‘ಅಜ್ಜ, ನಾನು ಮಾಡಿದ ಹಾಗೇ ಮಾಡ್ತೀಯಾ ? ಆಗುತ್ತಾ ನಿನ್ನ ಕೈಲಿ ?’ 5 ವರ್ಷದ ಪೋರ, ಮೊಮ್ಮಗ ಹೇಮಂತ 69 ರ ನನಗೆ ಸವಾಲೆಸೆದಿದ್ದ!
ಅರೆ! ಇವನ ಪೊಗರೇ! ನನ್ನ ಕೈಲಾಗದ್ದು ಇವನೇನು ಮಾಡಿಯಾನು? ನೋಡಿಯೇ ಬಿಡೋಣವೆಂದು ಸವಾಲಿಗೆ ಒಪ್ಪಿದೆ. ನಾನು ಸೋತರೆ ಅವನಿಗೆ ರೂ. 375ರ ಎರಡು ಡೈರಿಮಿಲ್ಕ್ ಚಾಕಲೇಟ್ ಕೊಡಿಸುವುದು, ಅವನು ಸೋತರೆ ನನ್ನಿಂದ ಹತ್ತು ಪೆಟ್ಟು ತಿನ್ನುವುದೆಂದು ಮನೆಯವರೆಲ್ಲರ ಎದುರು ಒಪ್ಪಂದವಾಯಿತು.
ಸರಿ, ಈ ಮಹಾನ್ ಕಲಾಕಾರ ಆರಂಭಿಸಿದ. ಮೂತಿ ಸೊಟ್ಟ ಮಾಡಿದ. ಒಂದೇ ಕಣ್ಣಿನ ಹುಬ್ಬು ಮೇಲೆ ಕೆಳಗೆ ಮಾಡಿದ. ಬೆಕ್ಕಿನಂತೆ ಮಿಯಾಂವ್ ಎಂದ. ನಾಯಿಯಂತೆ ಬೊಗಳಿದ. ಉಠ್ ಬೈಸ್, ಸೂರ್ಯ ನಮಸ್ಕಾರ, ಲಾಗ ಹಾಕಿದ. ಎಲ್ಲವನ್ನೂ ಅನೂಚಾನವಾಗಿ ಮಾಡಿದೆ. ವಿಜಯ ಪತಾಕೆ ಹಾರಿಸಲು ಸಿದ್ಧನಾದೆ. ಈಗ ಹೇಮಂತ ಸುತ್ತ ನಿಂತ ಮನೆಯವರಿಗೆ ಕಣ್ಣು ಹೊಡೆದು ತನ್ನ ಶರ್ಟ್ ಬಿಚ್ಚಿ ಎಸೆದ. ಮನೆಯವರ ಮೊಗದಲ್ಲಿ ಅದೊಂಥರಾ ಕುಚೇಷ್ಟೆಯ ನಗು. ಏಕೋ ಅಪಾಯದ ವಾಸನೆ ಮೂಗಿಗೆ ಬಡಿಯಿತು. ನಾನೂ ಶರ್ಟ್ ಬಿಚ್ಚಿ ಎಸೆದೆ. ಪ್ಯಾಂಟನ್ನೂ ಕಳಚಿ ಎಸೆದ. ನಾಚಿಕೆಯೆನಿಸಿದರೂ ಮರ್ಯಾದೆಯ ಪ್ರಶ್ನೆ. ಪಂಚೆ ಬಿಚ್ಚಿ ಒಗಾಯಿಸಿದೆ. ಮೈಮೇಲಿರುವುದು ಕೇವಲ ಒಂದು ಪಟಾಪಟೆ ಚಡ್ಡಿ! ಪಟಾಕಿ ಮೊಮ್ಮಗ ತಾನು ಹಾಕಿದ್ದ ಚಡ್ಡಿಯನ್ನೂ ಬಿಚ್ಚಿ ಎಸೆದ. ದಿಗಂಬರಾವತಾರ! ಒಮ್ಮೆಲೇ 300 ವೋಲ್ಟ್ ಕರೆಂಟ್ ಶಾಕ್ ಹೊಡೆದಂತಾಯಿತು. ಶರಣು ಪ್ರಭುವೇ ಎಂದು ಸೋಲೊಪ್ಪಿ ಬಟ್ಟೆ ಧರಿಸಿದೆ. ಚಾಕಲೇಟಿಗೆ ಹಣ ಕೊಟ್ಟೆ. ಸೊಸೆ ನಗುತ್ತಾ ಕ್ಯಾಲೆಂಡರ್ ಮುಖಕ್ಕೆ ಹಿಡಿದಳು. ಏಪ್ರಿಲ್ ಒಂದು! ಮೊಮ್ಮಗನೆದುರು ಮೂರ್ಖನಾಗಿದ್ದೆ!
|ಕೆ. ಶ್ರೀನಿವಾಸರಾವ್ಹರಪನಹಳ್ಳಿ
ಒಂದು ದಿನ ನಾನು ನನ್ನ 5 ವರ್ಷದ ಮಗ ಅಥರ್ವನ ಜತೆ ಸ್ವಲ್ಪ ತಮಾಷೆ ಮಾಡಲು ನಿರ್ಧರಿಸಿದೆ. ಅವನು ತನ್ನ ಜನ್ಮದಿನವನ್ನು ವಾರಗಳಿಂದ ಎದುರು ನೋಡುತ್ತಿದ್ದನು ಮತ್ತು ಅವನಿಗೆ ಇಡೀ ದಿನವನ್ನು ಮೀಸಲಿಡಲು ಅವನು ರೋಮಾಂಚನಗೊಳ್ಳುತ್ತಾನೆ ಎಂದು ನನಗೆ ತಿಳಿದಿತ್ತು. ಆದರೆ, ಅವನ ನಿಜವಾದ ಜನ್ಮದಿನದ ಬದಲು, ಅವನ ನಕಲಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದೆ.
ಏಪ್ರಿಲ್ ಫೂಲ್ ದಿನದಂದು ಅಥರ್ವ ಎಚ್ಚರವಾದಾಗ ನಾನು ಅವನ ಹುಟ್ಟುಹಬ್ಬ ಮತ್ತು ಈಗ ಅವನಿಗೆ 6 ವರ್ಷ ಎಂದು ಹೇಳಿದೆ. ಅಥರ್ವ ತುಂಬಾ ಉತ್ಸುಕನಾಗಿದ್ದ, ಅವನು ಹಾಸಿಗೆಯಿಂದ ಜಿಗಿದು ತನ್ನ ಹುಟ್ಟುಹಬ್ಬದ ಸಂತೋಷಕೂಟಕ್ಕಾಗಿ ಬಟ್ಟೆಗಳನ್ನು ಧರಿಸಲು ಪ್ರಾರಂಭಿಸಿದ. ನಾನು ಲಿವಿಂಗ್ ರೂಮ್ಲ್ಲಿ ಅಲಂಕಾರಗಳು ಮತ್ತು ಬಲೂನ್​ಗಳನ್ನು ಹೊಂದಿಸಿ ಇಟ್ಟಿದ್ದೆ. ದಿನವಿಡೀ ನಾನು ಮತ್ತು ಅಥರ್ವನ ಅಮ್ಮ ನಿಜವಾಗಿಯೂ ಅಥರ್ವನ ಜನ್ಮದಿನ ಎಂದು ಬಿಂಬಿಸುತ್ತಾ ತಮಾಷೆಯನ್ನು ಮುಂದೆವರಿಸಿದೆವು. ಹುಟ್ಟುಹಬ್ಬದ ಶುಭಾಶಯಗಳು ಎಂದು ಹಾಡಿದೆವು, ವಿಶೇಷ ಉಪಾಹಾರ ನೀಡಿದೆವು. ಮೇಣದಬತ್ತಿಗಳೊಂದಿಗೆ ಕೇಕ್ ಸಹ ಕತ್ತರಿಸಿದೆವು ದಿನ ಕಳೆದಂತೆ ಅಥರ್ವನಿಗೆ ಏನೋ ಅನುಮಾನ ಮೂಡತೊಡಗಿತು. ಹುಟ್ಟುಹಬ್ಬ ಆಚರಿಸಲು ಅವನ ಸ್ನೇಹಿತರು ಬಂದಿಲ್ಲ ಎಂದು ತಿಳಿಯಿತು. ತನ್ನ ಸ್ಪೆಷಲ್ ದಿನ ಅಂದುಕೊಂಡಷ್ಟು ಖುಷಿಯಾಗಿರಲಿಲ್ಲವೇನೋ ಎಂದು ಬೇಸರಗೊಂಡು ಗೊಂದಲಕ್ಕೊಳಗಾಗತೊಡಗಿದ.
ಆಗ ನಾನು ಇದೆಲ್ಲವೂ ಏಪ್ರಿಲ್ ಫೂಲ್ ದಿನದ ಮೂರ್ಖತನದ ತಮಾಷೆಯಾಗಿದೆ ಮತ್ತು ನಿನ್ನ ನಿಜವಾದ ಜನ್ಮದಿನವು ಇನ್ನೂ ಒಂದು ತಿಂಗಳು ಇದೆ ಎಂದು ಹೇಳಿದೆ. ಅಥರ್ವ ಆರಂಭದಲ್ಲಿ ಸ್ವಲ್ಪ ಬೇಸರಗೊಂಡರೂ ನಂತರ ತಮಾಷೆ ಆಗಿ ಸ್ವೀಕರಿಸಿ ನಗತೊಡಗಿದ.
|ಡಾ. ಅರುಣ ಸ. ತಿಗಡಿಬೆಳಗಾವಿ
ಇದು ಕಳೆದ ವರ್ಷ ನಡೆದ ಘಟನೆ. ನನ್ನ ಆತ್ಮೀಯ ಗೆಳೆಯ ಆನಂದನು ಡಿಮಾರ್ಟ್ ಮಾಲ್​ನಲ್ಲಿ ಮೂರು ಸಾವಿರಕ್ಕೆ ಖರೀದಿಸಿದರೆ ಶೇ. 50ರಷ್ಟು ಡಿಸ್ಕೌಂಟ್ ಕೊಡ್ತಾರಂತೆ. ಈ ರಿಯಾಯಿತಿ ಮೂರು ದಿನ ಮಾತ್ರವಂತೆ ಎಂದ. ಮಾರನೆಯ ದಿನ ಒಂದನೇ ತಾರೀಖು ಬೆಳಗ್ಗೆ ಎದ್ದೆನೋ ಬಿದ್ದೆನೋ ಅಂತ ಮಾಲ್ ಒಳಗೆ ಹೋದೆ. ಡಿಸ್ಕೌಂಟ್ ಅಂದಮೇಲೆ ಕೇಳಬೇಕೇ? ಜನವೋ ಜನ. ಸುಮಾರು 4000 ರೂಪಾಯಿಯ ಪದಾರ್ಥಗಳನ್ನು ಖರೀದಿಸಿ ಬಿಲ್ ಮಾಡಿಸಿದೆ. ಅವನು 4000 ರೂ. ಕೊಡಿ ಅಂದ. ನಾನು ಡಿಸ್ಕೌಂಟ್ ಕಳೆದು 2000 ರೂ. ಕೊಟ್ಟೆ. ಅವನು ಇನ್ನೂ 2000 ರೂ. ಕೊಡಿ ಅಂದ. ನಾನು 50 ಪರ್ಸೆಂಟ್ ಡಿಸ್ಕೌಂಟ್ ಇದೆಯಲ್ಲಾ ಅಂದೆ. ಅವನು, ‘ಯಾರು ಸಾರ್ ನಿಮಗೆ ಹಾಗೆ ಹೇಳಿದ್ದು. ಇವತ್ತು ಡೇಟ್ ಎಷ್ಟು? ಏಪ್ರಿಲ್ ಒಂದು. ಯಾರೋ ನಿಮ್ಮನ್ನು ಫೂಲ್ ಮಾಡಿದ್ದಾರೆ’ ಎಂದ. ನನಗೆ ಮೈಯೆಲ್ಲಾ ಪರಚಿಕೊಳ್ಳುವಂತಾಯಿತು. ಅವನು ಕೇಳಿದಷ್ಟು ಹಣ ತೆತ್ತೆ. ಸುಳ್ಳು ಹೇಳಿ ಬೇಸ್ತು ಬೀಳಿಸಿದ ಗೆಳೆಯನಿಗೆ ಹಿಡಿ ಶಾಪ ಹಾಕುತ್ತ ಮನೆಗೆ ಹಿಂತಿರುಗಿದೆ.
|ಎಂ.ಕೆ.ಮಂಜುನಾಥ್ಬೆಂಗಳೂರು
ಹೇಳಿ ಕೇಳಿ ಏಪ್ರಿಲ್ ತಿಂಗಳು.ಅದು ಚೈತ್ರಮಾಸ ಅದರಲ್ಲೂ ಯುಗಾದಿಯ ದಿನಗಳು. ಎಲ್ಲರೂ ಒಟ್ಟಿಗೆ ಕೂಡಿನಲಿವ ದಿನಗಳು. ನಮ್ಮ ಮನೆಯಲ್ಲಿ ನಾನು, ನನ್ನ ಅಣ್ಣ ಮತ್ತು ನಮ್ಮ ವಠಾರದ ಗೆಳೆಯರ ತಂಡ ಆಟವಾಡಿ ಇರುತ್ತಿರುವಾಗ, ಮಾರನೇ ದಿನ ಏಪ್ರಿಲ್ ಒಂದನೇ ತಾರೀಖು ಎಂದು ಗೊತ್ತಾಯಿತು. ಏಪ್ರಿಲ್ ಫೂಲ್ ಮಾಡಬೇಕೆಂದು ನಾನು ಮನಸ್ಸಿನಲ್ಲಿ ಯೋಚಿಸುತ್ತಿರುವಾಗ ಆಗ ಹೊಳೆದಿದ್ದೇ ಮಾವಿನ ಕಾಯಿಯೊಂದಿಗೆ ಕುಂಕುಮ ಸೇರಿಸುವುದು.
ನಾನು ಎಲ್ಲರನ್ನೂ ಸೇರಿಸಿ ಹೇಳಿದೆ, ‘ನಾನು ಒಂದು ಐಡಿಯಾ ಮಾಡಿದ್ದೇನೆ, ನೀವು ಯಾರಿಗೂ ಹೇಳಬೇಡಿ. ಅದು ಗೆಳೆಯ ನಾಗರಾಜನ್ನು ಬಿಟ್ಟು’ ಎಂದೆ. ಮಾರನೇ ದಿನ ನಾವು ಒಟ್ಟಿಗೆ ಸೇರಿ ಮೂರು ಮಾವಿನಕಾಯಿ ತಂದು ಸಣ್ಣಗೆ ಹೆಚ್ದಿ, ಖಾರದ ಪುಡಿ ಹಾಕಿದೆವು. ಇನ್ನೊಂದಿಷ್ಟಕ್ಕೆ ಖಾರದ ಪುಡಿಯ ಬದಲಾಗಿ ಕುಂಕುಮ ಪುಡಿ ಹಾಕಿ ಬೇರೆ ಇಟ್ಟಿದ್ದೆ.
ನಾವೆಲ್ಲ ಖಾರದ ಪುಡಿ ಹಚ್ಚಿದ ಮಾವಿನ ಕಾಯಿ ತಿನ್ನುತ್ತಿರುವಾಗ ನನ್ನ ತಮ್ಮನಿಗೆ ನಾಗರಾಜನನ್ನು ಕರೆಯಲು ತಿಳಿಸಿದೆ. ಆತ ನಮ್ಮ ಬಳಿ ಬಂದಾಗ ನಾವು ಮಾವು ತಿನ್ನುತ್ತಿರುವುದು ನೋಡಿ ಆತನ ಬಾಯಿ ನೀರೂರಿತು. ತನಗೂ ಬೇಕೆಂದ. ತಕ್ಷಣ ಕುಂಕುಮ ಬೆರೆಸಿದ್ದನು ಕೊಟ್ಟೆ. ಬಾಯಿಗೆ ಹಾಕಿಕೊಂಡ ತಕ್ಷಣ, ಏನೋ ಒಂಥರಾ ಆಗುತ್ತಿದೆ ಎಂದ. ನಾವು ಅವನ ಹಾವ ಭಾವ ನೋಡಿ ತಡಿಯಲಾರದೆ ನಕ್ಕಿದ್ದೇ ನಕ್ಕಿದ್ದು. ಮಾವಿನ ಕಾಯಿ ಜತೆಗೆ ಖಾರಪುಡಿ ಬದಲಾಗಿ ಕುಂಕುಮ ಸೇರಿಸಿದ್ದನ್ನು ಹೇಳಿದೆ. ಎಲ್ಲಾರೂ ಗಟ್ಟಿಯಾಗಿ ಏಪ್ರಿಲ್ ಫೂಲ್ ಎಂದು ಕೂಗಿ ಕುಣಿದಾಡಿದೆವು.
|ಧನ್ವಂತರಿಮಾನ್ವಿ ಬಳ್ಳಾರಿ
ಅವತ್ತು ಮುಂಜಾನೆ 7 ಗಂಟೆಯ ಸಮಯ. ಅರೆ ನಿದ್ರಾವಸ್ಥೆಯಲ್ಲಿ ಇನ್ನೇನು ಹಾಸಿಗೆಯಿಂದ ಎದ್ದೇಳಬೇಕು ಅನ್ನುವಷ್ಟರಲ್ಲಿ ನನ್ನ ಪತಿ ಅತ್ಯಂತ ಖುಷಿಯಿಂದ ನನ್ನ ಮುಂದೆ ಬಂದು ಕೈ ಕುಲುಕಿ ಅಭಿನಂದಿಸಿದರು. ನಾನು ಅತ್ಯಂತ ಗಾಬರಿ, ಕುತೂಹಲದಿಂದ ಏನು ವಿಶೇಷ ಎಂದು ಕೇಳಿದೆ. ಅದಕ್ಕವರು, ‘ಲೇ ನೀನು ಐಬಿಪಿಎಸ್ ಪರೀಕ್ಷೆಯಲ್ಲಿ ಪಾಸಾಗಿದ್ದೀಯಾ. ನೀನು ಈಗ ಬ್ಯಾಂಕ್ ಆಫೀಸರ್’ ಎಂದು ಮತ್ತೊಮ್ಮೆ ಅಭಿನಂದನೆ ಹೇಳಿದರು.
ನನಗೆ ಆಶ್ಚರ್ಯ! ನಾನು ಕೆಲ ದಿನಗಳ ಹಿಂದೆ ಬ್ಯಾಂಕ್ ನೇಮಕಾತಿ ಪರೀಕ್ಷೆ ಬರೆದಿದ್ದೆ. ಆದರೆ, ಅದು ಅಷ್ಟೇನೂ ಸರಿಯಾಗದ ಕಾರಣ ಫಲಿತಾಂಶದ ನಿರೀಕ್ಷೆಯಲ್ಲಿ ಇರಲಿಲ್ಲ. ಹಾಗಾಗಿ ನನಗೆ ಈ ಸುದ್ದಿ ಕೇಳಿ ಆನಂದಕ್ಕಿಂತ ಆಶ್ಚರ್ಯವೇ ಆಯಿತು. ಇವತ್ತು ಯಾವ ದಿನಾಂಕ ಎಂದು ನೆನಪು ಮಾಡಿಕೊಂಡೆ, ಏಪ್ರಿಲ್ 1. ಸಾಮಾನ್ಯವಾಗಿ ಐಬಿಪಿಎಸ್ ಪರಿಕ್ಷಾ ಫಲಿತಾಂಶವನ್ನು ಪ್ರತಿವರ್ಷ ಏಪ್ರಿಲ್ 1ರಂದು ಪ್ರಕಟಿಸುತ್ತಾರೆ. ಆದರೆ, ಅವತ್ತು ಮೂರ್ಖರ ದಿನವೂ ಹೌದು ಅನ್ನೋದು ನೆನಪಾಗಲಿಲ್ಲ.
ಮತ್ತೊಮ್ಮೆ ನನ್ನ ಪತಿರಾಯನನ್ನು ಇದು ನಿಜವೇ ಎಂದು ಕೇಳಿದೆ. ಅದಕ್ಕವರು ಮತ್ತಷ್ಟು ಹುರುಪಿನಿಂದ, ಹೌದು ಕಣೇ ಎಂದರು. ಅವರ ಮಾತನ್ನು ನಂಬಿದ ನಾನು ಕೂಡಲೇ ಮೊಬೈಲ್​ಫೋನ್ ತೆಗೆದುಕೊಂಡು ಫೇಸ್​ಬುಕ್, ಇನಸ್ಟಾಗ್ರಾಮ್ ವಾಟ್ಸಪ್​ನಲ್ಲಿ ನಾನು ಬ್ಯಾಂಕ್ ಎಕ್ಸಾಮ್ ಪಾಸಾದೆ ಎಂದು ಸ್ಟೇಟಸ್ ಹಾಕಿದೆ. ನೂರಾರು ಕಮೆಂಟ್​ಗಳು, ಶುಭಾಶಯಗಳು ಹರಿದುಬಂದವು. ನನ್ನ ಗೆಳತಿಯೊಬ್ಬಳು ನನಗೆ ಪೋನ್ ಮಾಡಿ ಎಷ್ಟು ಮಾರ್ಕ್ಸ್ ಬಂದಿವೆ ಎಂದು ಕೇಳಿದಾಗಲೇ ಸ್ವತಃ ನನ್ನ ಫಲಿತಾಂಶ ನೋಡಲು ವೆಬ್​ಸೈಟ್ ಕ್ಲಿಕ್ಕಿಸಿದೆ. ಆಗ ಆಕಾಶವೇ ಒಂದು ಕ್ಷಣ ರಪ್ಪನೆ ಬಿದ್ದ ಅನುಭವ. ನಾನು ಪಾಸ್ ಆಗಿರಲಿಲ್ಲ. ಕೂಡಲೇ ಪತಿರಾಯನ ಕಡೆಗೆ ನೋಡಿದೆ. ಏಪ್ರಿಲ್ ಫೂಲ್ ಆದೆ ಕಣೆ ನೀನು ಅಂದರು. ಸಾಮಾಜಿಕ ಜಾಲತಾಣದಲ್ಲಿ ನನ್ನ ಸ್ಟೇಟಸ್ ನೋಡಿದ ಎಷ್ಟೋ ಜನ ಈಗಲೂ ಎಲ್ಲಿ ನಿನ್ನ ಪೋಸ್ಟಿಂಗ್ ಎಂದು ಕೇಳುತ್ತಾರೆ. ಎಕ್ಸಾಂ ಪಾಸ್ ಆಗದೆ ಮೂರ್ಖರ ದಿನದಂದು ಬ್ಯಾಂಕ್ ಆಫೀಸರ್ ಆದ ಈ ಪ್ರಸಂಗ ಯಾವತ್ತೂ ಬೆಸ್ತು ಬೀಳಿಸುತ್ತದೆ.
|ಸುನಿತಾ ಬಸವರಾಜಕುಳಲಿ ಅಥಣಿ
ಆಡು ಆಟವಾಡು, ಮಾಡು ಬಕ್ರಾ ಮಾಡು ಎಂದು ಪ್ರತಿ ವರ್ಷ ಏಪ್ರಿಲ್ 1ರಂದು ಕಟ್ಟು ಕಥೆ, ಸುಳ್ಳನ್ನು ಹೇಳಿ ಸ್ನೇಹಿತರನ್ನು ಫೂಲ್ ಮಾಡುವುದು ಸಾಮಾನ್ಯ. ಆದರೆ, ಕಳೆದ ವರ್ಷ ಬಕ್ರಾ ಆಗುವುದು ಬೇಡವೆಂದು ನಿರ್ಧರಿಸಿ ಅಂದು ಮನೆಯಲ್ಲಿ ಸಿನಿಮಾ ನೋಡುವುದು, ಅಡುಗೆ ಮಾಡುವುದರೊಂದಿಗೆ ಫೂಲ್ ಆಗದೆ ದಿನ ಕಳೆಯಿತು ಅನ್ನುವಷ್ಟರಲ್ಲಿ, ನನಗಾಗಿ ಒಂದು ಸಪ್ರರ್ೈ್ ಕಾದಿತ್ತು. ಅದೇನೆಂದರೆ ದಿನದ ಕೊನೆಯಲ್ಲಿ ಮೊಬೈಲ್​ಫೋನ್ ನೋಡುವಾಗ ವಾಟ್ಸಪ್​ನಲ್ಲಿ ಗೆಳೆಯ ಒಂದು ಫೋಟೋ ಕಳುಹಿಸಿದ. ಮೇಲಿಂದ ನೋಡಿದಾಗ ಸುಂದರ ಬಾಲೆಯ ಫೋಟೋ ಇರಬಹುದು ಎಂದು ಅನಿಸುತಿತ್ತು. ಕುತೂಹಲ ತಾಳದೆ ಫೋಟೋ ಡೌನಲೋಡ್ ಮಾಡಿ ನೋಡಿದರೆ, ಸುಂದರ ಬಾಲೆಯ ಚಿತ್ರಕ್ಕೆ ಮಂಗನ ಮುಖ ಅಂಟಿಸಿ ಏಪ್ರಿಲ್ ಫೂಲ್ ಎಂದು ಬರೆಯಲಾಗಿತ್ತು. ಹೀಗೆ ಅಂದು ಬಾಲೆಯ ಚಿತ್ರ ನೋಡಲು ಹೋಗಿ ಫೂಲ್ ಆದೆ.
|ಆನಂದ ಜೇವೂರ್ಕಲಬುರಗಿ
ಅದು 1994-95ರ ಕಾಲ, ಹತ್ತನೇ ತರಗತಿ ಪರೀಕ್ಷಾ ಸಮಯ. ಕೆಲ ವಿಷಯಗಳ ಪರೀಕ್ಷೆಗಳು ಕೂಡ ಮುಗಿದಿದ್ದವು. ಒಂದೆರಡು ವಿಷಯಗಳ ಪರೀಕ್ಷೆ ಬಾಕಿ ಇದ್ದವು. ಪರೀಕ್ಷಾ ವೇಳಾ ಪಟ್ಟಿ ಪ್ರಕಾರ ಏಪ್ರಿಲ್ ಒಂದನೇ ತಾರೀಖು ರಜಾ ದಿನ. ನಮ್ಮೂರಿನ ಸ್ನೇಹಿತ ಗೋಪಾಲ್ ಆ ವರ್ಷ ಹತ್ತನೇ ತರಗತಿ ಪರೀಕ್ಷಾ ವಿಧ್ಯಾರ್ಥಿ. ನನಗಿಂತ ಒಂದು ವರ್ಷಕ್ಕೆ ಹಿರಿಯ ವಿದ್ಯಾರ್ಥಿ. ಏಪ್ರಿಲ್ ಒಂದು ರಜಾ ದಿನಕ್ಕೆ ಗೋಪಾಲ್ ನಿಶ್ಚಿಂತನಾಗಿ ಮಾರನೇ ದಿನದ ಪರೀಕ್ಷೆಗೆ ತಯಾರಿಯಲ್ಲಿ ತೊಡಗಿದ್ದ. ನಮ್ಮ ಗೆಳೆಯರ ತಂಡ ತಿರುಗುತ್ತ ಹೊರಟಿದ್ದಾಗ ಎದುರಿಗೆ ಗೋಪಾಲ್ ಸಿಕ್ಕ. ಅವನನ್ನು ನೋಡಿದ ತಕ್ಷಣ ಏಪ್ರಿಲ್ ಫೂಲ್ ಮಾಡಲು ನಮ್ಮಲ್ಲೇ ಮಾತನಾಡಿಕೊಂಡೆವು. ‘ಹಾಯ್ ಗೋಪಾಲ್, ಏನು ಇನ್ನೂ ಇಲ್ಲೇ ಇದ್ದಿಯಾ? ಪರೀಕ್ಷೆಗೆ ಹೋಗಿಲ್ವ ?’ ಎದು ಸ್ನೇಹಿತನೊಬ್ಬ ಚೂರು ಗಂಭೀರವಾಗಿಯೇ ಹೇಳಿದ. ‘ಇಲ್ಲ, ಇವತ್ತು ರಜೆ. ಅದಕ್ಕೆ ಹೋಗಿಲ್ಲ’ ಎಂದು ಗೋಪಾಲ್ ಉತ್ತರಿಸಿದ.
‘ಏನು, ರೇಡಿಯೊ ವಾರ್ತೆ ಕೇಳಿಲ್ವಾ? ನಾಳೆಯ ಪರೀಕ್ಷೆ ರದ್ದಾಗಿ ಅದನ್ನು ಇವತ್ತು ನಡೆಸಲು ತಿಳಿಸಲಾಗಿದೆ ಎಂದು ವಾರ್ತೆಯಲ್ಲಿ ಪ್ರಸಾರವಾಯಿತು’ ಎಂದು ಸ್ನೇಹಿತ ಹೇಳಿದ. ‘ಹೌದಾ? ಅಯ್ಯೋ ನಾನು ವಾರ್ತೆನೆ ಕೇಳಿಲ್ಲ’ ಎಂದು ಮನೆ ಕಡೆ ಓಡಿದ ಗೋಪಾಲ್. ನಾವು ಸರಿಯಾಗಿ ಏಪ್ರಿಲ್ ಫೂಲ್ ಮಾಡಿದೇವು ಎಂದು ಹೊರಟು ಹೋದೆವು. ಆಗ ಇನ್ನೂ ಬೆಳಗಿನ ಎಂಟೂವರೆ ಗಂಟೆ, ಪರೀಕ್ಷೆಗೆ ಇನ್ನೂ ಒಂದೂವರೆ ಗಂಟೆ ಸಮಯ ಇದೆ ಎಂದು ಗೋಪಾಲ್ ಗಡಿಬಿಡಿಯಿಂದ ತಯಾರಾಗಿ ಓಡತೊಡಗಿದ. ನಾಲ್ಕು ಕಿ.ಮೀ ದೂರ ನಡೆದುಕೊಂಡು ಹೋಗಿ ಬಸ್ಸು ಹಿಡಿದು ಇಪ್ಪತ್ತು ಕಿ.ಮೀ ದೂರದ ಪರಿಕ್ಷಾ ಕೇಂದ್ರಕ್ಕೆ ಹೋದಾಗಲೇ ಗೊತ್ತಾಗಿದ್ದು ನಾವೆಲ್ಲ ಸೇರಿ ಮಾಡಿದ್ದು ಏಪ್ರಿಲ್ ಫೂಲ್ ಎಂದು.
|ರಾಜು ಪವಾರ್ಬೆಂಗಳೂರು
ನಾನು, ನನ್ನ ತಂಗಿ ಆಟವಾಡಲು ಹೊರ ಹೋಗಿದ್ದೆವು. ಆಟ ಮುಗಿಸಿಕೊಂಡು ಮನೆಗೆ ಬಂದು ಊಟ ಮಾಡಿ ಟಿವಿ ನೋಡುತ್ತಾ ಕುಳಿತಿದ್ದೆವು. ಗೆಳತಿಯರು ಕರೆದಿದ್ದರಿಂದ ನಮ್ಮ ಅಮ್ಮ ಹೊರಗಡೆ ಹೋದರು. ಆಗ ನಾನು ಕೂಡ ಹೊರಗಡೆ ಹೋದೆ. ನನ್ನ ತಂಗಿ ಊಟ ಮಾಡುತ್ತಿದ್ದಳು. ಅದಕ್ಕೆ ಅವಳು ಬರಲಿಲ್ಲ. ಆದರೆ, ಸ್ವಲ್ಪ ಸಮಯದ ನಂತರ ಏನೋ ಬಿದ್ದಂಗೆ ಆಯಿತು. ಅಮ್ಮ ಮನೆಗೆ ಬಂದು ಎಲ್ಲಾ ಕಡೆ ಹುಡುಕಿದರು. ಆಗ ನನ್ನ ತಂಗಿ ಅಡಿಗೆ ಮನೆಯಲ್ಲಿ ಬಿದ್ದಿದ್ದಳು. ಅವಳ ಕೈ, ಕಾಲು,ಮುಖ ಎಲ್ಲವೂ ರಕ್ತವಾಗಿತ್ತು. ಏನಾಯ್ತು ಎಂದು ಕೇಳಿದಾಗ… ‘ನನಗೆ ಬಿಸ್ಕೆಟ್ ಬೇಕಿತ್ತು ಚೇರ್ ಮೇಲಿಂದ ಬಿದ್ದೆ..’ ಎಂದು ಹೇಳಿದಳು ಆಗ ನಾನು ಮತ್ತು ಅಮ್ಮ ಇಬ್ಬರು ಗಾಬರಿಯಾಗಿ ಅಪ್ಪನಿಗೆ ಫೋನ್ ಮಾಡಿದೆವು. ಆಗ ತಂಗಿ ನಕ್ಕು, ಅಮ್ಮ ಇದು ರಕ್ತವಲ್ಲ ಸಾಸ್ ಎಂದು ಹೇಳಿ ನಮ್ಮನ್ನು ಏಪ್ರಿಲ್ ಫೂಲ್ ಮಾಡಿದಳು.
|ಸಂಜಯ್ ಎಂ.ಹೆಳವರ್ಹುಬ್ಬಳ್ಳಿ
ನಾನು ಹಿಂದಿನ ವರ್ಷ ಏಪ್ರಿಲ್ ಒಂದರಂದು ಬೆಳಗ್ಗೆ ಹೊರಗಡೆ ಹೋಗಿ ನಾಲ್ಕು ಐದು ಕಟ್ಟು ಸೊಪ್ಪು ತಂದು ಅದನ್ನು ನನ್ನ ತಂಗಿಗೆ ಕೊಟ್ಟೆ. ಆದರೆ, ಕೊಡುವ ಮುಂಚೆನೆ ಅದರಲ್ಲಿ ಚಿಕ್ಕ ಪ್ಲಾಸ್ಟಿಕ್ ಹಾವು ಇಟ್ಟು ಕೊಟ್ಟೆ. ನಂತರ ಮಾತನಾಡುತ್ತಾ ಅದೇನು ಸೊಪ್ಪಿನಲ್ಲಿ ಅಂತ ನಾನು ಅವಳನ್ನು ಕೇಳಿದಾಗ, ಅವಳು ಅದನ್ನು ನೋಡಿ ಪಟಾರ್ ಅಂತ ಕಿರಿಚಿಬಿಟ್ಟಳು ಆಗ ನಾನು ಅವಳಿಗೆ ಹೇಳಿದೆ ಏಪ್ರಿಲ್ ಫೂಲ್ ಅಂತ.
|ರುದ್ರಮುನಿ ಕೆ.ರಾಂಪುರ (ವಿಜಯನಗರ ಜಿಲ್ಲೆ)
ಅಂದು ಮಾರ್ಚ್ 31ರ ಮಧ್ಯಾಹ್ನ. ನಮ್ಮ ಪಕ್ಕದ್ಮನೆಯಲ್ಲಿ ಹಾವು ಬಂದಿದ್ದ ಸುದ್ದಿ ಕೇಳಿ ನನ್ನ ತಂಗಿ ತುಂಬಾ ಹೆದರಿದ್ದಳು. ತಕ್ಷಣ ನನ್ನ ತಲೆಗೆ ಉಪಾಯ ಹೊಳೆದು ಮನಸ್ಸು ಕುಣಿದಾಡಿತು. ಕಾರಣ ಇಷ್ಟೇ, ಪ್ರತಿ ಬಾರಿಯೂ ಏಪ್ರಿಲ್ 1ರಂದು ನನ್ನನ್ನು ಬಕ್ರಾ ಮಾಡಿ ಗೆಲುವಿನ ಕೇಕೆ ಹಾಕುತ್ತಿದ್ದವಳಿಗೆ ಬಕ್ರಾ ಮಾಡುವ ಸದಾವಕಾಶ.
ಏಪ್ರಿಲ್ 1ರಂದು ಅವಳನ್ನು ಬಕ್ರಾ ಮಾಡುವ ಉದ್ದೇಶದಿಂದ ಬೆಳಗ್ಗೆ ಐದು ಮೂವತ್ತಕ್ಕೆ ಎದ್ದೆ. ಆದರೆ, ಅವಳು ಅದಾಗಲೇ ಎದ್ದಿದ್ದಳು. ಮನೆಯಲ್ಲಿ ನಿಶ್ಧಬ್ದ. ಅವಳನ್ನು ಹುಡುಕುತ್ತ ನಿಧಾನವಾಗಿ ಅಡುಗೆ ಮನೆ ಕಡೆ ಹೆಜ್ಜೆ ಹಾಕಿದೆ. ಅಲ್ಲಿ ಇರಲಿಲ್ಲ. ಅಕ್ವಾಗಾರ್ಡಿನಿಂದ ನೀರು ತುಂಬಿಸಿಕೊಳ್ಳುತ್ತಿರುವಾಗ, ‘ಹಾವು… ಹಾವು… ಅಕ್ಕ ನಿನ್ನ ಕಾಲ ಕೆಳಗೆ ಹಾವು…’ ಎಂದು ಜೋರಾಗಿ ಕಿರುಚಿದಾಗ ಗಾಬರಿಯಿಂದ ಎಲ್ಲಿ? ಎಲ್ಲಿ? ಎಂದು ಕೇಳುತ್ತಿರುವಾಗ ನನ್ನ ಕೈಲ್ಲಿದ್ದ ಲೋಟ ಬಿದ್ದು ನೀರು ಚೆಲ್ಲಿತ್ತು. ನನ್ನ ಉಪಾಯ ನನಗೇ ತಿರುವುಮುರುವು ಆಗಿತ್ತು. ನಾನು ಸಪ್ಪೆ ಮುಖ ಮಾಡಿದೆ. ಅವಳು ಮತ್ತೆ ಗೆಲುವಿನ ನಗೆ ಬೀರಿದಳು.
ಆಗ ನಾನಿನ್ನೂ ಚಿಕ್ಕವಳು. ಐದಾರನೇ ಕ್ಲಾಸ್ ಓದ್ತಾ ಇದ್ದೆ. ಏಪ್ರಿಲ್ ಫೂಲ್ ಮಾಡಲು ಸಕಖ್ ಐಡಿಯಾ ಮಾಡಿದೆ. ‘ಅಜ್ಜಿ….ಅಜ್ಜಿ…ನಿಮ್ಮಣ್ಣ ಬಸಯ್ಯ ಸತ್ತರು’ ಅಂತ ನಾರಮ್ಮ ಹತ್ತಿರ ಹೋಗಿ ಹೇಳಿದ್ದೆ. ನಾರಮ್ಮ ಅವರು ‘ಅಯ್ಯೋ ಅಣ್ಣ. ನಿನ್ನೆ ಬೇಸಿದ್ದೆ. ಮಾತಾಡಿದೆ. ದೇವರು ಎಂತಹ ಸಾವು ತಂದನ್ನಲ್ಲಪ್ಪ’ ಅಂತ ಬಾಯಿ ಬಡಕೊಂತ ನಮ್ಮೂರು ತೂಲಹಳ್ಳಿಯಲ್ಲಿ ಓಣಿ ಓಣಿಯಲ್ಲಿ ಅಳುತ್ತಾ ಬಂದಾಗ ಕೆಲವೇ ನಿಮಿಷದಲ್ಲಿ ಇಡೀ ಊರ ಜನರಲ್ಲ ಅಲ್ಲಿ ಬಂದು ನೋಡಿದರೆ ಬಸಯ್ಯನವರು ಜಬರದಸ್ತಾಗಿ ಕೂತ್ತಿದ್ದರು. ‘ಅರೆ ನಾನು ಸತ್ತುಹೋದೆ ಅಂತ ಯಾರು ಹೇಳಿದ್ದು’ ಅಂದಾಗ, ಅದೇ ರಶ್ಮಿ ಅಂದಿದ್ದೆ ತಡ ಅಪ್ಪ, ಅಮ್ಮ, ಬಂಧುಗಳೆಲ್ಲ ಸೇರಿ ಸಿಕ್ಸ್, ಫೋರು, ಬೌಂಡ್ರಿ ಬಾರಿಸಿಬಿಟ್ರು. ಆ ಏಟುಗಳಿಗೆ ಎರಡು ದಿವಸ ಮಲಗಿದ್ದೆ. ಏಪ್ರಿಲ್ 1 ಬಂದಾಗಲೆಲ್ಲ ಈ ಘಟನೆ ನೆನಪಾಗಿ ನಗು- ಆಳು ಎರಡೂ ಬರುತ್ತೆ.
|ಸಿ.ಕೆ.ರಶ್ಮಿತೂಲಹಳ್ಳಿ (ಕೊಟ್ಟೂರು ತಾಲೂಕು)
ಈ ಘಟನೆ ನಡೆದದ್ದು ಅಂದಾಜು 20 ವರ್ಷಗಳ ಹಿಂದೆ. ಆ ದಿನ ಏಪ್ರಿಲ್ 1ರಂದು ರಜೆ ಇತ್ತು. ನಾನು ನನ್ನ ಗೆಳೆಯ ಇಬ್ಬರೂ ಶ್ರೀರಂಗಪಟ್ಟಣದಲ್ಲಿ ಇರುವ ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ ನೋಡಲು ಹೋಗಿದ್ದೆವು. ನಮ್ಮ ವಾಹನವನ್ನು ಪಾರ್ಕ್ ಮಾಡಿ ಒಳ ಹೋಗಲು ಸಿದ್ಧರಾದೆವು. ಅಷ್ಟರಲ್ಲಿ ಅಲ್ಲಿಗೆ 2 ಕಾರಿನಲ್ಲಿ ಕೇಂದ್ರ ಸರ್ಕಾರ ಅಧಿಕಾರಿಗಳ ತಂಡ ಬಂತು. ಸ್ಥಳೀಯ ಪೋಲೀಸರು ಅವರನ್ನು ಬಹಳ ಗೌರವದಿಂದ ಒಳ ಹೋಗಲು ಬಿಟ್ಟರು. ನಾವು ಕೂಡ ಇದೇ ಸಮಯ ಸರಿಯೆಂದು ಅವರ ಜತೆ ಹೊರೆಟೆವು. ಸ್ಥಳೀಯ ಪೋಲೀಸರು ನಮಗೂ ಸೆಲ್ಯೂಟ್ ಮಾಡಿದರು. ಅಧಿಕಾರಿಗಳ ತಂಡದ ಬೇಸಿಗೆ ಅರಮನೆ ಸುತ್ತಾಟದಲ್ಲಿ ನಾವು ಅವರ ಜತೆ ಇದ್ದೆವು. ಮಧ್ಯದಲ್ಲಿ ಅಧಿಕಾರಿಗಳ ತಂಡಕ್ಕೆ ಹಾಗೂ ನಮಗೂ ತಂಪು ಪಾನೀಯವನ್ನು ಕೊಟ್ಟರು. ಎಲ್ಲಾ ಮುಗಿದು ಅವರುಗಳು ವಾಪಸ್ ಅವರ ಕಾರಿನಲ್ಲಿ ಹೊರಟರು. ನಮಗೂ ವಂದಿಸಿ ನಿರ್ಗಮಿಸಿದರು. ಸ್ಥಳೀಯ ಪೋಲೀಸರು ನಮ್ಮನ್ನು ಉದ್ದೇಶಿಸಿ, ‘ನೀವು ಸಿಐಡಿ ಪೋಲೀಸರು ಅಲ್ವಾ’ ಎಂದು ಕೇಳಿದರು. ನಾವು ನಸುನಗುತ್ತಾ ಉತ್ತರಿಸದೆ ನಮ್ಮ ವಾಹನದತ್ತ ತೆರಳಿದೆವು. ಆವತ್ತು ನಾವು ಧರಿಸಿದ್ದ ಪ್ಯಾಂಟ್ ಖಾಕಿ ಬಣ್ಣಕ್ಕೆ ಬಹಳ ಸಮೀಪ ಬಣ್ಣದ್ದಾಗಿತ್ತು ಹಾಗೂ ಕಪ್ಪು ಷೂ ಧರಿಸಿದ್ದೆವು. ಬಹುಶಃ ಸ್ಥಳೀಯ ಪೋಲೀಸರು ಬೆಸ್ತು ಬೀಳಲು ಇದು ಕೂಡ ಕಾರಣವಾಗಿರಬಹುದು.
|ಪಿ. ವಿಜಯ್ ಆನಂದ್ಮೈಸೂರು
ಬೆಳಗಿನ ಜಾವ ಐದು ಗಂಟೆ. ನಾನು ಗಾಢ ನಿದ್ರೆಯಲ್ಲಿ ಮಲಗಿದ್ದೆ. ನನ್ನ ಅಣ್ಣ ಮಾರ್ನಿಂಗ್ ಶಿಫ್ಟ್ನಲ್ಲಿ ಫ್ಯಾಕ್ಟರಿಗೆ ಹೋಗುವ ತರಾತುರಿಯಲ್ಲಿ ಜೋರಾಗಿ ಕೂಗುತ್ತಾ ‘ನೋಡೋ ನೀನು ಮಲಗಿರುವ ಬೆಡ್ ಶೀಟ್ ಮೇಲೆ ಚೇಳು ಹರಿಯುತ್ತಿದೆ, ಹಾಗೆ ಇರು’ ಎಂದು ಕೂಗಿದರು. ನನಗೆ ಭಯವಾಗಿ ಹೊದ್ದುಕೊಂಡು ಮುದುರಿ ಮಲಗಿದ್ದೆ. ಎಷ್ಟು ಹೊತ್ತಾದರೂ ಪುನಃ ಅಣ್ಣನ ಧ್ವನಿ ಕೇಳಿಸಲಿಲ್ಲ. ಐದು ನಿಮಿಷ ಆದ ನಂತರ ನಿಧಾನವಾಗಿ ಕಣ್ತೆರೆದು ನೋಡಿದಾಗ ಅಲ್ಲಿ ನನ್ನ ಅಣ್ಣ ನಿಂತಿರಲಿಲ್ಲ, ಅಲ್ಲಿ ಒಂದು ಬೋರ್ಡ್ ಇತ್ತು. ಏಪ್ರಿಲ್ ಫೂಲ್ ಎಂದು. ಅಷ್ಟರಲ್ಲಾಗಲೇ ಒಂದು ಎರಡು ಎಲ್ಲಾ ಮಲಗಿದ್ದಲ್ಲಿಯೇ ಆಗಿತ್ತು.
|ಸೋ.ಫಾಲನೇತ್ರಬೆಂಗಳೂರು
ರಾಜ್ಯದಲ್ಲಿ ಮುಂದಿನ 5 ದಿನ ಗುಡುಗು ಮಿಂಚು ಸಹಿತ ಮಳೆ ಸಾಧ್ಯತೆ

ಪ್ರಾಮಾಣಿಕ ಎಸ್​ಐ ಎಂದು ಗಣರಾಜ್ಯೋತ್ಸವದಂದು ಪ್ರಶಸ್ತಿ ಪಡೆದಿದ್ದಾಕೆ 5 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − one =
Remember me
