ಬೆಂಗಳೂರು:ಕರಸೇವಕರ ಬಂಧನ ರಾಜ್ಯ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ಯುದ್ಧಕ್ಕೆ ಆಸ್ಪದ ಮಾಡಿಕೊಟ್ಟಿದೆ.ಕರಸೇವಕರ ಬಂಧನ ಖಂಡಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ತಪ್ಪುಮಾಡಿದವರಿಗೆ ಶಿಕ್ಷೆ ಕೊಡಬೇಡಿ ಎಂದು ಬಿಜೆಪಿಯವರು ಚಳವಳಿ ಮಾಡುತ್ತಾರಾ? ಬಿಜೆಪಿಯವರು ರಾಜಕೀಯಕ್ಕೋಸ್ಕರ ಹೋರಾಟ ಮಾಡುತ್ತಾರೆ. ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ಅಪರಾಧ ಮಾಡಿದ್ದರೆ ಕ್ರಮ ಎಂದು ಟಾಂಗ್ ಕೊಟ್ಟಿದ್ದಾರೆ.
ನಾಲ್ಕು ವರ್ಷಗಳ ಕಾಲ ದುರಾಡಳಿತ ಮತ್ತು ಭ್ರಷ್ಟಾಚಾರದ ಹಗರಣಗಳಲ್ಲಿಯೇ ಕಾಲ ಕಳೆದಿದ್ದ ಬಿಜೆಪಿ ನಮ್ಮ ಸರ್ಕಾರದ ಸಾಧನೆಗಳಿಗೆ ವ್ಯಕ್ತವಾಗುತ್ತಿರುವ ಜನಸ್ಪಂದನ ದಿಗಿಲು ಹುಟ್ಟಿಸಿದೆ. ಇದಕ್ಕಾಗಿ ಹುಬ್ಬಳ್ಳಿಯ ಕ್ರಿಮಿನಲ್ ಆರೋಪಿಯೊಬ್ಬನ ಬಂಧನದ ಎಳೆ ಹಿಡಿದುಕೊಂಡು ನೇತಾಡುತ್ತಿದ್ದಾರೆ. ಅಪರಾಧಿಗಳಿಗೆ ಜಾತಿ,ಧರ್ಮಗಳ ಬಣ್ಣ ಹಚ್ಚುವುದು ಅತ್ಯಂತ ಅಪಾಯಕಾರಿ ಎನ್ನುವುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ತಿವಿದಿದ್ದಾರೆ.
ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಯಡಿಯೂರಪ್ಪನವರಿಗಿಂತ ದೊಡ್ಡ ಹಿಂದೂ? ರಾಮ ಭಕ್ತ ಯಾರಿದ್ದಾರೆ? ಹಾಗಿದ್ದರೆ ಆಗಿನ ಸರ್ಕಾರ ಹಿಂದು ವಿರೋಧಿಯೇ? ಬಿಜೆಪಿ ಬಿಟ್ಟು ಬಿಡಿ, ಅದರ ಪರಿವಾರದ ನಾಯಕರು ಕೂಡ ಹಿಂದೂ ಯಡಿಯೂರಪ್ಪನವರನ್ನು ಬಂಧಿಸಿದ ಸರ್ಕಾರ ಹಿಂದು ವಿರೋಧಿ ಎಂದು ಕೂಗಾಡಲಿಲ್ಲವಲ್ಲ? ಈಗ ಯಾಕೆ ಈ ಕೂಗಾಟ? ಎಂದು ಕೆಣಕಿದ್ದಾರೆ.
ರಾಜ್ಯದ ಬಿಜೆಪಿಯ ಸ್ಥಿತಿ ಒಂದು ಮನೆ ನೂರು ಬಾಗಿಲು ಎಂಬಂತಾಗಿದೆ. ಆ ಪಕ್ಷದ ರಾಜ್ಯಾಧ್ಯಕ್ಷರನ್ನು ಅದೇ ಪಕ್ಷದ ಹಿರಿಯ ನಾಯಕರು ಈಗಲೂ ಒಪ್ಪಿಕೊಂಡಿಲ್ಲ. ವಿರೋಧ ಪಕ್ಷದ ನಾಯಕರ ಮಾತಿಗೆ ಸದನದಲ್ಲಿಯೇ ಸದಸ್ಯರು ಬಿಡಿಗಾಸಿನ ಕಿಮ್ಮತ್ತು ಕೊಟ್ಟಿಲ್ಲ. ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ದ ದಿನಕ್ಕೊಂದು ಗಂಭೀರ ಸ್ವರೂಪದ ಆರೋಪ ಮಾಡುತ್ತಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕನಿಷ್ಠ ಒಂದು ಎಚ್ಚರಿಕೆಯ ನೋಟೀಸ್ ನೀಡಲಾಗದಷ್ಟು ಪಕ್ಷ ನಿರ್ವಿರ್ಯವಾಗಿದೆ. ಕಾಂಗ್ರೆಸ್ ಸರ್ಕಾರ ದಿನದಿಂದ ದಿನಕ್ಕೆ ಜನಾನುರಾಗಿಯಾಗುತ್ತಿದೆ. ಈ ಹತಾಶೆಯಿಂದ ಹೊರಬರಲು ಒಬ್ಬ ಕ್ರಿಮಿನಲ್ ಆರೋಪಿಯನ್ನು ಮುಂದಿಟ್ಟು ಬಿಜೆಪಿ ನಾಯಕರು ಕೂಗಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಹುಬ್ಬಳ್ಳಿಯ ಕ್ರಿಮಿನಲ್ ಆರೋಪಿಯನ್ನು ಸಮರ್ಥಿಸಿಕೊಂಡು ಹೋರಾಟಕ್ಕೆ ಇಳಿದಿರುವ ಬಿಜೆಪಿ ನಾಯಕರಲ್ಲಿ ಯಾರಾದರೂ ಸ್ವಲ್ಪ ಬುದ್ದಿಗಿದ್ದಿ ಹೊಂದಿದವರಿದ್ದರೆ ದಯವಿಟ್ಟು ಆ ವ್ಯಕ್ತಿಯ ಮೇಲಿನ ಆರೋಪಗಳ ಪಟ್ಟಿಯನ್ನು ತರಿಸಿ ಓದಿ, ಆ ಮೇಲೆ ಹೋರಾಟಕ್ಕೆ ಇಳಿಯಿರಿ. ಜನಸಂಖ್ಯೆಯಲ್ಲಿ ಹಿಂದೂಗಳೇ ಬಹುಸಂಖ್ಯೆಯಲ್ಲಿರುವುದರಿಂದ ಜೈಲುಗಳಲ್ಲಿರುವ ಕೈದಿಗಳಲ್ಲಿಯೂ ಹಿಂದೂ ಧರ್ಮಿಯರೇ ಬಹುಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ಹಿಂದೂ ಧರ್ಮಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಬಿಜೆಪಿ ಅವರ ಪರವಾಗಿ ಹೋರಾಟ ನಡೆಸುತ್ತಾ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕ್ರಿಮಿನಲ್ ಕೃತ್ಯಗಳು ಹೆಚ್ಚಾಗಲು ಅಪರಾಧ ಮತ್ತು ಅಪರಾಧಿಗಳಿಗೆ ಜಾತಿ-ಧರ್ಮದ ಬಣ್ಣಹಚ್ಚುವ ಬಿಜೆಪಿಯ ಕಾನೂನು ವಿರೋಧಿ ನಡವಳಿಕೆಗಳೇ ಕಾರಣ. ವ್ಯಕ್ತಿಯೊಬ್ಬ ಎಂತಹ ಘನಘೋರ ಅಪರಾಧಗಳನ್ನು ಬೇಕಾದರೂ ಎಸಗಲಿ, ಆತ ಕೇಸರಿ ಶಾಲನ್ನು ತಲೆಗೆ ಸುತ್ತಿಕೊಂಡು ನಾನೊಬ್ಬ ಹಿಂದೂ ಎಂದು ಕೂಗಿದರೆ ಬಿಜೆಪಿ ನಾಯಕರು ಆತನ ರಕ್ಷಣೆಗೆ ಧಾವಿಸುತ್ತಾರೆ. ಈ ಮೂಲಕ ಕೇಸರಿ ಶಾಲು ಮಾತ್ರವಲ್ಲ ಹಿಂದೂ ಧರ್ಮಕ್ಕೂ ಬಿಜೆಪಿ ನಾಯಕರು ಅವಮಾನ ಮಾಡುತ್ತಿದ್ದಾರೆ. ಇದು ಧರ್ಮದ್ರೋಹದ ನಡೆ. ಕಾನೂನನ್ನು ಅದರ ಪಾಡಿಗೆ ಕೆಲಸ ಮಾಡಲು ಬಿಟ್ಟು ಬಿಡಿ ಎಂದು ಹೇಳಿದ್ದಾರೆ.ದೇವರು-ಧರ್ಮದ ಹೆಸರಲ್ಲಿ ಕ್ಷುಲಕ ರಾಜಕೀಯ ಮಾಡುವುದನ್ನು ಕೈಬಿಟ್ಟು ಜವಾಬ್ದಾರಿಯುತವಾದ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸುವ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯನ್ನು ಶಾಶ್ವತವಾಗಿ ವಿರೋಧಪಕ್ಷದ ಸ್ಥಾನದಲ್ಲಿ ಕೂರಿಸಬೇಕೆಂಬುದು ನನ್ನ ಗುರಿ. ರಾಜ್ಯ ಬಿಜೆಪಿ ನಾಯಕರ ಇತ್ತೀಚಿನ ಅವಾಂತರಗಳನ್ನೆಲ್ಲ ನೋಡಿದರೆ ಈ ಗುರಿ ಸಾಧನೆಗೆ ಅವರೇ ಸಹಕಾರ ನೀಡುತ್ತಿರುವಂತೆ ಕಾಣುತ್ತಿದೆ.-ಸಿದ್ದರಾಮಯ್ಯ, ಮುಖ್ಯಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 3 =
Remember me
