ಭಾರತೀಯರ ಸರಾಸರಿ ಪಾದದ ಅಳತೆಯು ಬ್ರಿಟಿಷರ ಪಾದದಳತೆಗಿಂತಲೂ ದೊಡ್ಡದು. ಹೀಗಾಗಿ ಬ್ರಿಟಿಷರ ಆಳ್ವಿಕೆಯಲ್ಲಿ ಅವರುಗಳು ನಮಗೆ ಪರಿಚಯಿಸಿದ ಪದ್ಧತಿಯನ್ನಳವಡಿಸಿಕೊಂಡಿರುವ ನಾವುಗಳು ಅಂದಿನಿಂದಲೂ ನಮ್ಮ ನೈಜ ಅಳತೆಗಿಂತಲೂ ದೊಡ್ಡದಾದ ಪಾದರಕ್ಷೆಗಳನ್ನೇ ಹಾಕಿಕೊಳ್ಳುತ್ತಿದ್ದೇವೆ. ಆದರೆ, ಇನ್ನು ಮುಂದೆ ಈ ಪರಿಸ್ಥಿತಿ ಬದಲಾಗುವ ಸಮಯ ಬಂದಿದೆ.
ಬೇಸಿಗೆ ರಜೆಗಳು ಮುಗಿದು ಶಾಲೆ ಶುರುವಾಗಿವೆ. ಶಾಲೆಯ ಆರಂಭವೆನ್ನುವುದು ಕೇವಲ ಮಕ್ಕಳಿಗಷ್ಟೇ ಅಲ್ಲ ಹೆತ್ತವರಿಗೂ ದುಗುಡ. ಒಂದೆಡೆ ಶಾಲೆಗಳ ಫೀಸು ಹೊಂದಿಸುವ ತಲೆಬಿಸಿ. ಇನ್ನೊಂದೆಡೆ ಹೊಸ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳ ಜೊತೆಗೆ ಸಮವಸ್ತ್ರ ಮತ್ತು ಶೂ ಕೊಂಡುಕೊಳ್ಳುವ ಗಡಿಬಿಡಿ. ಮೊದಲಿನದೆರಡೇನೋ ಓಕೆ. ಆದರೆ ಈ ಶೂ ಹುಡುಕುವುದು ಒಂದು ಸಾಹಸವೇ ಸೈ. ಮಕ್ಕಳು ಬೆಳೆಯುವ ಪರಿಯನ್ನು ಅಳೆಯಲು ಅವರ ಬದಲಾಗುತ್ತಿರುವ ಬೂಟಿನ ಸೈಜ್ ಅನ್ನು ಗಮನಿಸಿದರೆ ಸಾಕು ಗೊತ್ತಾಗುತ್ತದೆ. ಶಾಲಾಮಕ್ಕಳಿಗೆ ಬೂಟು ಕೊಳ್ಳಲು ಹೋದಾಗ ಮುಂದಿನೆರಡು ವರ್ಷಗಳವರೆಗಾದರೂ ಅದು ಟಿಕಾಯಿಸಲಿ ಎಂಬ ಲೆಕ್ಕಾಚಾರದಲ್ಲಿ ಒಂದು ಗಾತ್ರ ಹೆಚ್ಚಿನದ್ದೇ ತೆಗೆದುಕೊಂಡು ಬೀಗುತ್ತ ಮನೆಗೆ ಬಂದ ಪಾಲಕರ ಖುಷಿ ಹೆಚ್ಚುಕಾಲ ಬಾಳುವುದಿಲ್ಲ. ಶೈಕ್ಷಣಿಕ ವರ್ಷದ ಕೊನೆಯಷ್ಟರಲ್ಲಿ ಮಕ್ಕಳು ಪಾಲಕರ ಅಂದಾಜಿಗಿಂತಲೂ ಒಂದು ಹೆಜ್ಜೆ ಜಾಸ್ತಿನೇ ಬೆಳೆದು ಮತ್ತೆ ಹೊಸವರ್ಷಕ್ಕೆ ಶೂ ಅಂಗಡಿಯ ಮುಂದೆ ನಿಲ್ಲುವ ಪರಿಸ್ಥಿತಿ.
ಶಾಲಾಮಕ್ಕಳ ಪಾದರಕ್ಷೆಯ ಗಾಥೆ ಹೀಗಾದರೆ ದೊಡ್ಡವರದ್ದು ಇನ್ನೊಂದು ಪರಿ. ಹೊಸ ಶೂ ಖರೀದಿಸಿದ ಪ್ರೌಢರನ್ನೊಮ್ಮೆ ಮಾತನಾಡಿಸಿ ನೋಡಿ. ‘ಶೂ ಏನೋ ಚೆನ್ನಾಗಿದೆ. ಆದರೆ ಸ್ವಲ್ಪ ಜಾಸ್ತಿ ಟೈಟು’ ಅಂತಾನೋ ಅಥವಾ ‘ಎದುರುಗಡೆ ಸ್ವಲ್ಪ ಸ್ಪೇಸ್ ಕಮ್ಮಿ’ ಅಂತಾನೋ ಏನಾದ್ರೂ ಒಂದು ಕಂಪ್ಲೇಂಟು ಇದ್ದೇ ಇರ್ತದೆ. ಅಷ್ಟಕ್ಕೂ ಶೂ ವಿಷಯಕ್ಕೆ ಬಂದರೆ ನಾವ್ಯಾಕೆ ಯಾವತ್ತೂ ಸಂಪೂರ್ಣವಾಗಿ ಸಂತೃಪ್ತರಾಗಿರೋದಿಲ್ಲ? ಅಂತೆಂದಾದರೂ ಯೋಚಿಸಿದ್ದೀರಾ.
ಇತಿಹಾಸವನ್ನು ಗಮನಿಸಿದರೆ ಉದ್ದ ಯಾನೆ ಲಂಬವನ್ನು ಅಳೆಯಲು ಮಾನವನ ಅಂಗಗಳನ್ನೇ ಅಳತೆಗೋಲಾಗಿ ಬಳಸಿರುವುದು ಕಂಡುಬರುತ್ತದೆ. ಅಡಿ ಯಾನೆ ಫೂಟು ಅಂದರೆ ಪಾದದ ಉದ್ದ, ಇಂಚು ಅಂದರೆ ಹೆಬ್ಬೆರೆಳ ನಡುವಿನ ಅಗಲ, ಯಾರ್ಡ ಅಂದರೆ ಭುಜದಿಂದ ನಡುಬೆರಳ ತುದಿಯವರೆಗಿನ ದೂರ. ಇದರ ಇನ್ನೂರ ಇಪ್ಪತ್ತೆರಡರಷ್ಟು ದೂರವೆಂದರೆ ಒಂದು ಫರ್ಲಾಂಗು. ಹೀಗೆ ಅಂಗಗಳನ್ನು ಬಳಸಿ ಅಳೆಯಲಾಗುತ್ತಿದ್ದ ಅಂದಕಾಲದ ಲಂಬಮಾಪನಗಳು ಇಂದಿಗೂ ಚಾಲ್ತಿಯಲ್ಲಿವೆ. ಬಹುಶಃ ಈ ಮಾಪನಗಳಲ್ಲೆಲ್ಲ ಅತಿಹೆಚ್ಚು ಬಳಕೆಯಾಗಿರುವ ಅಂಗವೆಂದರೆ ಕಾಲು. ಮಜವೆಂದರೆ ಅದನ್ನು ಅಳತೆಗೋಲಾಗಿ ಉಪಯೋಗಿಸಲ್ಪಡುತ್ತಿದ್ದ ಹಲವಾರು ಶಬ್ದಗಳು ಇಂದಿಗೂ ಪರ್ಯಾಯವಿಲ್ಲದೆ ನಮ್ಮ ದೈನಂದಿನ ಭಾಷೆಯಲ್ಲಿ ಹಾಸುಹೊಕ್ಕಾಗಿವೆ. ಈಜಿಪ್ತಿಯನ್ನರು ತಾವು ಹಾಕುವ ಹೆಜ್ಜೆಯನ್ನು ಯಾರ್ಡ ಎಂದು ಕರೆದರು. ಹೆಚ್ಚುಕಡಿಮೆ ಭುಜದಿಂದ ನಡುಬೆರಳ ತುದಿಯವರೆಗಿನ ದೂರದಷ್ಟೇ ಇರುತ್ತಿದ್ದ ಒಂದು ಹೆಜ್ಜೆಯ ದೂರದ ನೂರರಷ್ಟು ಅಂದರೆ ನೂರು ಹೆಜ್ಜೆಗಳನ್ನು ಸ್ಟೇಡ್ ಎಂದು ಕರೆದು ಇಷ್ಟುದ್ದಕ್ಕೆ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿತ್ತು. ಸಾಮಾನ್ಯವಾಗಿ ಬಯಲಿನಲ್ಲಿ ನಡೆಯುವ ಈ ಓಟದ ಸ್ಪರ್ಧೆ ಜರುಗುವ ಪ್ರದೇಶವನ್ನು ಸ್ಟೇಡಿಯಮ್ ಎಂದು ಕರೆಯುವ ಕಾರಣದಿಂದ ಹುಟ್ಟಿಕೊಂಡ ಆ ಶಬ್ದ ಇನ್ನೂ ಬಳಕೆಯಲ್ಲಿದೆ.
ಇನ್ನು ರೋಮನ್ನರಲ್ಲಿ ಮತ್ತೊಂದು ರೀತಿಯ ಮಾಪನ ಬಳಸಲ್ಪಡುತ್ತಿತ್ತು. ಎರಡು ದೊಡ್ಡ ಹೆಜ್ಜೆಗಳ ನಡುವಿನ ದೂರವನ್ನು ಒಂದು ಪೇಸ್ ಎಂದೆನ್ನಲಾಗುತ್ತಿತ್ತು. ಈ ದೂರವನ್ನು ಯಾನೆ ಒಂದು ಪೇಸ್ ಎಂದರೆ ಐದು ರೋಮನ್ ಅಡಿ ಎಂಬುದು ಅವರುಗಳ ಲೆಕ್ಕಾಚಾರ. ಕ್ರಿಕೆಟ್​ನಲ್ಲಿ ವೇಗದ ಬೌಲರ್​ಗಳು ತಾವು ಓಡಿ ಬರುವ ದೂರವನ್ನು ಇದೇ ರೀತಿಯಲ್ಲಿ ಅಳೆಯುವುರಿಂದ ಅವರುಗಳನ್ನು ಪೇಸ್ ಬೌಲರ್​ಗಳೆಂದು ಹೇಳಲಾಗುತ್ತದೆ. ಮಾಪನವೇನೋ ಸರಿ. ಆದರೆ ಇಲ್ಲಿದ್ದ ದೊಡ್ಡ ತೊಂದರೆಯೇನೆಂದರೆ ಇಂತಹ ಅಳತೆಗೋಲುಗಳು ಅವರವರ ದೈಹಿಕ ರಚನೆಯ ಅನುಸಾರ ಬದಲಾಗುತ್ತಿದ್ದುದರಿಂದ ಅವುಗಳನ್ನು ಪ್ರಮಾಣಿಕರಿಸುವ ಜರೂರತ್ತು ಉಂಟಾಯಿತು. ಉದಾಹರಣೆಗೆ ತಾನು ಮಾರುವ ಜಮೀನನ್ನು ಅಳೆಯಲು ಮಾಲೀಕನು ಸಣ್ಣ ಪಾದದ ಅಳತೆಗಾರನನ್ನು ಕರೆತಂದು ಅಳತೆಯನ್ನು ಹೆಚ್ಚಿಸಿ ಮೋಸ ಮಾಡುತ್ತಿದ್ದ. ಅದೇ ಅವನು ಕೊಳ್ಳುವಾಗ ದೊಡ್ಡ ಕಾಲಿನ ಅಳತೆಗಾರನ ಮೊರೆ ಹೋಗುತ್ತಿದ್ದ. ಇಂತಹ ಕಲಹಗಳು ದಿನೇದಿನೇ ಹೆಚ್ಚುತ್ತಿದ್ದ ಕಾರಣ ಎಲ್ಲ ಅಳತೆಗೋಲುಗಳನ್ನು ಪ್ರಮಾಣಿಕರಿಸುವ ಕೂಗು ಹೆಚ್ಚಾಗತೊಡಗಿತು.
ಈ ನಿಟ್ಟಿನಲ್ಲಿ ಪ್ರಥಮ ಪ್ರಯತ್ನ ಜರುಗಿದ್ದು 1374ರಲ್ಲಿ. ಇಂಗ್ಲೆಂಡಿನ ನಾರ್ವಿಚ್​ನ ರಾಜ ಎರಡನೇ ಎಡ್ವರ್ಡ್ ತನ್ನ ಪಾದದ ಅಳತೆಯನ್ನು ಪಕ್ಕಾ ಒಂದು ಫೂಟು ಎಂದು ಘೊಷಿಸಿದ. ಈ ಒಂದು ಫೂಟನ್ನು ವಿಭಜಿಸಲು ಆತ ಬಳಸಿದ್ದು ಬಾರ್ಲಿಯ ಕಾಳುಗಳನ್ನು. ಈ ಕಾಳುಗಳನ್ನು ಒಂದರ ಮುಂದೊಂದು ಇಟ್ಟರೆ ರಾಜನ ಪಾದದ ಹಿಮ್ಮಡಿಯಿಂದ ಉದ್ದ ಬೆರಳ ತುದಿಯವರೆಗೆ ಒಟ್ಟೂ 36 ಕಾಳುಗಳು ಬೇಕಾಗುತ್ತಿತ್ತು. ಹೀಗಾಗಿ ಮೂರು ಕಾಳುಗಳನ್ನು ಒಂದು ಗುಂಪನ್ನಾಗಿಸಿ ಅದನ್ನು ಒಂದು ಇಂಚು ಎಂದು ಘೊಷಿಸಲಾಯಿತು.
ಇದೇ ಸಮಯದಲ್ಲಿ ಅಳತೆಗೋಲಿನ ಗೊಂದಲ ಪಾದರಕ್ಷೆಯ ತಯಾರಿಕಾ ಘಟಕಗಳಲ್ಲೂ ಇತ್ತು. ಎರಡನೇ ಎಡ್ವರ್ಡ್ ತನ್ನ ಕಾಲಿನ ಅಳತೆಯನ್ನು ಫೂಟಿನ ಅಳತೆಗೋಲಾಗಿ ಘೊಷಿಸಿದ್ದೇ ತಡ ಪಾದರಕ್ಷಾ ಉದ್ದಿಮೆ ಈ ಅಳತೆಯನ್ನು ಬೂಟುಗಳ ಗಾತ್ರದ ಅಳತೆಗೋಲಾಗಿ ಬಳಸಲು ನಿರ್ಧರಿಸಿ ರಾಜನನ್ನು ಸಂರ್ಪಸಿತು. ಅದನ್ನೊಪ್ಪಿಕೊಂಡ ರಾಜನ ಪಾದದಳತೆ 36 ಬಾರ್ಲಿಕಾಳುಗಳಷ್ಟು ಉದ್ದವಾಗಿರುವ ಹಿನ್ನೆಲೆಯಲ್ಲಿ ಅದನ್ನು ‘ಸೈಜ್ 12’ ಎಂದು ನಿರ್ಧರಿಸಲಾಯಿತು. ಜೊತೆಗೆ ಆ ಅಳತೆಗಿಂತ ಕೆಳಗಿನ ಸೈಜುಗಳನ್ನು ಒಂದು ಬಾರ್ಲಿಕಾಳು ಯಾನೆ ಒಂದು ಇಂಚಿನ ಮೂರನೇ ಒಂದು ಭಾಗದಷ್ಟರಿಂದ ಋಣಿಸುತ್ತ ಬೂಟುಗಳ ಅಳತೆಯನ್ನು ಪ್ರಮಾಣಿಕರಿಸಲಾಯಿತು. ಹೀಗೆ ಆರಂಭವಾದ ಪಾದರಕ್ಷೆಯ ಅಳತೆಗೋಲನ್ನು ಒಂದೊಂದೇ ದೇಶಗಳು ತಾವೂ ಅಳವಡಿಸಿಕೊಂಡವು. ಮುಂದೆ ಈ ಅಳತೆಯನ್ನು ಮಕ್ಕಳ ಮತ್ತು ಮಹಿಳೆಯರ ಪಾದರಕ್ಷೆಯ ಅಳತೆಗೆ ತುಸು ಮಾರ್ಪಡಿಸಿಕೊಳ್ಳಲಾಯಿತು. ಮುಂದೆ ಅಮೆರಿಕವು ಇಂಚಿನ ಮೂರನೇ ಒಂದು ಭಾಗದ ಅಳತೆಯ ಬದಲು ಇಂಚನ್ನು ನಾಲ್ಕು ಭಾಗಗಳನ್ನಾಗಿ ವಿಭಜಿಸಿ ಪೂರ್ಣ ಅಂಕಗಳ ಅಳತೆಯ ನಡುವಿನ ಯಾನೆ ಭಿನ್ನಾಂಕ ಅಳತೆಯ ಪಾದರಕ್ಷೆಗಳನ್ನು ಪರಿಚಯಿಸಿತು. ಉದಾಹರಣೆಗೆ 10 ಮತ್ತು 11ರ ನಡುವೆ 10.25, 10.50 ಹೀಗೆ ಭಿನ್ನಾಂಶದ ಅಳತೆಯ ಜೊತೆಗೆ ಪಾದರಕ್ಷೆಯ ಅಗಲದಲ್ಲೂ ವೈವಿಧ್ಯತೆಯನ್ನು ಉದಾ. 10 ಅ , 10 ಬ ಹೀಗೆ ತೊಡುವವರ ಆರಾಮವನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಪಾದರಕ್ಷೆಗಳು ಮಾರುಕಟ್ಟೆಯಲ್ಲಿ ಬಲುಬೇಗ ಜನಪ್ರಿಯವಾದವು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಬ್ರಿಟಿಷರ ಮೂಲ ಪ್ರಮಾಣಿತ ಅಳತೆಗೊಲೊಂದನ್ನು ಹೆಚ್ಚಿನ ದೇಶಗಳು ತಮ್ಮದಾಗಿಸಿಕೊಂಡವು. ಭಾರತವನ್ನಾಳಿದ ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿ ಈ ಅಳತೆಗೋಲನ್ನು ಭಾರತದಲ್ಲೂ ಪರಿಚಯಿಸಿದ ಪರಿಣಾಮ ನಾವದನ್ನು ಇಲ್ಲಿಯವರೆಗೆ ಬಳಸುತ್ತ ಬಂದಿದ್ದೇವೆ.
ಇಲ್ಲಿ ತೊಂದರೆಯೇನೆಂದರೆ ಭಾರತೀಯರ ಸರಾಸರಿ ಪಾದದ ಅಳತೆಯು ಬ್ರಿಟಿಷರ ಪಾದದಳತೆಗಿಂತಲೂ ದೊಡ್ಡದು. ಹೀಗಾಗಿ ಬ್ರಿಟಿಷರ ಆಳ್ವಿಕೆಯಲ್ಲಿ ಅವರುಗಳು ನಮಗೆ ಪರಿಚಯಿಸಿದ ಪದ್ಧತಿಯನ್ನಳವಡಿಸಿಕೊಂಡಿರುವ ನಾವುಗಳು ಅಂದಿನಿಂದಲೂ ನಮ್ಮ ನೈಜ ಅಳತೆಗಿಂತಲೂ ದೊಡ್ಡದಾದ ಪಾದರಕ್ಷೆಗಳನ್ನೇ ಹಾಕಿಕೊಳ್ಳುತ್ತಿದ್ದೇವೆ. ಅಂಕಿಅಂಶಗಳನ್ನು ಗಮನಿಸಿದಲ್ಲಿ ಭಾರತದಲ್ಲಿ ಆನಲೈನ್​ನಲ್ಲಿ ಆರ್ಡರ್ ಮಾಡಿರುವ ಅರ್ಧದಷ್ಟು ಪಾದರಕ್ಷೆಗಳು ತಪ್ಪು ಅಳತೆ ಅಥವಾ ಹೊಂದಾಣಿಕೆಯಾಗದ ಕಾರಣ ಗ್ರಾಹಕರಿಂದ ವಾಪಸ್ಸು ಕಳಿಸಲ್ಪಡುತ್ತವೆ. ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಸರಾಸರಿಯಾಗಿ ಭಾರತೀಯನೊಬ್ಬ ವರ್ಷಕ್ಕೆ ಒಂದೂವರೆ ಹೊಸ ಪಾದರಕ್ಷೆಗಳನ್ನು ಬಳಸುತ್ತಾನೆಂದರೆ ನಮ್ಮ ಮಾರುಕಟ್ಟೆ ಎಷ್ಟು ದೊಡ್ಡದೆಂಬುದನ್ನು ನೀವೇ ಊಹಿಸಬಹುದು. ಹೀಗಾಗಿ ಈ ದೊಡ್ಡ ಪಾದರಕ್ಷೆಯ ಮಾರುಕಟ್ಟೆಗೆ ಅನುಗುಣವಾಗಿ ದೇಸಿಯ ಪಾದರಕ್ಷೆಯ ಅಳತೆಗೋಲನ್ನು ಹೊಂದಬೇಕೆಂಬ ಕೂಗು ಬಹಳ ಕಾಲದಿಂದ ಕೇಳಿಬರುತ್ತಿತ್ತು.
ಅಂತೂ ಇಂತೂ ಅದು ಜಾರಿಗೆ ಬರುವ ಕಾಲವಿದೀಗ ಸನ್ನಿಹಿತವಾಗಿದೆ. ಚೆನ್ನೈನ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಒಕ್ಕೂಟದಡಿಯಲ್ಲಿ ಕಾರ್ಯನಿರ್ವಹಿಸುವ ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆಯು ಈ ನಿಟ್ಟಿನಲ್ಲಿ ಒಂದು ಗಣತಿಯನ್ನು ನಡೆಸಿ ಪೂರಕ ಮಾಹಿತಿಯನ್ನು ಕಲೆಹಾಕುತ್ತಿದೆ. 2022ರ ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಿರುವ ಈ ಗಣತಿಯಲ್ಲಿ ಸಂಸ್ಥೆಯು ಈಗಾಗಲೇ ಭಾರತದ ಉದ್ದಗಲ ಸಂಚರಿಸಿ ಒಂದು ಲಕ್ಷಕ್ಕೂ ಹೆಚ್ಚು ಜನರ ಪಾದದಳತೆಯ ಜೊತೆಗೆ ಅವರ ಪಾದದ ಮೂರು ಆಯಾಮದ ಗಾತ್ರದ ಮಾಹಿತಿಯನ್ನೂ ಸಂಗ್ರಹಿಸಿದೆ. ಭಾರತದ ಇತಿಹಾಸದಲ್ಲಿಯೇ ಪ್ರಥಮವಾಗಿರುವ ಇಂಥ ಗಣತಿಯಲ್ಲಿ ಕಂಡುಬಂದಂತೆ ನಮ್ಮಲ್ಲಿ ಸರಾಸರಿ ಬಾಲಕಿಯರ ಕಾಲಳತೆಯು ಹನ್ನೊಂದನೇ ವಯಸ್ಸಿನಲ್ಲಿ ಮೇರುಮಟ್ಟಕ್ಕೆ ತಲುಪಿದರೆ ಬಾಲಕರಲ್ಲಿ ಆ ಪ್ರಕ್ರಿಯೆ ಹದಿನಾರರಲ್ಲಿ ಜರುಗುತ್ತದೆ. ಸರಾಸರಿಯಂತೆ ಭಾರತೀಯರ ಪಾದದ ಅಳತೆ ಅಮೆರಿಕನ್ನರ ಮತ್ತು ಬ್ರಿಟಿಷರಿಗಿಂತ ದೊಡ್ಡದಾಗಿದೆ. ಹೀಗಾಗಿ ಭಾರತೀಯರು ನಮ್ಮ ನಿಜವಾದ ಶೂ ಅಳತೆಗಿಂತ ಒಂದು ಅಳತೆ ಹೆಚ್ಚಿನದನ್ನು ಧರಿಸಿ ನಂತರ ಅದನ್ನು ತಮ್ಮ ಅಳತೆಗೆ ಹೊಂದಿಸಲು ಜರೂರತ್ತಿಗಿಂತ ಹೆಚ್ಚು ಬಿಗಿಯಾಗಿ ಲೇಸ್ ಕಟ್ಟಿಕೊಳ್ಳುವ ಕಾರಣಕ್ಕೆ ಪಾದದ ರಕ್ತಚಲನ ಏರುಪೇರಾಗುತ್ತದೆ. ಇದರ ಜೊತೆಗೆ ತಪ್ಪು ಅಳತೆಯ ಶೂಗಳು ಕಾಲಿನ ಗಾಯಕ್ಕೆ ಕಾರಣವೂ ಆಗಬಲ್ಲವು ಮತ್ತು ಇಂತಹ ಗಾಯದ ಸಮಸ್ಯೆ ಹಿರಿಯ ನಾಗರಿಕರಲ್ಲಿ ಕಂಡುಬರುವ ಸಾಧ್ಯತೆ ಕೂಡ ಹೆಚ್ಚು. ಇಂತಹುದೇ ತೊಂದರೆ ಮಹಿಳೆಯರು ಹೈಹೀಲ್ಸ್ಗಳನ್ನು ಹಾಕಿಕೊಂಡಾಗಲೂ ಉಂಟಾಗುವ ಸಾಧ್ಯತೆ ಇದೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಭಾರತೀಯರ ಪಾದಗಳಿಗೆ ಸರಿಹೊಂದುವಂತಹ ಶೂಗಳ ಅಳತೆಗೋಲನ್ನು ರೂಪಿಸಲಾಗಿದೆ.
ಭಾರತದ ಹೆಸರಿನ ಮೊದಲ ಅಕ್ಷರವನ್ನು ಎರವಲು ಪಡೆದು ಭ ಎಂದು ನಾಮಕರಣ ಮಾಡಿರುವ ಈ ನೂತನ ಪಾದದ ಅಳತೆಗೋಲಿನಲ್ಲಿ ಪುರುಷರ ಮತ್ತು ಮಹಿಳೆಯರ ವಯಸ್ಸಿಗನುಗುಣವಾಗಿ ಎಂಟು ವರ್ಗಗಳನ್ನು ರಚಿಸಿ ಒಳಗಿನ ಉದ್ದ ಮತ್ತು ಅಗಲವನ್ನು ಭಾರತೀಯ ಪಾದಗಳನ್ನು ಗಮನವಿರಿಸಿ ರೂಪಿಸಲಾಗಿದೆ. ಪ್ರಸ್ತುತ ಈ ನೂತನ ಅಳತೆಗೋಲನ್ನು ರಾಷ್ಟ್ರೀಯ ಮಾನದಂಡಗಳ ಅನುಮೋದನಾ ಸಂಸ್ಥೆಯಾದ ಬಿಐಎಸ್​ಗೆ ಕಳುಹಿಸಲಾಗಿದ್ದು ಅದು ಅನುಮೋದನೆಗೊಂಡು ಮುಂದಿನ ವರ್ಷ ‘ಭ’ ಅಳತೆಗೋಲಿನ ಪಾದರಕ್ಷೆಗಳು ಭಾರತದ ಮಾರುಕಟ್ಟೆಗೆ ಲಗ್ಗೆಯಿಡುವ ನಿರೀಕ್ಷೆಯಿದೆ. ಪಾದರಕ್ಷೆಗಳ ಇತಿಹಾಸದ ಈ ನೂತನ ಹೆಜ್ಜೆ ಎಷ್ಟು ದೂರ ಸಾಗಲಿದೆ ಎಂಬುದನ್ನು ಕಾಲವೇ ಉತ್ತರಿಸಲಿದೆ.
ಚಿತ್ರರಂಗದಲ್ಲಿ ‘ಸಾರಥಿ’ಗಿರುತ್ತ ಉಳಿವು​? ಮುಂದಿನ ಚಿತ್ರಗಳ ಕಥೆಯೇನು? ಹೀಗಿದೆ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − nine =
Remember me
