ಬೆಂಗಳೂರು:ಮಹಾರಾಷ್ಟ್ರ ಘಟ್ಟ ಪ್ರದೇಶ ಹಾಗೂ ರಾಜ್ಯದ ಕೃಷ್ಣಾ, ತುಂಗಭದ್ರಾ ನದಿ ಪಾತ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿದ್ದು, ಬೆಳಗಾವಿ, ಬಾಗಲಕೋಟೆ, ರಾಯಚೂರು ಜಿಲ್ಲೆಗಳ ನೂರಾರು ಗ್ರಾಮಗಳ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ ಸೇರಿ ಉಪನದಿಗಳು ಅಪಾಯಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಕೃಷ್ಣಾ ನದಿಗೆ 2.50 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ದೂಧಗಂಗಾ, ವೇದಗಂಗಾ ನದಿ ತೀರದ ತೋಟ ಪಟ್ಟಿಗಳಲ್ಲಿ ವಾಸಿಸುತ್ತಿದ್ದ ಜನರು ಸಾಮಗ್ರಿ, ಜಾನುವಾರುಗಳ ಜತೆಗೆ ಸ್ಥಳಂತರವಾಗುತ್ತಿದ್ದಾರೆ. ಅಥಣಿ, ನಿಪ್ಪಾಣಿ, ಗೋಕಾಕ, ಮೂಡಲಗಿ, ಹುಕ್ಕೇರಿ ತಾಲೂಕಿನಲ್ಲಿ ಜಿಲ್ಲಾಡಳಿತ ಕಾಳಜಿ ಕೇಂದ್ರ ತೆರೆದಿದೆ. ಈ ಐದೂ ತಾಲೂಕಿನ 20 ಗ್ರಾಮಗಳ 792 ಕುಟುಂಬಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿದೆ. ಒಟ್ಟು 2,427 ಜನರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. 1,006 ಜನರು ಪ್ರವಾಹಭೀತಿಯಿಂದಾಗಿ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಈವರೆಗೂ ಒಟ್ಟು 6 ಗ್ರಾಮಗಳ 98 ಕುಟುಂಬಗಳ 352 ಜನರು ಹಾಗೂ 642 ಜಾನುವಾರು ಸ್ಥಳಾಂತರ ಮಾಡಲಾಗಿದೆ.
ಕೆಆರ್​ಎಸ್ ದಾಖಲೆ ಹೊರಹರಿವು: ಕಾವೇರಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಉತ್ತಮ ಮಳೆಯಾಗುತ್ತಿರುವ ಕಾರಣ ಹಾಗೂ ಹೇಮಾವತಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ಪ್ರಸ್ತುತ 124.03 ಅಡಿ ಇರುವ ಕೃಷ್ಣರಾಜಸಾಗರ ಅಣೆಕಟ್ಟೆಗೆ 1,20,0062 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಶನಿವಾರ ಅಣೆಕಟ್ಟೆ 54 ಗೇಟುಗಳ ಮೂಲಕ 1,30,325 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ವಿಖ್ಯಾತ ಬೃಂದಾವನದ ದೋಣಿ ವಿಹಾರ ಕೇಂದ್ರ ಜಲಾವೃತಗೊಂಡಿದೆ. ಜು.29ರಂದು ಬೆಳಗ್ಗೆ 11 ಗಂಟೆಯಿಂದ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಆರ್​ಎಸ್​ನಲ್ಲಿ ಕಾವೇರಿಗೆ ಬಾಗಿನ ಅರ್ಪಿಸಲಿದ್ದಾರೆ. ಮುತ್ತತ್ತಿಯಲ್ಲಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಇಂದು ಕೆಲವೆಡೆ ಭಾರೀ ಮಳೆ… :ಹಲವು ದಿನಗಳಿಂದ ರಾಜ್ಯದ ವಿವಿಧೆಡೆ ಅಬ್ಬರಿಸುತ್ತಿದ್ದ ಮಳೆ ಶನಿವಾರದಿಂದ ತುಸು ಕ್ಷೀಣವಾಗಿದೆ. ಆದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಜು.28ರಂದು ಬಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ. ಬೆಳಗಾವಿ, ಬೀದರ್, ಕಲಬುರಗಿ, ಕೊಡಗಿನಲ್ಲಿ ಮುಂದಿನ 24 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣವಾಗಿ ಸುರಿಯಲಿದೆ.
ಹೊಸಪೇಟೆ:ತುಂಗಭದ್ರಾ ಜಲಾಶಯದಿಂದ ಅಂದಾಜು 1.50 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿದ್ದು, ಹಂಪಿಯಲ್ಲಿ ಹಲವು ಮಂಟಪಗಳು ಮುಳುಗಿವೆ. ಗಂಗಾವತಿ-ಕಂಪ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿದ್ದು, ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ. ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಗೆ ಬಿದ್ದ ಮೀನುಗಾರನೊಬ್ಬನನ್ನು ನಾಲ್ವರು ಸಹ ಮೀನುಗಾರರು ಶನಿವಾರ ರಕ್ಷಿಸಿದ್ದಾರೆ. ಬಳ್ಳಾರಿ ಜಿಲ್ಲೆ ಕಂಪ್ಲಿ ಕೋಟೆಯ ನದಿ ಸೇತುವೆ ಬಳಿ ವೆಂಕಟರಮಣ ದೇವಸ್ಥಾನ ಬಳಿ ನಿಂತಿದ್ದ ಕರ್ಪಣ್ಣ (35)ಎನ್ನುವ ಮೀನುಗಾರನಿಗೆ ಮೂರ್ಚೆ ಬಂದು ನದಿಗೆ ಬಿದ್ದಿದ್ದಾರೆ. ತಕ್ಷಣ ಅಲ್ಲೇ ಇದ್ದ ಮೀನುಗಾರರು ರಕ್ಷಿಸಿದ್ದಾರೆ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಮೂರು ಲಕ್ಷ ಕ್ಯೂಸೆಕ್ ನೀರು ರಾಯಚೂರಿನ ನದಿ ತೀರದ ಗ್ರಾಮಗಳ 12 ಗರ್ಭಿಣಿಯರನ್ನು ಆರೋಗ್ಯದ ಹಿತದೃಷ್ಟಿಯಿಂದ ಶುಕ್ರವಾರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಬಾಗಲಕೋಟೆ:ಜಮಖಂಡಿ ತಾಲೂಕಿನ ಆಲಗೂರು ಗ್ರಾಮದ ರೈತನೊಬ್ಬ ಮೇವು ತರಲು ಹೋದಾಗ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವುದು ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ತಾಲೂಕಿನ ಅಲಗೂರು ಗ್ರಾಮದ ನಿವಾಸಿ, ರೈತ ಸಿದ್ದಪ್ಪ ಆಡೋಳ್ಳಿ (65)ನಾಪತ್ತೆಯಾಗಿದ್ದಾರೆ. ರೈತ ಸಿದ್ದಪ್ಪ ಅಡೋಳ್ಳಿ ಕೃಷ್ಣೆಯ ನೀರಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ. ಹಾವೇರಿ ಜಿಲ್ಲೆ ಸವಣೂರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಅವಳಿ ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದ ಪ್ರಕರಣದಲ್ಲಿ ಗಾಯಗೊಂಡಿದ್ದ ವೃದ್ಧೆ ಯಲ್ಲವ್ವ ದೊಡ್ಡಬಸಪ್ಪ ಹರಕುಣಿ (68) ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಮೃತಪಟ್ಟಿದ್ದಾರೆ.
ಜಲಾಶಯಗಳಿಗೆ ಜೀವಕಳೆ:ಶಿವಮೊಗ್ಗದಲ್ಲಿ ಶನಿವಾರ ಮಳೆ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಸಾಗರ, ಸೊರಬ ಮತ್ತು ಹೊಸನಗರ ಭಾಗದಲ್ಲಿ ನೆರೆ ತಗ್ಗಿಲ್ಲ. 1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯಕ್ಕೆ ಕಳೆದ 24 ಗಂಟೆಗಳಲ್ಲಿ 2.20 ಅಡಿ ನೀರು ಬಂದಿದ್ದು ನೀರಿನ ಮಟ್ಟ 1,807 ಅಡಿಗೆ ತಲುಪಿದೆ. 74,514 ಕ್ಯೂಸೆಕ್ ನೀರು ಹರಿದುಬರುತ್ತಿದೆ. 186 ಅಡಿ ಸಾಮರ್ಥ್ಯದ ಭದ್ರಾ ಡ್ಯಾಂ 178 ಅಡಿಗೆ ತಲುಪಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಗಾಳಿ ಹೆಚ್ಚಾಗಿದ್ದು ಮಳೆ ತುಸು ಕಡಿಮೆ ಆಗಿದೆ.
ಕಾರವಾರ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಗೆ ಉರುಳಿದ ಟ್ರಕ್​ತೆಗೆಯಲು ಉಡುಪಿ ಮಲ್ಪೆಯ ಮುಳುಗು ತಜ್ಞ ಈಶ್ವರ ಅವರ ರಕ್ಷಣಾ ತಂಡ ಶನಿವಾರ ಕಾರ್ಯಾಚರಣೆ ನಡೆಸಿತು. ಸ್ಥಳೀಯ ಮೀನುಗಾರರು ಹಾಗೂ ಎನ್​ಡಿಆರ್​ಎಫ್ ತಂಡದ ಸದಸ್ಯರೊಂದಿಗೆ ಟ್ರಕ್ ಇರಬಹುದಾದ ಸ್ಥಳದಲ್ಲಿ ನೀರಿನಾಳಕ್ಕೆ ಧುಮುಕಿ ಹುಡುಕಾಟ ನಡೆಸಿತು.

ಶನಿವಾರ ಸಾಯಂಕಾಲದವರೆಗೆ ಯಾವುದೇ ನಿಖರ ಫಲಿತಾಂಶ ಲಭ್ಯವಾಗಿಲ್ಲ. ಗುಡ್ಡ ಕುಸಿತ ಘಟನೆ ಸಂಭವಿಸಿ 12 ದಿನ ಕಳೆದಿದ್ದು, ಮೂವರು ಇದುವರೆಗೂ ಪತ್ತೆಯಾಗಿಲ್ಲ. ನದಿಯ ಆಳದಲ್ಲಿ ಒಂದು ಟ್ರಕ್ ಇದ್ದು, ಅದನ್ನು ಹುಡುಕಲು ನಾಲ್ಕು ದಿನದಿಂದ ಜಿಲ್ಲಾಡಳಿತ ಪ್ರತಿದಿನ ಹೊಸ ಹೊಸ ಪ್ರಯತ್ನ ನಡೆಸುತ್ತಿದೆ. ದಡದಿಂದ ನಿಖರವಾಗಿ 132 ಅಡಿ ದೂರದಲ್ಲಿ ಟ್ರಕ್ ಕ್ಯಾಬಿನ್ ಮೇಲಾಗಿ ಬಿದ್ದಿರಬಹುದು, ಅದರ ಮೇಲೆ ಕಲ್ಲು ಮಣ್ಣು ತುಂಬಿದೆ ಎಂದು ಸುಧಾರಿತ ಡ್ರೋನ್ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆಸಿದ ಕ್ವಿಕ್ ಪೇ ಪ್ರೖೆ.ಲಿ.ನ ನಿವೃತ್ತ ಮೇಜರ್ ಜನರಲ್ ಇಂದ್ರ ಬಾಲನ್ ಅವರ ತಂಡ ಜಿಲ್ಲಾಡಳಿತಕ್ಕೆ ವರದಿ ನೀಡಿದೆ. ಇಡೀ ಆಡಳಿತ ಕೇರಳದ ಟ್ರಕ್ ಹಾಗೂ ಅರ್ಜುನ್​ನನ್ನು ಕೇಂದ್ರೀಕರಿಸುತ್ತಿದೆ. ಇಬ್ಬರು ಸ್ಥಳೀಯರು ನಾಪತ್ತೆಯಾಗಿದ್ದು, ಅವರ ಬಗ್ಗೆ ಮಾತೆತ್ತುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿ ಬಂದಿವೆ.
ಹೊಳೆನರಸೀಪುರ: ಮಳೆಹಾನಿಯಿಂದ ಉಂಟಾದ ಮನೆಹಾನಿಗೆ ಪರಿಹಾರದ ಜತೆಗೆ ಹೊಸ ಮನೆಯನ್ನೂ ನಿರ್ಮಾಣ ಮಾಡಿಕೊಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಪಟ್ಟಣದಲ್ಲಿ ಮಳೆ ಹಾನಿ ಪ್ರದೇಶಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು. ಮಳೆಯಿಂದ ಉಂಟಾದ ಪೂರ್ಣ ಮನೆ ಹಾನಿಗೆ ಎಸ್​ಡಿಆರ್​ಎಫ್ ನಿಯಮ ಪ್ರಕಾರ ಪರಿಹಾರ ಕೊಡುತ್ತೇವೆ. ಒಂದು ಮನೆಯನ್ನೂ ನೀಡಲು ತೀರ್ಮಾನ ಮಾಡಿದ್ದೇವೆ. ದಾಖಲೆ ಇಲ್ಲದವರಿಗೂ ಪರಿಹಾರ ಕೊಡಲು ಕ್ಯಾಬಿನೆಟ್​ನಲ್ಲಿ ಚರ್ಚೆ ಆಗಿದೆ. ಭಾಗಶಃ ಹಾನಿಯಾದವರಿಗೆ ಐವತ್ತು ಸಾವಿರ ರೂ. ನೀಡಲು ಸಿಎಂ ಜತೆ ಚರ್ಚೆ ಮಾಡಿದ್ದೇವೆ. ಪೂರ್ಣ ಹಾನಿಯಾದವರಿಗೆ 1.25 ಲಕ್ಷ ರೂ. ಪರಿಹಾರದ ಜತೆಗೆ ಒಂದು ಹೊಸ ಮನೆಯನ್ನು ನೀಡುತ್ತಿದ್ದೇವೆ ಎಂದರು.

ಮಳೆಯಿಂದ ಉಂಟಾದ ಹಾನಿಗೆ ತಕ್ಷಣ ನೆರವು ನೀಡುವಂತೆ ಸೂಚನೆ ಕೊಟ್ಟಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಗಳು ಸೇರಿ 114 ಆರೈಕೆ ಕೇಂದ್ರಗಳನ್ನು ತೆರೆದಿದ್ದೇವೆ. ರಾಜ್ಯದಲ್ಲಿ 600 ಮನೆಗಳು ಬಿದ್ದಿವೆ. ಹಾಸನದಲ್ಲಿ 16 ಮನೆಗಳು ಬಿದ್ದಿವೆ. ಮಳೆಯಿಂದ ಸಾವುನೋವು ಸಂಭವಿಸಿವೆ, ಕಾಲಕಾಲಕ್ಕೆ ಪರಿಹಾರ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಮಳೆಯಿಂದ ಉಂಟಾಗಿರುವ ಹಾನಿಗೆ ರಾಜ್ಯ ಸರ್ಕಾರ 777 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದೆ. ಹಾಸನ ಜಿಲ್ಲೆಗೆ 21 ಕೋಟಿ ರೂ. ಹಣ ನೀಡಿದ್ದೇವೆ. ಪ್ರತೀ ತಾಲೂಕಿಗೆ ತಲಾ 25 ಲಕ್ಷ ರೂ. ನೀಡಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ವಾಡಿಕೆಗಿಂತ ಶೇ.28 ಹೆಚ್ಚು ಮಳೆಯಾಗಿದೆ. ವಾಡಿಕೆ ಪ್ರಕಾರ 419 ಮಿ.ಮೀ. ಮಳೆ ಆಗಬೇಕಿತ್ತು. ಈಗಾಗಲೇ 540 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ. ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ನದಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ ಎಂದರು.
ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?

IND vs SL 1st T20: ಲಂಕಾ ವಿರುದ್ಧ ಭಾರತಕ್ಕೆ 43 ರನ್​ಗಳ ಗೆಲುವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 20 =
Remember me
