ ಮಕ್ಕಳಿರುವ ಅಂಗನವಾಡಿಗಳಲ್ಲಿ ಕಿಚಡಿ ಪೊಟ್ಟಣಗಳು ಮೂಲೆ ಸೇರಿವೆ.
ರಾಜ್ಯಾದ್ಯಂತ ಇದೇ ಗೋಳು?ರಾಜ್ಯಾದ್ಯಂತ ಎಲ್ಲ ಅಂಗನವಾಡಿಗಳಲ್ಲೂ ಕಿಚಡಿಯದ್ದೇ ಗೋಳಾಗಿದೆ. ದಿನಸಿ ಸರಬರಾಜು ಮಾಡದೆ ಕಿಚಡಿಯನ್ನೇ ನೀಡುತ್ತಿದೆ ಎಂದು ಹೇಳಲಾಗಿದೆ. ಇದೇ ಕಿಚಡಿಯನ್ನು ವಾರದಲ್ಲಿ ಒಮ್ಮೆ ನೀಡಿದರೆ ಮಕ್ಕಳು ಇಷ್ಟಪಟ್ಟು ತಿನ್ನುವುದರಲ್ಲಿ ಎರಡು ಮಾತಿಲ್ಲ. ಕೆಲ ಕಾರ್ಯಕರ್ತೆಯರು ಮಕ್ಕಳಿಗೆ ರುಚಿಸಲಿ ಎಂದು ಕಿಚಡಿಯೊಂದಿಗೆ ಸ್ವಲ್ಪ ತುಪ್ಪ ಹಾಕಿ ತಿನ್ನಿಸುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿದ್ದಾರೆ. ಆರಂಭದಲ್ಲಿ ಒಂದೆರಡು ದಿನ ತಿಂದ ಮಕ್ಕಳು ನಿತ್ಯವೂ ಅದೇ ಊಟ ಎಂದಾದರೆ ಬೇಡವೆಂದು ರಚ್ಚೆ ಹಿಡಿಯುತ್ತಿವೆ ಎನ್ನುತ್ತಾರೆ ಕೆಲ ಅಂಗನವಾಡಿ ಕಾರ್ಯಕರ್ತೆಯರು. ಆದರೆ ಬೆಂಗಳೂರು ಭಾಗದ ಜಿಲ್ಲೆಗಳಲ್ಲಿ ಕಿಚಡಿ ಬದಲು ಜತೆ ಅನ್ನ ಸಾಂಬಾರು ನೀಡಲಾಗುತ್ತಿದೆ ಎನ್ನಲಾಗಿದೆ. ಇನ್ನು ಉಡುಪಿಯಲ್ಲಿ ಮೂರು ದಿನ ಅನ್ನಸಾಂಬರ್, 2 ದಿನ ಕಿಚಡಿ ನೀಡಲಾಗುತ್ತಿದೆ.
ಗರ್ಭಿಣಿ, ಬಾಣಂತಿಯರಿಗೂ ಇಲ್ಲಗರ್ಭಿಣಿ, ಬಾಣಂತಿಯರಿಗೂ ದಿನಸಿ ವಿತರಣೆಯಾಗಿಲ್ಲ. ಕೆಲವರು ಪ್ರತಿನಿತ್ಯ ಅಂಗನವಾಡಿಗಳಿಗೆ ಬಂದು ವಿಚಾರಿಸುತ್ತಿದ್ದಾರೆ. ಫೆಬ್ರವರಿ, ಮಾರ್ಚ್​ನಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡಬೇಕಾದ ದಿನಸಿಯನ್ನು ಏಪ್ರಿಲ್​ನಲ್ಲಿ ವಿತರಿಸಲಾಗುವುದು. ಏಪ್ರಿಲ್​ನಲ್ಲಿ ಒಂದು ತಿಂಗಳ ದಿನಸಿ ವಿತರಣೆ ಮಾಡಿ ಎಂದು ಹಿರಿಯ ಅಧಿಕಾರಿಗಳು ನಿರ್ದೇಶನ ನೀಡುತ್ತಿದ್ದಾರೆ. ಮೂರು ತಿಂಗಳ ದಿನಸಿಯನ್ನು ಒಮ್ಮೆಗೆ ವಿತರಿಸುವುದು ಅಸಾಧ್ಯ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸಿಬ್ಬಂದಿ.
ಮಂಚಕ್ಕೆ ಕರೆಯುವ ಮೈದುನ, ಅಡ್ಜಸ್ಟ್​ ಮಾಡ್ಕೋ ಎಂದ ಗಂಡ! ಕೋರ್ಟ್​ ಮೆಟ್ಟಿಲೇರಿ ಕಣ್ಣೀರಿಟ್ಟ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 11 =
Remember me
