ಬೆಂಗಳೂರು:ಲೋಕಸಭೆ ಚುನಾವಣೆ ತಯಾರಿ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್​ನಲ್ಲಿ ಮೂರು ರೀತಿಯ ಗೊಂದಲ ಸೃಷ್ಟಿಯಾಗಿದೆ. ಸಮರ್ಥ ಅಭ್ಯರ್ಥಿ ಲಭ್ಯರಿಲ್ಲದ ಕಡೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಚಿವರು ಹಿಂದೇಟು ಹಾಕುತ್ತಿರುವುದು, ನಿಗಮ- ಮಂಡಳಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ನೈಜ ಕಾರ್ಯಕರ್ತರ ಕಡೆಗಣನೆ ಹಾಗೂ ಜಾತಿವಾರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ಪಟ್ಟುಗಳು ಹೈಕಮಾಂಡ್​ಗೂ ಸವಾಲು ತಂದೊಡ್ಡಿದೆ.
ಡಿಕೆಶಿಯವರನ್ನೇನು ಡಿಸ್ಟರ್ಬ್ ಮಾಡಲ್ಲವಲ್ಲ!:ಇನ್ನಷ್ಟು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ವಿಷಯದಲ್ಲಿ ಡಿ.ಕೆ. ಶಿವಕುಮಾರ್ ಅಭಿಪ್ರಾಯ ಬೇರೆ, ನಮ್ಮ ಬೇಡಿಕೆಯೇ ಬೇರೆ. ಸಮುದಾಯವಾರು ಕೊಡಿ ಎಂಬುದು ನಮ್ಮ ಬೇಡಿಕೆ. ಅವರನ್ನೇನು ತೆಗೆಯಿರಿ ಎಂದು ಹೇಳುತ್ತಿಲ್ಲವಲ್ಲ. ಅವರನ್ನೇನು ಡಿಸ್ಟರ್ಬ್ ಮಾಡಲ್ಲವಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಜತೆ ಸಭೆ ನಡೆಸಿದ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಿದ ಅವರು, ಕಳೆದ ಚುನಾವಣೆಯಲ್ಲಿ ಅನೇಕ ಜಾತಿಗಳು ಪ್ರಬಲವಾಗಿ ಕಾಂಗ್ರೆಸ್ ಜತೆ ಗುರುತಿಸಿಕೊಂಡಿವೆ. ಅವರಿಗೂ ಉಪ ಮುಖ್ಯಮಂತ್ರಿ ಅವಕಾಶ ಕೊಡಬೇಕಾಗುತ್ತದೆ. ಲೋಕಸಭೆ ಚುನಾವಣೆಗೆ ಮುನ್ನ ನೇಮಕ ಮಾಡಿ ಎಂದು ಪಕ್ಷದ ರಾಜ್ಯ ಉಸ್ತುವಾರಿಯವರಿಗೆ ಹೇಳಿದ್ದೇವೆ ಎಂದರು. ಎಷ್ಟು ಡಿಸಿಎಂ, ಯಾರಿಗೆ ಕೊಡಬೇಕೆಂಬುದು ಹೈಕಮಾಂಡ್​ಗೆ ಬಿಟ್ಟಿದ್ದು. ಲೋಕಸಭೆಗೆ ಮುನ್ನ ಮಾಡಬೇಕೆಂಬುದು ನಮ್ಮ ಆಗ್ರಹ ಎಂದ ಅವರು, ನಮ್ಮ ಬೇಡಿಕೆ ಬಗ್ಗೆ ಸುರ್ಜೆವಾಲ ಮನವರಿಕೆ ಆಗಿದ್ದಾರೆ. ಇಷ್ಟೆಲ್ಲ ಸಚಿವರು ಹೇಳಿದ ಮೇಲೆ ಮನವರಿಕೆ ಆಗದೇ ಇರುತ್ತಾರಾ? ಎಂದರು.
ಡಿಕೆಶಿ ಪವರ್ ಕಟ್?:ಇನ್ನೂ 3-4 ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ಪಟ್ಟು ಪಕ್ಷದಲ್ಲಿ ಬಿಗಿಯಾಗುತ್ತಿದೆ. ಹಿರಿಯ ಸಚಿವರೇ ಒಗ್ಗಟ್ಟಾಗಿ ಬೇಡಿಕೆ ಮುಂದಿಟ್ಟಿರು ವುದರಿಂದ ಹೈಕಮಾಂಡ್​ಗೂ ಕಸಿವಿಸಿ. ಡಿಸಿಎಂ ಡಿ.ಕೆ.ಶಿವಕುಮಾರ್ ಶಕ್ತಿಯನ್ನು ಕುಂದಿಸುವ ಲೆಕ್ಕಾಚಾರದಲ್ಲಿ ಈ ತಂತ್ರ ರೂಪು ಗೊಳ್ಳುತ್ತಿದೆ ಎಂಬ ವಾದವೂ ಇದೆ. ಮುಸ್ಲಿಂ, ದಲಿತ, ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಒಂದೊಂದು ಡಿಸಿಎಂ ಸ್ಥಾನ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಲಾಭವಾಗಲಿದೆ ಎಂಬ ದಾಳವನ್ನು ಸಚಿವರ ತಂಡ ಉರುಳಿಸಿದೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತ್ರ ಈ ಪ್ರಸ್ತಾಪವನ್ನು ತಳ್ಳಿಹಾಕಿದ್ದು, ಲೋಕಸಭೆ ಚುನಾವಣೆ ಎದುರಿಗಿರುವಾಗ ಇಂತಹ ಚರ್ಚೆ ಬೇಡ ಎಂದಿದ್ದಾರೆ. ಮಂಗಳವಾರ ಸಂಜೆ ಸುರ್ಜೆವಾಲ ಭೇಟಿ ಮಾಡಿದ್ದ ಡಿ.ಕೆ ಶಿವಕುಮಾರ್ ನಿಗಮ, ಮಂಡಳಿ ನೇಮಕ ಸೇರಿದಂತೆ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲ್ಲ:ಲೋಕಸಭೆ ಚುನಾವಣೆ ಸಲುವಾಗಿ 28 ಸಚಿವರಿಗೆ ಕ್ಷೇತ್ರವಾರು ಹೊಣೆ ಹಂಚಿಕೆ ಮಾಡಿದ್ದರಿಂದ ತಾವು ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಆಗಲ್ಲ ಎಂದು ನಿಟ್ಟುಸಿರುಬಿಟ್ಟಿದ್ದ ಬಹುತೇಕ ಸಚಿವರಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸಣ್ಣ ಶಾಕ್ ನೀಡಿದ್ದಾರೆ. ಸಿದ್ದರಾಮಯ್ಯ ಸಂಪುಟದ ಪ್ರಮುಖ ಸಚಿವರನ್ನು ಬರ ಹೇಳಿದ್ದ ಸುರ್ಜೆವಾಲ, ಲೋಕಸಭೆ ಚುನಾವಣೆ ಬರುತ್ತಿದೆ, ಹಿರಿಯರಾದ ಕಾರಣ ತಾವೆಲ್ಲರೂ ಚುನಾವಣೆ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಜತೆಗೆ ಅನಿವಾರ್ಯವಾದಲ್ಲಿ ಸ್ಪರ್ಧೆಗೆ ಸಿದ್ಧರಾಗಿರಿ ಎಂಬ ಸಂದೇಶವನ್ನೂ ನೀಡಿದ್ದಾರೆ. ಹಾಗೆಯೇ, ಜ.11ಕ್ಕೆ ಕ್ಷೇತ್ರದ ಉಸ್ತುವಾರಿ ವಹಿಸಿರುವ ಸಚಿವರನ್ನು ದೆಹಲಿಗೆ ಕರೆದಿದ್ದು, ಅಲ್ಲಿ ಸ್ಪರ್ಧೆ ವಿಚಾರ ಅಂತಿಮವಾಗಲಿದೆ. ಈ ನಡುವೆ, ಸಚಿವರ್ಯಾರೂ ಸ್ಪರ್ಧೆಗೆ ಮಾನಸಿಕವಾಗಿ ಸಿದ್ಧರಿಲ್ಲ. ಇದನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗಪಡಿಸಿದ್ದಾರೆ. ನಾವು ಸಚಿವರಾಗಿ ಈಗಷ್ಟೇ ಹಿಡಿತ ಸಾಧಿಸುತ್ತಿದ್ದೇವೆ. ಸಾಧನೆ ಮಾಡಿ ತೋರಿಸಲು ಅವಕಾಶ ಮಾಡಿಕೊಡಬೇಕಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಬಹುತೇಕ ಸಚಿವರು ಇದೇ ಲಹರಿಯಲ್ಲಿದ್ದಾರೆ. ಒಂದು ವೇಳೆ ಹೈಕಮಾಂಡ್ ತಮ್ಮ ಹೆಸರನ್ನು ಅಂತಿಮಗೊಳಿಸಬಹುದು ಎಂಬ ಅಂದಾಜಿನಲ್ಲಿ, ತಮ್ಮನ್ನು ಲೋಕಸಭೆ ಚುನಾವಣೆಗೆ ಪರಿಗಣಿಸಬಾರದೆಂದು ಅಭಿಪ್ರಾಯ ತಿಳಿಸಲು ಶತಪ್ರಯತ್ನವನ್ನೂ ನಡೆಸಿದ್ದಾರೆ.
ಆಯ್ಕೆಗೆ ಅಪಸ್ವರ:ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದಿದ್ದರೂ ನಮಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳಲ್ಲಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ 34 ಶಾಸಕರು ಮತ್ತು 26 ಕಾರ್ಯಕರ್ತರ ಹೆಸರು ನಿಗಮ- ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಅಂತಿಮಗೊಳಿಸಲಾಗಿದೆ. ಈ ಕಾರ್ಯಕರ್ತರ ಕೋಟಾದಲ್ಲಿ ಅವಕಾಶ ಪಡೆದವರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು, ವ್ಯವಹಾರಸ್ಥರೇ ಹೆಚ್ಚಿದ್ದಾರೆಂದು ಕಿಡಿ ಹೊತ್ತಿಕೊಂಡಿದೆ. ಸಚಿವ ಸ್ಥಾನ ವಂಚಿತರಿಗೆ ನಿಗಮ, ಮಂಡಳಿಯಲ್ಲಿ ಅವಕಾಶ ಕೊಡುವುದು ಸೂಕ್ತ. ಒಂದೆರಡು ಬಾರಿ ಶಾಸಕರಾದವರಿಗೂ ನಿಗಮ, ಮಂಡಳಿ ಏಕೆ ಕೊಡಬೇಕೆಂಬ ಚರ್ಚೆ ಪಕ್ಷದಲ್ಲಿ ಶುರುವಾಗಿದೆ. ಕಾರ್ಯಕರ್ತರು ಪಕ್ಷದ ಕೆಲಸ ಮಾಡಿಕೊಂಡೇ ಇರಬೇಕೆ? ಎಂಬ ದನಿ ಕೂಡ ಎದ್ದಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜತೆ ಸುರ್ಜೆವಾಲ ಚರ್ಚೆ ನಡೆಸಿ ಪಟ್ಟಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿ ಅಂತಿಮಗೊಳಿಸಲು ಕಸರತ್ತು ನಡೆಸಿದ್ದಾರೆ.
ಅನಿವಾರ್ಯವಾದರೆ ಸ್ಪರ್ಧೆಗೆ ಸಿದ್ಧರಾಗಿರಿ:ಲೋಕಸಭೆ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ಅನಿವಾರ್ಯತೆ ಬಂದರೆ ಸಿದ್ಧರಾಗಿರಬೇಕು ಎಂದು ಸುರ್ಜೆವಾಲ ಸೂಚನೆ ನೀಡಿದ್ದಾರೆ. ಜ.11ಕ್ಕೆ ಕ್ಷೇತ್ರದ ಉಸ್ತುವಾರಿ ವಹಿಸಿರುವ ಸಚಿವರನ್ನು ದೆಹಲಿಗೆ ಕರೆದಿದ್ದಾರೆ. ಈ ವೇಳೆ ಅಭ್ಯರ್ಥಿಗಳ ಆಯ್ಕೆಯ ವಿಚಾರವನ್ನು ರ್ಚಚಿಸುತ್ತೇವೆ. ಅಂತಿಮವಾಗಿ ಹೈಕಮಾಂಡ್ ತೀರ್ವನಿಸುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿಕೆ ನೀಡಿದ್ದಾರೆ. ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ತಿಳಿಸಿದ್ದು, ಹೇಗೆ ನಿಭಾಯಿಸಬೇಕು ಎಂಬುದು ಸಭೆಯಲ್ಲಿ ಚರ್ಚೆಯಾಯಿತು. ತಂತ್ರಗಾರಿಕೆ ಮತ್ತು ಎಂತಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬುದೂ ಚರ್ಚೆಯಾಗಿದೆ ಎಂದರು. ಇನ್ನಷ್ಟು ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಕುರಿತು ಉಸ್ತುವಾರಿಗಳಿಗೆ ಸಚಿವರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು. ದೆಹಲಿ ಸಭೆಗೆ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ತರುವಂತೆ ಹೇಳಿದ್ದಾರೆ. ಈ ವೇಳೆ ನಮ್ಮ ಅಭಿಪ್ರಾಯ ಏನೆಂಬುದನ್ನು ತಿಳಿಸುತ್ತೇವೆ, ನಮ್ಮ ನಮ್ಮ ಕ್ಷೇತ್ರದಲ್ಲಿ ಯಾರ್ಯಾರು ಆಕಾಂಕ್ಷಿಗಳಿದ್ದಾರೆ ಎಂದು ಕೆಪಿಸಿಸಿಯಿಂದಲೂ ಪ್ರಸ್ತಾವನೆ ಹೋಗಲಿದೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಮೂವರು ಉಪ ಮುಖ್ಯಮಂತ್ರಿ ಯಂತಹ ಚರ್ಚೆ, ಊಹಾಪೋಹ ಸರಿಯಲ್ಲ. ಈ ಕುರಿತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕೇಳಿ. ಹೈಕಮಾಂಡ್ ಅಂಗಳಕ್ಕೆ ಈ ವಿಷಯ ಬಂದಿಲ್ಲ.
| ಡಾ.ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಸಚಿವರು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ವಿಚಾರ ಗಾಳಿಯಲ್ಲಿ ಓಡಾಡುತ್ತಿದೆಯಷ್ಟೇ, ಇನ್ನೂ ಗ್ರೌಂಡ್​ಗೆ ಬಂದಿಲ್ಲ. ದೆಹಲಿಯಲ್ಲಿ ಸ್ಪಷ್ಟತೆ ಸಿಗಬಹುದು. ಸದ್ಯ ಸಚಿವರಾಗಿ ನಾವು ಸೆಟಲ್ ಆಗಿದ್ದೇವೆ. ನಮ್ಮ ಪರ್ಫಾರ್ವೆನ್ಸ್ ತೋರಿಸಬೇಕಲ್ಲ.
| ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವ
ಮೂರು ಡಿಸಿಎಂಗಳ ಹುದ್ದೆ ಸೃಷ್ಟಿ ವಿಚಾರವು ಸಿಎಂ ಸಿದ್ದರಾಮಯ್ಯ ಅವರ ಗೇಮ್ ಪ್ಲ್ಯಾನ್. ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಾಬಲ್ಯ ಕಡಿಮೆ ಮಾಡಿ, ತಮ್ಮ ಬಳಿಯೇ ಪವರ್ ಸೆಂಟರ್ ಇರಬೇಕೆಂಬುದು ಅವರ ಗುರಿ. ಪ್ರಮುಖ ತೀರ್ವನಗಳನ್ನು ಅವರೇ ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ರ್ಚಚಿಸಿ ತೀರ್ಮಾನ ಎಂಬಂತೆ ತೋರಿಸಿಕೊಳ್ಳುತ್ತಿದ್ದಾರೆ.
| ಪ್ರಲ್ಹಾದ ಜೋಶಿ, ಕೇಂದ್ರ ಸಚಿವ (ಹುಬ್ಬಳ್ಳಿಯಲ್ಲಿ)
ಜಾತಿವಾರು ಡಿಸಿಎಂಗಳನ್ನು ಆಯ್ಕೆ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದು. ಇದೇ ಕಾರಣಕ್ಕೆ ಮೂರು ಡಿಸಿಎಂ ಮಾಡಬೇಕೆಂದು ಕೆಲವರು ಡಿಮಾಂಡ್ ಇಟ್ಟಿದ್ದಾರೆ. ಆದರೆ ಇದ್ಯಾವುದೂ ನಡೆಯಲ್ಲ. ಬದಲಿಗೆ ಎಲ್ಲ ಸಚಿವರನ್ನೂ ಡಿಸಿಎಂ ಮಾಡುವುದು ಒಳ್ಳೆಯದು.
| ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
