ಸಂಧಿವಾತವು ಸಾಮಾನ್ಯವಾಗಿ ವಯಸ್ಸಾಗುತ್ತ ಹೋದಂತೆ ಕಾಣಿಸಿಕೊಳ್ಳುವ ಕಾಯಿಲೆಯಾಗಿದೆ. ಬಹುತೇಕವಾಗಿ ಮೊಣಕಾಲು ಸಂದಿನಲ್ಲಿ ನೋವು ಕಾಣಿಸಿಕೊಳ್ಳುವುದು ಈ ರೋಗದ ಮುನ್ಸೂಚನೆಯಾಗಿದೆ. ಓಡಾಟ, ಸಂಚಾರ ಸೇರಿದಂತೆ ದಿನಿನಿತ್ಯದ ಚಟುವಟಿಕೆಗಳಿಗೆ ದೊಡ್ಡ ಅಡಚಣೆಯನ್ನೇ ಈ ಕಾಯಿಲೆ ಸೃಷ್ಟಿಸುತ್ತದೆ. ಹೀಗಾಗಿ, ಸಂಧಿವಾತವನ್ನು ಸೈಲೆಂಟ್ ಕಿಲ್ಲರ್ ಕಾಯಿಲೆ ಎಂದೂ ಕರೆಯಲಾಗುತ್ತದೆ. ಸಂಧಿವಾತ ಕಡೆಗಣಿಸಿದರೆ ನಾನಾ ಸಮಸ್ಯೆಗಳು ಎದುರಾಗುತ್ತವೆ. ಈ ಕಾಯಿಲೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿದರೆ ಸ್ವತಂತ್ರ ಬದುಕಿಗೆ ಧಕ್ಕೆ ಉಂಟಾಗುವುದಿಲ್ಲ. ಸಂಧಿವಾತದ ಚಿಕಿತ್ಸಾ ಕ್ರಮಗಳಲ್ಲಿ ಥೆರಫಿಯೂ ಮುಖ್ಯವಾಗಿದೆ. ಪೂರ್ಣ ಪ್ರಮಾಣದಲ್ಲಿ ನಡೆಯಲಾಗದ ಸ್ಥಿತಿ, ಕೈಗಳನ್ನು ಮೇಲೆತ್ತಲು ಸಮಸ್ಯೆ, ಬೆರಳುಗಳನ್ನು ಮಡಚುವುದು, ಹಿಮ್ಮಡಿಯಲ್ಲಿ ನೋವು ಇದ್ದವರು ಸಂಬಂಧಪಟ್ಟ ಫಿಜಿಯೋಥೆರಫಿ ಮಾಡಿಸಿಕೊಳ್ಳಬಹುದು. ಇನ್ನು ಅರ್ಥರೈಟಿಸ್ ಇರುವವರು ಬೆಳಗ್ಗೆ ಎದ್ದಾಕ್ಷಣ ಬಿಸಿ ನೀರಿನಿಂದ ನೋವಿನ ಭಾಗಗಳಲ್ಲಿ ಮಸಾಜ್ ಮಾಡಿಕೊಳ್ಳಬೇಕು. ಇನ್ನು ವಾಯು ವಿಹಾರ, ವ್ಯಾಯಾಮ ಮತ್ತು ಇತರೆ ಚಟುವಟಿಕೆಗಳ ನಂತರ ನೋವು ಕಾಣಿಸಿಕೊಳ್ಳುವ ವೇಳೆ ಐಸ್​ಕ್ಯೂಬ್ ಅಥವಾ ಐಸ್ ಬ್ಯಾಗ್​ಗಳನ್ನು ಇಟ್ಟು ಮಸಾಜ್ ಮಾಡುವುದರಿಂದ ನೋವು ನಿವಾರಣೆ ಆಗಬಹುದಾಗಿದೆ.
ಸಂಧಿವಾತದಲ್ಲಿ ಎರಡು ವಿಧಗಳಿವೆ. ಒಂದು ಕೀಲುಗಳಲ್ಲಿ ಮೂಳೆಗಳು ಕ್ಷೀಣಗೊಳ್ಳುವ ಸಂಧಿವಾತ. ಇನ್ನೊಂದು ಕೀಲುಗಳಲ್ಲಿ ಉರಿಯೂತ. ಇದರಲ್ಲಿ ಸಹಜವಾಗಿ ಬಾಗಲು, ಕುಳಿತುಕೊಳ್ಳಲು ಕಷ್ಟವಾಗುವಂತಹ ಅಸಹಜ ಸ್ಥಿತಿ. ಮೂಳೆ, ಕೀಲುಗಳಲ್ಲಿ ಸಣ್ಣಪುಟ್ಟ ಹರಿತ, ಉರಿ, ನೋವು, ಬಿಸಿ ಉಂಟಾಗಿ ದಿನನಿತ್ಯದ ಕೆಲಸ ಕಾರ್ಯಗಳಿಗೆ ಕಷ್ಟವಾಗುತ್ತದೆ. ಸೈನೋವಿಟಿಸ್ ಜಾಯಂಟ್ ಸುತ್ತ ಇರುವ ಕವರಿಂಗ್​ನಲ್ಲಿ ಕಾರ್ಟಿಲೆಜ್ ಲುಬ್ರಿಕೆಂಟ್ ಹೋಗಿ ನೀರು ತುಂಬಿ ದಪ್ಪವಾಗುತ್ತದೆ. ಇದರಿಂದ ಚಲನವಲನ ಕಷ್ಟವಾಗುತ್ತದೆ. ಈ ಹಂತ ದಾಟಿದ ಮೇಲೆ ಆರ್ಥರೈಟಿಸ್ ಕಾಣಿಸಿಕೊಳ್ಳುತ್ತದೆ. ಆರ್ಥರೈಟಿಸ್​ನಲ್ಲಿ ಕಾರ್ಟಿಲೇಜ್ (ಮೃದ್ವಸ್ಥಿ) ಕವರ್​ಗೆ ಸೋಂಕು ಉಂಟಾಗಿ ಹಾನಿಗೀಡಾಗುತ್ತದೆ. ಆಗ ಅದರ ತೀವ್ರತೆ ಆಧರಿಸಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ.
ಸಂಧಿವಾತ ವಯೋಸಹಜ ರೋಗವಾಗಿದ್ದು, ಈಗ ಚಿಕ್ಕ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತಿದೆ. ಆರಂಭದ ಹಂತದಲ್ಲಿಯೇ ರೋಗ ಲಕ್ಷಣದ ಅಧಾರದಲ್ಲಿ ಚಿಕಿತ್ಸೆ ಪಡೆದು ಗುಣಮುಖ ಆಗಬಹುದು. ಇಲ್ಲವಾದಲ್ಲಿ ಗುಣಮುಖ ಪ್ರಮಾಣ ಕಡಿಮೆಯಾಗಲಿದ್ದು, ದೊಡ್ಡ ಮಟ್ಟದಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ.
|ಡಾ.ಎಚ್.ಎಸ್. ಚಂದ್ರಶೇಖರ್ಆಥೋಪೆಡಿಕ್ ತಜ್ಞ, ಸಂಜಯ ಗಾಂಧಿ ಆಸ್ಪತ್ರೆ ನಿವೃತ್ತ ನಿರ್ದೇಶಕ
ಮನುಷ್ಯರಿಗೆ ವಯೋಸಹಜವಾಗಿ ಕಾಣಿಸಿಕೊಳ್ಳುವ ಸಂಧಿವಾತ (ಆರ್ಥರೈಟಿಸ್)ದಲ್ಲಿ ಗೌಟ್ ಸಂಧಿವಾತವೂ ಒಂದು ಮಾದರಿಯಾಗಿದೆ. ಇದರ ಲಕ್ಷಣಗಳು ಮುಖ್ಯವಾಗಿ ಪಾದದ ಬೆರಳುಗಳ ಮೇಲಿನ ಎಲುಬುಗಳ ಜೋಡಣೆಯ ಮಧ್ಯ ಭಾಗದಲ್ಲಿ ಒಂದು ಭಾಗದಲ್ಲಿ ನೋವು ಉಂಟಾಗುತ್ತದೆ. ಒಂದೊಮ್ಮೆ ಮಲಗಿದ್ದ ಸಮಯದಲ್ಲಿ ಏಕಾಏಕಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯದೇ ಮನೆಯ ಮದ್ದಿನಿಂದ ಉಪಶಮನ ಮಾಡಲು ಸಾಧ್ಯವಿಲ್ಲ. ಈ ವೇಳೆ ರೋಗಿಗಳು ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ತಪಾಸಣೆ ಮಾಡಿಸಿದಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಇದರಲ್ಲಿ ಮುಖ್ಯವಾಗಿ ರೋಗಿಯ ದೇಹದಲ್ಲಿನ ಯೂರಿಕ್ ಆಸಿಡ್ ಪ್ರಮಾಣ ತಗ್ಗಿಸಬೇಕು. ಹೀಗಾಗಿ, ವೈದ್ಯರು ಔಷಧಿಯನ್ನು ನೀಡುವ ಜತೆಗೆ ಹೆಚ್ಚು ನೀರನ್ನು ಕುಡಿಯಲು ಸಲಹೆ ನೀಡುತ್ತಾರೆ. ಮುಖ್ಯವಾಗಿ ಗೌಟ್ ರೋಗದ ಲಕ್ಷಣಗಳು ಕಂಡುಬಂದವರು ಹಾಗೂ ರೋಗ ಪತ್ತೆಯಾದವರು ಹೆಚ್ಚು ಪ್ರೊಟೀನ್​ಯುುಕ್ತ ಆಹಾರ ಸೇವನೆಯನ್ನು ತ್ಯಜಿಸಬೇಕು ಎಂದು ಡಾ.ಎಚ್.ಎಸ್. ಚಂದ್ರಶೇಖರ್ ಸಲಹೆ ನೀಡಿದ್ದಾರೆ.
ಆಸ್ಟಿಯೋ ಆರ್ಥರೈಟಿಸ್:ಸಾಮಾನ್ಯವಾಗಿ ವಯಸ್ಸಾದಂತೆ ಮೂಳೆ ಸವೆತ ಉಂಟಾಗುತ್ತವೆ. ಇದನ್ನು ಆಸ್ಟಿಯೋ ಆರ್ಥರೈಟಿಸ್ ಎನ್ನಲಾಗುತ್ತದೆ. ಆಸ್ಟಿಯೋ ಆರ್ಥರೈಟಿಸನ್ನು ಹಲವು ಮುನ್ನೆಚ್ಚರಿಕೆ ಕ್ರಮಗಳ ನಿರಂತರ ಅನುಸರಣೆಯಿಂದ ಮುಂದೂಡಬಹುದು. ವಯೋ ಸಹಜ ಕಾಯಿಲೆ ಆಗಿರುವುದರಿಂದ ಅದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ರೈತರು, ಕಾರ್ವಿುಕರು ಸೇರಿದಂತೆ ಶ್ರಮಿಕ ವರ್ಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಮೊಣಕಾಲು ಸಂದಿನಲ್ಲಿ ಈ ರೋಗ ಕಾಣಿಸುತ್ತದೆ. ಭಾರತದಲ್ಲಿ ಆರ್ಥರೈಟಿಸ್ ಹಿಪ್​ನಲ್ಲಿ ಕಾಣಿಸಿಕೊಳ್ಳುವುದು ತೀರಾ ಅಪರೂಪ.
ರುಮಟೈಡ್ ಆರ್ಥರೈಟಿಸ್:ರುಮಟೈಡ್ ಆರ್ಥರೈಟಿಸ್ ನಮ್ಮ ದೇಶದಲ್ಲಿ ಕಡಿಮೆ ಇದೆ. ಅಮೆರಿಕ, ಕೆನಡಾ, ಯೂರೋಪಿಯನ್ ಸೇರಿದಂತೆ ಹೆಚ್ಚು ಶೀತವಿರುವ ದೇಶಗಳಲ್ಲಿ ಈ ಕಾಯಿಲೆ ಪ್ರಮಾಣ ಹೆಚ್ಚಿದೆ. ವಿದೇಶಗಳಲ್ಲಿ ಈ ಬಗ್ಗೆ ಹೆಚ್ಚು ಸಂಶೋಧನೆ ನಡೆದಿದೆ. ನಮ್ಮ ದೇಶದಲ್ಲಿ ಈ ಕಾಯಿಲೆ ಪ್ರಮಾಣ ಕಡಿಮೆ ಇದೆ. ಇದು ಗುಣಪಡಿಸಲಾರದ ಕಾಯಿಲೆ. ಆದರೆ, ನೋವು ನಿವಾರಣೆ ಮಾಡಬಹುದು. ಆನುವಂಶಿಕವಾಗಿಯೇ ಬರುವ ಕಾಯಿಲೆ ಇದಾಗಿದೆ. ಹಾಗಾಗಿ ಇದು ಚಿಕ್ಕ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತದೆ. ಇವುಗಳ ಜತೆಗೆ ಟಿಬಿಯಿಂದ ಬರುವ ಆರ್ಥರೈಟಿಸ್, ಗೌಟ್ ಮತ್ತು ಅಲರ್ಜಿಕ್ ಆರ್ಥರೈಟಿಸ್​ಗಳೂ ಉಂಟು. ಆದರೆ, ಆಸ್ಟಿಯೋ ಆರ್ಥರೈಟಿಸ್ ಮತ್ತು ರುಮಟೈಡ್ ಆರ್ಥರೈಟಿಸ್ ರೋಗದ ಪ್ರಮಾಣ ಭಾರತದಲ್ಲಿ ಹೆಚ್ಚು.
ಸಾಮಾನ್ಯವಾಗಿ ಸಂಧಿವಾತ ಕಾಯಿಲೆಗೆ ಆಹಾರ ಪಥ್ಯವನ್ನು ಹೇಳುವುದಿಲ್ಲ. ಆದರೆ, ನಿತ್ಯ ಆಹಾರ ಸೇವನೆಯಲ್ಲಿ ನೋವು ಉಲ್ಬಣ ಆಗುವಂತಹ ಶೀತವುಳ್ಳ ಆಹಾರಗಳನ್ನು ಸೇವಿಸಬಾರದು. ಬಿಸಿಯಾದ ಆಹಾರ ಸೇವಿಸಬೇಕು. ಕಮೋಡ್ ಮಾದರಿಯ ಶೌಚಗೃಹ ಬಳಸಬೇಕು.
|ಡಾ.ಎಂ.ಎಸ್. ಕೃಷ್ಣ ಕುಮಾರ್ಕೀಲು ಮರುಜೋಡಣಾ ತಜ್ಞ, ಹಾಸ್ಮಟ್ ಆಸ್ಪತ್ರೆ
ವಾಯುವಿಹಾರ, ವ್ಯಾಯಾಮ ಹೇಗೆ?:ಮೊಣಕಾಲು ಗಂಟು, ಭುಜದ, ಹಿಮ್ಮಡಿ ಹಾಗೂ ಸೊಂಟದ ಭಾಗದಲ್ಲಿ ನೋವು (ಸಂಧಿವಾತ) ಇದ್ದವರು ಸಾಮಾನ್ಯ ವ್ಯಕ್ತಿಗಳಂತೆ ನಡೆಯುವುದು, ಮೆಟ್ಟಿಲು ಹತ್ತುವುದು, ಓಡುವುದು, ಏಣಿ ಏರುವುದು, ದೊಡ್ಡ ಮೂಟೆಗಳನ್ನು ಹೊತ್ತುಕೊಂಡು ಹೋಗುವುದನ್ನು ಮಾಡುವಂತಿಲ್ಲ. ಇದರಿಂದ ಸಂದುಗಳಲ್ಲಿ ಹೆಚ್ಚಿನ ನೋವು ಕಾಣಿಸಿಕೊಳ್ಳುವ ಸಾಧ್ಯತೆಯೇ ಅಧಿಕವಾಗಿರುತ್ತದೆ. ಹೀಗಾಗಿ, ಸಮತಟ್ಟಾಗಿರುವ ನೆಲದ ಮೇಲೆಯೇ ನಡೆಯಬೇಕು ಅಥವಾ ವಾಯು ವಿಹಾರ ಮಾಡಬೇಕು. ದೈಹಿಕ ಸಾಮರ್ಥ್ಯಕ್ಕೂ ಮೀರಿ ನಡೆಯುವುದು ಕೂಡ ನಿಷಿದ್ಧ. ಇನ್ನು ಮೊಣಕಾಲು ಮತ್ತು ಭುಜದ ಭಾಗಗಳಿಗೆ ಹೆಚ್ಚು ಭಾರ ಹಾಕದೆ ಸಂಬಂಧಪಟ್ಟ ಭಾಗಗಳು ಚಟುವಟಿಕೆ ಆಗಿರುವ ರೀತಿಯಲ್ಲಿ ವ್ಯಾಯಾಮ ಮಾಡಬೇಕು.
ಪೆರಿ ಆರ್ಥರೈಟಿಸ್:ಪೆರಿ ಆರ್ಥರೈಟಿಸ್​ನಲ್ಲಿ ಕೀಲುಗಳ ಸುತ್ತ ನೋವಿನ ಊತ ಉಂಟಾಗುತ್ತದೆ. ಭುಜದ ನೋವು ಇದ್ದರೆ ಅದನ್ನು ಪೆರಿ ಆರ್ಥರೈಟಿಸ್(ಪ್ರೋಸನ್ ಷೋಲ್ಡರ್) ಎಂದು ಕರೆಯಲಾಗುತ್ತಿದೆ. ನಿಂತರ ವ್ಯಾಯಾಮ, ಫೀಜಿಯೋ ಥೆರಪಿಯಂತಹ ಚಿಕಿತ್ಸೆಗಳ ಮೂಲಕ ಈ ರೋಗ ನಿಯಂತ್ರಣದಲ್ಲಿಡಬಹುದು.
ಹಂತ-1:ಸಂಧಿವಾತದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಆಥೋಪೆಡಿಕ್ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದಲ್ಲಿ ಈ ರೋಗವನ್ನು ಗುಣಪಡಿಸಬಹುದು. ಇದಕ್ಕೆ ಎರಡು ಮೂಳೆಗಳು ಜೋಡಣೆಯಾದ ಮೇಲ್ಭಾಗದ ಆವರಿಸಿರುವ ಮೃದು ಮೂಳೆ, ಮೂಳೆ ತಿರುಗಲು ಬೇಕಾಗುವ ದ್ರವ ಉತ್ಪಾದನೆ ಆಗುವುದಕ್ಕೆ ನೆರವಾಗುವಂತೆ ಔಷಧಿಗಳನ್ನು ಕೊಡುತ್ತಾರೆ.
ಹಂತ-2:ಒಂದು ವೇಳೆ ಮೊದಲ ಹಂತವನ್ನು ದಾಟಿದಲ್ಲಿ ಚಿಕಿತ್ಸಾ ಕ್ರಮ ಕೂಡ ಬದಲಾಗುತ್ತವೆ. ಔಷಧಿಗಳ ಜತೆಗೆ ಸಂಧಿವಾತದ ಕುರಿತು ಪೂರ್ಣ ಪ್ರಮಾಣದ ಮಾಹಿತಿ ತಿಳಿಯಲು ರಕ್ತಪರೀಕ್ಷೆ, ಸ್ಕಾ್ಯನಿಂಗ್, ಎಂಆರ್​ಐ ಸ್ಕಾ್ಯನಿಂಗ್ ಮಾಡಲಾಗುತ್ತದೆ. ನಂತರ, ಸಂಧಿವಾತದ ಪ್ರಕಾರ ಮತ್ತು ಹಂತದ ಆಧಾರದಲ್ಲಿ ಇಂಜೆಕ್ಷನ್ ನೀಡುವುದು ಅಥವಾ ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.
ಹಂತ-3:ಆಸ್ಟ್ರಿಯೋ ಅರ್ಥರೈಟಿಸ್​ನ ಎರಡನೇ ಹಂತ ಅಥವಾ ರುಮಟೈಡ್ ಆರ್ಥರೈಟಿಸ್ ರೋಗಕ್ಕೆ ದೀರ್ಘಕಾಲಿಕವಾಗಿ ಔಷಧಿ ಸೇವನೆಗೆ ನೀಡಲಾಗುತ್ತದೆ. ಮೂಳೆ ಸಂಪೂರ್ಣವಾಗಿ ಸವೆದು ಹೋಗಿದ್ದು, ತೀವ್ರ ತರಹದ ನೋವು ಇದ್ದಲ್ಲಿ ಇಡೀ ಮೂಳೆ ಜೋಡಣೆ ಭಾಗವನ್ನು ತೆಗೆದು ಕೃತಕ ಜೋಡಣಾ ವ್ಯವಸ್ಥೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಅಳವಡಿಕೆ ಮಾಡಲಾಗುತ್ತದೆ. ಈ ಕೃತಕ ಜೋಡಣೆಯು ಕನಿಷ್ಠ 20 ವರ್ಷಗಳವರೆಗೆ ಬಾಳಿಕೆ ಬರುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 9 =
Remember me
