ಬೆಂಗಳೂರು:ರಾಜ್ಯದ ಪ್ರಗತಿಪರ ಚಿಂತಕರು ಮತ್ತು ಸಾಹಿತಿಗಳಿಗೆ ಕೊಲೆ ಬೆದರಿಕೆಯ ಪತ್ರ ಬರೆಯುತ್ತಾ ಕಳೆದ ಎರಡು ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ಆರೋಪಿಯನ್ನು ಕೊನೆಗೂ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.ಶಿವಾಜಿರಾವ್ ಜಾಧವ್ (೪೧) ಬಂಧಿತ ಆರೋಪಿ.
ಮೂಲತಃ ದಾವಣಗೆರೆ ಜಿಲ್ಲೆಯ ಶಿವಾಜಿರಾವ್ ಜಾಧವ್, ಹಿಂದೂಪರ ಸಂಘಟನೆಯೊಂದರ ಕಾರ್ಯಕರ್ತನಾಗಿದ್ದ. ಕೋಮುವಾದಿ, ಜಾತಿವಾದ ವಿರುದ್ಧದ ನಿಲುವುಳ್ಳ ಲೇಖಕರು, ಚಿಂತಕರು ಹಾಗೂ ಸಾಹಿತಿಗಳಿಗೆ ಆರೋಪಿಯು ಅನಾಮಧೇಯವಾಗಿ ಜೀವ ಬೆದರಿಕೆ ಪತ್ರ ಬರೆದಿದ್ದ.
ಬಿ.ಟಿ.ಲಲಿತಾ ನಾಯಕ್, ಕುಂ.ವೀರಭದ್ರಪ್ಪ, ಪ್ರೊ.ಕೆ.ಮರುಳಸಿದ್ದಪ್ಪ, ಪ್ರೆ.ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಡಾ.ಜಿ.ರಾಮಕೃಷ್ಣ, ವಿಮಲಾ, ಶ್ರೀಪಾದ ಭಟ್, ಬಿ.ಎಲ್.ವೇಣು, ಸುರೇಂದ್ರರಾವ್ ಸೇರಿ ಹಲವು ಸಾಹಿತಿಗಳು ಹಾಗೂ ಚಿಂತಕರಿಗೆ ಜೀವ ಬೆದರಿಕೆ ಪತ್ರ ಬಂದಿದ್ದವು.
ನಿಮ್ಮನ್ನು ಯಾಕೆ ಗುಂಡಿಟ್ಟು ಕೊಲ್ಲಬಾರದು?‘ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಂತಹ ಗಲಭೆಗಳ ಬಗ್ಗೆ ಮಾತನಾಡದ ನೀವು ಹಿಂದೂ ಧರ್ಮದ ಕುರಿತು ಅವಹೇಳನ ಮಾಡುತ್ತೀರಿ. ನಿಮ್ಮನ್ನು ಯಾಕೆ ಗುಂಡಿಟ್ಟು ಕೊಲ್ಲಬಾರದು? ನಿಮ್ಮ ಕೊನೆ ದಿನಗಳನ್ನು ಎಣಿಸುತ್ತಿದ್ದೀರಿ,’ ಎಂದು ಪತ್ರದ ಮೂಲಕ ಸಾಹಿತಿಗಳಿಗೆ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಕೊಟ್ಟೂರು, ಚಿತ್ರದುರ್ಗದ ಬಡಾವಣೆ ಠಾಣೆ, ಹಾರೋಹಳ್ಳಿ, ಬೆಂಗಳೂರಿನ ಸಂಜಯನಗರ, ಬಸವೇಶ್ವರನಗರ ಸೇರಿ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಕೆಲ ದಿನಗಳ ಹಿಂದೆ ಸಾಹಿತಿಗಳ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಜೀವ ಬೆದರಿಕೆ ಪತ್ರದ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಹಾಗೂ ಪತ್ರ ಬರೆದ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಈ ಪ್ರಕರಣವನ್ನು ಕಳೆದ ತಿಂಗಳು ಸಿಸಿಬಿಗೆ ವರ್ಗಾಯಿಸಿದ್ದರು.
ಪತ್ರಗಳ ಬರವಣಿಗೆಯಲ್ಲಿ ಸಾಮ್ಯತೆ:ಸಾಹಿತಿಗಳಿಗೆ ಬಂದಿದ್ದ ಎಲ್ಲಾ ಬೆದರಿಕೆ ಪತ್ರಗಳನ್ನು ಸಂಗ್ರಹಿಸಿದ ಸಿಸಿಬಿ ಪೊಲೀಸರು ಹೆಚ್ಚಿನ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದ್ದರು. ಎಫ್‌ಎಸ್‌ಎಲ್ ತಜ್ಞರ ಪರಿಶೀಲನೆ ಮಾಡಿದಾಗ ಆ ಎಲ್ಲಾ ಪತ್ರಗಳಲ್ಲಿನ ಬರವಣಿಗೆ ಶೈಲಿಯಲ್ಲಿ ಸಾಮ್ಯತೆ ಇರುವುದು ದೃಢಪಟ್ಟಿತ್ತು. ಎಫ್‌ಎಸ್‌ಎಲ್ ತಜ್ಞರು ಆ ಎಲ್ಲಾ ಪತ್ರಗಳನ್ನು ಒಬ್ಬನೇ ವ್ಯಕ್ತಿ ಬರೆದಿದ್ದಾನೆ. ಜತೆಗೆ, ಆ ಪತ್ರಗಳು ಉತ್ತರ ಕರ್ನಾಟಕ ಭಾಗದ ಅಂಚೆ ಕಚೇರಿಗಳಿಂದ ಬಂದಿವೆ ಎಂದು ಸಿಸಿಬಿಗೆ ವರದಿ ಕೊಟ್ಟಿದ್ದರು.ಬಳಿಕ ಸಿಸಿಬಿ ಅಧಿಕಾರಿಗಳು ದಾವಣಗೆರೆ ಹಾಗೂ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ತನಿಖೆ ಮಾಡಿದ್ದರು. ಯಾವ ಅಂಚೆ ಕಚೇರಿಗಳಿಂದ ಪತ್ರಗಳು ಬಂದಿವೆ ಎಂಬುದನ್ನು ಅಧಿಕಾರಿಗಳು ಮೊದಲು ಪತ್ತೆ ಮಾಡಿದ್ದರು. ನಂತರ ಆ ಎಲ್ಲಾ ಅಂಚೆ ಕಚೇರಿಗಳ ಸುತ್ತಮುತ್ತಲಿನ ಮೊಬೈಲ್ ಟವರ್‌ಗಳ ಮೂಲಕ ಬಂದು ಹೋಗಿರುವ ಕರೆಗಳು ಮತ್ತು ಆ ಕರೆಗಳ ಮೊಬೈಲ್ ಸಂಖ್ಯೆಗಳ ಮಾಹಿತಿ ಸಂಗ್ರಹಿಸಿದ್ದರು. ತನಿಖೆ ವೇಳೆ ಹಲವು ಅಂಚೆ ಕಚೇರಿಗಳ ಬಳಿ ಒಂದೇ ಮೊಬೈಲ್ ಸಂಖ್ಯೆ ಆ್ಯಕ್ಟೀವ್ ಆಗಿದ್ದ ಸಂಗತಿ ಗೊತ್ತಾಗಿತ್ತು.ಈ ಸುಳಿವು ಆಧರಿಸಿ ಅಧಿಕಾರಿಗಳು ಶಿವಾಜಿರಾವ್ ಸೇರಿ ೮ ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆ ವೇಳೆ ಶಿವಾಜಿರಾವ್, ತಾನೇ ಬೆದರಿಕೆ ಪತ್ರ ಬರೆದಿದ್ದಾಗಿ ತಪ್ಪೆಪ್ಪಿಕೊಂಡಿದ್ದಾನೆ. ಸಿಸಿಬಿ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು 13 ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 13 =
Remember me
