ಹದಿನೆಂಟನೆಯ ಲೋಕಸಭೆಯ ಪ್ರಥಮ ಅಧಿವೇಶನದಲ್ಲಿ ವಾಡಿಕೆಯಂತೆ ಹೊಸ ಚುನಾಯಿತ ಸದಸ್ಯರ ಪ್ರಮಾಣವಚನ ಸ್ವೀಕಾರ, ರಾಷ್ಟ್ರಪತಿಗಳ ಭಾಷಣ, ಮತ್ತದಕ್ಕೆ ಧನ್ಯವಾದ ಅರ್ಪಣೆಯ ಕಾರ್ಯಕ್ರಮ ಜರುಗಿತಷ್ಟೆ. ಅದರಲ್ಲಿ ವಿರೋಧಪಕ್ಷಗಳ ನಾಯಕನಾಗಿ ರಾಹುಲ್ ಗಾಂಧಿ ಮಾಡಿದ ಭಾಷಣ ಅವರ ಅವರ ಮನಸ್ಥಿತಿ ಮತ್ತು ವಿಚಾರಗಳ ಬಗ್ಗೆ ಆಘಾತಕಾರಿ ಒಳನೋಟಗಳನ್ನು ನೀಡುತ್ತವೆ. ಈ ನಿಟ್ಟಿನಲ್ಲಿ ಅವರ ಮಾತುಗಳಲ್ಲಿನ ಮೂರು ವಿಚಾರಗಳು ಪ್ರಮುಖವಾಗಿ ವಿಶ್ಲೇಷಣಾಯೋಗ್ಯ.
ರಾಹುಲ್ ಗಾಂಧಿಯವರ ಚೀನಾಪರ ಒಲವು ಇಂದು ನಿನ್ನೆಯದಲ್ಲ. ಅದು ಈಗ ಲೋಕಸಭೆಯಲ್ಲೇ ದೊಡ್ಡದಾಗಿ ವ್ಯಕ್ತಗೊಂಡಿತು. ಅದರೊಂದಿಗೆ ಭಾರತೀಯ ಸೇನೆಯ ಬಗೆಗಿನ ಅವರ ನಕಾರಾತ್ಮಕ ವಿಚಾರಗಳೂ ಢಾಳಾಗಿ ಹೊರಬಂದವು. ಅದಕ್ಕಾಗಿ ಬಳಕೆಯಾದದ್ದು ಸೇನೆಯ ಹೊಸ ಅಗ್ನಿವೀರ್ ಯೋಜನೆ. ರಾಹುಲ್ ಗಾಂಧಿ ಹೇಳಿದ್ದು ಚೀನಾ ತನ್ನ ಸೈನಿಕರಿಗೆ ಐದು ವರ್ಷಗಳಷ್ಟು ದೀರ್ಘಕಾಲ ತರಬೇತಿ ನೀಡುತ್ತದೆ ಎಂದು ಮತ್ತು ಆಪಾದಿಸಿದ್ದು ಮೋದಿ ಸರ್ಕಾರ ಅಗ್ನಿವೀರರಿಗೆ ಕೇವಲ ಆರು ತಿಂಗಳ ತರಬೇತಿ ನೀಡುತ್ತದೆ ಎಂದು. ಇಲ್ಲಿ ರಾಹುಲ್ ಗಾಂಧಿಯವರಿಗೆ ತಿಳಿಯದ ಅಥವಾ ತಿಳಿದೂ ಅವರು ಹೊರಗೆಡಿಸದ ವಿಚಿತ್ರ ವಿಷಯವೊಂದಿದೆ.
ಪ್ರಪಂಚದ ಎಲ್ಲ ದೇಶಗಳಲ್ಲೂ ಅಧಿಕೃತ ರಾಷ್ಟ್ರೀಯ ಸೇನೆ ದೇಶದ್ದೇ ಆಗಿರುತ್ತದೆ ಮತ್ತದರ ಪ್ರಥಮ ಹಾಗೂ ಮೂಲ ಕರ್ತವ್ಯ ದೇಶವನ್ನು ಹೊರಗಿನ ಶತ್ರಗಳಿಂದ ರಕ್ಷಿಸುವುದಾಗಿರುತ್ತದೆ. ಆದರೆ ಚೀನಾದಲ್ಲಿ ಮಾತ್ರ ಹಾಗಲ್ಲ. ಅಲ್ಲಿನ ಪೀಪಲ್ಸ್ ಲಿಬರೇಷನ್ ಆರ್ವಿು (ಪಿಎಲ್​ಎ) ಚೀನಾ ದೇಶದ್ದಲ್ಲ. ಅದು ವಾಸ್ತವವಾಗಿ ಚೀನೀ ಕಮ್ಯೂನಿಸ್ಟ್ ಪಕ್ಷದ ಸೇನೆ. ಅದರ ಆದ್ಯ ಕರ್ತವ್ಯ ಚೀನಾ ಎಂಬ ದೇಶವನ್ನು ಶತ್ರುಗಳಿಂದ ರಕ್ಷಿಸುವುದಲ್ಲ. ಬದಲಾಗಿ ಚೀನೀ ಕಮ್ಯೂನಿಸ್ಟ್ ಪಕ್ಷವನ್ನು (ಚೈನೀಸ್ ಕಮ್ಯೂನಿಸ್ಟ್ ಪಾರ್ಟಿ, ಸಿಸಿಪಿ) ರಕ್ಷಿಸುವುದು ಮತ್ತು ಅದು ಅಧಿಕಾರದಲ್ಲೇ ಇರುವಂತೆ ನೋಡಿಕೊಳ್ಳುವುದು! ಅದು ಕಾರ್ಯಾಚರಣೆಗಳಿಗೆ ಇಳಿಯುವುದು ದೇಶದೊಳಗೆ ಅಥವಾ ಹೊರಗೆ ತನ್ನ ವಿರೋಧಿಗಳೆಂದು ಸಿಸಿಪಿ ಪರಿಗಣಿಸುವ ವ್ಯಕ್ತಿಗಳು, ಸಂಘಟನೆಗಳು ಮತ್ತು ದೇಶಗಳ ವಿರುದ್ಧ. ಸೈನಿಕರ ತರಬೇತಿಯಲ್ಲಿ ಪ್ರಮುಖವಾಗಿ ಕಲಿಸುವುದು ಕಮ್ಯೂನಿಸ್ಟ್ ವಿಚಾರಧಾರೆಗಳನ್ನು ಮತ್ತು ಕಮ್ಯೂನಿಸ್ಟ್ ಪಕ್ಷದ ಕುರಿತಾಗಿನ ಪ್ರಶ್ನಾತೀತ ನಿಷ್ಠೆಯನ್ನು. ಈ ವೈಚಾರಿಕ ಪಠ್ಯಕ್ರಮ 1980ರ ದಶಕದ ಪ್ರಾರಂಭದವರೆಗೂ ಮಾವೋ ಝೆಡಾಂಗ್​ರ ವಿಚಾಧಾರೆಗಳು ಮತ್ತು ಅವರಿಗೆ ಕಂಡಂತಹ ಮಾರ್ಕ್ಸಿಸ್ಟ್, ಲೆನಿನಿಸ್ಟ್ ಮತ್ತು ಸ್ಟಾ್ಯಲಿನಿಸ್ಟ್ ತತ್ವಗಳು.
1980ರ ದಶಕದಲ್ಲಿ ಅದಕ್ಕೆ ಡೆಂಗ್ ಷಿಯಾವೋಪಿಂಗ್​ರ ವಿಚಾರಧಾರೆಗಳನ್ನೂ ಸೇರಿಸಲಾಯಿತು. ಆರ್ಥಿಕವಾಗಿ ಬಡರಾಷ್ಟ್ರವಾಗಿದ್ದ, ತನ್ನ ಜನರ ಹೊಟ್ಟೆ ತುಂಬಿಸಲಾಗದಷ್ಟೂ ದುಃಸ್ಥಿತಿಯಲ್ಲಿದ್ದ ಚೀನಾವನ್ನು ಆರ್ಥಿಕ ಮಹಾಶಕ್ತಿಯಾಗುವಂತೆ ಮಾಡಿದ್ದು ಅಧ್ಯಕ್ಷ ಡೆಂಗ್. ಕಮ್ಯೂನಿಸಂನಿಂದ ಆರ್ಥಿಕ ಪ್ರಗತಿ ಅಸಾಧ್ಯವೆಂದರಿತ ಡೆಂಗ್ ರಾಜಕೀಯದಲ್ಲಿ ಕಮ್ಯೂನಿಸಂ, ಆರ್ಥಿಕ ಕ್ಷೇತ್ರದಲ್ಲಿ ಅಗತ್ಯವಾದಷ್ಟು ಕ್ಯಾಪಿಟಲಿಸಂ ಇರಬೇಕು ಎಂಬ ನೀತಿ ರೂಪಿಸಿ ಆ ಮೂಲಕ ಚೀನಾದ ಆರ್ಥಿಕ ನಾಗಾಲೋಟಕ್ಕೆ ನಾಂದಿಹಾಡಿದರು. ಹೀಗಾಗಿ ಅವರ ತತ್ವಗಳು ಚೀನೀ ಶಾಲೆಗಳಲ್ಲಷ್ಟೇ ಅಲ್ಲ, ಪಿಎಲ್​ಎ ಸೈನಿಕರ ತರಬೇತಿಯ ಪಠ್ಯಕ್ರಮದಲ್ಲೂ ಸೇರಿಕೊಂಡವು. ಈ ಪಠ್ಯಕ್ರಮಕ್ಕೆ ಕಳೆದ ದಶಕದಲ್ಲಿ ಪ್ರಸಕ್ತ ಅಧ್ಯಕ್ಷ ಷಿ ಜಿನ್​ಪಿಂಗ್​ರ ವಿಚಾರಧಾರೆಗಳನ್ನೂ ಸೇರಿಸಲಾಗಿದೆ. ಅಧ್ಯಕ್ಷ ಷಿ ಅವರ ವಿಚಾರಧಾರೆಗಳೇನು ಎನ್ನುವುದು ಜಗತ್ತಿಗೆ ಇನ್ನೂ ಸ್ಪಷ್ಟವಾಗಿಲ್ಲ. ಅದು ಇದುವರೆಗೆ ಅನಾವರಣಗೊಂಡಿರುವ ಪ್ರಕಾರ 16-19ನೇ ಶತಮಾನಗಳಲ್ಲಿ ಯೂರೋಪಿಯನ್ ದೇಶಗಳು ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾಗಳಲ್ಲಿ ಮಾಡಿದಂತೆ ಈ 21ನೇ ಶತಮಾನದಲ್ಲಿ ಚೀನೀ ನವವಸಾಹತುಶಾಹಿಯನ್ನು ಸಾಧ್ಯವೆಲ್ಲೆಡೆ ಸ್ಥಾಪಿಸಿವುದು. ವಿವಿಧ ದೇಶಗಳೊಳಗೆ ಮೊದಲಿಗೆ ಆರ್ಥಿಕವಾಗಿ ಮೂತಿ ತೂರಿಸುವುದು, ನಂತರ ಸೇನೆ ನೆಲೆಗೊಳಿಸುವುದು ಈ ನೀತಿ ಕಾರ್ಯರೂಪಕ್ಕಿಳಿಯುವ ವಿಧಾನ. ಈ ನೀತಿಯ ಅಗತ್ಯವನ್ನು ಚೀನಾದ ಹೊಸ ತಲೆಮಾರಿಗಷ್ಟೇ ಅಲ್ಲ, ಸೈನಿಕರಿಗೂ ಕಲಿಸುವುದು ಈಗ ಪಿಎಲ್​ಎ ತರಬೇತಿಯ ಭಾಗವಾಗಿದೆ. ಯಾಕೆಂದರೆ ಚೀನೀ ವಸಾಹತುಶಾಹಿ ಯುಗವನ್ನು ಆರಂಭಿಸುವುದರಲ್ಲಿ ಇವರ ಪಾತ್ರ ದೊಡ್ಡದಾಗಿರುತ್ತದೆ. ಈ ವೈಚಾರಿಕತೆಯಿಂದ ಸೈನಿಕರು ದೂರಹೋಗದಂತೆ ನಿಗಾವಹಿಸಲು ಸೇನೆಯ ಪ್ರತಿಯೊಂದು ತುಕಡಿಯಲ್ಲೂ ಕಮ್ಯೂನಿಸ್ಟ್ ಪಕ್ಷದ ‘ಪೊಲಿಟಿಕಲ್ ಕಮಿಸಾರ್’ ಎಂಬ ಅಧಿಕಾರಿಯೊಬ್ಬನಿರುತ್ತಾನೆ!
ಹಾಗಿದ್ದರೆ ಈ ಬಗೆಯ ವೈಚಾರಿಕ ತರಬೇತಿ ಮತ್ತು ನಿಯಂತ್ರಣದಲ್ಲಿರುವ ಪಿಎಲ್​ಎ ಸೈನಿಕರ ಕಾದುವ ಸಾಮರ್ಥ್ಯ ಎಂತಹದು? ಆ ಬಗ್ಗೆ ಗಂಭೀರ ಪ್ರಶ್ನೆಗಳಿವೆ. ಕಳೆದ ಮುಕ್ಕಾಲು ಶತಮಾನದಲ್ಲಿ ಪಿಎಲ್​ಎ ಜಯಿಸಿದ ಒಂದೇ ಒಂದು ಯುದ್ಧ 1962ರಲ್ಲಿ ಭಾರತದೊಂದಿಗೆ ನಡೆದದ್ದು. ವಾಸ್ತವವೆಂದರೆ ಆ ಯುದ್ಧದಲ್ಲಿ ಸೋತದ್ದು ಭಾರತೀಯ ರಾಜಕೀಯ ನಾಯಕತ್ವ. ಭಾರತೀಯ ಸೇನೆಯಲ್ಲ. ರಾಹುಲ್ ಗಾಂಧಿಯವರ ಮುತ್ತಾತ ಜವಾಹರ್​ಲಾಲ್ ನೆಹರು ಅವರ ಸೇನಾ-ವಿರೋಧಿ ಕಾರ್ಯಯೋಜನೆಗಳು ಮತ್ತು ಹಿಂದಿನ ಒಂದಿಡೀ ದಶಕದ ಚೀನಾ-ಪ್ರೀತಿ ಬ್ರಿಟಿಷರ ಕಾಲದಲ್ಲಿ ಏಷ್ಯಾದ ಬಲಿಷ್ಠ ಸೇನೆಯಾಗಿದ್ದ ನಮ್ಮ ಸೇನೆಯನ್ನು ಅಗಾಧವಾಗಿ ಬಲಹೀನಗೊಳಿಸಿಬಿಟ್ಟಿದ್ದವು. ಆದರೆ, ನಮ್ಮ ರಾಜಕೀಯ ನಾಯಕತ್ವ ಬದಲಾದದ್ದೇ ಸೇನೆಯ ಶಕ್ತಿ ಸಹ ವೃದ್ಧಿಗೊಂಡಿತು. ಇದೇ ರಾಹುಲ್ ಗಾಂಧಿಯವರ ಅಜ್ಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರಿಂದ ಪೂರ್ಣ ಬೆಂಬಲ ಪಡೆದ ನಮ್ಮ ಸೇನೆ 1967ರ ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ ಸಿಕ್ಕಿಂ ಗಡಿಯಲ್ಲಿ ಚೀನೀ ಪಿಎಲ್​ಎಗೆ ಕಲಿಸಿದ ಪಾಠ ಭಾರತೀಯ ಸೇನೆಯ ಐತಿಹಾಸಿಕ ವೈಭವವನ್ನು ಮರುಸ್ಥಾಪಿಸಿತು. ಇದನ್ನೇ 1986-87ರ ಚಳಿಗಾಲದಲ್ಲಿ ಪ್ರಧಾನಿ ರಾಜೀವ್ ಗಾಂಧಿಯವರ ನೇತೃತ್ವದಲ್ಲಿ ನಮ್ಮ ಸೇನೆ ಅರುಣಾಚಲ ಗಡಿಯಲ್ಲಿ ಮತ್ತೆ ಸಾಧಿಸಿತು. ರಾಹುಲ್ ಗಾಂಧಿ ತಮ್ಮ ತಂದೆ ಮತ್ತು ಅಜ್ಜಿಯಿಂದ ಪ್ರಭಾವಿತರಾಗುವ ಬದಲು ಹಲವು ಅನಾಹುತಗಳಿಗೆ ಕಾರಣರಾದ ತಮ್ಮ ಮುತ್ತಾತನ ಪ್ರಭಾವದೊಳಗೆ ಸಿಲುಕಿಹೋಗಿರುವಂತಿದೆ.
ಕೊನೇಪಕ್ಷ ನಾಲ್ಕೇ ವರ್ಷಗಳ ಹಿಂದೆ ಗಲ್ವಾನ್​ನಲ್ಲಿ ನಡೆದದ್ದನ್ನೂ ಅವರು ನೆನಪಿಸಿಕೊಳ್ಳುತ್ತಿಲ್ಲ. ಆ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದರು ಬಿಡಿ. ಮುತ್ತಾತನ ಜತೆ ರಾಹುಲ್ ಗಾಂಧಿ ತಮ್ಮ ತಾಯಿಯ ಪ್ರಭಾವದಲ್ಲೂ ಇರುವಂತಿದೆ. ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಚೀನೀ ಪಿಎಲ್​ಎ ನಮ್ಮ ಗಡಿಗಳಲ್ಲಿ ಆರುನೂರರಷ್ಟು ಅತಿಕ್ರಮಣಗಳನ್ನು ಎಸಗಿ ಸುಮಾರು ಒಂದುಸಾವಿರ ಚ.ಕಿ.ಮೀ. ಪ್ರದೇಶವನ್ನು ಆಕ್ರಮಿಸಿಕೊಂಡದ್ದನ್ನು ಇಲ್ಲಿ ನೋವಿನಿಂದ ನೆನಪಿಸಿಕೊಳ್ಳಬಹುದು.
ಭಾರತದ ಹೊರತಾಗಿ ಪಿಎಲ್​ಎ ಇತರ ರಣರಂಗಗಳಲ್ಲೂ ಕಳಪೆ ರೆಕಾರ್ಡ್ ಹೊಂದಿದೆ. 1950-53ರಲ್ಲಿ ಅದು ದಕ್ಷಿಣ ಕೊರಿಯಾದ ಪರವಾಗಿ ನಿಂತ ಅಮೆರಿಕನ್ ಸೇನೆಯ ವಿರುದ್ಧ ಯುದ್ಧಕ್ಕಿಳಿದಿತ್ತು. ಯುದ್ಧದಲ್ಲಿ ಮಡಿದ ಪ್ರತಿಯೊಬ್ಬ ಅಮೆರಿಕನ್ ಸೈನಿಕನ ಬದಲಿಗೆ ತನ್ನ ಏಳು ಸೈನಿಕರನ್ನು ಕಳೆದುಕೊಂಡಾಗ್ಯೂ ಪಿಎಲ್​ಎ ದಕ್ಷಿಣ ಕೊರಿಯಾವನ್ನು ತನ್ನ ಕೈಗೊಂಬೆ ಉತ್ತರ ಕೊರಿಯಾಗೆ ಗೆದ್ದುಕೊಡಲಾಗಲಿಲ್ಲ. ನಂತರ 1979ರ ಫೆಬ್ರವರಿ-ಮಾರ್ಚ್​ನಲ್ಲಿ ಪುಟ್ಟ ವಿಯೆಟ್ನಾಂ ಚೀನಾಗೆ ಮರೆಯಲಾಗದ ಪಾಠ ಕಲಿಸಿತು. ಆ ನಂತರ ಪಿಎಲ್​ಎ ಎಲ್ಲೂ ಯುದ್ಧಕ್ಕಿಳಿಯುವ ಧೈರ್ಯ ಮಾಡಿಲ್ಲ. ಅಷ್ಟೇ ಅಲ್ಲ, 2021ರಲ್ಲಿ ಪಿಎಲ್​ಎ ಬಗ್ಗೆ ಬಂದ ಒಂದು ಸುದ್ದಿ ಇಲ್ಲಿ ಉಲ್ಲೇಖಾರ್ಹ. 2020ರ ಜೂನ್​ನಲ್ಲಿ ಗಲ್ವಾನ್​ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ನಂತರ ಭಾರತೀಯ ಸೈನಿಕರನ್ನು ಸಮರ್ಥವಾಗಿ ಎದುರಿಸಲು ಪಿಎಲ್​ಎ ಸೈನಿಕರಿಗೆ ‘ತರಬೇತಿ’ ನೀಡಲು ಪಾಕಿಸ್ತಾನಿ ಸೇನೆಯ ಮಧ್ಯಮ ಹಂತದ ಅಧಿಕಾರಿಗಳನ್ನು ಕರೆಸಲಾಯಿತಂತೆ!
ಇಂತಹ ಪಿಎಲ್​ಎ ನಮ್ಮ ವಿರೋಧಪಕ್ಷಗಳ ನಾಯಕ ರಾಹುಲ್ ಗಾಂಧಿಯವರಿಗೆ ಮಹಾನ್ ಎನಿಸುತ್ತದೆ! ಅದನ್ನು ಮತ್ತು ಈಗ ಅದಕ್ಕೆ ‘ತರಬೇತಿ’ ನೀಡುತ್ತಿರುವ ಪಾಕಿಸ್ತಾನಿ ಸೇನೆಯನ್ನು ಮುಂದಿಟ್ಟುಕೊಂಡು ಅವರು ನಮ್ಮ ರಕ್ಷಣಾಪಡೆಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಹೀಗಳೆದಿದ್ದಾರೆ.
ನಮ್ಮ ಭೂಸೇನೆ ಮತ್ತು ವಾಯುಸೇನೆ ಪಾಕಿಸ್ತಾನದ ವಿರುದ್ಧ ನಡೆಸಿದ ಎರಡು ಸರ್ಜಿಕಲ್ ದಾಳಿಗಳ ಬಗ್ಗೆ ಅವರಿಗೆ ನಂಬಿಕೆಯಿಲ್ಲ. ಮಾಜಿ ಸೇನಾ ದಂಡನಾಯಕ ಜ. ಬಿಪಿನ್ ರಾವತ್ ಅವರನ್ನು ಇದೇ ರಾಹುಲ್ ಗಾಂಧಿ ‘ಸಡಕ್ ಕೆ ಗೂಂಡಾ’ ಎಂದಿದ್ದರು. 2022ರ ಡಿಸೆಂಬರ್​ನಲ್ಲಿ ಪೂರ್ವದ ತವಾಂಗ್ ವಲಯದ ಯಾಂಗ್​ತ್ಸೆಯಲ್ಲಿ ಅತಿಕ್ರಮಣಕಾರಿ ಪಿಎಲ್​ಎ ಸೈನಿಕರನ್ನು ನಮ್ಮ ಸೇನೆ ಯಶಸ್ವಿಯಾಗಿ ಹೊರಗಟ್ಟಿದ್ದೂ ಅಲ್ಲದೆ ಕೆಲವನ್ನು ಬಂಧಿಗಳಾಗಿ ಹಿಡಿದಿಟ್ಟುಕೊಂಡಾಗ್ಯೂ, ‘ನಮ್ಮ ಸೈನಿಕರು ಚೀನೀ ಸೈನಿಕರಿಂದ ಹೊಡೆಸಿಕೊಳ್ಳುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿದ್ದಿದೆ. ಈಗ ಅಗ್ನಿವೀರರ ತರಬೇತಿಯನ್ನೆತ್ತಿ ಅದರಲ್ಲೂ ನಮ್ಮ ಸೇನೆ ಚೀನೀ ಸೇನೆಯ ಮಟ್ಟಕ್ಕಿಲ್ಲ ಎಂಬ ಸೂಚನೆಯನ್ನು ಲೋಕಸಭೆಯಲ್ಲೇ ನೀಡುತ್ತಿದ್ದಾರೆ. ಇದೆಲ್ಲವನ್ನೂ ಅವರು ಮಾಡುತ್ತಿರುವುದರ ಹಿಂದೆ 2008ರ ಆಗಸ್ಟ್​ನಲ್ಲಿ ಅವರು ತಮ್ಮ ಪಕ್ಷದ ಪರವಾಗಿ ಚೀನೀ ಕಮ್ಯೂನಿಸ್ಟ್ ಪಕ್ಷದ ಬೇಹುಗಾರಿಕಾ ಅಂಗ ಇಂಟರ್​ನ್ಯಾಷನಲ್ ಲಿಯಾಸನ್ ಡಿಪಾರ್ಟ್​ವೆುಂಟ್ ಜತೆಗೆ ಮಾಡಿಕೊಂಡ ‘ರಹಸ್ಯ’ ಒಪ್ಪಂದಕ್ಕನುಗುಣವಾಗಿಯೇ?
ಚೀನೀಯರನ್ನು ಸಂತುಷ್ಟಗೊಳಿಸುವ ಭರದಲ್ಲಿ ನಮ್ಮ ವಿರೋಧಪಕ್ಷಗಳ ನಾಯಕ ಎಲ್ಲೆ ಮೀರುತ್ತಿದ್ದಾರೆಯೇ? ಅಗ್ನಿವೀರರ ಬಗೆಗಿನ ಕೆಲವು ವಾಸ್ತವಗಳನ್ನು ನೋಡೋಣ. ನಮ್ಮ ರಕ್ಷಣಾಪಡೆಗಳ ಯೋಧರಂತೆ ಅಗ್ನಿವೀರರೂ ಭಾರತೀಯ ಸೈನಿಕರು. ಅವರು ಬಿಜೆಪಿ ಅಥವಾ ಆರ್​ಎಸ್​ಎಸ್​ನ ಸೈನಿಕರಲ್ಲ. ಅವರಿಗೆ ಯಾವುದೇ ವೈಚಾರಿಕ ತರಬೇತಿ ಇರುವುದಿಲ್ಲ. ಅವರ ತರಬೇತಿ ಆರು ತಿಂಗಳಷ್ಟೇ ಆಗಿರುವುದಾದರೂ ಅದು ಪೂರ್ಣವಾಗಿ ಅವರನ್ನು ವೀರಯೋಧರನ್ನಾಗಿಸುವ ನಿಟ್ಟಿನಲ್ಲಿರುತ್ತದೆ. ಚೀನಾದಲ್ಲಿರುವಂತೆ ಆಡಳಿತ ಪಕ್ಷದ ಗುಲಾಮರನ್ನಾಗಿಸುವುದಿಲ್ಲ.
ತರಬೇತಿಯ ಕುರಿತಾಗಲ್ಲದೆ ಅಗ್ನಿವೀರರ ಬಗ್ಗೆ ಮತ್ತೊಂದು ಅಸತ್ಯವನ್ನೂ ರಾಹುಲ್ ಗಾಂಧಿ ಹೇಳಿದ್ದಾರೆ. ‘ಕಾರ್ಯಾಚರಣೆಯಲ್ಲಿ ಮೃತರಾಗುವ ಅಗ್ನಿವೀರರ ಪರಿವಾರಕ್ಕೆ ಪರಿಹಾರ ದೊರೆಯುವುದಿಲ್ಲ’ ಎಂದು ಅವರು ಹೇಳಿದ್ದನ್ನು ಅಲ್ಲೇ ರಕ್ಷಣಾಮಂತ್ರಿ ರಾಜನಾಥ್ ಸಿಂಗ್ ನಿರಾಕರಿಸಿದರು ಮತ್ತು ಮೃತ ಅಗ್ನಿವೀರರ ಕುಟುಂಬಕ್ಕೆ ಒಂದುಕೋಟಿಯಷ್ಟು ಪರಿಹಾರವಿರುತ್ತದೆಂದೂ ಹೇಳಿದರು. ಅದನ್ನು ರಾಹುಲ್ ಗಾಂಧಿ ಒಪ್ಪಲಿಲ್ಲವಷ್ಟೇ ಅಲ್ಲ ನಂತರ ತಮ್ಮ ಮಾತಿನ ಸಮರ್ಥನೆಗಾಗಿ ಒಂದು ವಿಡಿಯೋವನ್ನು ಬಿಡುಗಡೆ ಮಾಡಿದರು. ಇದೇ ಜನವರಿ 21ರಂದು ಸಿಯಾಚಿನ್​ನಲ್ಲಿ ಮೃತಪಟ್ಟ ಅಜಯ್ ಸಿಂಗ್ ಎಂಬ ಅಗ್ನಿವೀರರ ತಂದೆ ತಮಗೆ ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲವೆಂದು ಅದರಲ್ಲಿ ಹೇಳುತ್ತಿದ್ದುದನ್ನು ತೋರಿಸಿದ ರಾಹುಲ್ ಗಾಂಧಿ ಅವರೆಲ್ಲರ ಕ್ಷಮೆ ಕೇಳುವಂತೆ ರಕ್ಷಣಾಮಂತ್ರಿಗಳಿಗೆ ಹೇಳಿದರು. ಆದರೆ ಇದನ್ನು ನಿರಾಕರಿಸಿದ ಸೇನೆ ಮೃತ ಅಗ್ನಿವೀರ್ ಅಜಯ್ ಸಿಂಗ್​ರ ತಾಯಿಯ ಬ್ಯಾಂಕ್ ಖಾತೆಗೆ ಫೆಬ್ರವರಿ 13ರಂದೇ 50 ಲಕ್ಷ ಮತ್ತು ತಂದೆಯ ಖಾತೆಗೆ ಇದೇ ಜೂನ್ 10ರಂದು 48 ಲಕ್ಷಕ್ಕಿಂತಲೂ ಹೆಚ್ಚು ಹಣ ಪಾವತಿಯಾಗಿರುವ ದಾಖಲೆಗಳನ್ನು ಬಿಡುಗಡೆ ಮಾಡಿತು. ಅದರ ಹಿಂದೆಯೇ ಮಹಾರಾಷ್ಟ್ರದ ಮೃತ ಅಗ್ನಿವೀರರೊಬ್ಬರ ಕುಟುಂಬಕ್ಕೆ ಒಂದು ಕೋಟಿಯಷ್ಟು ಪರಿಹಾರಧನ ಸಂದಾಯವಾಗಿರುವ ಬಗ್ಗೆ ಕುಟುಂಬವರ್ಗದವರೇ ಹೇಳಿಕೆ ನೀಡಿದ್ದೂ ಆಯಿತು. ರಾಹುಲ್ ಗಾಂಧಿ ವಿರೋಧಪಕ್ಷಗಳ ನಾಯಕರಾಗಿ ಅಸತ್ಯಗಳನ್ನು ಹೀಗೆ ಹಿಂಜರಿಕೆ ಇಲ್ಲದೆ ಹೇಳುತ್ತಿರುವುದು ಹೇಗೆ ಮತ್ತು ಏಕೆ?
ರಾಹುಲ್ ಗಾಂಧಿ ಮತ್ತವರ ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ ಬಗ್ಗೆ ಯಾವುದೇ ಸಂವೇದನೆ ಇಲ್ಲವೆನ್ನುವುದು ಹಲವಾಗಿ ಕಂಡುಬಂದಿದೆ. ‘ರಾಮ ಕಾಲ್ಪನಿಕ’ ಎಂದು ಮನಮೋಹನ್ ಸಿಂಗ್ ಸರ್ಕಾರ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಲ್ಲದೆ ಅಯೋಧ್ಯೆಯ ವಿವಾದಿತ ಸ್ಥದದ ಮೇಲೆ ಹಿಂದೂಗಳ ಹಕ್ಕನ್ನು ವಿರೋಧಿಸಲು ವಕೀಲರ ಪಡೆಯನ್ನೇ ನಿಲ್ಲಿಸಿತ್ತು. ಇತ್ತೀಚೆಗೆ ರಾಮಮಂದಿರ ಉದ್ಘಾಟನೆಗೊಂಡಾಗ ಅಲ್ಲಿ ನಟಿ ಐಶ್ವರ್ಯಾ ರೈ ನರ್ತಿಸುತ್ತಿದ್ದರು ಎಂದೂ ರಾಹುಲ್ ಲೇವಡಿ ಮಾಡಿದ್ದರು. ಈ ಮನೋಭಾವದ ಮುಂದುವರಿಕೆಯಾಗಿ ಈಗ ಲೋಕಸಭೆಯಲ್ಲಿ ಅವರು ಹೇಳಿದ್ದು ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು 24 ತಾಸು ದ್ವೇಷ ತೋರುತ್ತಾರೆ, ಹಿಂಸಕರಾಗಿರುತ್ತಾರೆ ಮತ್ತು ಅಸತ್ಯ ನುಡಿಯುತ್ತಾರೆ ಎಂದು! ಈ ಮಾತಿಗೆ ತೀವ್ರ ವಿರೋಧ ಎದ್ದದ್ದರ ಜತೆಗೆ, ಸದನದಲ್ಲಿ ಇದುವರೆಗೆ ಯಾರ ಮಾತಿನ ನಡುವೆಯೂ ಮಧ್ಯಪ್ರವೇಶ ಮಾಡದಿದ್ದ ಪ್ರಧಾನಿ ಮೋದಿಯವರೂ ಸಭಾಧ್ಯಕ್ಷರ ಅನುಮತಿ ಪಡೆದು ಎದ್ದುನಿಂತು ಇದು ಸರಿಯಲ್ಲ ಎಂದು ಹೇಳುವಂತಾಯಿತು. ತಾವು ಹೇಳಿದ್ದು ಬಿಜೆಪಿಯನ್ನು ಉದ್ದೇಶಿಸಿ ಎಂದು ರಾಹುಲ್ ಗಾಂಧಿ ಸಮಜಾಯಿಷಿ ನೀಡಿದರೂ ಆಡಳಿತ ಪಕ್ಷ ಮತ್ತದರ ನಾಯಕರ ಬಗ್ಗೆ ವಿರೋಧಪಕ್ಷಗಳ ನಾಯಕ ಮಾಡಿದ ಆರೋಪಗಳು ಸರಿಯೆನಿಸುವುದಿಲ್ಲ. ತಾವಿರುವುದು ಲೋಕಸಭೆಯಲ್ಲಿ, ವಿರೋಧಪಕ್ಷಗಳ ನಾಯಕರಾಗಿ; ಬೀದಿಯಲ್ಲಲ್ಲ, ಆಯ್ದ ಒಂದಷ್ಟು ಜನರೇ ಇರುವ ಕೋಣೆಯೊಳಗಿನ ಭಾಷಣದಲ್ಲಲ್ಲ ಎನ್ನುವುದನ್ನು ರಾಹುಲ್ ಗಾಂಧಿ ಅರಿಯಬೇಕು.
‘ವಿರೋಧಪಕ್ಷಗಳ ದನಿಯನ್ನು ಅಡಗಿಸಲಾಗುತ್ತಿದೆ’ ಎಂದು ಪ್ರಚಾರ ಮಾಡುವ ರಾಹುಲ್ ಗಾಂಧಿ ತಾವೇ ಲೋಕಸಭೆಯಲ್ಲಿ ಪ್ರಧಾನಮಂತ್ರಿಗಳ ಭಾಷಣಕ್ಕೆ ಅಡ್ಡಿಪಡಿಸುವುದು ಮತ್ತು ಲೋಕಸಭೆಯ ಹೊರಗೆ ಸುಳ್ಳುಸುದ್ದಿಗಳನ್ನು ಹರಡುತ್ತ ಹೋದದ್ದು ನಂತರ ನಡೆದ ಕಹಿಪ್ರಕರಣಗಳು. ಈ ಹಿನ್ನೆಲೆಯಲ್ಲಿ ಇದೇ 22ರಂದು ಆರಂಭವಾಗಲಿರುವ ಸಂಸತ್​ನ ಬಜೆಟ್ ಅಧಿವೇಶನದಲ್ಲಿ ನಾವು ಏನನ್ನು ನಿರೀಕ್ಷಿಸಬಹುದು? ವಿರೋಧಪಕ್ಷದ ನಾಯಕನ ಮಾತುಕೃತಿಗಳಿಗೆ ನಮ್ಮ ಪ್ರಜಾಪ್ರಭುತ್ವದಲ್ಲಿ ಅವಕಾಶವಿರಬಹುದು, ಆದರೆ ಈ ವರ್ತನೆಗಳು ಇದೇ ಪ್ರಜಾಪ್ರಭುತ್ವಕ್ಕೆ ಹಿತಕಾರಿಯೂ ಅಲ್ಲ ಮತ್ತು ಶೋಭೆ ತರುವಂತಹದ್ದೂ ಅಲ್ಲ ಎನ್ನವುದನ್ನು ಲೇಖನದ ಮೂರನೆಯ ಹಾಗೂ ಅಂತಿಮ ಭಾಗದಲ್ಲಿ ವಿಶ್ಲೇಷಿಸೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 5 =
Remember me
