
|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಕಳೆದ ವರ್ಷದ (2021-22) ರಾಜ್ಯ ಬಜೆಟ್ ಭಾಷಣದ ಮೇಲೆ ತೆಗೆದುಕೊಂಡಿರುವ ಕ್ರಮಗಳ ವರದಿಯನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡಿದ್ದು, ಅನೇಕ ಸ್ವಾರಸ್ಯಕರ ಅಂಶ ಕಂಡುಬಂದಿದೆ. 30ಕ್ಕಿಂತ ಹೆಚ್ಚು ಯೋಜನೆ, ಕಾರ್ಯಕ್ರಮಗಳು ಇನ್ನೂ ಪರಿಶೀಲನಾ ಹಂತದಲ್ಲೇ ಉಳಿದಿವೆ. ಕೆಲವು ಘೋಷಣೆಗಳನ್ನು ಸರ್ಕಾರಕ್ಕೆ ಹಿಂದಕ್ಕೆ ಪಡೆದುಕೊಂಡಿದೆ, ಮತ್ತೆ ಕೆಲವು ಇನ್ನೂ ಪ್ರಕ್ರಿಯೆ ಹಂತದಲ್ಲೇ ಇದೆ. ಬಜೆಟ್ ಘೋಷಣೆ ಬಳಿಕ ಆದೇಶ ಮಾಡಲು ಸಾಮಾನ್ಯವಾಗಿ 6ರಿಂದ 8 ತಿಂಗಳು ತೆಗೆದುಕೊಳ್ಳಲಾಗಿದೆ. ಒಂದಷ್ಟನ್ನು 2022ರ ಬಜೆಟ್ ಮಂಡನೆಗೆ ಒಂದು ತಿಂಗಳ ಮೊದಲು ಆದೇಶಿಸಲಾಗಿದೆ. ಈ ಮೂಲಕ ಸರ್ಕಾರ ಬೇರೆ ವಿಚಾರಕ್ಕೆ ನೀಡಿದ ಆದ್ಯತೆಯನ್ನು ತನ್ನ ಘೋಷಣೆಯ ಅನುಷ್ಠಾನಕ್ಕೆ ತೋರಿಸಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಒಂದಷ್ಟು ಉದಾಹರಣೆ ನೀಡುವುದಾದರೆ, ನಗರ ಪ್ರದೇಶದ ಉದ್ಯೋಗಸ್ಥ ಮಹಿಳೆಯರ ಮಕ್ಕಳ ಆರೈಕೆಗೆ ನೆರವಾಗಲು ಮಹಾನಗರಗಳಲ್ಲಿರುವ ಅಂಗನವಾಡಿಗಳನ್ನು ಹಂತಹಂತವಾಗಿ ಶಿಶುಪಾಲನಾ ಕೇಂದ್ರಗಳಾಗಿ ಉನ್ನತೀಕರಿಸಲಾಗುವುದು ಸರ್ಕಾರ ಬಜೆಟ್​ನಲ್ಲಿ ಘೋಷಿಸಿತ್ತು, ಆದರೆ ಈ ಬಗ್ಗೆ ಆಡಳಿತಾತ್ಮಕ ಆದೇಶ ಹೊರಡಿಸಿದ್ದು 2022ರ ಫೆ.21ರಂದು. ಅಂದರೆ ಮುಂದಿನ ಸಾಲಿನ ಬಜೆಟ್ ಮಂಡನೆಗೆ ಹತ್ತು ದಿನ ಮುನ್ನ. ಅದೇ ರೀತಿ ಜಿಲ್ಲಾ ಕೇಂದ್ರಗಳಲ್ಲಿ ತಲಾ ಎರಡು ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಶಿಶುಪಾಲನಾ ಕೇಂದ್ರ ತೆರೆಯುವ ಉದ್ದೇಶ ಹೊಂದಿದ್ದರು, ಇದರ ಅನುಷ್ಠಾನ ಮಾಡಲು 25 ದಿನಗಳ ಹಿಂದಷ್ಟೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಲೈಸೆನ್ಸ್ ಪಡೆದು ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರಿಗೆ ಉತ್ತೇಜನ ನೀಡಲು, ಪ್ರಾಂಗಣದಲ್ಲಿನ ನಿವೇಶನ, ಗೋದಾಮು, ಅಂಗಡಿ, ಹಂಚಿಕೆಯಲ್ಲಿ ಶೇ.10 ಮೀಸಲಾತಿ ಕಲ್ಪಿಸುವುದಾಗಿ ಸಿಎಂ ಘೋಷಿಸಿದ್ದರು. ಘೋಷಣೆ ಅನುಷ್ಠಾನಕ್ಕೆ ಅಗತ್ಯ ಕಾನೂನು ತಿದ್ದುಪಡಿ ಮಾಡಬೇಕಿದ್ದು, ಪ್ರಸ್ತುತ ಕರಡು ರಚನಾ ಇಲಾಖೆಯು ಪರಿಶೀಲಿಸಿ ನೀಡಿದ್ದು, ಕರಡು ಅಧಿಸೂಚನೆ ಹೊರಡಿಸಲು ಕ್ರಮಕೈಗೊಳ್ಳಲಾಗುತ್ತಿದೆ. ರಾಜ್ಯದ ಸ್ವ-ಸಹಾಯ ಗುಂಪುಗಳು ಮತ್ತು ಅವುಗಳ ಒಕ್ಕೂಟ ಬಲಪಡಿಸಲು ಸ್ವಸಹಾಯ ಗುಂಪುಗಳ ನೀತಿ ರೂಪಿಸಲಾಗುತ್ತಿದೆ, ಈ ನೀತಿ ಮೂಲಕ ಪ್ರಯೋಜನಗಳ ಪುನರಾವರ್ತನೆಯನ್ನು ತಪ್ಪಿಸಲು ಎಲ್ಲ ಸ್ವಸಹಾಯ ಗುಂಪುಗಳನ್ನು ಜೀವನೋಪಾಯ ಅಭಿಯಾನದಡಿ ತರಲಾಗುವುದೆಂದು ಸರ್ಕಾರ ಹೇಳಿ ಬರೋಬ್ಬರಿ ಒಂದು ವರ್ಷ ಕಳೆದಿದೆ. ಪ್ರಸ್ತುತ ಕರಡು ನೀತಿ ರೂಪಿಸುವ ಪ್ರಕ್ರಿಯೆ ನಡೆದಿದೆ. ಅಗತ್ಯ ಇರುವ ತಂತ್ರಾಂಶ ತಯಾರಿಸಲು ಕ್ರಮವಹಿಸಲಾಗುತ್ತಿದೆ. ರಾಜ್ಯಾದ್ಯಂತ ಸುವಾಸನೆಯುಕ್ತ ಮತ್ತು ವೈದ್ಯಕೀಯ ಗಿಡಗಳು, ಹಣ್ಣು ಹಂಪಲು, ತರಕಾರಿಗಳು, ಸಂಬಾರ ಪದಾರ್ಥಗಳಿಗಾಗಿ ಹೊಸ ಕೃಷಿ ರಫ್ತು ವಲಯ ಸ್ಥಾಪಿಸಲಾಗುವುದು. ಈ ರಫ್ತಿಗೆ ಅನುವಾಗುವಂತೆ ರಾಜ್ಯದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗುವುದೆಂದು ಹೇಳಲಾಗಿತ್ತು, ಪ್ರಸ್ತಾವನೆ ಇನ್ನೂ ಪರಿಶೀಲನಾ ಹಂತದಲ್ಲೇ ಇದೆ.
ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಆಲದಹಳ್ಳಿ ಗ್ರಾಮದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಒಣಮೆಣಸಿನಕಾಯಿ ಮಾರುಕಟ್ಟೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಬೇಕಿತ್ತು, ಇನ್ನೂ ಪ್ರಸ್ತಾವನೆ ಸಲ್ಲಿಸುವ, ಒಪ್ಪಿಗೆ ನೀಡುವ ಹಂತದಲ್ಲೇ ಇದೆ. ಎಲ್ಲ ಏತ ನೀರಾವರಿ ಯೋಜನೆಗಳ ವ್ಯವಸ್ಥಿತ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಸೂಕ್ತ ಮಾರ್ಗಸೂಚಿಗಳೊಂದಿಗೆ ಕಾರ್ಯನೀತಿ ರೂಪಿಸುವುದಾಗಿ ವರ್ಷದ ಹಿಂದೆ ಘೋಷಿಸಲಾಗಿತ್ತು. ಪ್ರಸ್ತುತ ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಕರಡು ನೀತಿ ಅಂತಿಮಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎನ್​ಎಬಿಎಲ್ ಮಾನಕಗಳಿಗೆ ಅನುಸಾರವಾಗಿ ರಾಜ್ಯದಲ್ಲಿ 4 ಪ್ರಾದೇಶಿಕ ಆಹಾರ ಸುರಕ್ಷತಾ ಪ್ರಯೋಗಾಲಯಗಳನ್ನು 2 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಘೋಷಣೆ, ಇನ್ನು ಪರಿಶೀಲನೆಯಲ್ಲಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರೊಂದಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಮತ್ತು ಸರಕು ಸಾಗಿಸಲು ಅನುಕೂಲವಾಗುವಂತೆ ಮಂಗಳೂರು ಮತ್ತು ಪಣಜಿ ನಡುವೆ ಜಲಮಾರ್ಗ ಅಭಿವೃದ್ಧಿಪಡಿಸಬೇಕಿತ್ತು, ಸದ್ಯಕ್ಕೆ ಕಾರ್ಯಸಾಧ್ಯತಾ ವರದಿ ತಯಾರಿಸಲು ಸೂಕ್ತ ಸಮಾಲೋಚಕರನ್ನು ನೇಮಿಸುವ ಬಗ್ಗೆ ಚರ್ಚೆ ನಡೆದಿದ್ದು, ಇನ್ನೂ ಚಿಂತನಾ ಹಂತದಲ್ಲೇ ಇದೆ. ಪೀಣ್ಯಾ ಕೈಗಾರಿಕಾ ಟೌನ್​ಶಿಪ್ ಸ್ಥಾಪಿಸಲು ಮೂಲಸೌಕರ್ಯಕ್ಕೆ 100 ಕೋಟಿ ರೂ. ಘೋಷಿಸಿದ್ದರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಸ್ಮಾರ್ಟ್ ಹ್ಯಾಂಡ್​ಲೂಮ್ ಡಿಸೈನ್ ಸ್ಟುಡಿಯೋ ಕೂಡ ಪ್ರಸ್ತಾವನೆ ಹಂತದಲ್ಲೇ ಉಳಿದಿದೆ.
ಎಲ್ಲಿ ಚಾರ್ಜಿಂಗ್ ಪಾಯಿಂಟ್?:ರಾಜ್ಯದ ವಿದ್ಯುತ್ ವಾಹನಗಳ ಬಳಕೆಯನ್ನು ಉತ್ತೇಜಿಸಲು 1000 ಚಾರ್ಜಿಂಗ್ ಕೇಂದ್ರ ಸ್ಥಾಪನೆ ಘೋಷಿಸಿತ್ತು. ಇದೀಗ ಸ್ಮಾರ್ಟ್​ಸಿಟಿ ಗೊಳಪಟ್ಟ ಜಿಲ್ಲೆಗಳು, ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಆದ್ಯತೆ ನೀಡಿ ಪರಿಷ್ಕೃತ ಕ್ರಿಯಾಯೋಜನೆ ತಯಾರಿಸಲಾಗಿದೆ. 8 ಜಿಲ್ಲೆಗಳಲ್ಲಿ ಒಟ್ಟು 600ಕ್ಕೂ ಹೆಚ್ಚಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಮ್ಯಾಪ್ ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಹಾಸನ, ಮಂಡ್ಯದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ 100 ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸುವುದು, ಕಲಬುರಗಿಯಲ್ಲಿ ಸುಟ್ಟ ಗಾಯ ಚಿಕಿತ್ಸಾ ಕೇಂದ್ರ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗ, ದಾವಣಗೆರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪ ಕೇಂದ್ರ ತೆರೆಯುವುದು, ಬೆಂಗಳೂರಿನ 57 ವಾರ್ಡ್​ಗಳಲ್ಲಿ ಜನಾರೋಗ್ಯ ಕೇಂದ್ರ ಸ್ಥಾಪನೆ, ಉತ್ತರ ಬೆಂಗಳೂರಿನಲ್ಲಿ ವಲಸೆ ಕಾರ್ವಿುಕರಿಗಾಗಿ ಹೊಸ ಮಲ್ಟಿ ಸ್ಪೆಷಾಲಿಸಿ ಆಸ್ಪತ್ರೆ ಮಾಡುವುದು ಇನ್ನೂ ಪರಿಶೀಲನೆ ಘಟ್ಟದಲ್ಲೇ ಉಳಿದುಹೋಗಿದೆ. ನವಜಾತ ಶಿಶುಗಳಲ್ಲಿ ಅನುವಂಶೀಯತೆ ಮೆಟಾಬಾಲಿಕ್ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಲು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಪ್ರಯೋಗಾಲಯಗಳನ್ನು 10 ಕೋಟಿ ವೆಚ್ಚದಲ್ಲಿ ಸ್ಥಾಪಿಸಬೇಕಿತ್ತು, ಇನ್ನೂ ಪ್ರಸ್ತಾವನೆ ಸಿದ್ಧವಾಗಿಲ್ಲ. ಬೆಂಗಳೂರು, ಮೈಸೂರು, ಬಳ್ಳಾರಿ, ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ತುರ್ತು ಚಿಕಿತ್ಸಾ ವಿಭಾಗ ಪ್ರಾಂಭಿಸುವ ಪ್ರಸ್ತಾವನೆ ಪರಿಶೀಲನಾ ಹಂತದಲ್ಲೇ ಕುಗುರುತ್ತಿದೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 1 =
Remember me
