ಬೆಂಗಳೂರು:ಬೆಂಬಲ ಬೆಲೆ, ಎಪಿಎಂಸಿ, ಜಿಎಸ್​ಟಿ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ತೀವ್ರ ಜಟಾಪಟಿಗೆ ಮಂಗಳವಾರ ವಿಧಾನಸಭೆ ಸಾಕ್ಷಿಯಾಯಿತು. ಎಪಿಎಂಸಿ ಬಗ್ಗೆ ಸಿದ್ದರಾಮಯ್ಯ ನಿಲುವೇನು? ಎಂಬ ವಿಚಾರದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹಳೆಯ ಪತ್ರವೊಂದನ್ನು ಸದನದಲ್ಲಿ ಬಹಿರಂಗಪಡಿಸಿ, ಪ್ರತಿಪಕ್ಷವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ ಪ್ರಸಂಗವೂ ನಡೆಯಿತು.
‘ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಮಾರಬೇಕೆನ್ನುವ ಆಯ್ಕೆ ಸಿಗುವಂತಾಗಲು, ಗ್ರಾಹಕರಿಗೆ ಲಾಭ ಸಿಗಲು ಹಣ್ಣು ಮತ್ತು ತರಕಾರಿಯನ್ನು ಎಪಿಎಂಸಿ ವ್ಯಾಪ್ತಿಯಿಂದ ಹೊರಗಿಡಬೇಕು’ ಎಂಬ ಕುರಿತು ಸಹಕಾರ ಕಾರ್ಯದರ್ಶಿಗೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಬರೆದಿದ್ದ ಪತ್ರವನ್ನು ಪ್ರದರ್ಶಿಸಿದ ಮಾಧುಸ್ವಾಮಿ, ಎಪಿಎಂಸಿಯಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ನಿಲುವನ್ನು ಸಿದ್ದರಾಮಯ್ಯ ಹೊಂದಿದ್ದರು ಎಂದರು. ಈ ವೇಳೆ ತಡಬಡಾಯಿಸಿದ ಸಿದ್ದರಾಮಯ್ಯ, ಆ ಪತ್ರವನ್ನು ತರಿಸಿಕೊಂಡು ಓದಿಕೊಂಡರು. ಬಳಿಕ, ನನ್ನ ಅಭಿಪ್ರಾಯ ಎಪಿಎಂಸಿ ವಿರುದ್ಧವಲ್ಲ. ಹಣ್ಣು- ತರಕಾರಿ ಮಾತ್ರ ಎಪಿಎಂಸಿ ವ್ಯಾಪ್ತಿಯಿಂದ ಹೊರಗಿಡುವುದಾಗಿತ್ತು ಎಂದು ಸಮರ್ಥಿಸಿಕೊಂಡರು. ಈ ವೇಳೆ ಮತ್ತೆ ವಾಗ್ದಾಳಿ ನಡೆಸಿದ ಮಾಧುಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ, ಹಾಗಿದ್ದರೆ ಅನ್ಯಾಯ ಆಗುತ್ತಿದೆ ಎಂದು ಒಪ್ಪಿಕೊಂಡಿರಲ್ಲ, ಏಕೆ ಡಬಲ್ ಸ್ಟಾ್ಯಂಡರ್ಡ್ ಎಂದು ಕುಟುಕಿದರು.
‘ಕಾಂಗ್ರೆಸ್ ರಾಜಕೀಯ ರೊಟ್ಟಿ ಸುಡುತ್ತಿದೆ. ನಿಮ್ಮನ್ನು ಜನ ಸೋಲಿಸಿ ಮನೆಗೆ ಕಳಿಸಿದ್ದಾರೆ, ಈಗ ನೀವು ರೈತರ ಹೆಸರಿನಲ್ಲಿ ಮುನ್ನೆಲೆಗೆ ಬರಲು ಪ್ರಯತ್ನ ಮಾಡುತ್ತಿದ್ದು, ರೈತರ ದಾರಿ ತಪ್ಪಿಸುತ್ತಿದ್ದೀರಿ’ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರಲ್ಲದೆ, ಹೊಲದಲ್ಲಿ ಇರುವ ರೈತರು ನಮ್ಮ ಪರವಾಗಿದ್ದಾರೆ ಎಂದರು. ಸಿದ್ದರಾಮಯ್ಯ ಮಾತನಾಡಿ, ಯಾರೂ ರೈತರಿಗೆ ದಾರಿ ತಪ್ಪಿಸಲು ಆಗಲ್ಲ. ರೈತರು ಬುದ್ಧಿವಂತರು ಎಂದರು. ಒಂದು ಹಂತದಲ್ಲಿ ಗದ್ದಲ ಉಂಟಾಗಿ ಯಾರ ಮಾತೂ ಕೇಳದ ಸ್ಥಿತಿ ನಿರ್ವಣವಾಯಿತು.
ಬೆಂಬಲ ಬೆಲೆ ಕುರಿತು ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ, ರೈತರಿಗೆ ಸೂಕ್ತ ಬೆಂಬಲ ಸಿಗದೆ ಇದ್ದರೆ ನಾವು ರೈತರ ಪರ ಇದ್ದೇವೆನ್ನುವುದನ್ನು ಢೋಂಗಿ ಎನ್ನಬೇಕಾಗುತ್ತದೆ ಎಂದು ಕುಟುಕಿದರು. ಜತೆಗೆ ಕೇಂದ್ರ ಸರ್ಕಾರ ಈ ವರ್ಷಕ್ಕೆ 17 ಬೆಳಗಳಿಗೆ ಕನಿಷ್ಟ ಬೆಂಬಲ ಬೆಲೆ ಘೊಷಣೆ ಮಾಡಿದ್ದು, ತಕ್ಷಣವೇ ಖರೀದಿ ಕೇಂದ್ರ ಆರಂಭಿಸಬೇಕು. ಭತ್ತದ ಬೆಳೆಗೆ ಪ್ರತಿ ಕ್ವಿಂಟಾಲ್​ಗೆ 500 ರೂ. ಪೋ›ತ್ಸಾಹ ಧನ ನೀಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವ ಕಾನೂನನ್ನು ಪಂಜಾಬ್ ಸರ್ಕಾರ ತಂದಿದೆ. ಇಲ್ಲೂ ಅಂತಹ ಕ್ರಮಗಳಾಗಬೇಕು ಎಂದರು.
ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ, ಕರೊನಾ, ಪ್ರವಾಹದಿಂದ ನಿರೀಕ್ಷಿಸಿದಷ್ಟು ಉತ್ಪಾದನೆ ಬರುತ್ತಿಲ್ಲ. 10 ಲಕ್ಷ ಟನ್ ಆಹಾರ ಉತ್ಪಾದನೆ ಕಡಿಮೆ ಆಗುತ್ತಿದೆ, ಈ ವರ್ಷ 29 ಲಕ್ಷ ಟನ್ ಭತ್ತ ಬೆಳೆ ನಿರೀಕ್ಷಿಸಲಾಗಿದೆ. ಅದರಲ್ಲಿ ಕನಿಷ್ಟ ಶೇ.80 ಆದರೂ ಸರ್ಕಾರ ಖರೀದಿ ಮಾಡದಿದ್ದರೆ ಹೇಗೆ? ಬರೀ 2.50 ಲಕ್ಷ ಟನ್ ಖರೀದಿಸಿದರೆ ಹೇಗೆ? ಉಳಿದವರು ಎಲ್ಲಿ ಹೋಗ ಬೇಕು? ಕೇಂದ್ರ ಕೂಡ ಬೆಂಬಲ ಬೆಲೆಯನ್ನು ಅವೈಜ್ಞಾನಿಕವಾಗಿ ನಿಗದಿ ಮಾಡುತ್ತಿದೆ. ಸ್ವಾಮಿನಾಥನ್ ವರದಿ ಆಧರಿಸಿ ಬೆಲೆ ನಿಗದಿ ಮಾಡುತ್ತೇವೆಂದು ಹೇಳುತ್ತಾರೆ. ಆದರೆ, ತಪ್ಪು ನಿಗದಿ ಮಾಡುತ್ತಾರೆ. ಸ್ವಾಮಿನಾಥನ್ ಕೊಟ್ಟ ಫಾಮುಲಾ ಬಿಟ್ಟು ಬೆಲೆ ನಿಗದಿ ಮಾಡುತ್ತಾರೆ ಎಂದು ಟೀಕಿಸಿದರು.
ಪ್ರತಿಪಕ್ಷದ ಆಗ್ರಹ
2. ಭತ್ತಕ್ಕೆ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್​ಗೆ 500 ರೂ. ಪೋ›ತ್ಸಾಹ ಧನ ನೀಡಿ
3. ಷರತ್ತು ಸರಳೀಕರಣಿಸಿ, ಖರೀದಿಗೆ ಮಿತಿ ಹಾಕದೆ ಹೆಚ್ಚು ಖರೀದಿಸಿ
4. ಖರೀದಿ ಆಗುತ್ತದೋ ಬಿಡುತ್ತದೋ ಮೊದಲು ಖರೀದಿ ಕೇಂದ್ರ ತೆರೆಯಿರಿ
5. ಬೆಂಬಲ ಬೆಲೆಗಿಂತ ಕಡಿಮೆಗೆ ಖರೀದಿಸಿದರೆ ಕ್ರಿಮಿನಲ್ ಪ್ರಕರಣ ಹೂಡಲು ಕಾನೂನು ಮಾಡಿ
6. ಬೆಂಬಲ ಬೆಲೆ ಸಾಕಾಗಲ್ಲ, ಎಲ್ಲ ಬೆಲೆಗಳಿಗೂ ಬೋನಸ್ ಕೊಡಿ
ಸರ್ಕಾರದ ಸ್ಪಷ್ಟನೆ
2. ಖರೀದಿ ಕೇಂದ್ರಕ್ಕೆ ನಿರೀಕ್ಷೆಯಷ್ಟು ಉತ್ಪನ್ನ ಬರುತ್ತಿಲ್ಲ, ಕೇಂದ್ರ ನೀಡಿದ ಗುರಿ ಮುಟ್ಟುತ್ತಿಲ್ಲ
3. ಶೀಘ್ರವೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಖರೀದಿ ಪ್ರಮಾಣ ಹೆಚ್ಚಿಸಲು ಅನುಮತಿ ಕೇಳಲು ನಿರ್ಧಾರ
4. 90 ದಿನಕ್ಕಿಂತ ಹೆಚ್ಚು ದಿನ ಖರೀದಿ ಸಾಧ್ಯವಿಲ್ಲ.
ಪಿಎಂ, ಸಿಎಂ ಯಾರೂ ಉತ್ತರಿಸಲ್ಲ
ನಾನು ಬರೆದ ಪತ್ರಕ್ಕೆ ಪ್ರಧಾನಿ, ಮುಖ್ಯಮಂತ್ರಿ ಉತ್ತರವನ್ನೇ ನೀಡಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. 6.6.2020ರಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದೆ, ವೈಜ್ಙಾನಿಕವಾಗಿ ಬೆಲೆ ನಿಗದಿ ಮಾಡಿಲ್ಲ. ರೈತರಿಗೆ ಅನ್ಯಾಯ ಆಗುತ್ತದೆ. ಪುನರ್ ಪರಿಶೀಲನೆ ಮಾಡಿ ಎಂದು ಕೇಳಿದ್ದೆ. ಅವರು ಉತ್ತರ ಕೊಟ್ಟಿಲ್ಲ. ನೀವೇ (ಸಿಎಂ) ಉತ್ತರ ಕೊಡಲ್ಲ. ಇನ್ನು ಅವರೆಲ್ಲಿ ಕೊಟ್ಟಾರು. ನಾನು ಮೂರು ಪತ್ರ ಸಿಎಂಗೆ ಬರೆದಿದ್ದೇನೆ. ಒಂದಕ್ಕೂ ಉತ್ತರ ಕೊಟ್ಟಿಲ್ಲ ಎಂದರು. ರಾಜ್ಯದಲ್ಲಿ ಪ್ರಜಾಪ್ರಭುತ್ವ ಇದೆಯಾ? ಉತ್ತರ ಕೊಡಬೇಡಿ ಎಂದು ನಿಮಗೆ ಏನಾದರೂ ನಿಯಮವಿದೆಯಾ? ನಿಮ್ಮಂತೆ ಅಧಿಕಾರಿಗಳು ಸಹ ಪ್ರತಿಪಕ್ಷ ನಾಯಕರ ಪತ್ರಕ್ಕೆ ಉತ್ತರಕೊಡಬಾರದೆಂಬ ನಿಯಮ ಮಾಡಿಕೊಂಡಿದ್ದೀರಾ ಎಂದು ಪ್ರಶ್ನಿಸಿದರು. ಕೇಂದ್ರ ಕೃಷಿ ಸಚಿವ ಥೋಮರ್ ಮಾತ್ರ ನಮ್ಮ ಪತ್ರಕ್ಕೆ ಉತ್ತರ ಕೊಟ್ಟಿದ್ದಾರೆ ಎಂದರು.
ಜಿಎಸ್​ಟಿ ಕಿತ್ತಾಟ
ಜಿಎಸ್​ಟಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ತೀಕ್ಷ್ಣ ಪದಗಳ ಮಾತಿನ ವಿನಿಮಯವಾಯಿತು. ಜಿಎಸ್​ಟಿ ಕಾಂಗ್ರೆಸ್ ಕೂಸೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರೆ, ಅದರ ಅನುಷ್ಠಾನದಲ್ಲಿ ಎನ್​ಡಿಎ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಪ್ರತಿ ಟೀಕೆ ಮಾಡಿತು. ಸರಕು ಮತ್ತು ಸೇವಾ ತೆರಿಗೆ ನಷ್ಟ ಪರಿಹಾರ ಕೊಡದೆ ಕೇಂದ್ರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ, ಕರೊನಾ ಕಾರಣದಿಂದ ನಷ್ಟವನ್ನು ಸಾಲ ಮಾಡಿ ಬಳಸಿಕೊಳ್ಳಿ ಎಂದು ಕೇಂದ್ರ ಹೇಳುವುದು ಅನ್ಯಾಯವೆಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಅವರೇ ಏಕೆ ಸಾಲ ಪಡೆದು ಕೊಡಲಿಲ್ಲ. ಈ ಬಾರಿ ರಾಜ್ಯಕ್ಕೆ ಜಿಎಸ್​ಟಿಯಿಂದ 24 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ, ಸಾಲ ರೂಪದಲ್ಲಿ ಒಂದಷ್ಟು ಕೊರತೆ ನೀಗಿಸಿಕೊಂಡರೂ 7-8 ಸಾವಿರ ಕೋಟಿ ರೂ. ಕೊರತೆ ಬೀಳಲಿದೆ ಎಂದರು. ನಷ್ಟ ಪರಿಹಾರವನ್ನು 2025ರವರೆಗೂ ಮುಂದುವರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಿ. ನಾವು ಹಿಂದೆ ಅದನ್ನೇ ಹೇಳಿದ್ದೆವು ಎಂದೂ ಆಗ್ರಹಿಸಿದರು.
ಖಾಲಿ ಹುದ್ದೆ ತುಂಬಲು ಕ್ರಮ
ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಲಿ ಉದ್ದೆ ತುಂಬಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು. ಜೆಡಿಎಸ್​ನ ಎಚ್.ಕೆ.ಕುಮಾರಸ್ವಾಮಿ ಪ್ರಶ್ನೆಗೆ ಉತ್ತರಿಸಿ, ಗ್ರೂಪ್ ಎನಲ್ಲಿ 15 ಹುದ್ದೆ, ಗ್ರೂಪ್ ಬಿಯಲ್ಲಿ 16, ಗ್ರೂಪ್ ಸಿಯಲ್ಲಿ 176 ಮತ್ತು ಗ್ರೂಪ್ ಡಿಯಲ್ಲಿ 44 ಹುದ್ದೆ ಖಾಲಿ ಇವೆ. ಈ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ನಡೆಸಲಾಗಿದೆ ಎಂದು ಸಚಿವರು ವಿವರಿಸಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 − 2 =
Remember me
