ಬೆಂಗಳೂರು:ಅತಿಯಾದ ಮಳೆಯಿಂದ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಉಂಟಾಗಿರುವ ಸಮಸ್ಯೆ ವೀಕ್ಷಿಸಲು ಕೇಂದ್ರ ಸರ್ಕಾರ ಕಳಿಸಿಕೊಟ್ಟಿರುವ ಅಧಿಕಾರಿಗಳ ಉನ್ನತ ಮಟ್ಟದ ಸಮಿತಿ ಮುಂದೆ ರಾಜ್ಯ ಸರ್ಕಾರ ವಿಶೇಷ ನೆರವಿನ ಅಗತ್ಯತೆ ಪ್ರತಿಪಾದಿಸಿದೆ.
ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಅಧ್ಯಯನ ತಂಡದೊಂದಿಗೆ ಸುದೀರ್ಘ ಚರ್ಚೆ ಮಾಡಲಾಗಿದ್ದು ರಾಜ್ಯದ ಪರಿಸ್ಥಿತಿ ವಿವರಿಸಲಾಗಿದೆ. ಎಲ್ಲ ಕೆರೆಗಳು ತುಂಬಿ ಹರಿಯುತ್ತಿದ್ದು ಇದು ವಿಶೇಷವಾದ ಸಂದರ್ಭ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಕಳೆದ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಂದಿರುವ ಮಳೆಯ ಬಗ್ಗೆ ವಿವರಗಳನ್ನು ನೀಡಲಾಗಿದೆ. ದಕ್ಷಿಣ ಹಾಗೂ ಉತ್ತರ ಒಳನಾಡು, ಕರಾವಳಿ, ಬೆಂಗಳೂರಿನಲ್ಲಿ ಪ್ರವಾಹ ಉಂಟಾಗಿದೆ ಎಂಬ ವಿವರಗಳನ್ನು ನೀಡಲಾಗಿದೆ. ಬೆಳೆ ಮತ್ತು ಮನೆಗಳಿಗೆ ಆಗಿರುವ ಹಾನಿ, ಮೂಲಸೌಕರ್ಯಕ್ಕೆ ಆಗಿರುವ ಹಾನಿ, ಜನ ಜಾನುವಾರುಗಳಿಗೆ ಆಗಿರುವ ಪ್ರಾಣಹಾನಿ ಕುರಿತ ವಿವರಗಳನ್ನು ನೀಡಿದೆ ಎಂದರು.
ಕೇಂದ್ರದ ಅಧಿಕಾರಿಗಳು ನಾಲ್ಕು ತಂಡಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದು, ಅವರು ಭೇಟಿ ನೀಡಿ ಬಂದ ನಂತರ ಮತ್ತೊಂದು ಸಭೆ ನಡೆಸಿ ಅಂತಿಮವಾದ ಮನವಿ ನೀಡಲಾಗುವುದು. ಕಳೆದ ವಾರವೇ ಒಂದು ಮನವಿ ಕಳುಹಿಸಲಾಗಿತ್ತು. ಈಗ ಅಪ್ ಡೇಟ್ ಮಾಡಿ ಮತ್ತೊಮ್ಮೆ ವಿಸõತ ಮನವಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪ್ರವಾಹ ವೀಕ್ಷಣೆ:ಬೆಂಗಳೂರಿನ ಮಹದೇವಪುರಕ್ಕೆ ತಂಡವನ್ನು ಕಳುಹಿಸಲಾಗಿದೆ. ಅಲ್ಲಿಂದ ಹೆಲಿಕಾಪ್ಟರ್​ನಲ್ಲಿ ರಾಮನಗರ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಕಾರವಾರಕ್ಕೆ ಒಂದು ತಂಡ, ಚಿತ್ರದುರ್ಗ, ಚಿಕ್ಕಮಗಳೂರಿಗೆ ಮತ್ತೊಂದು ತಂಡ, ಬೀದರ್, ಕಲಬುರಗಿಗೆ ಮಗದೊಂದು ತಂಡ ಭೇಟಿಕೊಡಲಿದೆ.
ರಾಜ್ಯದಲ್ಲಿ 4 ದಿನ ಮಳೆ ಜೋರು:ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬುಧವಾರವೂ ವರುರ್ಣಾಭಟ ಮುಂದುವರಿದ್ದು, ಮಳೆ ಸಂಬಂಧಿತ ಅವಘಡಗಳಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಮುಂದಿನ 4 ದಿನ ಇನ್ನೂ ಹೆಚ್ಚು ಮಳೆ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಮತ್ತು ಬೆಳಗಾವಿಯಲ್ಲಿ ಮುಂದಿನ 48 ಗಂಟೆ ಸುರಿಯುತ್ತಿರುವ ಮಳೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಹಾಸನ, ಶಿವಮೊಗ್ಗ, ಬಾಗಲಕೋಟೆ, ಯಾದಗಿರಿ, ಗದಗ, ಹಾವೇರಿ, ಬಳ್ಳಾರಿ, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಸೆ.8 ಮತ್ತು ಸೆ.9ರಂದು ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಾತ್ರ ಮಳೆ ಆರ್ಭಟ ಇದ್ದರೆ, ಉಳಿದೆಡೆ ಅಗಾಗ್ಗೆ ಸಾಧಾರಣ ಮಳೆ ಬೀಳಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಪೇದೆ ಮಹೇಶ ಮೃತದೇಹ ಪತ್ತೆ:ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ತೊಂಡಿಹಾಳ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಪೇದೆ ಮಹೇಶ ವಕ್ರದ್ (30) ಮೃತದೇಹ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ 16 ಸದಸ್ಯರು ಮಂಗಳವಾರದಿಂದ ಹುಡುಕಾಟ ನಡೆಸಿದ್ದರು. ತೊಂಡಿಹಾಳ ಹಳ್ಳದಿಂದ 8 ಕಿ.ಮೀ. ದೂರದ ಸಂಗನಾಳ ಬಳಿ ಶವ ದೊರೆತಿದೆ. ಗದಗ ಜಿಲ್ಲೆ ಮುಂಡರಗಿ ಪೊಲೀಸ್ ಠಾಣೆಯ ಮಹೇಶ ವಕ್ರದ್ ಹಾಗೂ ಆನಂದ ಹಲವಾಗಲಿ ಸೋಮವಾರ (ಸೆ.5) ಗಜೇಂದ್ರಗಡಕ್ಕೆ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿದ್ದರು. ಮರಳಿ ತೊಂಡಿಹಾಳ ಮಾರ್ಗವಾಗಿ ಮುಂಡರಗಿಗೆ ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದರು.
ಕಳಸದಲ್ಲಿ ವರುಣನ ಅಬ್ಬರ:ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಾದ್ಯಂತ ಬುಧವಾರ ಬೆಳಗ್ಗೆ ಸುರಿದ ಭಾರಿ ಮಳೆಗೆ ಗದ್ದೆಗಳು ಜಲಾವೃತವಾಗಿದ್ದು ರಸ್ತೆ, ಮೋರಿಗಳು ಕೊಚ್ಚಿಕೊಂಡುಹೋಗಿವೆ. ತನೂಡಿ ಗ್ರಾಮಕ್ಕೆ ಹೋಗುವ ರಸ್ತೆ ಕೊಚ್ಚಿಹೋಗಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಭಾಗದ ಸುಮಾರು 50 ಕುಟುಂಬಗಳು ತೊಂದರೆ ಅನುಭವಿಸುವಂತಾಗಿದೆ.
ಮಳೆ ಬಂದರೆ ಅಪಾಯ:ಚಾಮರಾಜನಗರ ತಾಲೂಕಿನ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳಿಂದ ನೀರಿನ ಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪ್ರವಾಹ ಕೊಂಚ ತಗ್ಗಿದೆ. ಮಳೆ ಸುರಿದರೆ ಡ್ಯಾಂಗಳು ತುಂಬಿ ಮತ್ತೆ ಪ್ರವಾಹ ಎದುರಾಗಬಹುದೆಂಬ ಭೀತಿಯಲ್ಲಿ ಜನರಿದ್ದಾರೆ. ಚಾಮರಾಜನಗರ, ಯಳಂದೂರು ತಾಲೂಕಿನಲ್ಲಿ ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಬುಧವಾರ ತುಸುಮಟ್ಟಿಗೆ ನೀರಿನ ಪ್ರಮಾಣ ಇಳಿಕೆಯಾಗಿದೆ.
ಕೊಚ್ಚಿಹೋದ ಯುವಕ:ಕೂಡಲಸಂಗಮ ಸಮೀಪದ ಹಿರೇಮಳಗಾವಿ ಗ್ರಾಮದ ಬಳಿಯ ನದಿ ದಡದಲ್ಲಿ ಪಂಪ್​ಸೆಟ್ ತರಲು ಹೋಗಿದ್ದ ಯುವಕ ಕಾಲು ಜಾರಿ ಬಿದ್ದು ಬುಧವಾರ ಬೆಳಗ್ಗೆ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಹಿರೇಮಳಗಾವಿಯ ದೇವಾನಂದ ಬಡಗೇರ (18) ಕೊಚ್ಚಿ ಹೋದವ. ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಹುನಗುಂದ ತಹಸೀಲ್ದಾರ್ ಬಸಲಿಂಗಪ್ಪ ನಾಯಕೋಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಭಾರಿ ಪ್ರಮಾಣದ ಬೆಳೆ ಹಾನಿ:ಉತ್ತರ ಕರ್ನಾಟಕದ ವಿವಿಧೆಡೆ ಬುಧವಾರವೂ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಊರುಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಭಾರಿ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಹಾವೇರಿ ಜಿಲ್ಲೆಯ ಗುತ್ತಲ ಪಟ್ಟಣದಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಗದಗ ಬೆಟಗೇರಿಯ ಖಾದಿ ಗ್ರಾಮೋದ್ಯೋಗ ಘಟಕಕ್ಕೆ ನೀರು ನುಗ್ಗಿ ಖಾದಿ ಬಟ್ಟೆ, ನೂಲು, ಹತ್ತಿ ಇತ್ಯಾದಿಗಳು ಹಾನಿಯಾಗಿವೆ.
ಉಕ್ಕಿ ಹರಿದ ನೇತ್ರಾವತಿ, ಮೃತ್ಯುಂಜಯ:ಭಾರಿ ಮಳೆ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ, ಮೃತ್ಯುಂಜಯ ನದಿ ಉಕ್ಕಿ ಹರಿದು ಉಂಟಾಗಿದ್ದ ಪ್ರವಾಹದಿಂದ ಕೃಷಿಕರು ತತ್ತರಿಸಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ವ್ಯಾಪಕ ಹಾನಿಯಾಗಿದೆ. ನದಿಗಳು ತುಂಬಿ ಹರಿಯುವಷ್ಟು ಪ್ರಮಾಣದ ಮಳೆ ಇಲ್ಲದಿದ್ದರೂ, ನದಿಗಳಲ್ಲಿ ನೀರಿನ ಪ್ರಮಾಣದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂತು. ಸುಮಾರು ಎರಡು ಗಂಟೆ ಬಳಿಕ ನೀರಿನ ಪ್ರಮಾಣ ಇಳಿಕೆಯಾಗತೊಡಗಿತು.
ಮಳೆಗೆ ಆಶಾಕಾರ್ಯಕರ್ತೆ ಬಲಿ:ಬಳ್ಳಾರಿ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ಆಶಾಕಾರ್ಯಕರ್ತೆಯೊಬ್ಬರು ಮೃತಪಟ್ಟಿದ್ದಾರೆ. ಕಂಪ್ಲಿ ತಾಲೂಕಿನ ಎಮ್ಮಿಗನೂರು ನಿವಾಸಿ ಬಿ.ಉಮಾದೇವಿ(44) ಮೃತೆ. ಜಿಲ್ಲಾದ್ಯಂತ ಸುರಿದ ಮಳೆಗೆ ಒಂದು ಗುಡಿಸಲು ಸೇರಿ 65 ಮನೆಗಳು ಹಾನಿಯಾಗಿದೆ. ಸಂಡೂರು ತಾಲೂಕಿನ ನಾರಿಹಳ್ಳ ಜಲಶಾಯ ತುಂಬಿ ಹರಿದ ಪರಿಣಾಮ ಸುಮಾರು 25 ಹೆಕ್ಟರ, ಜಿಲ್ಲಾದ್ಯಂತ 45 ಹೆಕ್ಟೇರ್ ಬೆಳೆ ನಾಶವಾಗಿದೆ.
ಬೀದರ್/ಮಂಗಳೂರು:ಜುಲೈ, ಆಗಸ್ಟ್​ನಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಬುಧವಾರ ಕೇಂದ್ರದ ಅಧ್ಯಯನ ತಂಡ ಸುರಿಯುತ್ತಿರುವ ಮಳೆಯಲ್ಲೇ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ನಿರ್ದೇಶಕ ಡಾ.ಕೆ. ಮನೋಹರ್ ನೇತೃತ್ವದ ತಂಡ ಜಿಲ್ಲೆಯ ವಿವಿಧೆಡೆ ಸಂಚರಿಸಿತು. ತಂಡಕ್ಕೆ ಜಿಲ್ಲಾಧಿಕಾರಿ ಗೋವಿಂದರಡ್ಡಿ ಸಮಗ್ರ ಮಾಹಿತಿ ನೀಡಿ ಗಮನ ಸೆಳೆದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಮೊತ್ತೊಂದು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೊಡಗು, ಸಂಪಾಜೆ, ಸುಬ್ರಹ್ಮಣ್ಯ, ಬೆಳ್ತಂಗಡಿಯ ನೆರೆಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ಐವರನ್ನು ಒಳಗೊಂಡ ತಂಡ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದೆ. ಹಾನಿ ಬಗ್ಗೆ ಅಧಿಕಾರಿಗಳೊಂದಿಗೆ ರ್ಚಚಿಸಿ ಅಂಕಿ ಅಂಶ ಕಲೆಹಾಕಿದೆ. ಗುರುವಾರ ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಸುರತ್ಕಲ್ ಪ್ರದೇಶದಲ್ಲಿ ಕಡಲ್ಕೊರೆತದಿಂದಾದ ಹಾನಿಯನ್ನು ಪರಿಶೀಲಿಸಿದ ಬಳಿಕ ತಂಡ ಉಡುಪಿ ಜಿಲ್ಲೆಯ ಸಮೀಕ್ಷೆ ನಡೆಸಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
