ರುದ್ರಣ್ಣ ಹರ್ತಿಕೋಟೆ ಬೆಂಗಳೂರುರಾಜ್ಯದ ಆಡಳಿತದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸುವ ಮೂಲಕ ಬದಲಾವಣೆ ತರಲು ಹೊಸ ಕಾಯ್ದೆಯೊಂದನ್ನು ರೂಪಿಸಿ ಜನರಿಗೆ ಇನ್ನಷ್ಟು ಹತ್ತಿರವಾಗಲು ಸರ್ಕಾರ ಮುಂದಾಗಿದೆ. ಸಪ್ತಶೀಲ ತತ್ವಗಳ ಆಧಾರದಲ್ಲಿ ಸರ್ಕಾರದ ನಿರ್ವಹಣೆ ಮಾಡುವುದು, ಆಡಳಿತದಲ್ಲಿ ಏಕರೂಪತೆ, ಕರ್ತವ್ಯದಲ್ಲಿ ಉತ್ತರದಾಯಿತ್ವ ಹಾಗೂ ಆರ್ಥಿಕ ಶಿಸ್ತು ತರಲು ಕರ್ನಾಟಕ ಆಡಳಿತ ಕಾರ್ಯ ನಿರ್ವಹಣೆ (ನಿಯಂತ್ರಣ) ವಿಧೇಯಕ-2023 ಸಿದ್ಧಪಡಿಸಲಾಗಿದೆ.
ಇಲಾಖೆಗಳು, ಸಿಬ್ಬಂದಿ, ಅಧಿಕಾರಿ ಹಾಗೂ ಸಾರ್ವಜನಿಕ ಸೇವೆಯಲ್ಲಿರುವವರಿಗೆ ನಿಯಂತ್ರಣ ವಿಧಿಸುವುದು ಸಾರ್ವಜನಿಕರಿಗೆ ಎಲ್ಲಿಯೂ ಅಡ್ಡಿಯಾಗದಂತೆ ಎಚ್ಚರ ವಹಿಸುವುದು ಒಟ್ಟಾರೆ ಹೊಸ ವಿಧೇಯಕದ ಉದ್ದೇಶ. ಹಣಕಾಸಿನ ನಿರ್ವಹಣೆಯಲ್ಲಿಯೂ ಬೇಕಾಬಿಟ್ಟಿ ಆಡಳಿತವನ್ನು ತೊಡೆದು ಹಾಕಲಾಗುತ್ತದೆ. ಜನರ ತೆರಿಗೆ ಹಣ ದುರುಪಯೋಗವಾಗದಂತೆ ನೋಡಿಕೊಳ್ಳಲಾಗುತ್ತದೆ. ಸರ್ಕಾರದ ಕರ್ತವ್ಯಗಳ ವಿಕೇಂದ್ರೀಕರಣವಾಗಬೇಕು. ಪ್ರತಿ ಹಂತದಲ್ಲಿಯೂ ಉತ್ತಮ ವ್ಯವಸ್ಥೆ ಬರಬೇಕು. ಸರ್ಕಾರದ ಮ್ಯಾನ್ಯೂವಲ್​ನಲ್ಲಿ ಹೇಳಿರುವಂತೆ ಕರ್ತವ್ಯ ನಿರ್ವಹಣೆಯಾಗಬೇಕು. ತ್ವರಿತ, ಸರಳ, ಪರಿಣಾಮಕಾರಿ ಹಾಗೂ ಪಾರದರ್ಶಕತೆ ಇರಬೇಕು. ಆರ್ಥಿಕ ವೆಚ್ಚಗಳಿಗೆ ಉತ್ತರದಾಯಿತ್ವ ಇರಬೇಕು. ಸಿಟಿಜನ್ ಚಾರ್ಟರ್​ಗಳ ಅಳವಡಿಕೆ ಕಡ್ಡಾಯವಾಗಿರಬೇಕು ಎಂಬುದು ಹೊಸ ಕಾನೂನಿನ ಆಶಯ.
ಭರವಸೆಗಳ ಈಡೇರಿಕೆ:ಸಚಿವರು ವಿಧಾನಮಂಡಲದ ಉಭಯ ಸದನಗಳಲ್ಲಿ ನೀಡುವ ಭರವಸೆಗಳನ್ನು ಕಾಲಕಾಲಕ್ಕೆ ಗುರುತಿಸಿ ಈಡೇರಿಸುವುದು ಅತ್ಯಂತ ಮುಖ್ಯ. ಆ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕಾಲಮಿತಿಯನ್ನು ನಿಗದಿ ಮಾಡಲಾಗುತ್ತದೆ. ನ್ಯಾಯಾಲಯದ ಪ್ರಕರಣಗಳಲ್ಲಿಯೂ ನ್ಯಾಯಪೀಠ ಗುರುತಿಸುವ ಜವಾಬ್ದಾರಿಯನ್ನು ಜಾರಿಗೆ ತರುವುದಕ್ಕೂ ಸಮಯದ ಗುರಿ ನಿಗದಿಯಾಗಲಿದೆ.
ಚುನಾವಣೆಗಳು:ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕಾಲಕಾಲಕ್ಕೆ ನಡೆಸುವುದು ಕಡ್ಡಾಯವಾಗಲಿದೆ. ಒಂದು ವೇಳೆ ತಡವಾದರೆ ಅದಕ್ಕೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಯಾವುದೇ ಒತ್ತಡಕ್ಕೆ ಮಣಿಯದೆ ಅಧಿಕಾರಿ ಕರ್ತವ್ಯ ನಿರ್ವಹಿಸುವುದು ಅನಿವಾರ್ಯವಾಗಲಿದೆ.
ಆಡಳಿತದಲ್ಲಿ ಸಮನ್ವಯ:ರಾಜ್ಯ, ಜಿಲ್ಲಾ, ತಾಲೂಕು ಆಡಳಿತ ಇರಲಿದೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒಗಳ ನಡುವೆ ಸಮನ್ವಯ ಇಲ್ಲ. ಕೆಳ ಹಂತದಲ್ಲಿಯೂ ಇದರ ಕೊರತೆಯಿದೆ. ಆದ್ದರಿಂದ ಡಿಸಿ ಮತ್ತು ಸಿಇಒಗಳ ನಡುವೆ ಸಮನ್ವಯ ತರಲಾಗುತ್ತದೆ. ಪ್ರಕೃತಿ ವಿಕೋಪದಂಥ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ಡಿಸಿಗಳ ನಡುವೆ ಸಮನ್ವಯಕ್ಕೆ ಹೊಸ ವ್ಯವಸ್ಥೆ ಬರಲಿದೆ. ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ತಳಮಟ್ಟದಲ್ಲಿ ಅತ್ಯಂತ ಮುಖ್ಯ. ಆದ್ದರಿಂದ ಇವುಗಳ ಮೇಲೆ ಸರ್ಕಾರದ ವ್ಯವಸ್ಥೆಯ ಮೇಲೆ ನಂಬಿಕೆ ಬರುವಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ಇರುವುದನ್ನು ಕಾಯ್ದೆ ಗುರುತಿಸಲಿದೆ.
ಪ್ರಾಧಿಕಾರ ರಚನೆ:ಸರ್ಕಾರಿ ನೌಕರರು ಮತ್ತು ಸಿಬ್ಬಂದಿಯ ನಡವಳಿಕೆ ನಿಯಂತ್ರಣಕ್ಕೆ ಪ್ರತ್ಯೇಕ ಪ್ರಾಧಿಕಾರ ಇರಲಿದೆ. ಯಾವುದೇ ಅಧಿಕಾರಿ ಈ ಪ್ರಾಧಿಕಾರಕ್ಕಿಂತ ಮೇಲಲ್ಲ. ಆಡಳಿತ ಸುಧಾರಣಾ ಮಂಡಳಿಯನ್ನು ರಚಿಸಲಾಗುತ್ತದೆ. ದೂರು, ವಿಚಾರಣೆ, ಮನವಿಗಳ ಸ್ವೀಕಾರ ಇದರ ಜವಾಬ್ದಾರಿಯಾಗಿರುತ್ತದೆ.
ದೂರು ಸಮಿತಿಗಳ ರಚನೆ:ಪ್ರತಿ ಇಲಾಖೆಯಲ್ಲಿಯೂ ಪ್ರತ್ಯೇಕ ದೂರು ನಿರ್ವಹಣಾ ಸಮಿತಿಗಳನ್ನು ರಚನೆ ಮಾಡಲಾಗುತ್ತದೆ. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಈ ಸಮಿತಿಗಳಿರುತ್ತವೆ. ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಇಲಾಖೆಯ ಮುಖ್ಯಸ್ಥರು ಇದರ ನೇತೃತ್ವ ವಹಿಸಲಿದ್ದಾರೆ. ನಂತರ ಅಗತ್ಯ ಬಿದ್ದರೆ ಕೆಎಎಸ್ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ವಿಚಾರಣೆ ಮಾಡಲಾಗುತ್ತದೆ. ಇದಕ್ಕೆ 30 ದಿನಗಳ ಸಮಯ ನಿಗದಿ ಮಾಡಲಾಗುತ್ತದೆ.
ಶಿಸ್ತು ಕ್ರಮ:ಅಧಿಕಾರಿ ಮತ್ತು ಸಿಬ್ಬಂದಿ ತಪು್ಪ ಮಾಡಿದಾಗ ಕರ್ನಾಟಕ ಲೋಕಾಯುಕ್ತ ಕಾಯ್ದೆ, ಐಪಿಸಿ, ದೂರು ನಿರ್ವಹಣಾ ಸಮಿತಿ, ಕರ್ನಾಟಕ ನಾಗರಿಕ ಸೇವಾ ಕಾಯ್ದೆ, ಭ್ರಷ್ಟಾಚಾರ ನಿಮೂಲನೆ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ಅಧಿವೇಶನಕ್ಕೆ ಕಾಯ್ದೆ: ಹೊಸ ಕಾಯ್ದೆಯ ಬಗ್ಗೆ ಇನ್ನಷ್ಟು ಚರ್ಚೆಗಳ ಅಗತ್ಯ ಕಂಡು ಬಂದಿರುವುದರಿಂದ ಮುಂದಿನ ವರ್ಷದ ಮೊದಲ ಅಧಿವೇಶನದಲ್ಲಿಯೇ ಮಂಡನೆ ಮಾಡಲಾಗುತ್ತದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಪರಿಷತ್ ರಚನೆ:ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ನೇತೃತ್ವದಲ್ಲಿ ಆಡಳಿತ ಸುಧಾರಣಾ ಪರಿಷತ್ ರಚನೆಯಾಗಲಿದೆ. ಈ ಪರಿಷತ್ ಸರ್ಕಾರಕ್ಕೆ ಸಲಹೆಗಳನ್ನು ನೀಡಲಿದೆ. ನಿವೃತ್ತ ಮುಖ್ಯ ನ್ಯಾಯಮೂರ್ತಿ, ಸಾಮಾಜಿಕ ವಿಜ್ಞಾನಿ, ನಿವೃತ್ತ ಅಧಿಕಾರಿ, ಸದನದ ನಾಯಕರು ಸದಸ್ಯರಾಗಿರುತ್ತಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರುವುದು ಕಡ್ಡಾಯವಾಗಿರುತ್ತದೆ. ಆಡಳಿತದಲ್ಲಿ ಸಾರ್ವಜನಿಕರಿಗೆ ಸೇವೆ ನೀಡುವುದಕ್ಕೆ ಕಠಿಣವಾಗಿರುವ ಅಂಶಗಳನ್ನು ತೆಗೆದು ಹಾಕುವುದು, ಉಲ್ಲಂಘನೆಗೆ ದಂಡ ವಿಧಿಸುವುದು, ಕಾನೂನುಗಳನ್ನು ಕಾಪಾಡುವುದು ಈ ಪರಿಷತ್​ನ ಕೆಲಸ.
ಮಾಹಿತಿ ಫಲಕ ಕಡ್ಡಾಯ:ಪ್ರತಿ ಕಚೇರಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಸಂಪೂರ್ಣ ಮಾಹಿತಿ ಅಳವಡಿಕೆ ಕಡ್ಡಾಯವಾಗಲಿದೆ. ಯಾವ ಕೆಲಸಕ್ಕೆ ಯಾರನ್ನು ಭೇಟಿ ಮಾಡಬೇಕು, ಅವರ ದೂರವಾಣಿ ಸಂಖ್ಯೆ, ಯಾವ ಕೆಲಸ ಎಷ್ಟು ದಿನದಲ್ಲಿ ಆಗಲಿದೆ ಎಂಬುದನ್ನು ತಿಳಿಸಬೇಕು. ಕಚೇರಿಯ ಮುಖ್ಯಸ್ಥರು ತಮಗೆ ಬಂದ ಕಡತಗಳನ್ನು ಅಂದೇ ವಿಲೇವಾರಿ ಮಾಡುವುದು ಕಡ್ಡಾಯ. ಸಾರ್ವಜನಿಕರ ಕೆಲಸ ಮೂರು ದಿನದಲ್ಲಿ ಆಗದಿದ್ದರೆ ಕಾನೂನುಗಳ ಪ್ರಕಾರ ಶಿಕ್ಷೆಯೂ ಅನಿವಾರ್ಯವಾಗಲಿದೆ. ಪ್ರತಿ ಕಡತ ವಿಲೇವಾರಿಯ ಮಾಹಿತಿ ಇಲಾಖೆಯ ವೆಬ್​ಸೈಟ್​ನಲ್ಲಿ ಪ್ರದರ್ಶಿಸಬೇಕು. ಆಗ ಪಾರದರ್ಶಕತೆ ತರಲು ಸಾಧ್ಯವಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
