ಬೆಂಗಳೂರು:ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಮಹಿಳೆಯರ ಉಚಿತ ಪ್ರಯಾಣ ‘ಶಕ್ತಿ’ ಯಶಸ್ವಿಯಾಗಿ ಜಾರಿಗೆ ಬಂದ ಬೆನ್ನ ಹಿಂದೆಯೇ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಹಾಗೂ ‘ಗೃಹಜ್ಯೋತಿ’ ಯೋಜನೆಗಳನ್ನು ಇಂದಿನಿಂದ (ಜು.1) ಅನುಷ್ಠಾನಕ್ಕೆ ತರಲು ಸಿದ್ಧತೆ ಮಾಡಲಾಗಿದೆ.
ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳು ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆಯುವಷ್ಟರಲ್ಲೇ ಅನುಷ್ಠಾನಕ್ಕೆ ಬರುತ್ತಿರುವುದು ವಿಶೇಷ. ಹಾಗೆಯೇ ಯೋಜನೆಗೆ ಎದುರಾದ ಅನಿರೀಕ್ಷಿತ ಸವಾಲುಗಳನ್ನು ಒಂದೊಂದಾಗಿ ಬದಿಗೆ ಸರಿಸಿ ಜನರಲ್ಲಿ ವಿಶ್ವಾಸ ತುಂಬಲು ಸರ್ಕಾರ ಪ್ರಯತ್ನ ನಡೆಸಿರುವುದೂ ಸ್ಪಷ್ಟವಾಗಿದೆ.
ಜುಲೈ 3ರಿಂದ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಪ್ರತಿಪಕ್ಷ ಹೋರಾಟಕ್ಕೆ ಸಜ್ಜಾಗಿದೆ. ಈ ನಡುವೆ ಸರ್ಕಾರ ಯೋಜನೆಗೆ ಚಾಲನೆ ಕೊಡುವ ಮೂಲಕ ಹೋರಾಟದ ತೀವ್ರತೆ ಕುಗ್ಗುವಂತೆ ಮಾಡುತ್ತಿದೆ.
ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯ ಹೊರತಾಗಿ ರಾಜ್ಯ ಸರ್ಕಾರದಿಂದ ಐದು ಕೆಜಿ ಅಕ್ಕಿಯ ಬದಲು ತಕ್ಷಣಕ್ಕೆ ಹಣ ನೀಡಲು ಉದ್ದೇಶಿಸಿದ್ದು, ಜುಲೈ 1ರಿಂದಲೇ ಅನ್ವಯವಾಗುವಂತೆ ಬಿಪಿಎಲ್ ಕಾರ್ಡ್​ದಾರರ ಖಾತೆಗೆ ಹಣ ಜಮಾ ಆಗಲಿದೆ. ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮಾತು ಕೊಟ್ಟಂತೆ ಜುಲೈ 1ರಿಂದ ಯೋಜನೆ ಜಾರಿಯಾಗಲಿದೆ. ಪಡಿತರ ಚೀಟಿ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ. ಯಾರು ಖಾತೆ ತೆರೆದಿಲ್ಲವೋ ಅಂತಹವರು ಬ್ಯಾಂಕ್ ಖಾತೆ ತೆರೆಯಬೇಕಾಗುತ್ತದೆ ಎಂದಿದ್ದಾರೆ.
ಪ್ರತಿ ತಿಂಗಳು 200 ಯೂನಿಟ್​ವರೆಗೆ ಮನೆ ಬಳಕೆಗೆ ಉಚಿತ ವಿದ್ಯುತ್ ಪಡೆಯುವ ಗೃಹಜ್ಯೋತಿ ಯೋಜನೆ ಜುಲೈ 1ರಿಂದ ಲಾಗು ಆಗಲಿದೆ. ಈ ಯೋಜನೆಯ ಫಲಾನುಭವಿಗಳಾಗಲು ಜೂ.18ರಂದು ಆನ್​ಲೈನ್ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆರಂಭಿಕ ದಿನಗಳಲ್ಲಿ ಹಲವು ಗೊಂದಲಗಳಿದ್ದು ಅದನ್ನು ಸರಿಪಡಿಸಿದ ಬಳಿಕ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆದಿದೆ. ನೋಂದಾಯಿತ ಅರ್ಹರಿಗೆ ಆಗಸ್ಟ್ ತಿಂಗಳಿನಲ್ಲಿ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಸರ್ಕಾರ ನಿಗದಿಪಡಿಸಿರುವ ವಿದ್ಯುತ್ ಬಳಕೆ ಮಿತಿ ದಾಟಿದರೆ ಹೆಚ್ಚುವರಿಯಾಗಿ ಬಳಸಿದ ವಿದ್ಯುತ್​ಗೆ ಮಾತ್ರ ಶುಲ್ಕ ಕಟ್ಟಬೇಕಾಗುತ್ತದೆ. 200 ಯೂನಿಟ್ ದಾಟಿದರೆ ಪೂರ್ಣ 200 ಯೂನಿಟ್​ಗೆ ಬಿಲ್ ಕಟ್ಟಬೇಕಾಗುತ್ತದೆ. ಬಾಡಿಗೆ ಮನೆಯಲ್ಲಿರುವವರಿಗೂ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ.
ಫಲಾನುಭವಿಗಳಿಗೆ ತಲುಪಿಸಬೇಕಾದ ಹಣವನ್ನು ಶನಿವಾರದಿಂದಲೇ ಹಂತಹಂತವಾಗಿ ಅವರ ಖಾತೆಗೆ ವರ್ಗಾಯಿಸಲಾಗುತ್ತದೆ. ಅಕ್ಕಿ ದಾಸ್ತಾನು ಸಂಗ್ರಹವಾಗುವವರೆಗೆ ಮಾತ್ರ ಹಣ ನೀಡುತ್ತೇವೆ. ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣ ನೀಡಲಾಗುವುದು. ಎಷ್ಟು ತಿಂಗಳು ಅಕ್ಕಿ ಬದಲಿಗೆ ಹಣ ನೀಡಲಾಗುವುದು ಎಂಬುದನ್ನು ಈಗಲೇ ಹೇಳುವುದಿಲ್ಲ. ಇದು ಅಕ್ಕಿ ಪೂರೈಕೆಯಾಗದ ಕಾರಣ ತಾತ್ಕಾಲಿಕ ವ್ಯವಸ್ಥೆ ಮಾತ್ರ ಎಂದು ಸ್ಪಷ್ಟಪಡಿಸಿದ ಅವರು, ಬಿಪಿಎಲ್ ಕಾರ್ಡ್​ದಾರರ ಪೈಕಿ ಶೇ.90ರಷ್ಟು ಮಂದಿಯ ಬ್ಯಾಂಕ್ ಖಾತೆ ಇರುವ ಮಾಹಿತಿ ನಮ್ಮಲ್ಲಿದೆ. ಒಬ್ಬರಿಗೆ ಐದು ಕೆಜಿಯಂತೆ 170 ರೂಪಾಯಿ ಕೊಡುತ್ತೇವೆ ಎಂದು ಹೇಳಿದರು. ಸಿಎಂ ಕೂಡ ಧಾನ್ಯ ಕೊಡುತ್ತೇವೆ ಎಂದಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ರಾಗಿ ಕೊಡುತ್ತೇವೆ. ಉತ್ತರ ಕರ್ನಾಟಕ ಭಾಗಕ್ಕೆ ಜೋಳ ಕೊಡುತ್ತೇವೆ. ರಾಗಿ ದಾಸ್ತಾನು ಇದೆ, ಜೋಳ ದಾಸ್ತಾನು ಇಲ್ಲ. ದಾಸ್ತಾನು ಆದ ಬಳಿಕ ಧಾನ್ಯಗಳ ಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದರು.
ಬೆಂಗಳೂರು: ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಜುಲೈ 4ರಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಮ್ಮ ನೂರಾರು ಕಾರ್ಯಕರ್ತರು ಬೆಳಗ್ಗೆಯಿಂದ ಸಂಜೆವರೆಗೆ ಒಂದು ದಿನ ಸತ್ಯಾಗ್ರಹ ಮಾಡಲಿದ್ದಾರೆ. ಬಿಜೆಪಿ ಚುನಾಯಿತ ಪ್ರತಿನಿಧಿಗಳು ಸದನದ ಒಳಗೂ ಹೋರಾಟ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸಿದ್ದರಾಮಯ್ಯ, ಶಿವಕುಮಾರ್ ಮನೆಮನೆಗೆ ಹೋಗಿ ಸಹಿ ಮಾಡಿ ಕೊಟ್ಟ ಗ್ಯಾರಂಟಿ ಕಾರ್ಡಿನ ಅಂಶಗಳನ್ನು ಚಾಚೂತಪ್ಪದೆ ಅನುಷ್ಠಾನಕ್ಕೆ ತರಬೇಕು. ಕೊಟ್ಟ ಭರವಸೆಯಂತೆ 10 ಕೆಜಿ ಅಕ್ಕಿ ಕೊಡಬೇಕು. ಎಲ್ಲ ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ರೂ. ಭತ್ಯೆ, ಡಿಪ್ಲೊಮಾ ಉತ್ತೀರ್ಣ ನಿರುದ್ಯೋಗಿಗಳಿಗೆ 1,500 ರೂ. ಕೊಡಬೇಕು, 200 ಯೂನಿಟ್ ಕರೆಂಟ್ ಕೊಡಲೇಬೇಕು. ಇದಕ್ಕೆ ವಿಧಿಸಿರುವ ಷರತ್ತುಗಳನ್ನು ರದ್ದು ಮಾಡಬೇಕು. ಎಲ್ಲ ಮಹಿಳೆಯರಿಗೆ 2 ಸಾವಿರ ರೂ. ಕೊಡಬೇಕು. ವಿದ್ಯುತ್ ದರ ಏರಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸುವುದಾಗಿ ಯಡಿಯೂರಪ್ಪ ತಿಳಿಸಿದರು.
ಬೆಂಬಲ ಬೆಲೆ ನೀಡಿ ಖರೀದಿ:ಮುಂದಿನ ದಿನಗಳಲ್ಲಿ ಬೆಂಬಲ ಬೆಲೆ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ ಜೋಳ ಅಥವಾ ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುವ ಉದ್ದೇಶವಿದೆ. ತಕ್ಷಣಕ್ಕೆ ಕೇಂದ್ರ ಸರ್ಕಾರ ಮನಸ್ಸು ಬದಲಾಯಿಸಿ ಅಕ್ಕಿ ಕೊಟ್ಟರೆ ಹಂಚಿಕೆ ಮಾಡುತ್ತೇವೆ. ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದೆ. ಇಲ್ಲವೆ ಟೆಂಡರ್ ಕರೆದು ಅಕ್ಕಿ ಖರೀದಿ ಮಾಡುತ್ತೇವೆ ಎಂದು ಮುನಿಯಪ್ಪ ಹೇಳಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − eight =
Remember me
