ಸ.ದಾ. ಜೋಶಿ ಬೀದರ್
ಶಾಸಕ ಬಿ.ನಾರಾಯಣರಾವ್ ಅಗಲಿಕೆಯಿಂದ ತೆರವಾಗಿರುವ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆ ದಿನೇದಿನೆ ಚುರುಕಾಗುತ್ತಿವೆ. ಕ್ಷೇತ್ರವನ್ನು ಮತ್ತೆ ತನ್ನ ಕೈಯಲ್ಲಿ ಇಟ್ಟುಕೊಳ್ಳಲು ಕಾಂಗ್ರೆಸಿಗರು ತಂತ್ರ ಹೆಣೆಯುತ್ತಿದ್ದರೆ, ಕ್ಷೇತ್ರ ಕೈವಶಕ್ಕಾಗಿ ಬಿಜೆಪಿ ಪ್ರತಿತಂತ್ರ ರೂಪಿಸುತ್ತಿದೆ. ಆಡಳಿತ ಮತ್ತು ಪ್ರತಿಪಕ್ಷಗಳ ಕುಸ್ತಿಯಲ್ಲಿ ತನ್ನ ಶಕ್ತಿ ಪ್ರದರ್ಶಿಸಲು ಜೆಡಿಎಸ್ ಸ್ಕೆಚ್ ಹಾಕುತ್ತಿದೆ. ಈ ಬೆಳವಣಿಗೆಗಳು ಈಗಿನಿಂದಲೇ ಕದನ ಕುತೂಹಲ ಹೆಚ್ಚಿಸಿವೆ.
ಸದ್ಯ ಆಡಳಿತರೂಢ ಬಿಜೆಪಿ ಉಪ ಚುನಾವಣೆಯನ್ನು ಹೆಚ್ಚು ಗಂಭೀರ ತೆಗೆದುಕೊಂಡಿದೆ. ಶಿಕ್ಷಕರ, ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಮತ್ತು ರಾಜರಾಜೇಶ್ವರಿ, ಶಿರಾ ವಿಧಾನಸಭೆ ಉಪ ಚುನಾವಣೆ ಮುಗಿದ ಬೆನ್ನಲ್ಲೇ ಕೇಸರಿಪಡೆ ಚಿತ್ತ ಬಸವಕಲ್ಯಾಣ ಕಡೆ ನೆಟ್ಟಿದೆ. ಮಂಗಳೂರಿನಲ್ಲಿ ಗುರುವಾರ ಜರುಗಿದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಹಾಗೂ ಕೋರ್ ಕಮಿಟಿ ಸಭೆಯಲ್ಲಿ ಬಸವಕಲ್ಯಾಣ ಚುನಾವಣೆ ಬಗ್ಗೆ ಚರ್ಚೆ ನಡೆದಿದೆ. ಸ್ಥಳೀಯರನ್ನೇ ಕಣಕ್ಕಿಳಿಸಿ ಕಮಲ ಅರಳಿಸುವ ರಣತಂತ್ರ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದು ಹೊರಗಿನವರಿಗೆ ಮಣೆ ಹಾಕಬಹುದು ಎಂಬ ಚರ್ಚೆಗಳಿಗೆ ಬ್ರೇಕ್ ಹಾಕಿದ್ದು, ಸ್ಥಳೀಯ ಆಕಾಂಕ್ಷಿಗಳ ಖುಷಿಗೆ ಕಾರಣವಾಗಿ ಟಿಕೆಟ್ ಪೈಪೋಟಿ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.
ಡಿಸೆಂಬರ್ ಮೊದಲ ಅಥವಾ ಎರಡನೇ ವಾರದೊಳಗೆ ಬಸವಕಲ್ಯಾಣ ಚುನಾವಣೆ ಘೋಷಣೆ ಆಗುವ ಸಾಧ್ಯತೆಗಳಿವೆ. ಹೀಗಾಗಿ ಅಲ್ಲಿವರೆಗೆ ಮಹತ್ವಾಕಾಂಕ್ಷಿ ನೂತನ ಅನುಭವ ಮಂಟಪ ಕಾಮಗಾರಿಗೆ ಅಡಿಗಲ್ಲು ನೆರವೇರಿಸುವ ಬಗ್ಗೆ ಬಿಜೆಪಿ ಮುಖಂಡರು ಗಂಭೀರ ಚಿಂತನೆ ನಡೆಸಿದ್ದಾರೆ. ಇದಕ್ಕೆ ಅಡಿಗಲ್ಲು ನೆರವೇರಿಸುವ ಮೂಲಕ ಸುದೀರ್ಘ ಅವಧಿಯಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿಗೆ ಚಾಲನೆ ನೀಡಿದ ಶ್ರೇಯ ಪಡೆಯುವ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತರ ಮತ ಸಂಪೂರ್ಣ ತಮ್ಮತ್ತ ಹಿಡಿದಿಟ್ಟುಕೊಳ್ಳುವ ಉದ್ದೇಶ ಹೊಂದಲಾಗಿದೆ ಎನ್ನಲಾಗಿದೆ.
ಅನುಭವ ಮಂಟಪಕ್ಕೆ ಕಳೆದ ಬಜೆಟ್ ನಲ್ಲಿ ಸಿಎಂ ಯಡಿಯೂರಪ್ಪ 500 ಕೋಟಿ ಅನುದಾನ ಘೋಷಿಸಿದ್ದು, ಇದರ ಮೊದಲ ಕಂತಿನಲ್ಲಿ 100 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ಬಿಕೆಡಿಬಿ) ಮೂಲಕ ಈ ಕೆಲಸ ಕೈಗೊಳ್ಳಲಾಗುತ್ತಿದೆ. ಭವ್ಯ ಮಂಟಪದ ನೀಲಿನಕ್ಷೆ ಸಿದ್ಧವಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ.ಎಚ್.ಆರ್. ಮಹಾದೇವ ಅವರನ್ನು ಸರ್ಕಾರ ಬಿಕೆಡಿಬಿ ವಿಶೇಷಾಧಿಕಾರಿಯಾಗಿ (ಪ್ರಭಾರ) ನೇಮಿಸಿದೆ. ಡಾ.ಮಹಾದೇವ ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಕಾರಣ, ಇಲ್ಲಿಗೆ ಇವರನ್ನು ನಿಯೋಜಿಸಿರುವುದು ಸಹ ಚುನಾವಣೆ ದೃಷ್ಟಿಯಿಂದ ಮಹತ್ವ ಪಡೆದಿದೆ. ಆಯೋಗ ಚುನಾವಣೆ ದಿನಾಂಕ ಘೋಷಿಸುವ ಮುನ್ನ ಅಡಿಗಲ್ಲು ನೆರವೇರಿಸಿ, ಇದರ ಫಾಯಿದಾ ಪಡೆಯುವ ಲೆಕ್ಕಾಚಾರ ನಡೆದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಲಿಂಗಾಯತ- ಮರಾಠಾಕಾಂಬಿನೇಷನ್ ಲೆಕ್ಕಾಚಾರಬಿಜೆಪಿಯು ಲಿಂಗಾಯತರು ಸೇರಿ ಮೇಲ್ವರ್ಗದ ಮತಗಳನ್ನೇ ಹೆಚ್ಚಾಗಿ ನಂಬಿದೆ. ಇದರೊಂದಿಗೆ ಕೇತ್ರದಲ್ಲಿ ಪ್ರಬಲವಿರುವ (40 ಸಾವಿರಕ್ಕೂ ಹೆಚ್ಚು ಮತದಾರರಿರುವ) ಮರಾಠಾ ಸೇರಿ ಇತರ ವರ್ಗದವರನ್ನು ಸೆಳೆದು ಸಲೀಸಾಗಿ ಗೆಲುವಿನ ನಗೆ ಬೀರುವ ತಂತ್ರ ರೂಪಿಸುತ್ತಿದೆ. ಲಿಂಗಾಯತ-ಮರಾಠಾ ಕಾಂಬಿನೇಷನ್ ಆದಲ್ಲಿ ಸುಲಭವಾಗಿ ಜಯ ತನ್ನದಾಗಿಸಿಕೊಳ್ಳಬಹುದು. ಈ ಕಾಂಬಿನೇಷನ ಗಾಗಿಯೂ ಮುಖಂಡರು ಕಸರತ್ತು ಆರಂಭಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ತಮ್ಮ ಸರ್ಕಾರವಿರುವ ಕಾರಣ ಮರಾಠಾ ಸಮಾಜದ ಕೆಲ ಬೇಡಿಕೆಗಳಿಗೆ ಸ್ಪಂದಿಸಿ ಅವರ ಒಲವು ಗಳಿಸಿಕೊಳ್ಳಬಹುದು ಎಂಬುದು ಸಹ ಪಕ್ಷದ ಕೆಲ ಮುಖಂಡರ ಲೆಕ್ಕಾಚಾರ. ಹೀಗಾಗಿ ಲಿಂಗಾಯತ, ಮರಾಠಾ, ಲಿಂಗಾಯತೇತರರಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಉತ್ತಮ ಎಂಬ ಚಿಂತನೆಗಳು ನಡೆದಿವೆ. ಅಭ್ಯರ್ಥಿ ಯಾರನ್ನೇ ಮಾಡಲಿ, ಚುನಾವಣೆ ಮುನ್ನ ಅನುಭವ ಮಂಟಪ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅದರ ಭರಪೂರ ಲಾಭ ಪಡೆಯುವ ಉದ್ದೇಶವಿರುವುದು ನಿಜ ಎಂದು ಬಿಜೆಪಿ ಮುಖಂಡರೊಬ್ಬರು ಹೇಳುತ್ತಾರೆ.
12ರಂದು ಕಲ್ಯಾಣದಲ್ಲಿ ನಡೆಸಲಿದ್ದಾರೆ ಕಾರ್ಯಕರ್ತರ ಸಭೆವಿಜಯೇಂದ್ರ ಉಸ್ತುವಾರಿ ?ಸ್ಥಳೀಯರನ್ನೇ ಟಿಕೆಟ್ ನೀಡುವ ಕುರಿತು ಮಂಗಳೂರಿನಲ್ಲಿ ಗುರುವಾರ ಜರುಗಿದ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ, ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ, ಊಹಾಪೋಹಗಳಿಗೆ ತೆರೆ ಬಿದ್ದಿದೆ. ಬಸವಕಲ್ಯಾಣ ಉಪ ಚುನಾವಣೆ ಅಖಾಡಕ್ಕೆ ವಿಜಯೇಂದ್ರ ಅವರೇ ಇಳಿಯಬಹುದೆಂಬ ವಿಷಯ ಕೆಲ ದಿನಗಳಿಂದ ವ್ಯಾಪಕ ಚರ್ಚೆ ಜತೆಗೆ ಕುತೂಹಲಕ್ಕೂ ಕಾರಣವಾಗಿತ್ತು. ಜಿಲ್ಲೆಯ ಹಲವು ಬಿಜೆಪಿ ಮುಖಂಡರು ಸಹ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆದಿದ್ದರು. ಆದರೆ ಯಡಿಯೂರಪ್ಪ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರ ನಡುವೆ ಇದೀಗ ಬಿಜೆಪಿ ಕೋರ್ ಕಮಿಟಿ ಸ್ಥಳೀಯರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಟಿಕೆಟ್ ಮೇಲೆ ಕಣ್ಣಿಟ್ಟ ಸ್ಥಳೀಯ ಆಕಾಂಕ್ಷಿಗಳ ಕಸರತ್ತು ಮತ್ತಷ್ಟು ಜೋರಾಗಿದೆ. ಈ ಮಧ್ಯೆ ವಿಜಯೇಂದ್ರ 12ರಂದು ಬಸವಕಲ್ಯಾಣಕ್ಕೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸುವ ಜತೆಗೆ ಸ್ಥಳೀಯ ಪ್ರಮುಖರೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ. ಎರಡು ವಾರದ ಹಿಂದೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಭೇಟಿ ನೀಡಿದ್ದರು. ಇದೀಗ ವಿಜಯೇಂದ್ರ ಆಗಮಿಸುತ್ತಿದ್ದಾರೆ. ಇವರ ಭೇಟಿಗೆ ಮುಹೂರ್ತ ಫಿಕ್ಸ್ ಆಗಿರುವುದು ಯುವ ಸಮೂಹದಲ್ಲಿ ಜೋಶ್ ಮೂಡಿಸಿದೆ. ಕೇಸರಿ ಪಡೆ ಬಸವಕಲ್ಯಾಣ ಚುನಾವಣೆ ಗಂಭೀರ ಪರಿಗಣಿಸಿದ್ದು, ಈಗಿನಿಂದಲೇ ಗೆಲುವಿಗೆ ಸ್ಕೆಚ್ ಹಾಕುತ್ತಿರುವುದು ಈ ಎಲ್ಲ ಬೆಳವಣಿಗೆಗಳಿಂದ ಸ್ಪಷ್ಟವಾಗಿ ಕಂಡುಬರುತ್ತಿದೆ.
ತಳಮಳ ತಂದ ಟಿಕೆಟ್ಬಿಜೆಪಿ, ಕಾಂಗ್ರೆಸ್, ಜೆಡಿ ಎಸ್ ನಿಂದ ಯಾರು ಕಣಕ್ಕಿಳಿಯಬಹುದೆಂಬ ಸ್ಪಷ್ಟತೆ ಇಲ್ಲ. ಹೀಗಾಗಿ ಮೂರೂ ಪಕ್ಷಗಳಲ್ಲಿ ಟಿಕೆಟ್ ತಳಮಳ ಮುಂದುವರಿದಿದೆ. ಶಾಸಕ ನಾರಾಯಣರಾವ್ ಉತ್ತರಾಧಿಕಾರಿ ಯಾರೆಂಬ ಬಗ್ಗೆ ಕಾಂಗ್ರೆಸ್ ಸಹ ತನ್ನ ನಿಲುವು ಸ್ಪಷ್ಟಪಡಿಸುತ್ತಿಲ್ಲ. ನಾರಾಯಣರಾವ್ ಕುಟುಂಬದವರಿಗೆ (ಮಗ ಗೌತಮ್ ಇಲ್ಲವೆ ಪತ್ನಿ ಮಲ್ಲಮ್ಮ) ಟಿಕೆಟ್ ಕೊಡಬಹುದೆಂಬ ಚರ್ಚೆ ನಡೆದಿವೆ. ಇತ್ತೀಚೆಗೆ ಆಯೋಜಿಸಿದ್ದ ನಾರಾಯಣರಾವ್ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಾರಾಯಣರಾವ್ ಅವರ ಕೆಲಸ, ಹೋರಾಟಗಳನ್ನು ಮುಂದುವರಿಸಿಕೊಂಡು ಹೋಗು ಎಂದು ಹೇಳಿ ಪುತ್ರ ಗೌತಮ್ ಬೆನ್ನು ತಟ್ಟಿದ್ದಾರೆ. ಇದು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಆಗಬಹುದಾ ಎಂಬ ಚರ್ಚೆಗೆ ಕಾರಣವಾಗಿದೆ. 8ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟು ಲಾಬಿ ನಡೆಸುತ್ತಿದ್ದಾರೆ. ಬಿಜೆಪಿಯನ್ನು ಸೋಲಿಸಲು ಲಿಂಗಾಯತರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಎಂಬ ಕೂಗು ಸಹ ಎದ್ದಿದೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಡಜನ್ ಗೂ ಜಾಸ್ತಿಯಾಗಿದೆ. ಜೆಡಿಎಸ್ ಪಾಳಯದಲ್ಲಿ ಅಷ್ಟೊಂದು ಹಲ್ಚಲ್ ಕಾಣುತ್ತಿಲ್ಲ. ಒಟ್ಟಾರೆ ಎಲ್ಲ ಪಕ್ಷಗಳಲ್ಲಿ ಟಿಕೆಟ್ ತಳಮಳದ ಸ್ಥಿತಿ ನಿರ್ಮಿಸಿದೆ.
ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ನಮ್ಮ ಏಕೈಕ ಗುರಿ. ಚುನಾವಣೆ ಎಂದಾಗ ಆಕಾಂಕ್ಷಿಗಳಿರುವುದು, ಟಿಕೆಟ್ ಗೆ ಪೈಪೋಟಿ ನಡೆಸುವುದು ಸಹಜ. ಅಭ್ಯರ್ಥಿ ಆಯ್ಕೆ ವರಿಷ್ಠರಿಗೆ ಬಿಟ್ಟ ವಿಚಾರ. ಅವರು ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಗೆಲ್ಲಿಸಿ ತರುತ್ತೇವೆ.
| ಶಿವಾನಂದ ಮಂಠಾಳಕರ್
ಬಿಜೆಪಿ ಜಿಲ್ಲಾಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + fifteen =
Remember me
