ಬೆಂಗಳೂರು:ಮಹಾಮಾರಿ ಕರೊನಾ ಕಾರಣಕ್ಕೆ ಮೊದಲ ಹಂತದ ಲಾಕ್​ಡೌನ್ ವೇಳೆ ಸಂಕಷ್ಟ ಅನುಭವಿಸಿದ್ದ ವಲಸಿಗರು ಮತ್ತೊಮ್ಮೆ ಲಾಕ್​ಡೌನ್ ಮಾಡಿದರೆ ನಾವು ಬೆಂಗಳೂರಿನಲ್ಲಿ ಅತಂತ್ರರಾಗಿ ಬಿಡುವೆವು ಎಂಬ ಆತಂಕದಿಂದಲೋ ಅಥವಾ ತಮಗೆ ಕರೊನಾ ಬಂದರೆ ರಾಜಧಾನಿಯಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಬೀದಿಗೆ ಬೀಳಬೇಕಾಗಬಹುದೇನೋ ಎಂಬ ಭಯದಿಂದಲೋ ದೊಡ್ಡ ಪ್ರಮಾಣದಲ್ಲಿ ಸ್ವಗ್ರಾಮಗಳತ್ತ ಮುಖಮಾಡುತ್ತಿದ್ದಾರೆ.
ಇವರಲ್ಲಿ ಕೆಲವರಾದರೂ ಕರೊನಾ ಹೊತ್ತು ಹಳ್ಳಿಗಳಿಗೆ ತಲುಪಿದರೆ ಮುಂದಿನ ಕತೆ ಏನು ಎಂಬ ಅಳುಕು ಸರ್ಕಾರದ್ದು. ಇದೇ ವೇಳೆ ಗ್ರಾಮಕ್ಕೆ ಬರುವವರು ನಮಗೆಲ್ಲಿ ಸೋಂಕು ತಾಗಿಸುವರೋ ಎಂಬ ಭೀತಿ ಹಳ್ಳಿಗರಲ್ಲಿದೆ. ಹಾಗಾಗಿ ಊರ ಮಂದಿ ತಮ್ಮವರನ್ನೇ ಭಯದ ಕಣ್ಣಿನಿಂದ ನೋಡುತ್ತಿದ್ದಾರೆ. ತವರಿಗೆ ವಾಪಸಾಗಿರುವವರ ಸ್ಥಿತಿಗತಿ ಹೇಗಿದೆ? ಅವರನ್ನು ಯಾವ ರೀತಿ ಕಾಣಲಾಗುತ್ತಿದೆ? ಎಂಬ ವಾಸ್ತವ ಚಿತ್ರಣ ಇಲ್ಲಿದೆ.
ಜನರದ್ದೇ ನಿಗಾ: ಬೆಂಗಳೂರಿನಿಂದ ಸ್ವಗ್ರಾಮಗಳಿಗೆ ಬರುವವರ ಸಂಖ್ಯೆ ಕೆಲ ದಿನಗಳಿಂದ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶಕ್ಕೆ ಬಂದವರನ್ನು ಸ್ಥಳೀಯರು ತುಸು ಎಚ್ಚರಿಕೆಯಿಂದ ನೋಡುತ್ತಿದ್ದಾರೆ. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ, ಹೋಂ ಕ್ವಾರಂಟೈನ್​ನಲ್ಲಿ ಇರುವಂತೆ ಆಶಾ ಕಾರ್ಯಕರ್ತೆಯರು ಮನವಿ ಮಾಡುತ್ತಿದ್ದಾರೆ. ಆದರೆ, ಸ್ಥಳೀಯ ಪ್ರಯಾಣಿಕರಿಗೆ ಸರ್ಕಾರ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡದಿರುವುದರಿಂದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಮಾತಿಗೆ ಬೆಲೆ ಸಿಗುತ್ತಿರುವುದು ಅಷ್ಟಕಷ್ಟೇ. ಮನೆಗಳಲ್ಲಿ ಸ್ವಯಂ ಕ್ವಾರಂಟೈನ್ ಆಗುವಂತೆ ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ನಡುವೆ ಅಂತರವಿರಲಿ:ಹೊರ ರಾಜ್ಯದಿಂದ ಹಳ್ಳಿ-ಪಟ್ಟಣಗಳಿಗೆ ಬಂದವರನ್ನು ಮಾತ್ರ ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಬೆಂಗಳೂರಿನಿಂದ ಬಂದ ಜನರಿಂದ ಸ್ಥಳೀಯರು ಕೊಂಚ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಇಂಥ ಯಾವುದೇ ವ್ಯತ್ಯಾಸ ಕಂಡಿಲ್ಲ.
ಅನುಮಾನ ಕಾಟ:ಬೆಂಗಳೂರಿನಿಂದ ಸ್ವಗ್ರಾಮಗಳಿಗೆ ಮರಳಿ ರುವವರನ್ನು ಜನ ಅನುಮಾನದಿಂದ ಕಾಣುತ್ತಿದ್ದಾರೆ. ಕೆಲವೆಡೆ ಕಡ್ಡಾಯವಾಗಿ ಹೋಂ ಕ್ವಾರಂಟೈನ್​ಗೆ ಒಳಗಾಗುವಂತೆ ಸ್ಥಳೀಯರು ಕೋರುತ್ತಿದ್ದಾರೆ. ಒಂದುವೇಳೆ ಯಾರಾದರೂ ಹೋಂ ಕ್ವಾರಂಟೈನ್​ಗೆ ಒಳಗಾಗದೆ ತಿರುಗಾಡುತ್ತಿದ್ದರೆ, ಸ್ಥಳೀಯ ಪೊಲೀಸರು, ಆಶಾಕಾರ್ಯ ಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡುತ್ತಿದ್ದಾರೆ.
ಎಚ್ಚರಿಕೆಯ ಡಂಗುರ, ದಂಡ ಪ್ರಹಾರ:ಕೆಲ ಜಿಲ್ಲೆಗಳಲ್ಲಿ ಹಳ್ಳಿಗಳಿಗೆ ಹೊರಗಿನಿಂದ ಬರುವವರು ಹಾಗೂ ಹೊರ ಹೋಗುವವರಿಗೆ ದಂಡ ವಿಧಿಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ವಾರ್ಡ್​ವೊಂದರಲ್ಲಿ ಡಂಗುರ ಸಾರಿ ಬೆಂಗಳೂರಿನಿಂದ ಬಂದವರು ನೇರ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಬೇಕು, ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಮಂಡ್ಯ ತಾಲೂಕಿನ ಬೇಲೂರು ಜನತೆ ಸ್ವಯಂಪ್ರೇರಿತವಾಗಿ ಗ್ರಾಮದಲ್ಲಿ ಡಂಗುರ ಸಾರಿಸಿ, ಬೆಂಗಳೂರು, ಮೈಸೂರು ಮುಂತಾದೆಡೆ ಉದ್ಯೋಗದಲ್ಲಿರುವವರು ಮರಳಿ ಗ್ರಾಮಕ್ಕೆ ಬರಬಾರದು. ಜತೆಗೆ ನಮ್ಮೂರಿನಿಂದ ಹೊರ ಜಿಲ್ಲೆಗಳಿಗೆ ಹೋಗಬಾರದು. ಉಲ್ಲಂಘಿಸಿದರೆ 5,000 ರೂ. ದಂಡ ಕಟ್ಟಬೇಕು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ.
ಯಳಂದೂರು ತಾಲೂಕಿನ ಕೆಲವು ಗ್ರಾಮಗಳಿಂದ ಅನಗತ್ಯವಾಗಿ ಹೊರಜಿಲ್ಲೆಗಳಿಗೆ ತೆರಳಿದರೆ 5ರಿಂದ 10 ಸಾವಿರ ರೂ. ದಂಡ ಪಾವತಿಸಬೇಕಾಗಿದೆ. ಕೊಳ್ಳೇಗಾಲ ತಾಲೂಕಿನ ಕುಂತೂರಿನಲ್ಲಿ ತಮಟೆ ಸಾರಿಸಿ ಗ್ರಾಮಸ್ಥರಿಗೆ ಸ್ವಯಂ ಲಾಕ್​ಡೌನ್ ಜಾರಿಗಳಿಸಿರುವ ಜನರು ಹೊರಗಿನವರ ಪ್ರವೇಶಕ್ಕೆ ಕಡಿವಾಣ ಹಾಕಲಾರಂಭಿಸಿದ್ದಾರೆ. ಚಾಮರಾಜನಗರದ ಮೂಕನಪಾಳ್ಯದಲ್ಲಿ ಮೈಸೂರು, ಬೆಂಗಳೂರು, ತಮಿಳುನಾಡು, ಕೇರಳದಿಂದ ಬಂದಿರುವವರಿಗೆ ದೇವಸ್ಥಾನದ ಮುಂದೆ ಕರೊನಾ ಪರೀಕ್ಷೆ ಮಾಡಿಸಲಾಗುತ್ತಿದೆ. ತಪ್ಪದೆ ಬರಬೇಕೆಂದು ತಮಟೆ ಸಾರಿಸಿ ಸೂಚನೆ ನೀಡಲಾಗಿದೆ. ಪರೀಕ್ಷೆ ನಡೆಸಲು ಮನೆಗಳ ಬಳಿ ಬರುವ ಕರೊನಾ ವಾರಿಯರ್ಸ್​ಗೆ ಬೈಯುವುದು ಅಥವಾ ಹಲ್ಲೆ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಎಚ್ಚರಿಕೆ ರವಾನಿಸಲಾಗಿದೆ.
ದೂಷಿಸುವ ಪರಿಪಾಠ:ಅಂತರ್ ಜಿಲ್ಲೆಗಳ ನಡುವೆ ನಿತ್ಯ ನೂರಾರು ಕೆಎಸ್​ಆರ್​ಟಿಸಿ ಬಸ್​ಗಳಲ್ಲದೆ ಖಾಸಗಿ ವಾಹನಗಳು ಸಂಚರಿಸುತ್ತಿರುವುದರಿಂದ ಎಲ್ಲ ವಾಹನಗಳನ್ನು ತಪಾಸಣೆ ಮಾಡು ವುದು ಕಷ್ಟ ಎಂದು ಜಿಲ್ಲಾಡಳಿತಗಳೇ ತಿಳಿಸಿವೆೆ. ಸೋಂಕಿತರನ್ನು ದೂಷಿಸುವ ಪರಿಪಾಠವಿದ್ದರೂ, ಊರಿನಿಂದ ಹೊರಹಾಕುವ ಪ್ರಕರಣಗಳು ಎಣಿಕೆಗೆ ಸಿಗುವಷ್ಟು ಮಾತ್ರ.
ಗಡಿಗಳಲ್ಲಿ ಕಾವಲು
ಬೆಂಗಳೂರು ಮೊದಲಾದ ಕಡೆಗಳಿಂದ ಬರುತ್ತಿರುವವರನ್ನು ಕ್ವಾರಂಟೈನ್ ಮಾಡುವ ವ್ಯವಸ್ಥೆ ಇಲ್ಲ ಎಂಬುದನ್ನು ಅರಿತ ಗ್ರಾಮಸ್ಥರು ಕೆಲವೆಡೆ ಅವರೇ ನಿರ್ಬಂಧ ವಿಧಿಸುತ್ತಿದ್ದಾರೆ. ಗ್ರಾಮದ ಗಡಿಗಳನ್ನು ಬಂದ್ ಮಾಡಿ, ನೋ ಎಂಟ್ರಿ ಬೋರ್ಡ್ ಹಾಕಿದ್ದಾರೆ. ಯಾರೂ ಗ್ರಾಮ ಪ್ರವೇಶಿಸದಂತೆ ಕಾವಲು ಕಾಯುತ್ತಿದ್ದಾರೆ. ಮಂಡ್ಯ ಜಿಲ್ಲೆ ಬೇಲೂರು ಗ್ರಾಮದವರು ಗಾರ್ವೆಂಟ್ಸ್ ಕೆಲಸ, ಹೊರ ಗ್ರಾಮಗಳಿಗೆ ಕೂಲಿಗೆ ಹೋಗದಂತೆ ನಿರ್ಬಂಧಿಸಿದ್ದಾರೆ. ಬೆಂಗಳೂರಿನಿಂದ ಬಂದವರು ಮತ್ತೆ ವಾಪಸ್ ಹೋಗುವಂತಿಲ್ಲ ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ.
ಛೇಡಿಸುವ ಹಳ್ಳಿಗರು
ಸ್ವಗ್ರಾಮಗಳಿಗೆ ವಾಪಸಾಗು ತ್ತಿರುವವರನ್ನು ಗ್ರಾಮಸ್ಥರು ತಮ್ಮೂರಿನವರು ಎಂದೂ ಲೆಕ್ಕಿಸದೆ ಸಂಶಯದಿಂದ ನೋಡುತ್ತಿದ್ದಾರೆ. ಊರು ಬಿಟ್ಟು ಹೋಗಿ ನೀವು ಸಾಧಿಸಿದ್ದೇನು? ಕೊನೆಗೆ ನಮ್ಮ ಊರೇ ಬೇಕಾಯಿತೇ? ಕೆಟ್ಟು ಪಟ್ಟಣ ಸೇರು ಎಂಬ ಮಾತಿಗೆ ವಿರುದ್ಧವಾಗಿ ಕರೊನಾಗೆ ಹೆದರಿ ಓಡಿ ಬಂದಿರಾ? ಎಂದು ಛೇಡಿಸುವುದು ಹೆಚ್ಚಾಗಿದೆ.
ತಪ್ಪಿತಸ್ಥ ಸರ್ಕಾರಿ ನೌಕರರಿಗಿನ್ನು ಶಿಕ್ಷೆ ಪಕ್ಕಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 11 =
Remember me
