ಬೆಂಗಳೂರು:ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ವ್ಯವಹಾರಗಳ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಸದನ ಪರಿಶೀಲನಾ ಸಮಿತಿಗೆ ವಿಧಾನ ಪರಿಷತ್ ಮಂಗಳವಾರ ಹಸ್ತಾಂತರಿಸಿತು.
ಸಮಿತಿಗೆ ವಹಿಸುವ ನಿರ್ಣಯವನ್ನು ಸಭಾಪತಿ ಬಸವರಾಜ ಹೊರಟ್ಟಿ ಮತಕ್ಕೆ ಹಾಕಿದಾಗ ಪರವಾಗಿ 31 ಮತ್ತು ವಿರುದ್ಧ 21 ಮತಗಳು ಚಲಾವಣೆಯಾದವು. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಮುಂದಾಗಿದ್ದ ಕಾಂಗ್ರೆಸ್ ಸರ್ಕಾರ ಮೊದಲ ಹಿನ್ನಡೆ ಅನುಭವಿಸಿತು.
ಸದನ ಪರಿಶೀಲನಾ ಸಮಿತಿಗೆ ಬಿಲ್ ಒಪ್ಪಿಸಬೇಕೆಂಬ ಪ್ರತಿಪಕ್ಷ ಬಿಜೆಪಿ ಒತ್ತಾಯಕ್ಕೆ ಜೆಡಿಎಸ್ ಕೂಡ ಬೆಂಬಲಿಸಿತು. ಆದರೆ, ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ವಿಧೇಯಕಕ್ಕೆ ಬೆಂಬಲಿಸಿದ್ದು ಗಮನಾರ್ಹ.
ಸದನದಲ್ಲಿ ಸುದೀರ್ಘ ಮೂರು ತಾಸುಗಳ ಕಾಲ ಚರ್ಚೆಯಾಗಿದೆ. ಒಳ್ಳೆಯ ಸಲಹೆಗಳನ್ನು ಮುಂದಿನ ದಿನಗಳಲ್ಲಿ ಪರಿಗಣಿಸುತ್ತೇವೆ. ಮಸೂದೆ ಅಂಗೀಕರಿಸಲು ಸಹಕರಿಸಿ, ಸೆಲೆಕ್ಟ್ ಕಮಿಟಿಗೆ ವಹಿಸುವುದು ಬೇಡ. ಕೇಂದ್ರ ಸರ್ಕಾರ ಸೇರಿ ಬಹುತೇಕ ರಾಜ್ಯಗಳು ಕಾಯ್ದೆಯನ್ನು ಹಿಂಪಡೆದಿವೆ. ಕರ್ನಾಟಕ, ಗುಜರಾತ್ ಮತ್ತು ಉತ್ತರಪ್ರದೇಶದಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. ರೈತ ಸಂಘಟನೆಗಳ ಕೋರಿಕೆಯಂತೆ ವಿಧೇಯಕ ತಂದಿದ್ದೇವೆ ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಮನವೊಲಿಸಲು ಪ್ರಯತ್ನಿಸಿದರು. ರೈತರ ಹಿತ, ಅವರ ಹಕ್ಕು ರಕ್ಷಣೆಗೆ ಹಿಂದಿನ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ಬಿಜೆಪಿ ನಿರ್ಧಾರದ ವಿರೋಧ, ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೇವೆ ಎಂಬ ಕಾರಣಕ್ಕೆ ಸರ್ಕಾರ ತಂದಿರುವ ರೈತ ವಿರೋಧಿ ವಿಧೇಯಕ ಒಪ್ಪಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ದೃಢ ನಿಲುವು ತಳೆದರೆ, ಜೆಡಿಎಸ್ ಸಹಮತ ವ್ಯಕ್ತಪಡಿಸಿತು.
ಸಮಿತಿ ವಿಚಾರದಲ್ಲಿ ಜಿಜ್ಞಾಸೆ:ವಿಧೇಯಕವನ್ನು ಸೆಲೆಕ್ಟ್ ಕಮಿಟಿಗೆ ವಿಚಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹಾಗೂ ಪ್ರತಿಪಕ್ಷದ ಕೋಟ ಶ್ರೀನಿವಾಸ ಪೂಜಾರಿ ಮಧ್ಯೆ ಜಿಜ್ಞಾಸೆಯೂ ನಡೆಯಿತು.
ಚರ್ಚೆ ಮುಗಿಯುತ್ತಿದ್ದಂತೆ ವಿಧೇಯಕವನ್ನು ಸದನ ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು. ಪರ್ಯಾಲೋಚನೆಗೆ ಅಂಗೀಕಾರಕ್ಕೆ ಮುನ್ನವೇ ಈ ವಿಷಯ ಪ್ರಸ್ತಾಪಿಸಬಹುದಿತ್ತು ಎಂದ ಎಚ್.ಕೆ. ಪಾಟೀಲ್, ವಿಸõತ ಚರ್ಚೆಯಾದ ಬಳಿಕ ಸೆಲೆಕ್ಟ್ ಕಮಿಟಿಗೆ ಒಪ್ಪಿಸಲು ಬರುವುದಿಲ್ಲ ಎಂದರು. ಪ್ರತಿಪಕ್ಷದ ಕೋರಿಕೆಯನ್ನು ಸಭಾಪತಿ ಪುರಸ್ಕರಿಸಬೇಕು ಎಂದು ಕೋಟ ಮನವಿ ಮಾಡಿದರೆ, ಮಧ್ಯೆ ಪ್ರವೇಶಿಸಿದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ನಿಯಮ 116 ಏನು ಹೇಳುತ್ತದೆ ಎಂಬ ವಿವರ ನೀಡಿದರು.
ಅದೆಲ್ಲ ನನಗೆ ಗೊತ್ತಿದೆ ಎಂದ ಹೊರಟ್ಟಿ, ಮತವಿಭಜನೆಗೆ ಅವಕಾಶ ಕೊಟ್ಟರು. ಮೊದಲ ಸದನ ಪರಿಶೀಲನಾ ಸಮಿತಿಗೆ ಒಪ್ಪಿಸುವ ನಿರ್ಣಯದ ಪರ ಇರುವ ಸದಸ್ಯರನ್ನು ಎಣಿಸಲಾಯಿತು. ನಂತರ ವಿರುದ್ಧವಾಗಿರುವವರ ಹೆಸರು ಎಣಿಕೆ ಮಾಡಲಾಯಿತು. ಪ್ರತಿಪಕ್ಷದ ಸಾಲಿನಲ್ಲಿದ್ದ ಮರಿತಿಬ್ಬೇಗೌಡ ಸಭಾಪತಿಗೆ ವಿನಂತಿಸಿ ಅವಕಾಶ ಪಡೆದರು. ಮಸೂದೆಗೆ ಬೆಂಬಲಿಸಿ, ಸೆಲೆಕ್ಟ್ ಕಮಿಟಿಗೆ ಒಪ್ಪಿಸುವುದಕ್ಕೆ ವಿರೋಧಿಸಿದರು. ನಿರ್ಣಯ ಮತಕ್ಕೆ ಹಾಕುವ ಮುನ್ನ ನಾಲ್ಕು ದಿನಗಳ ಹಿಂದೆ ಬೆಂಬಲಿಸಿದ್ದ ಜೆಡಿಎಸ್​ನವರು ಈಗ ಉಲ್ಟಾ ಹೊಡೆದಿದ್ದು, ಮನಸಾಕ್ಷಿಯನ್ನು ಕೇಳಿಕೊಳ್ಳಬೇಕು ಎಂದು ಶಿವಾನಂದ ಪಾಟೀಲ್ ತಿವಿದರು. ಕಾಯ್ದೆಗೆ ತಿದ್ದುಪಡಿ ಮಾಡುವುದಕ್ಕೆ ಬೆಂಬಲಿಸಿದ್ದು ನಿಜ. ಆದರೆ, ತಿದ್ದುಪಡಿ ವಿಧೇಯಕದಲ್ಲಿನ ಅಂಶ ಗಮನಿಸಿದ ನಂತರ ವಿರೋಧಿಸುತ್ತಿದ್ದೇವೆ ಎಂದು ಜೆಡಿಎಸ್​ನ ಟಿ.ಎ. ಶರವಣ ಪಕ್ಷದ ನಿಲುವು ಸಮರ್ಥಿಸಿಕೊಂಡರು. ಆಡಳಿತ ಪಕ್ಷ ಎಷ್ಟೇ ಪ್ರಯತ್ನಿಸಿದರೂ ನಿರ್ಣಯ ಮತಕ್ಕೆ ಹಾಕುವುದು ತಪ್ಪಿಸಲಾಗಲಿಲ್ಲ. ಮತ ವಿಭಜನೆ ಮಾಡಿದ ಹೊರಟ್ಟಿ, ನಿರ್ಣಯದ ಪರ 31, ವಿರುದ್ಧ 21 ಮತಗಳು ಬಂದಿವೆ. ಬಿಲ್ ಅನ್ನು ಸದನ ಪರಿಶೀಲನಾ ಸಮಿತಿಗೆ ಒಪ್ಪಿಸುವ ನಿರ್ಣಯ ಅಂಗೀಕಾರವಾಗಿದೆ ಎಂದು ಪ್ರಕಟಿಸಿ, ಸದನವನ್ನು ಬುಧವಾರ ಬೆಳಗ್ಗೆ 10ಕ್ಕೆ ಮುಂದೂಡಿದರು.
ಬೆಂಗಳೂರು:ವಿಧಾನ ಪರಿಷತ್​ನಲ್ಲಿ ಮಂಡನೆಯಾದ ಮೂರು ವಿಧೇಯಕಗಳು ಸರ್ವಾನುಮತದಿಂದ ಅಂಗೀಕಾರಗೊಂಡಿವೆ. ಈ ವಿಧೇಯಕಗಳನ್ನು ಪ್ರತ್ಯೇಕವಾಗಿ ಸಚಿವ ಎಚ್.ಕೆ.ಪಾಟೀಲ್ ಸದನದಲ್ಲಿ ಮಂಡಿಸಿದರು.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕದಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಜನರು ಕೈಗೊಳ್ಳುವ ನಿರ್ಮಾಣ ಮೊತ್ತವನ್ನು 50 ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ. ಈ ವಿಧೇಯಕವನ್ನು ಆಡಳಿತ ಪಕ್ಷದ ಸದಸ್ಯರಷ್ಟೇ ಅಲ್ಲದೆ, ಬಿಜೆಪಿ ಮತ್ತು ಜೆಡಿಎಸ್​ನ ಸದಸ್ಯರು ಸ್ವಾಗತಿಸಿದರು. ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕವನ್ನು ಸದನದಲ್ಲಿ ಪರ್ಯಾಲೋಚಿಸಿ ಅಂಗೀಕರಿಸಲಾಯಿತು.
ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕವನ್ನು ಮಂಡಿಸಿದ ಸಚಿವ ಎಚ್.ಕೆ. ಪಾಟೀಲ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಹುದ್ದೆ ಮತ್ತು ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಹುದ್ದೆಯನ್ನು ಮೇ 20 ರಿಂದ ಜಾರಿಗೆ ಬರುವಂತೆ ವಿಧೇಯಕದಲ್ಲಿ ಸೇರಿಸಲಾಗಿದೆ ಎಂದರು. ವಿಧೇಯಕಕ್ಕೆ ಸದನ ಒಪ್ಪಿಗೆ ನೀಡಿತು.
ದಲ್ಲಾಳಿಗಳ ಪರ, ವಿರುದ್ಧದ ವಿಚಾರವಾಗಿ ಆಡಳಿತ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಮಾತಿನ ಚಕಮಕಿಗೆ ಮೇಲ್ಮನೆ ಮಂಗಳವಾರ ಸಾಕ್ಷಿಯಾಯಿತು. ಕಮಲ-ದಳ ಒಂದಾಗಿ ಸರ್ಕಾರಕ್ಕೆ ಗುದ್ದು ನೀಡಿದ್ದೂ ವಿಶೇಷವಾಗಿ ಗಮನಸೆಳೆಯಿತು.
‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ, 2023ನ್ನು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಪರ್ಯಾಲೋಚಿಸಿ ಅಂಗೀಕರಿಸುವುದಕ್ಕೆ ಸದನದಲ್ಲಿ ಮಂಡಿಸಿದರು.
ಎಪಿಎಂಸಿಗಳಲ್ಲಿ ದಲ್ಲಾಳಿಗಳ ಶೋಷಣೆಯಿಂದ ಮುಕ್ತಿಗೊಳಿಸಿ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟಕ್ಕೆ ಅವಕಾಶ ನೀಡಲೆಂದು ಹಿಂದಿನ ಬಿಜೆಪಿ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಆದರೆ, ಹಳೆಯ ಕಾಯ್ದೆಯನ್ನು ಮತ್ತೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ರೈತರ ಸ್ವಾತಂತ್ರ್ಯ ಕಸಿದುಕೊಂಡು, ದಲ್ಲಾಳಿಗಳ ಪರವಾದ ಕಾಯ್ದೆ ತರಲು ಹೊರಟಿದೆ ಬಿಜೆಪಿ ಆರೋಪಿಸಿತು.
ಈ ಮಾತನ್ನು ಸಚಿವರಾದಿಯಾಗಿ ಆಡಳಿತ ಪಕ್ಷದ ಸದಸ್ಯರು ಬಲವಾಗಿ ವಿರೋಧಿಸಿದರು. ಕೇಂದ್ರ ಸರ್ಕಾರ, ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಗೋವಾ, ಅಸ್ಸೋಂ ರಾಜ್ಯಗಳಲ್ಲಿ ಕಾಯ್ದೆಯನ್ನು ಹಿಂಪಡೆದಿದ್ದು, ದಲ್ಲಾಳಿಗಳ ಪರವೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದರು.
ಬದಲಾವಣೆಯನ್ನು ರೈತರಿಗೆ ಸರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ಸೋತೆವು. ಮುಗ್ಧ ರೈತರ ಹೆಸರಿನಲ್ಲಿ ಕೆಲವು ಸಂಘಟನೆಗಳ ಚಳವಳಿಗೆ ಯಾರೆಲ್ಲ ಬೆಂಬಲಿಸಿದರು, ಫಂಡಿಂಗ್ ಮಾಡಿದರು, ವಿದೇಶಿ ಶಕ್ತಿಗಳು ಹೇಗೆಲ್ಲ ಕೈಜೋಡಿಸಿದವು ಗೊತ್ತಿದೆ. ದೇಶದ ಹಿತಕ್ಕಾಗಿ ಕೇಂದ್ರ ಸರ್ಕಾರ ಸ್ವಪ್ರತಿಷ್ಠೆ ಕೈಬಿಟ್ಟು ಕಾಯ್ದೆ ಹಿಂಪಡೆದಿದೆ ಎಂದು ಬಿಜೆಪಿ ಸದಸ್ಯರು ಸಮರ್ಥಿಸಿಕೊಂಡರು.
ಇದಕ್ಕೂ ಮುನ್ನ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದರ ಉದ್ದೇಶ ಈಡೇರಿಲ್ಲ. ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಕ್ಕಿಲ್ಲ, ಆದಾಯವೂ ದುಪ್ಪಟ್ಟಾಗಲಿಲ್ಲ. ಎಪಿಎಂಸಿಗಳ ಆದಾಯವೂ ಕುಸಿದು, ಆವರ್ತ ನಿಧಿಯೂ ಕರತೊಡಗಿತು. ಸಿಬ್ಬಂದಿ ಸಂಬಳದ ವೆಚ್ಚವನ್ನು ಸರ್ಕಾರದಿಂದಲೇ ಭರಿಸುವ ಪರಿಸ್ಥಿತಿ ತಲೆದೋರಿದೆ. ಮುಖ್ಯ, ಉಪ ಸೇರಿ 162 ಎಂಪಿಸಿಗಳಿವೆ, 8584 ಎಕರೆ ಆಸ್ತಿ ಹೊಂದಿದೆ. ಸವಲತ್ತು ಸೃಜನೆಗೆ ಆರ್​ಕೆವಿವೈ, ನಬಾರ್ಡ್ ಇನ್ನಿತರ ಮೂಲಗಳ ನೆರವು ಪಡೆದು 7,500 ಕೋಟಿ ರೂ. ವೆಚ್ಚ ಮಾಡಿದ್ದೂ ವ್ಯರ್ಥವಾಗ ತೊಡಗಿದೆ. ರೈತರ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಅನುಕೂಲ, ಎಪಿಎಂಸಿಗಳ ಬಲವರ್ಧನೆಗಾಗಿ ಬಿಜೆಪಿ ಸರ್ಕಾರ ತಂದಿದ್ದ ಕಾಯ್ದೆ ಕೈಬಿಟ್ಟು, ಹಿಂದಿದ್ದ ಕಾಯ್ದೆಯಲ್ಲಿ ಕೆಲವು ಮಾರ್ಪಾಡು ಮಾಡಿ ಮಸೂದೆ ರೂಪಿಸಲಾಗಿದೆ ಎಂದು ವಿವರಿಸಿದರು.
ಎಪಿಎಂಸಿ ಮುಖ್ಯ, ಉಪ ಮಾರುಕಟ್ಟೆಯಲ್ಲಿ ಪ್ಯಾಕ್ಸ್, ಎಫ್​ಪಿಒ ಹಾಗೂ ನೇರ ಖರೀದಿ ಲೈಸನ್ಸ್ ಪಡೆದವರಿಗೂ ವಹಿವಾಟಿಗೆ ಅವಕಾಶ ಕಲ್ಪಿಸಲಾಗುತ್ತದೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸುವುದು ನಮ್ಮ ಕರ್ತವ್ಯ. ಅಲ್ಲದೆ, 56 ರೈತ ಸಂಘಟನೆಗಳು ಬಿಜೆಪಿ ಸರ್ಕಾರದ ಕಾಯ್ದೆಯನ್ನು ವಿರೋಧಿಸುವೆ ಎಂದರು.
ತೀವ್ರ ವಿರೋಧ:‘ನನ್ನ ಬೆಳೆ ನನ್ನ ಹಕ್ಕು’ ಘೋಷವಾಕ್ಯದಡಿ ರೈತರು ತಾವು ಬೆಳೆಯನ್ನು ಬಯಸಿದಲ್ಲಿ ಮಾರಾಟ ಮಾಡಲು ಅವಕಾಶ ಕೊಡಲೆಂದು ಹಿಂದಿನ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿದ್ದು, ರೈತರಿಗೆ ನಿರ್ಬಂಧ ವಿಧಿಸುವ ಬಿಲ್ ವಿರೋಧಿಸುತ್ತೇವೆ ಎಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಹೇಳಿದರು. ಎಪಿಎಂಸಿಗಳಲ್ಲೂ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಶೋಷಣೆ, ದಲ್ಲಾಳಿಗಳ ಉಪಟಳದಿಂದ ಮುಕ್ತವಾಗಿಸಲು ಈ ಕ್ರಮಕೈಗೊಂಡಿತ್ತು ಎಂದರು.
ಜೆಡಿಎಸ್​ನ ಗೋವಿಂದರಾಜು ಬಿಜೆಪಿ ಸರ್ಕಾರದ ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿಗಳಿಗೆ ನಷ್ಟವಾಗಿದೆ ಎನ್ನುವುದು ಒಪ್ಪಲಾಗದು. ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ತಂದಿರುವ ಬಿಲ್​ಗೂ ವಿರೋಧವಿದೆ ಎಂದರು. ರೈತರಿಗೆ ಇಂತಹ ಕಡೆ ಮಾರಾಟ ಮಾಡಬೇಕೆಂದು ನಿರ್ದೇಶಿಸುವ ಮಸೂದೆಯು ಹಿಟ್ಲರ್ ಮನಸ್ಥಿತಿಗೆ ಕೈಗನ್ನಡಿ ಎಂದು ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ತಿವಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 18 =
Remember me
