ಮಂಗಳೂರು:ಬಿಜೈ ಬಳಿಯ ಅಪಾರ್ಟ್‌ಮೆಂಟೊಂದರ ಆವರಣ ಗೋಡೆಯಲ್ಲಿ ಉಗ್ರ ಸಂಘಟನೆ ಪರ ಬರಹ ಪತ್ತೆಯಾದ ಬೆನ್ನಲ್ಲೇ ನ್ಯಾಯಾಲಯದ ಆವರಣದಲ್ಲಿರುವ ಹಳೇ ಪೊಲೀಸ್ ಹೊರಠಾಣೆ ಕಟ್ಟಡದಲ್ಲಿ ಭಾನುವಾರ ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಕಾಣಿಸಿಕೊಂಡಿದೆ. ದುಷ್ಕರ್ಮಿಗಳ ನಿರಂತರ ಕೃತ್ಯ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಉರ್ದು ಭಾಷೆಯಲ್ಲಿ  “Gustuk e Rasool ek hi saza sar tan say juda’  ಅಂದರೆ, ‘ಪ್ರವಾದಿಯನ್ನು ನಿಂದಿಸಿದರೆ ಒಂದೇ ಶಿಕ್ಷೆ, ತಲೆಯನ್ನು ದೇಹದಿಂದ ಬೇರ್ಪಡಿಸುವುದು’ ಎಂದು ಬರೆಯಲಾಗಿದೆ. ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗಿನ ಅವಧಿಯಲ್ಲಿ ಉಗ್ರ ಮನಸ್ಸು ಹೊಂದಿರುವ ದುಷ್ಕರ್ಮಿಗಳು ಬರೆದಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಇಂತಹ ವಿವಾದಾತ್ಮಕ ವಾಕ್ಯಗಳನ್ನು ಬರೆಯುವ ಮೂಲಕ ನ್ಯಾಯ ವ್ಯವಸ್ಥೆಯನ್ನೇ ಅಣಕಿಸಿದಂತಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಬಂದರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬರಹವನ್ನು ಅಳಿಸಿದ್ದಾರೆ. ಜಿಲ್ಲಾ ನ್ಯಾಯಾಲಯದ ಚೀಫ್ ಅಡ್ವೋಕೇಟ್ ಆಫೀಸರ್ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕೋರ್ಟ್ ಪರಿಸರದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ.
ಒಂದೇ ತಂಡದ ಕೃತ್ಯ ಶಂಕೆ:ದುಷ್ಕರ್ಮಿಗಳು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶದಿಂದ ಇಂತಹ ದೇಶ ವಿರೋಧಿ ಬರಹ ಬರೆಯುತ್ತಿದ್ದು, ಇದರ ವಿರುದ್ಧ ವಿವಿಧ ಸಂಘಟನೆಗಳು, ಸಾರ್ವಜನಿಕರಿಂದ ಖಂಡನೆ ವ್ಯಕ್ತವಾಗಿದೆ. ಎರಡು ದಿನಗಳ ಹಿಂದೆ ಅಪಾರ್ಟ್‌ಮೆಂಟ್‌ನ ಆವರಣ ಗೋಡೆಯಲ್ಲಿ ಬರೆದ ದುಷ್ಕರ್ಮಿಗಳ ತಂಡವೇ ಅಥವಾ ಬೇರೆ ತಂಡ ಈ ಕೃತ್ಯ ಎಸಗಿದ್ದಾರೆಯೇ ಎಂಬುದು ಇನ್ನಷ್ಟೇ ತನಿಖೆಯಿಂದ ತಿಳಿಯಬೇಕಾಗಿದೆ. ಸರ್ಕ್ಯೂಟ್ ಹೌಸ್‌ನಿಂದ ಬಿಜೈಗೆ ಬರುವ ಕದ್ರಿ ಕಂಬಳ ಕ್ರಾಸ್ ಬಳಿ ಇರುವ ಅಪಾರ್ಟ್‌ಮೆಂಟ್ ಆವರಣದಲ್ಲಿ ಲಷ್ಕರ್ ಇ ತೊಯ್ಬ ಉಗ್ರ ಸಂಘಟನೆಯನ್ನು ಮಂಗಳೂರಿಗೆ ಕರೆಸುವ ಬೆದರಿಕೆ ಬರಹವನ್ನು ಬರೆಯಲಾಗಿತ್ತು. ಶುಕ್ರವಾರ ಬೆಳಗ್ಗೆ ಈ ಬರಹ ಬೆಳಕಿಗೆ ಬಂದಿತ್ತು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಆರೋಪಿಗಳ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ಸುಳಿವು ಲಭಿಸಿಲ್ಲ. ಈ ನಡುವೆ, ಇದೇ ರೀತಿಯ ಇನ್ನೊಂದು ಬರಹ ಪತ್ತೆಯಾಗುವ ಮೂಲಕ ಮಂಗಳೂರು ನಗರದಲ್ಲಿ ತೀವ್ರ ಆತಂಕ ಉಂಟಾಗಿದೆ.
ನಾಲ್ಕು ತಂಡಗಳಿಂದ ತನಿಖೆ:ಕದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂರು ತಂಡಗಳಾಗಿ ತನಿಖೆ ನಡೆಸುತ್ತಿದ್ದಾರೆ. ಕೇಂದ್ರ ಉಪವಿಭಾಗ ಎಸಿಪಿ ಜಗದೀಶ್ ನೇತೃತ್ವದ ತಂಡ, ಕದ್ರಿ ಪೊಲೀಸ್ ಇನ್‌ಸ್ಪೆಕ್ಟರ್ ಸವಿತ್ರ ತೇಜ ನೇತೃತ್ವದ ತಂಡ, ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ಹಾಗೂ ನ್ಯಾಯಾಲಯದ ಆವರಣದಲ್ಲಿ ಪತ್ತೆಯಾದ ವಿವಾದಾತ್ಮಕ ಬರಹಕ್ಕೆ ಸಂಬಂಧಿಸಿ ಬಂದರು ಇನ್‌ಸ್ಪೆಕ್ಟರ್ ಗೋವಿಂದರಾಜು ನೇತೃತ್ವದ ಪೊಲೀಸ್ ತಂಡ ಆರೋಪಿಗಳ ಪತ್ತೆ ಕಾರ್ಯಾಚರಣೆಗೆ ಬಲೆ ಬೀಸಿವೆ. ಸಿಸಿ ಕ್ಯಾಮರಾ ಪರಿಶೀಲನೆ ಸೇರಿದಂತೆ ತಾಂತ್ರಿಕತೆ ಬಳಸಿಕೊಂಡು ಆರೋಪಿಗಳ ಪತ್ತೆಗೆ ಶ್ರಮಿಸುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಂಗಳೂರು ನಗರದ ಕೆಲವೆಡೆ ಪ್ರಚೋದನಕಾರಿ ಗೋಡೆ ಬರಹಗಳು ಕಂಡು ಬಂದಿರುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಇಂತಹ ಅಪರಾಧ ನಿಯಂತ್ರಣ ಅಗತ್ಯ. ಯಾರಾದರೂ ಈ ರೀತಿಯ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದರೆ ಸಾರ್ವಜನಿಕರು ಡಿಸಿಪಿಗಳ ಮೊಬೈಲ್ ಸಂಖ್ಯೆ 9480802304, 9480802305 ಅಥವಾ ನಿಯಂತ್ರಣ ಕೊಠಡಿ 0824-2220800ಗೆ ತಿಳಿಸಬೇಕು. ಮಾಹಿತಿದಾರರ ಪರಿಚಯ ಗೌಪ್ಯವಾಗಿಡಲಾಗುವುದು. ಅಪರಾಧ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿ ಅಥವಾ ಸಂಘಟನೆ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು.– ವಿಕಾಶ್ ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
