| ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಹದಿನೈದನೇ ಶತಮಾನ ನಮ್ಮ ನಾಡಿನ ಸುವರ್ಣಯುಗ. ವಿಜಯನಗರ ಸಾಮ್ರಾಜ್ಯದ ದಕ್ಷ ರಾಜರುಗಳಲ್ಲಿ ಶ್ರೀ ಕೃಷ್ಣದೇವರಾಯ ಅಗ್ರಮಾನ್ಯರು. ವಿಜಯನಗರ ಅರಸರ ರಾಜಧಾನಿಯಾಗಿದ್ದ ಅಂದಿನ ಹಂಪಿಯ ಬೀದಿ ಬೀದಿಗಳಲ್ಲಿ ಮುತ್ತು ರತ್ನಗಳನ್ನು, ಇಂದಿನ ಕಾಲದ ಧವಸ ಧಾನ್ಯಗಳು, ತರಕಾರಿಗಳಂತೆ ವ್ಯಾಪಾರ ಮಾಡುತ್ತಿದ್ದರೆಂದರೆ ವಿಜಯನಗರ ಸಾಮ್ರಾಜ್ಯದ ವೈಭವದ ಅರಿವಾದೀತು. ಅಂದಿನ ಶ್ರೀ ಕೃಷ್ಣದೇವರಾಯರಿಂದ ಆಳಲ್ಪಡುತ್ತಿದ್ದ ವಿಜಯನಗರಕ್ಕೆ ಸಾಮಂತರಾಗಿ ಬೆಂಬಲಕ್ಕೆ ನಿಂತು ಅದರ ಅಭಿವೃದ್ಧಿಗೆ ಶ್ರಮಿಸಿದವರು ಹಲವಾರು ರಾಜ ಮನೆತನದವರು. ಅವರಲ್ಲಿ ಪ್ರಮುಖರು ಯಲಹಂಕ ನಾಡಪ್ರಭುಗಳು.
ರಣಭೈರೇಗೌಡರ ವಂಶಸ್ಥರು ಯಲಹಂಕ ನಾಡಪ್ರಭುಗಳಾಗಿ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರುಗಳಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದವರು. ಆ ವಂಶದ ಕೆಂಪನಂಜೇಗೌಡರ ಮಗನಾಗಿ ಜನಿಸಿದ ಪುತ್ರರತ್ನವೇ ಬೆಂಗಳೂರು ನಿರ್ವತೃ ನಾಡಪ್ರಭು ಕೆಂಪೇಗೌಡರು. ಬೆಳೆಯುವ ಪೈರು ಮೊಳಕೆಯಲ್ಲಿ ನೋಡು ಎಂಬ ನಾಣ್ಣುಡಿಯಂತೆ ಬಾಲಕನಾಗಿ ಶಿವಗಂಗೆಯ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳಲ್ಲಿಯೇ ಕೆಂಪೇಗೌಡರು ಅಗಾಧವಾದ ಮುತ್ಸದ್ದಿ ಮತ್ತು ಕನಸುಗಾರರಾಗಿದ್ದರು ಎಂಬುದು ಆಶ್ಚರ್ಯ.
ರಾಜಧರ್ಮದ ಪ್ರಕಾರ ಕೆಂಪನಂಜೇಗೌಡರು ವಿಜಯನಗರಕ್ಕೆ ಭೇಟಿ ಕೊಟ್ಟಾಗಲೆಲ್ಲಾ ತಂದೆಯೊಂದಿಗೆ ಹೋಗುತ್ತಿದ್ದ ಕೆಂಪೇಗೌಡರು ಹಂಪಿಯ ಬೀದಿಗಳಲ್ಲಿ ಸ್ನೇಹಿತರೊಡನೆ ಓಡಾಡಿ ಹಂಪಿಯ ಸಮೃದ್ಧಿ ಮತ್ತು ಸೌಂದರ್ಯವನ್ನು ನೋಡಿ ಆನಂದಿಸುತ್ತಿದ್ದರು. ಆದರೆ, ತಮ್ಮ ಯಲಹಂಕ ಭಾಗದ ಸ್ಥಿತಿಯನ್ನು ನೆನೆದು ಖಿನ್ನತೆಗೊಳಗಾಗುತ್ತಿದ್ದರು.
ವಿಜಯನಗರದಿಂದ ವಾಪಸ್ಸು ಬಂದ ನಂತರದಲ್ಲಿ ಗುರುಕುಲವಿದ್ದ ಶಿವಗಂಗೆ ಬೆಟ್ಟದ ಶೃಂಗವನ್ನೇರಿ ಕುಳಿತು ಕನಸು ಕಾಣುತ್ತಿದ್ದರು. ಈ ನಾಡನ್ನಾಳುವ ಸಂದರ್ಭ ಒದಗಿ ಬಂದರೆ ದಿಗ್ ದಿಗಂತದವರೆವಿಗೂ ನಾಡನ್ನು ವಿಸ್ತರಿಸುವುದರ ಜತೆಗೆ ಅದನ್ನು ಸುಖ, ಶಾಂತಿ ಸಮೃದ್ಧಿಯ ತಾಣವನ್ನಾಗಿಸಬೇಕೆಂದು ಹಂಬಲಿಸುತ್ತಿದ್ದರು. ಮುಂದೆ ತಂದೆಯ ಮರಣಾನಂತರ ತಂದೆಯ ಸ್ಥಾನದಲ್ಲಿ ನಿಂತು ರಾಜ್ಯಾಡಳಿತದ ಜವಾಬ್ದಾರಿಯನ್ನು ಹೊತ್ತುಕೊಂಡರು. ನಿಷ್ಠೆಯಿಂದ ಯುದ್ಧದಲ್ಲಿ ವಿಜಯನಗರದ ಅರಸರಿಗೆ ಹೆಗಲೆಣೆಯಾಗಿ ನಿಂತು ಹೋರಾಡಿ ಜಯವನ್ನು ತಂದು ಕೊಡುವುದರ ಜತೆಗೆ ಸಾಮ್ರಾಜ್ಯದ ಸಮೃದ್ಧಿಗೂ ಕಾರಣರಾದರು. ಕೆಂಪೇಗೌಡರ ನಿಷ್ಠೆ ಹಾಗೂ ಧೈರ್ಯವನ್ನು ಮೆಚ್ಚಿ ವಿಜಯನಗರದ ಅರಸರು ಮಹಾನವಮಿ ದಿನದಂದು ಕೆಂಪೇಗೌಡರಿಗೆ ರಾಯ ಬಿರುದನ್ನು ಕೊಟ್ಟರು. ಆ ಶುಭ ಸಂದರ್ಭದಲ್ಲಿ ಬೇಕಾದ್ದನ್ನು ಕೇಳುವಂತೆ ರಾಜರು ಹೇಳಿದಾಗ ಕೆಂಪೇಗೌಡರು ತಮ್ಮ ಬಹು ದಿನಗಳ ಕನಸಾಗಿದ್ದ ತಮ್ಮ ಪ್ರಾಂತ್ಯಕ್ಕೆ ಸುಂದರ ಹಾಗೂ ಸಮೃದ್ಧ ನಾಡಿನ, ಪಟ್ಟಣದ ನಿರ್ವಣದ ಬೇಡಿಕೆಗೆ ಅನುಮತಿ ಕೇಳಿದರು. ರಾಜರು ಸಮ್ಮತಿಸಿದರು. ನಂತರ ನಡೆದದ್ದೆಲ್ಲ ಇತಿಹಾಸ. ಇಂದು ನಮ್ಮೆದುರಿಗೆ, ಜಗತ್ತಿನ ಜನರೆಲ್ಲರ ಗಮನ ಸೆಳೆದು, ಜ್ಞಾನದ ತಾಣವಾಗಿ, ಆರೋಗ್ಯದ ಧಾಮವಾಗಿ, ಸರ್ವಜನರ, ಸರ್ವ ಧರ್ವಿುಯರ ಸಾಮರಸ್ಯದ ನೆಲೆವೀಡಾಗಿ ನಿಂತಿದೆ ಬೆಂದಕಾಳೂರು-ಬೆಂಗಳೂರು.
ಸೃಷ್ಟಿಯಲ್ಲಿ ಸರ್ವರೂ ಸಮಾನರು ಎಂಬ ತತ್ವವನ್ನರಿತಿದ್ದ ಕೆಂಪೇಗೌಡರು ಪ್ರಕೃತಿಯಲ್ಲಿ ಸಮತೋಲನವಿರಬೇಕಾದರೆ ಮಾನವ ಸೃಷ್ಟಿಯ ಜೊತೆ ಜತೆಗೆ ಜೀವ ಸಂಕುಲಗಳೂ, ಜೀವ ವೈವಿಧ್ಯಗಳೂ ಸಾಮರಸ್ಯದಿಂದಿರಬೇಕೆಂದು ತಿಳಿದಿದ್ದರು. ಅದಕ್ಕಾಗಿ ನಗರದ ಮಧ್ಯ ಭಾಗದಲ್ಲಿ ಹಲವಾರು ಕೆರೆ ಕಟ್ಟೆಗಳನ್ನು ನಿರ್ವಿುಸಿ ಜೀವ ವೈವಿಧ್ಯತೆಯನ್ನು ಸಮತೋಲನದಲ್ಲಿರಿಸಿದರು. ಬೆಂಗಳೂರು ನಗರದಾದ್ಯಂತ ಹಲವು ದೇಗುಲ ನಿರ್ವಿುಸುವುದರ ಜತೆಗೆ ಹಲವು ದೇಗುಲಗಳನ್ನು ವಿಸ್ತರಿಸಿ ಜೀಣೋದ್ಧಾರ ಮಾಡಿದ್ದಾರೆ. ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ ಮತ್ತು ಅದರ ಆವರಣದಲ್ಲಿ ಏಕಶಿಲೆಯಲ್ಲಿ ನಿರ್ವಿುಸಿರುವ ಬೃಹತ್ ಗಾತ್ರದ ಸೂರ್ಯಪಾನ ಮತ್ತು ಚಂದ್ರಪಾನ ಫಲಕಗಳು, ಶಿವನ ಡಮರು ಮತ್ತು ತ್ರಿಶೂಲಗಳು ಬೆಂಗಳೂರಿನ ಶಿಲ್ಪಕಲಾ ವೈಭವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ಹಲಸೂರಿನ ಸೋಮೇಶ್ವರ ದೇವಾಲಯದ ಜೀಣೋದ್ಧಾರ ಮತ್ತು ವಿಸ್ತರಣೆ, ಮಾಗಡಿಯ ಸೋಮೇಶ್ವರ ದೇವಾಲಯ ನಿರ್ವಣ, ಶಿವಗಂಗೆಯ ಗಂಗಾಧರೇಶ್ವರ ದೇವಾಲಯದ ಕಾರ್ಯಗಳು ಕೆಂಪೇಗೌಡರ ಕಲಾನೈಪುಣ್ಯತೆಗೆ, ಭಕ್ತಿಗೆ ಸಾಕ್ಷಿಯಾಗಿವೆ.
ಅನಾದಿ ಕಾಲದಿಂದಲೂ ಮನುಷ್ಯ ವಿವಿಧ ವೃತ್ತಿಗಳಿಂದ ಬದುಕನ್ನು ಕಟ್ಟಿಕೊಂಡಿದ್ದಾನೆ. ಅವರವರ ಮನೋಧರ್ಮಕ್ಕನುಗುಣವಾದ ವೃತ್ತಿಯನ್ನವಲಂಬಿಸಿ ಸ್ವಾವಲಂಬನೆಯಲ್ಲಿ ಬದುಕನ್ನು ನಡೆಸಿದರೆ ಸಮಾಜದಲ್ಲಿ ಶಾಂತಿ, ಸಮೃದ್ಧಿ, ಸಾಮರಸ್ಯ ನೆಲೆಸುತ್ತದೆ. ಅಂತೆಯೇ ಪ್ರತಿ ವ್ಯಕ್ತಿಯಲ್ಲಿಯೂ ವಿಶೇಷ ಶಕ್ತಿ ವ್ಯಕ್ತವಾಗಿ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂಬುದನ್ನು ಮನಗಂಡು ಬೆಂಗಳೂರು ಎಂಬ ನವನಗರ ನಿರ್ಮಾಣ ಕಾರ್ಯಕ್ಕೆ ತೊಡಗಿದಾಗ ಎಲ್ಲಾ ಸಮುದಾಯಗಳ ವೃತ್ತಿಗೆ ತಕ್ಕಂತೆ ನಗರದ ಯೋಜನೆಯ ನಕ್ಷೆಯನ್ನು ತಯಾರಿಸಿ ಪ್ರತಿಯೊಬ್ಬರೂ ತಮ್ಮ ಕಾಯಕದ, ದುಡಿಮೆಯ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಅವಕಾಶವನ್ನಿತ್ತರು. ಜಾತಿಯಲ್ಲಿ ಒಕ್ಕಲಿಗರಾಗಿದ್ದರೂ ಅವರ ಸೇವೆ ಸರ್ವಜನರಿಗೂ ನೆಮ್ಮದಿ ನೀಡುವುದಾಗಿತ್ತು. ಪ್ರತಿಯೊಂದು ಜನಾಂಗದ ಕುಲ ಕಸುಬುಗಳಿಗೆ ಸಂಬಂಧಿಸಿದಂತೆ ಅಕ್ಕಿಪೇಟೆ, ಅರಳೇಪೇಟೆ, ತಿಗಳರ ಪೇಟೆ, ತರಗು ಪೇಟೆ, ಸುಣ್ಣಕಲ್ಲು ಪೇಟೆ, ಗೌಡರ ಪೇಟೆ, ಸೌರಾಷ್ಟ್ರ ಪೇಟೆ… ಮುಂತಾದ ಪೇಟೆಗಳನ್ನು ನಿರ್ವಿುಸಿರುವುದು ಅವರು ಸರ್ವ ಜನಾಂಗದ ಅಭ್ಯುದಯದ ಬಗ್ಗೆ ಹೊಂದಿದ್ದ ಕಳಕಳಿಗೆ ಸಾಕ್ಷಿ. ಜನರ ಕುಡಿಯುವ ನೀರಿಗಾಗಿ ಹಾಗೂ ರೈತರ ಭೂಮಿಗೆ ನೀರುಣಿಸುವ ಸಲುವಾಗಿ ಕೆಂಪೇಗೌಡರು ನಿರ್ವಿುಸಿದ ಹಲವಾರು ಕೆರೆ ಕಟ್ಟೆಗಳನ್ನು, ಬಾವಿಗಳನ್ನು ಬೆಂಗಳೂರಿನ ಸುತ್ತಮುತ್ತ ಇಂದಿಗೂ ಕಾಣಬಹುದಾಗಿದೆ. ಹೀಗೆ ಪ್ರಜಾಪಾಲನೆಯ ಕ್ಷೇತ್ರದ ಔನ್ನತ್ಯದಲ್ಲಿ ಹಿಮಾಲಯ ಸದೃಶ ವ್ಯಕ್ತಿತ್ವ ಹೊಂದಿದ್ದ ಕೆಂಪೇಗೌಡರು ಮಾಡಿರುವ ಆದರ್ಶ ಸೇವಾಕೈಂಕರ್ಯದ ಸತ್ಪಲವನ್ನು ಬೆಂಗಳೂರಿನ ಜನತೆ ಇಂದಿಗೂ ಅನುಭವಿಸುತ್ತಿದ್ದಾರೆ. ಕಾಯಕದ ಜತೆಗೆ ಅಂತರಂಗದ ವಿಕಾಸಕ್ಕೆಂದು ಧಾರ್ವಿುಕ, ಆಧ್ಯಾತ್ಮಿಕ ಕೇಂದ್ರಗಳನ್ನೂ ಅವರವರು ನಂಬಿದ ತತ್ವಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ನಿರ್ವಿುಸಿಕೊಟ್ಟರು. ಅಂತಹ ವಿಶಾಲ ದೃಷ್ಟಿಯ, ಆಧ್ಯಾತ್ಮಿಕ ತತ್ವದ ನೆಲೆಯಲ್ಲಿ ಸ್ಥಾಪಿಸಿದ ನಗರ ಬೆಂಗಳೂರು ಇಂದು ವಿಶ್ವದ ಎಲ್ಲರನ್ನೂ ಸೂಜಿಗಲ್ಲಿನಂತೆ ತನ್ನೆಡೆಗೆ ಸೆಳೆಯುತ್ತಿದೆ.
ಓರ್ವ ವ್ಯಕ್ತಿಯನ್ನು ನಾಡಿಗೆಲ್ಲಾ ಪ್ರಭುವೆಂದು ಪರಿಗಣಿಸಬೇಕಾದರೆ ಆತ ಸಮಾಜದ ಎಲ್ಲಾ ಜನಾಂಗದ, ಎಲ್ಲಾ ಧರ್ವಿುಯರ, ಎಲ್ಲಾ ಪಂಥಗಳ ನಾಯಕನಾಗಬೇಕಾಗಿರುತ್ತದೆ. ಕೆಂಪೇಗೌಡರು ಅನುಷ್ಠಾನ ಪೂರ್ವಕವಾಗಿ
ನಿಜದ ನಾಡಪ್ರಭುವಾಗಿದ್ದವರು. ಗಿಡ ಹುಟ್ಟುವುದಕ್ಕೆ ಮಣ್ಣಿನ ಆಸರೆ ಅವಶ್ಯಕ. ಗಿಡ ಬೆಳೆದು ಮರವಾಗಿ ಶಾಖೋಪಶಾಖೆಗಳನ್ನುಳ್ಳ ವಟವೃಕ್ಷವಾದ ಮೇಲೆ ಎಲ್ಲರಿಗೂ ನೆರಳನ್ನೂ, ಗಾಳಿಯನ್ನೂ, ಹೂವನ್ನೂ, ಹಣ್ಣನ್ನೂ ಕೊಡುವಂತೆ ಪಶು ಪಕ್ಷಿಗಳಿಗೆ ಆಸರೆಯನ್ನು ನೀಡುವಂತೆ, ಮನುಷ್ಯ ಹುಟ್ಟುವುದಕ್ಕೆ ಒಂದು ಜಾತಿ ಮತ್ತು ಒಂದು ನೆಲೆ. ವಿಶಾಲ ಸಮಾಜದ ಪ್ರಭುವಾಗಿ ದೊರೆತನದ ಮೂಲಕ ಸೇವೆಯನ್ನು ಮಾಡ ಹೊರಟಾಗ ಎಲ್ಲರನ್ನೂ ಸಮಾನವಾಗಿ ನೋಡಬೇಕಾಗುತ್ತದೆ. ಕೆಂಪೇಗೌಡರು ಹುಟ್ಟಿದ್ದು ಒಂದು ಜಾತಿ ಮತ್ತು ಒಂದು ಧರ್ಮದಲ್ಲಿ. ಆದರೆ, ಅವರು ನಾಡಪ್ರಭುವಾದದ್ದು ರಾಜನಾದದ್ದರಿಂದಲೇ ಅಲ್ಲ, ನಗರವನ್ನು ಕಟ್ಟಿದ್ದರಿಂದಲೇ ಅಲ್ಲ. ಅವರ ವಿಶಾಲ ಮನೋಭಾವನೆಯಿಂದ.
ಕ್ರಿ›.ಶ.1500ರ ಸುಮಾರಿಗೆ ಸ್ಪೇನ್ ದೇಶದಿಂದ ಭಾರತವನ್ನು (ಇಂಡಿಯಾ) ಕಂಡು ಹಿಡಿಯುತ್ತೇನೆಂದು ಸಮುದ್ರ ಮಾರ್ಗವಾಗಿ ಹೊರಟ ಕೊಲಂಬಸ್, ದಾರಿತಪ್ಪಿ ಹಲವಾರು ಸಂಕಷ್ಟಗಳನ್ನು ಎದುರಿಸಿ, ತನ್ನೊಂದಿಗಿದ್ದ ಹಲವರ ಮರಣದ ನಂತರದಲ್ಲಿಯೂ ತಲುಪಿದ್ದು ತದ್ವಿರುದ್ಧವಾದ ನಾಡು ಇಂದಿನ ವೆಸ್ಟ್​ಇಂಡೀಸ್ ಮೂಲಕ. ಆ ನಾಡನ್ನು ತಲುಪಿದ ನಂತರ ತನಗೆ ಅನ್ನ ಕೊಟ್ಟು, ಆಶ್ರಯ ಕೊಟ್ಟು, ಪ್ರೀತಿಕೊಟ್ಟ ಆ ನೆಲದ ಮೂಲ ನಿವಾಸಿಗಳನ್ನು ಹಿಂಸಿಸಿ, ನಿರ್ದಯವಾಗಿ ಕಟುಕನ ರೀತಿ ಕೊಲೆಗೈದ. ಅದೊಂದು ಬರ್ಬರ ಜನಾಂಗೀಯ ಹತ್ಯೆ. ಅದೇ ಕಾಲದಲ್ಲಿ ಈ ನಾಡಿನಲ್ಲಿ ಕೆಂಪೇಗೌಡರು ಸರ್ವ ಜನಾಂಗದವರಿಗೂ, ಸರ್ವ ಧರ್ವಿುಯರಿಗೂ ಶಾಂತಿಯ ತೋಟವನ್ನು ನಿರ್ವಿುಸಿದರು. ಕೊಲಂಬಸ್​ನಿಗೂ ಕೆಂಪೇಗೌಡರಿಗೂ ಇದುವೇ ವ್ಯತ್ಯಾಸ. ಇವರಿಬ್ಬರ ಕಾಲಮಾನ ಒಂದೇ ಆದರೂ ಮಾಡಿದ ಕಾರ್ಯ ಮಾತ್ರ ವಿಭಿನ್ನ. ಇಂತಹ ವ್ಯಕ್ತಿಯನ್ನು ಶತಮಾನಗಳ ಕಾಲ ನೆನಪಿಸಿಕೊಳ್ಳುವ ಕಾರ್ಯವನ್ನು ಆಯಾ ಕಾಲದ ಆಳುವ ವ್ಯವಸ್ಥೆಗಳು ಪ್ರಜ್ಞಾಪೂರ್ವಕವಾಗಿ ಮಾಡಲೇಬೇಕಾಗಿದ್ದುದು ಅನಿವಾರ್ಯ ಕರ್ತವ್ಯ. ಬಹುತೇಕರು ಇತಿಹಾಸವನ್ನು ಓದಿದರೆ ಕೆಲವೇ ಕೆಲವು ಮಂದಿ ಇತಿಹಾಸವನ್ನು ಸೃಷ್ಟಿಸುತ್ತಾರೆಂಬುದು ಮಾತು. ಕೆಂಪೇಗೌಡರು ಇತಿಹಾಸವನ್ನು ಸುಂದರ, ಭದ್ರ, ಭವ್ಯ ಅಡಿಗಲ್ಲಿನ ಮೇಲೆ ಸೃಷ್ಟಿಸಿದವರು. ಅಂತಹವರ ಚರಿತ್ರೆಯನ್ನು, ಅವರ ಆದರ್ಶ ವಿಚಾರಗಳನ್ನೂ ಸಮಕಾಲೀನ ನಾಗರಿಕ ಸಮಾಜಕ್ಕೆ ತಿಳಿಸಬೇಕಾದದ್ದು ನಾಡನ್ನು ಆಳುವವರ ಕರ್ತವ್ಯ.
ಕೆಂಪೇಗೌಡರು ನಾಡನ್ನು ಕಟ್ಟಿದವರು. ಸರ್ವ ಜನರಿಗೂ ವೃತ್ತಿಗೆ ತಕ್ಕಂತೆ ಪೇಟೆಗಳನ್ನು ನಿರ್ವಿುಸಿದವರು. ಸರ್ವ ಧರ್ವಿುಯರಿಗೂ ಸಾಮರಸ್ಯದಿಂದ ಬಾಳುವಂತೆ ಅನುವಾದವರು. ನಗರದ ಮಧ್ಯಭಾಗದಲ್ಲಿ ಹಲವಾರು ಕೆರೆ ಕಟ್ಟೆಗಳನ್ನು ನಿರ್ವಿುಸಿ ಜೀವ ವೈವಿಧ್ಯತೆಯನ್ನು ಸಮತೋಲನದಲ್ಲಿರಿಸಿದವರು. ಹಲವಾರು ಉದ್ಯಾನವನಗಳನ್ನು ನಿರ್ವಿುಸುವ ಮೂಲಕ ಬೆಂಗಳೂರು ಭಾರತ ದೇಶದ ಉದ್ಯಾನ ನಗರಿ, ಸ್ವಾಭಾವಿಕ ಹವಾ ನಿಯಂತ್ರಿತ ನಗರಿ ಎಂಬ ಅಭಿಧಾನ ಬರುವುದಕ್ಕೆ ಕಾರಣರಾದವರು. ಕಲೆಗೆ, ಕ್ರೀಡೆಗೆ, ಪ್ರಕೃತಿ ಸಂರಕ್ಷಣೆಗೆ, ಸ್ವಾಭಿಮಾನದ ಬದುಕಿಗೆ ಕಾರಣರಾದವರು. ಇಂದಿನ ಸಿಲಿಕಾನ್ ಸಿಟಿಗೆ ಅಂದಿನ ಅವರ ನಿರ್ವಣದ ದೂರದರ್ಶಿತ್ವದ ನಗರಿ ಕಾರಣ ಎಂಬುದನ್ನು ಯಾರೂ ಮರೆಯಲಾಗದು.
ಐದು ನೂರು ವರ್ಷಗಳ ಹಿಂದೆ ಕೆಂಪೇಗೌಡರು ನಿರ್ವಿುಸಿದ ಬೆಂಗಳೂರು ಮಹಾನಗರ ಅಂದಿನಿಂದ ಇಂದಿನವರೆಗೂ ಬೆಳೆಯುತ್ತಲೇ ಇದೆ, ಪ್ರಗತಿ ಕಾಣುತ್ತಿದೆ, ಜಗತ್ತಿನ ಗಮನ ಸೆಳೆದು ಭಾರತದ ಪ್ರಮುಖ ನಗರವಾಗಿ ಖ್ಯಾತಿ ಪಡೆದಿದೆ. ಮಹಾನಾಡಪ್ರಭು, ಗೌಡಕುಲ ಚೂಡಾಮಣಿ ಮುಂತಾದ ಬಿರುದು ಹೊತ್ತ ಕೆಂಪೇಗೌಡರು ಅತ್ಯಂತ ಜನಪ್ರಿಯ ಹಾಗೂ ದೀರ್ಘಾವಧಿಗೆ ನಾಡಪ್ರಭುಗಳಾಗಿದ್ದವರು. ನವದುರ್ಗಗಳನ್ನು ನಿರ್ಮಾಣ ಮಾಡಿದವರು. ಕಲೆ, ಸಾಹಿತ್ಯ, ಸಂಗೀತ ಪ್ರೇಮಿ, ಧರ್ಮಭೀರು ಆಗಿದ್ದವರು. ನಾಡಿನ ಹೆಮ್ಮೆಯಾಗಿರುವ ಧೀರೋದಾತ್ತ ನಾಡಪ್ರಭುಗಳನ್ನು ಸ್ಮರಿಸಿಕೊಳ್ಳುವುದು, ಅವರ ಜಯಂತಿ ಆಚರಿಸುವುದು ನಾಡಿನ ಪ್ರತಿಯೊಬ್ಬರಿಗೂ ಸಂಭ್ರಮದ ಸಂಗತಿಯಾಗಿದೆ.
(ಲೇಖಕರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು)
ಬೆಂಗಳೂರು-ಮೈಸೂರು ದಶಪಥ: ಅಪಘಾತದಲ್ಲಿ ಈ ತಿಂಗಳು 45 ಸಾವು!; ಸಚಿವರಿಂದ ಅಧಿಕಾರಿಗಳ ಸಭೆ, ಸದ್ಯದಲ್ಲೇ ತನಿಖೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + five =
Remember me
