ಬೆಂಗಳೂರು:ರಾಜ್ಯದಲ್ಲಿ ಗೋಹತ್ಯೆ ನಿಷೇಧವನ್ನು ತಡಮಾಡದೆ ಜಾರಿಗೊಳಿಸಲು ಬಯಸಿರುವ ಯಡಿಯೂರಪ್ಪ ಸರ್ಕಾರ ನಿರೀಕ್ಷೆಯಂತೆ ಸುಗ್ರೀವಾಜ್ಞೆ ತರಲು ನಿರ್ಧರಿಸಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ದೊರೆತಿದ್ದು, ಮಂಗಳವಾರವೇ ರಾಜಭವನಕ್ಕೆ ರವಾನೆಯಾಗಲಿದೆ. ರಾಜ್ಯಪಾಲರ ಅಂಕಿತ ಬೀಳುತ್ತಿದ್ದಂತೆಯೇ ರಾಜ್ಯದಲ್ಲಿ ಹೊಸ ನಿಯಮಗಳು ಜಾರಿಯಾಗಲಿವೆ.
ಮುಂಬರುವ ಅಧಿವೇಶನದಲ್ಲೇ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಲು ಉದ್ದೇಶಿಸಿರುವ ಸರ್ಕಾರ ಜನವರಿ ಮೂರನೇ ವಾರದಲ್ಲಿ ಜಂಟಿ ಅಧಿವೇಶನ ಹಾಗೂ ಫೆಬ್ರವರಿ ಕೊನೆಯಲ್ಲಿ ಬಜೆಟ್ ಅಧಿವೇಶನ ನಡೆಸಲು ಸಿದ್ಧತೆ ನಡೆಸಿದೆ. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. ಗೋಹತ್ಯೆ ನಿಷೇಧ ಕಾಯ್ದೆ ಈಗಾಗಲೇ ಅಸ್ತಿತ್ವದಲ್ಲಿದೆ. ಈ ಕಾಯ್ದೆಗೆ ಹೊಸ ರೂಪ ಕೊಡಲಾಗಿದೆ ಅಷ್ಟೆ. ಹಿಂದಿನ ಕಾಯ್ದೆಯಲ್ಲಿ ಒಂದಷ್ಟು ಬದಲಾವಣೆ ಮಾಡಲಾಗಿದೆ. ಅದೇಕೆ ಕೆಲವರು ವಿರೋಧ ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ ಎಂದರು. ಗಂಡು ಕರುವನ್ನು ಸಾಕಲು ಆಗದವರು ಅದನ್ನು ಗೋಶಾಲೆಗೆ ತಂದು ಬಿಡಬಹುದು. ಅಂಥ ಗೋವುಗಳನ್ನು ಸರ್ಕಾರವೇ ನಿರ್ವಹಣೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.
ಗೋ ಹತ್ಯೆ ನಡೆಯಬಾರದೆಂಬುದು ಗಾಂಧೀಜಿ ಆಶಯ. ಇದು ಕೇವಲ ಸಂಘ ಪರಿವಾರ, ಬಿಜೆಪಿಯ ಆಸಕ್ತಿಯಷ್ಟೇ ಅಲ್ಲ ಎಂದು ಹೇಳಿದ ಅವರು, ಕ್ರಾಸ್ ತಳಿಗಳ ಗಂಡುಕರುಗಳ ರಕ್ಷಣೆಗೆ ಕಾನೂನಿನಲ್ಲಿ ಅವಕಾಶ ಮಾಡಿಕೊಡ ಲಾಗಿದ್ದು, ಪ್ರಾಧಿಕಾರ ಮಾಡಲಾಗುತ್ತಿದೆ ಎಂದು ಹೇಳಿದರು. ಡಿಸೆಂಬರ್​ನಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗಿ ವಿಧಾನ ಸಭೆಯ ಅನುಮೋದನೆ ಪಡೆದುಕೊಂಡಿತ್ತು. ಆದರೆ ವಿಧಾನ ಪರಿಷತ್​ನಲ್ಲಿ ಮಂಡನೆ ಯಾಗಿ ಅನುಮೋದನೆ ಸಿಕ್ಕಿರಲಿಲ್ಲ.
ಪರಿಷತ್​ನಲ್ಲಿ ಆಡಳಿತ ಪಕ್ಷಕ್ಕೆ ಪೂರ್ಣ ಬಹುಮತ ಇಲ್ಲ. ಜತೆಗೆ ಜೆಡಿಎಸ್ ಈ ವಿಧೇಯಕಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಒಂದೊಮ್ಮೆ ವಿಧೇಯಕದ ಪರಾಮರ್ಶೆ ಸೂಕ್ತ ಎಂದು ಪ್ರತಿಪಕ್ಷ ಕೋರಿಕೊಂಡು, ಸಭಾಪತಿ ಒಪ್ಪಿಬಿಟ್ಟರೆ ಈ ವಿಧೇಯಕ ಇನ್ನಾರು ತಿಂಗಳು ನನೆಗುದಿಗೆ ಬೀಳಲಿದೆ. ಹೀಗಾಗಿ ತಡ ಮಾಡಬಾರದೆಂದು ಸುಗ್ರೀವಾಜ್ಞೆಗೆ ಸರ್ಕಾರ ಮೊರೆ ಹೋಗಿದೆ. ಪೂರ್ಣ ಬಹುಮತ ಇರುವ ಸರ್ಕಾರ ಇದ್ದರೂ ಕಾಯ್ದೆ ಜಾರಿಗೆ ತರಲು ಸಾಧ್ಯವಾಗದ್ದಕ್ಕೆ ಪಕ್ಷದ ಮಟ್ಟದಲ್ಲಿ ಆಕ್ಷೇಪದ ದನಿ ಎದ್ದಿತ್ತು.
ಈ ಸಾಲಿನ ಅಧಿವೇಶನವನ್ನು ಪರಿಸಮಾಪ್ತಿಗೊಳಿಸಲು ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ. ಜತೆಗೆ 2021ರ ಜನವರಿ ಮೂರನೇ ವಾರದಲ್ಲಿ ಜಂಟಿ ಅಧಿವೇಶನ ನಡೆಸಲು ನಿಶ್ಚಯಿಸಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಅಧಿವೇಶನದ ದಿನಾಂಕ ನಿಗದಿಯಾಗಲಿದೆ. ಪ್ರಾಥಮಿಕ ಚರ್ಚೆಯಂತೆ ಜ.18ರಂದು ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಐದು ದಿನ ಕಲಾಪ ನಡೆಯುವುದು.
ಸುದೀರ್ಘ ರಾಜಕೀಯ ದಲ್ಲಿರುವ ಸಿದ್ದರಾಮಯ್ಯ ಗೋ ಹತ್ಯೆ ಕಾಯ್ದೆ ಬಗ್ಗೆ ಚರ್ಚೆಯನ್ನೇ ಮಾಡದೆ ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ.
|ಜೆ.ಸಿ.ಮಾಧುಸ್ವಾಮಿಕಾನೂನು ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − seven =
Remember me
