ರಾಜ್ಯಾದ್ಯಂತ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು ಒಂದು ಲಕ್ಷ ಹೊರಗುತ್ತಿಗೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಸಚಿವಾಲಯದಲ್ಲೇ ಇವರ ಸಂಖ್ಯೆ ಸುಮಾರು ಮೂರು ಸಾವಿರ. ಎರಡೂವರೆ ಲಕ್ಷದಷ್ಟು ಸರ್ಕಾರಿ ಹುದ್ದೆಗಳು ಭರ್ತಿಯಾಗದೇ ಉಳಿದಿದ್ದರೂ ಅವುಗಳನ್ನು ತುಂಬಲು ಆಸಕ್ತಿ ತೋರಿಸದ ಸರ್ಕಾರ, ಹೊರಗುತ್ತಿಗೆ ನೌಕರರ ನೇಮಕಾತಿಗೆ ಮಾತ್ರ ‘ರಾಜಮಾರ್ಗ’ವನ್ನೇ ತೆರೆದಿದೆ. ಇತ್ತೀಚೆಗೆ ಆ ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಪಾಲಿಸಬೇಕೆಂದು ಖಾಸಗಿ ಸಂಸ್ಥೆಗಳಿಗೆ ಆದೇಶ ನೀಡಿದೆ. ಇದರ ಹಿಂದಿನ ಉದ್ದೇಶ ಒಳ್ಳೆಯದಾಗಿದ್ದರೂ ಅನುಷ್ಠಾನದಲ್ಲಿ ವ್ಯತ್ಯಾಸಗಳಾಗುವ ಸಾಧ್ಯತೆ ಇದೆ.
ಉದಾಹರಣೆಗೆ, 20ಕ್ಕಿಂತ ಹೆಚ್ಚು ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವಾಗ ಮಾತ್ರ ಈ ಮೀಸಲಾತಿಯನ್ನು ಅನ್ವಯಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಒಂದು ಇಲಾಖೆಗೆ ಹೆಚ್ಚಿನ ಸಿಬ್ಬಂದಿಯ ಅವಶ್ಯಕತೆ ಇದ್ದರೂ ಕಂತುಕಂತಿನಲ್ಲಿ 20ಕ್ಕಿಂತ ಕಡಿಮೆ ಹುದ್ದೆಗಳನ್ನು ಹಲವು ಬಾರಿ ನೇಮಕಾತಿ ಮಾಡಿಕೊಂಡು ಈ ಸರ್ಕಾರಿ ಆದೇಶದ ಸದುದ್ದೇಶಕ್ಕೆ ಎಳ್ಳುನೀರು ಬಿಡುವ ಸಾಧ್ಯತೆ ಇದೆ. ಅಧಿಕಾರಿಗಳು ಮತ್ತು ಖಾಸಗಿ ನೇಮಕಾತಿ ಏಜೆನ್ಸಿಗಳು ಶಾಮೀಲಾಗಿ ‘ರಂಗೋಲಿ ಕೆಳಗೆ ನುಸುಳುವ’ ಇಂತಹ ಕೃತ್ಯಗಳಿಗೆ ಮುಂದಾಗುವುದಿಲ್ಲ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಹಾಗಾಗಿ ಈ ಹೊರಗುತ್ತಿಗೆ ಮೀಸಲಾತಿ ಆದೇಶಕ್ಕೆ ಪೂರಕವಾಗಿ ವಿಸõತ ನಿಯಮಗಳನ್ನು ರೂಪಿಸುವಾಗ ಇಂತಹ ಅಪಸವ್ಯಗಳಾಗದಂತೆ ಎಚ್ಚರ ವಹಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಹೊರಗುತ್ತಿಗೆ ನೇಮಕಾತಿ ಆರಂಭವಾಗಲು ಮೂಲ ಕಾರಣ- ಆಡಳಿತ ವೆಚ್ಚ ತಗ್ಗಿಸಬೇಕೆಂಬ ವಿಶ್ವಬ್ಯಾಂಕ್​ನ ಸಲಹೆ.
ಇದನ್ನನುಸರಿಸಿ ಖಾಸಗಿ ನೇಮಕಾತಿ ಏಜೆನ್ಸಿಗಳು ರಾಜ್ಯದಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಇವುಗಳ ನೈಜ ಸಂಖ್ಯೆ ಒತ್ತಟ್ಟಿಗಿರಲಿ, ಒಟ್ಟಾರೆ ರಾಜ್ಯದಲ್ಲಿ ಎಷ್ಟು ಹೊರಗುತ್ತಿಗೆ ನೌಕರರು ರಾಜ್ಯ ಸರ್ಕಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅಂಕಿ ಅಂಶ ಕೂಡ ಲಭ್ಯವಿಲ್ಲ. ಎಷ್ಟೋ ಬಾರಿ ವಾಸ್ತವದಲ್ಲಿ ಕಡಿಮೆ ನೌಕರರನ್ನು ನೇಮಕ ಮಾಡಿಕೊಂಡು, ದಾಖಲಾತಿಗಳಲ್ಲಿ ಹೆಚ್ಚು ನೌಕರರನ್ನು ನೇಮಕ ಮಾಡಿಕೊಂಡಿರುವಂತೆ ತೋರಿಸಲಾಗುತ್ತದೆ. ಅದರಿಂದ ಬರುವ ಹೆಚ್ಚುವರಿ ಹಣವನ್ನು ಹಂಚಿಕೊಳ್ಳಲಾಗುತ್ತದೆ. ಇದು ಹೆಚ್ಚಾಗಿ ಆ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಮಾತ್ರ ಗೊತ್ತಿರುತ್ತದೆ. ಕೆಳಮಟ್ಟದ ಸಿಬ್ಬಂದಿಗಾಗಲಿ, ಹೊರಗಿನವರಿಗಾಗಲಿ ಗಮನಕ್ಕೆ ಬರುವುದೇ ಇಲ್ಲ. ಅಷ್ಟರಮಟ್ಟಿಗೆ ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಗಳವರು ಕೈಜೋಡಿಸಿದ್ದಾರೆ. ಕೆಲವು ಅಧಿಕಾರಿಗಳಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಾವೇ ಬೇನಾಮಿ ಹೆಸರಿನಲ್ಲಿ ಹೊರಗುತ್ತಿಗೆ ನೇಮಕಾತಿ ಏಜೆನ್ಸಿ ನಡೆಸುತ್ತಿರುವ ಆರೋಪವೂ ಇದೆ. ಈ ಏಜೆನ್ಸಿಗಳಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ಅಂದಾಜು 200 ಕೋಟಿ ರೂ. ಪಾವತಿಸುತ್ತಿದೆ. ಇದೆಲ್ಲವೂ ಸರ್ಕಾರಕ್ಕೆ ಗೊತ್ತಿಲ್ಲದ ವಿಷಯವೇನಲ್ಲ. ಈ ಅಂಧಾದುಂಧಿ ವ್ಯವಹಾರಕ್ಕೆ ಕಡಿವಾಣ ಹಾಕಬೇಕೆಂದರೆ ಕಾರ್ವಿುಕ ಇಲಾಖೆಯಿಂದ 2018ರಲ್ಲಿ ರೂಪಿಸಿದ್ದ ‘ಕರ್ನಾಟಕ ಖಾಸಗಿ ನೇಮಕಾತಿ ಏಜೆನ್ಸಿಗಳು’ ಅಧಿನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಆಗ ಮಾತ್ರ ಖಾಸಗಿ ಏಜೆನ್ಸಿಗಳ ಆಟಾಟೋಪಕ್ಕೆ ಸ್ವಲ್ಪವಾದರೂ ಕಡಿವಾಣ ಹಾಕಲು ದಾರಿಯಾಗುತ್ತದೆ. ಸರ್ಕಾರಕ್ಕೆ ಆಗುವ ನಷ್ಟವನ್ನು ತಪ್ಪಿಸಲು ಸಾಧ್ಯವಾಗುತ್ತದೆ.
ತಮಿಳುನಾಡಿನ ಭಾರೀ ವರ್ಷಧಾರೆ: ಪಥನಾಂತಿಟ್ಟ, ಇಡುಕ್ಕಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 17 =
Remember me
