ಬೆಂಗಳೂರು: ಮುಖ್ಯಮಂತ್ರಿ ಕಚೇರಿ, ಸಚಿವಾಲಯದಲ್ಲಿ ಕೆಲಸ ಮಾಡುವವರೆಲ್ಲಾ ಯಾರು? ಏಜೆಂಟರೋ? ಡೀಲ್ ಮಾಸ್ಟರ್‌ಗಳೋ? ಬೌನ್ಸರ್‌ಗಳೋ? ಫಿಕ್ಸರ್‌ಗಳೋ? ತಮ್ಮ ವೈಯಕ್ತಿಕ ಬೇಕುಬೇಡಗಳನ್ನು ನೋಡಿಕೊಳ್ಳಲು ತಾವು ನೇಮಿಸಿಕೊಂಡಿರುವ ಖಾಸಗಿ ಸಿಬ್ಬಂದಿಯೋ? ಅಥವಾ ಜನರಿಗೆ ಉತ್ತರದಾಯಿತ್ವ ಇರುವ ಜನರ ತೆರಿಗೆಯ ಹಣದಲ್ಲಿ ಸಂಬಳ ಪಡೆಯುವ ಸರ್ಕಾರಿ ನೌಕರರೋ?
– ಹೀಗೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಗಂಭೀರ ದನಿಯಲ್ಲಿ ವಾಗ್ದಾಳಿ ನಡೆಸಿದೆ.ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿಕೆ ನೀಡಿ, ರಾಜ್ಯದ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಯವರಿಗೆ ಸಾರ್ವಜನಿಕ ವಿಚಾರದ ಕುರಿತು ಹತ್ತಾರು ಪತ್ರಗಳನ್ನು ಬರೆದಿದ್ದೇವೆ. ಆದರೆ ಯಾವುದೇ ಮಂತ್ರಿಯ ಕಚೇರಿಯಿಂದಾಗಲಿ ಅಥವ ಮುಖ್ಯಮಂತ್ರಿಯ ಕಚೇರಿಯಿಂದಾಗಲಿ, ನಾವು ಪ್ರಸ್ತಾಪಿಸಿರುವ ವಿಷಯಕ್ಕೆ ತೆಗೆದುಕೊಂಡಿರುವ ಕ್ರಮ/ತೀರ್ಮಾನ ಇರಲಿ, ಪತ್ರ ತಲುಪಿದೆ ಎನ್ನುವ ಕನಿಷ್ಠ ಉತ್ತರವೂ ಇಲ್ಲಿಯವರೆಗೆ ನಮಗೆ ಬಂದಿಲ್ಲ. ಇದೆಂತಹ ಆಡಳಿತ ವ್ಯವಸ್ಥೆ? ಎಂತಹ ಉತ್ತರದಾಯಿತ್ವ? ಪ್ರಜಾಪ್ರಭುತ್ವದಲ್ಲಿ ಇದು ಅಸಡ್ಡೆ ಅಥವ ದುರಹಂಕಾರ ಅಲ್ಲದೇ ಮತ್ತೇನು? ಎಂದು ಪ್ರಶ್ನಿಸಿದ್ದಾರೆ.ಮುಖ್ಯಮಂತ್ರಿ ಕಚೇರಿ, ಸಚಿವಾಲಯದಲ್ಲಿ ಹಿರಿಯ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳೂ ಸೇರಿದಂತೆ ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಾರೆ. ಇದರಲ್ಲಿ ಬಹುತೇಕರು ಯಾವಾಗಲೂ ಹೊರಗುತ್ತಿಗೆ ನೌಕರರೇ ಇರುತ್ತಾರಂತೆ. ನಿಜಕ್ಕೂ ಇವರು ಮಾಡುವ ಕೆಲಸಗಳಾದರೂ ಏನು? ಎಂದು ಕುಟುಕಿದ್ದಾರೆ.ಹಣ, ಪ್ರಭಾವ, ಜಾತಿ, ಕುಲ, ಗೋತ್ರಗಳ ಆಧಾರದ ಮೇಲೆ ಯಾವ್ಯಾವ ಸರ್ಕಾರಿ ಅಧಿಕಾರಿಗಳನ್ನು ಎಲ್ಲಿಗೆ ವರ್ಗಾವಣೆ ಮಾಡಬೇಕು ಎಂದು ನಿರ್ಧರಿಸುವುದೇ ಇಲ್ಲಿಯ ಬಹುತೇಕರ ಕೆಲಸ ಎಂದು ಹೇಳಲಾಗುತ್ತದೆ. ಅದರ ಜತೆಗೆ ಮುಖ್ಯಮಂತ್ರಿ ಸ್ಥಾನದ ಪ್ರಭಾವವನ್ನು ಬಳಸಿಕೊಂಡು ಹಣ, ವೈಯಕ್ತಿಕ, ಜಾತಿ, ರಾಜಕಾರಣ ಸೇರಿದಂತೆ ಯಾವೆಲ್ಲಾ ಕಾರಣಗಳಿಗೆ ಯಾರಿಗೆಲ್ಲಾ ಸರ್ಕಾರದಿಂದ ಏನೆಲ್ಲಾ ಅಕ್ರಮ ಅನುಕೂಲಗಳನ್ನು ಮಾಡಿಕೊಡಬಹುದು ಎನ್ನುವ ಯೋಜನೆ, ಪಿತೂರಿ, ಹಸ್ತಕ್ಷೇಪ ಮಾಡುವುದೂ ಸಹ ಇವರ ಪೂರ್ಣಾವಧಿ ಉದ್ಯೋಗ ಎನ್ನಲಾಗುತ್ತಿದೆ ಎಂದು ಆರೋಪಿಸಿದ್ದಾರೆ.ಮುಖ್ಯಮಂತ್ರಿ ಸಚಿವಾಲಯದ ಬಹುತೇಕ ಸಿಬ್ಬಂದಿಗೆ ನಿರ್ದಿಷ್ಟ ಕೆಲಸವೇ ಇರುವುದಿಲ್ಲವಂತೆ. ಮ್ಯಾನೇಜ್ ಮಾಡುವುದೇ ಇವರ ಪ್ರಮುಖ ಉದ್ಯೋಗ. ಯಾರನ್ನು ಮತ್ತು ಏನನ್ನು ಇವರು ಮ್ಯಾನೇಜ್ ಮಾಡುತ್ತಾರೆ? ತಮ್ಮ ಈಗಿನ ಮುಖ್ಯಮಂತ್ರಿ ಸಚಿವಾಲಯದ ಸಿಬ್ಬಂದಿಯೂ ಸೇರಿದಂತೆ ಇತ್ತೀಚಿನ ಎಲ್ಲಾ ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿ ಬಹುತೇಕವಾಗಿ ಮುಖ್ಯಮಂತ್ರಿಗಳ ಸ್ವಕ್ಷೇತ್ರ, ಸ್ವಜಿಲ್ಲೆ, ಸ್ವಜಾತಿಗೆ ಸೇರಿದವರೇ ಆಗಿರುತ್ತಾರೆ ಎನ್ನುವ ಆರೋಪಗಳು ಇವೆ. ಇದೆಂತಹ ಮಾದರಿ? ಇದೆಂತಹ ನಡವಳಿಕೆ? ಎಂದು ಅಸಮಾಧಾನ ಹೊರಹಾಕಿದ್ದಾರೆ. ಹಾಗೆಯೇ, ಮುಖ್ಯಮಂತ್ರಿ ಸಚಿವಾಲಯದ ಬಹುತೇಕ ಸಿಬ್ಬಂದಿ ಹೊರಗುತ್ತಿಗೆಯವರಂತೆ. ಅವರು ಮಾಡುತ್ತಿರುವ ಕೆಲಸಗಳನ್ನೇ ಮಾಡುವುದಕ್ಕೆ ಸರ್ಕಾರಿ ನೌಕರರೇ ಇರುವಾಗ ಈ ಖಾಸಗಿಪಡೆಯ ನೇಮಕ ಯಾಕಾಗಿ? ಸರ್ಕಾರಿ ನೌಕರರಿಗೆ ಗೌಪ್ಯತೆಯನ್ನು ಕಾಪಾಡುವ ಜವಾಬ್ದಾರಿಯೂ ಸೇರಿದಂತೆ ಉತ್ತರದಾಯಿತ್ವ ಮತ್ತು ನಿರ್ದಿಷ್ಟ ಜವಾಬ್ದಾರಿ ಮತ್ತು ಬಾಧ್ಯತೆಗಳು ಇರುತ್ತವೆ. ಈ ಖಾಸಗಿ ಪಡೆಗೆ ಅವು ಯಾವುವೂ ಅನ್ವಯಿಸುವುದಿಲ್ಲ. ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಎನ್ನುವವರು ರೂಪಿಸುವ ವ್ಯವಸ್ಥೆಯೇ ಇದು? ಎಂದು ಪ್ರಶ್ನಿಸಿದ್ದಾರೆ.ಇವೆಲ್ಲವನ್ನೂ ಬದಲಾಯಿಸದೆ, ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತಾರದೆಯೇ, ತಾವು ಇನ್ನೆಂತಹ ಕರ್ನಾಟಕ ಮಾದರಿ ಕಟ್ಟುತ್ತೀರಿ ಮತ್ತು ಆ ಕುರಿತು ಮಾತನಾಡುತ್ತಿದ್ದೀರಿ? ಎಂದು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × five =
Remember me
