ಅಜಗಣ್ಣ ಒಬ್ಬ ನಿಜಶರಣ. ಅವನು ಹುಟ್ಟು-ಸಾವುಗಳನ್ನು ಗೆದ್ದವನು. ಅವನು ಲೋಕಲೀಲೆಗಾಗಿ ದೇಹವನ್ನು ಧರಿಸಿ ಬಂದವನು. ಅಲ್ಲಮಪ್ರಭು ಕೂಡಾ ಹುಟ್ಟು-ಸಾವುಗಳ ನೆಲೆಯನ್ನು ಬಲ್ಲವನು. ಭೌತ ಪ್ರಕೃತಿಯೇ ನಿಜವೆಂದು ಭಾವಿಸುವವರಿಗೆ ಹುಟ್ಟು-ಸಾವುಗಳ ರಹಸ್ಯ ತಿಳಿಯಲಾರದು! ಅಭೌತ ಪ್ರಕೃತಿಯು ಈ ರಹಸ್ಯವನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿರುತ್ತದೆ! ಈ ಹಿನ್ನೆಲೆಯಲ್ಲಿ ಮುಕ್ತಾಯಿಗೆ ಅಲ್ಲಮನು ಜನನದ ಕಾರಣ, ಮರಣದ ವಿಚಾರವನ್ನು ತಿಳಿಸುತ್ತಿದ್ದಾನೆ. ಮನಸ್ಸಿನಲ್ಲಿ ವಿಕಾರಗಳಿಗೆ ಎಡೆಕೊಟ್ಟಿರುವವರಿಗೆ ಜನನದ ಕಾರಣ ಕಾಣಿಸುವುದಿಲ್ಲ. ಶರಣರು ಅವತರಿಸಿ ಬಂದರೆ, ಅವರು ನಮ್ಮವರೆಂದು ಯಾವಾಗಲೂ ಭಾವಿಸಕೂಡದು ಮಾತ್ರವಲ್ಲ ಆಶಿಸಕೂಡದು. ಶರಣರ ಅವತಾರವನ್ನು ಅದರ ಹಿಂದಿರುವ ರಹಸ್ಯವನ್ನು ವಿಚಾರ ಮಾಡಿದರೆ ಅಜಗಣ್ಣನು ನಿತ್ಯನೇ ಸರಿ!
ಮುಕ್ತಾಯಿಗೆ ಅಜಗಣ್ಣ ಮಹಾಪುರುಷನೆಂದು ತಿಳಿದಿದೆ. ಆತ ಹುಟ್ಟು-ಸಾವುಗಳನ್ನು ಕಳೆದುಕೊಂಡವನೆಂದೂ ಗೊತ್ತಿದೆ. ಆದರೂ ಭೂತಳದಲ್ಲಿ ಗುಪ್ತ ಶಿವಾನುಭವದಲ್ಲಿ ಇರುತ್ತಾ ಇದ್ದುದು ಅವಳಿಗೆ ಸೋಜಿಗವನ್ನು ತಂದಿದೆ. ಇಂಥವನು ಇಲ್ಲವಾದ ಮೇಲೆ ನಾವು ಜೀವಿಸುವುದರಲ್ಲಿ ಅರ್ಥವಿದೆಯೆ? ಎಂಬ ಪ್ರಶ್ನೆ ಮುಕ್ತಾಯಿಯನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಅಲ್ಲಮನು ಲೋಕದ ಲೌಕಿಕರೊಡನೆ ವ್ಯವಹರಿಸಿದರೆ ‘ಶಿವಾನುಭವ’ ತಿಳಿಯದೆಂದೂ ಅವನು ಪರಮಾರ್ಥದಲ್ಲಿ ಏಕೈಕವಾಗಿದ್ದಾನೆಂದೂ, ಅವನು ಶೂನ್ಯವನ್ನು ಸ್ವೀಕರಿಸಿ ಶೂನ್ಯನೇ ಆಗಿದ್ದಾನೆಂದು ಮುಕ್ತಾಯಿಗೆ ಮನವರಿಕೆ ಮಾಡಿಕೊಡುತ್ತಿದ್ದಾನೆ. ಅವನು ಬಯಲಿನಲ್ಲಿ ಬಯಲಾದ ಮೇಲೆ ಬಯಲತತ್ತ್ವದಲ್ಲಿಯೇ ಇದ್ದಾನೆ!- ಹೀಗೆಂದು ಪ್ರಭುದೇವನು ಮುಕ್ತಾಯಿಗೆ ಸಮಾಧಾನ ಮಾಡಿದನು! ಆದರೂ ಮುಕ್ತಾಯಿಗೆ ಪ್ರಶ್ನೆಗಳು ಕಾಡುತ್ತಿವೆ.
ಅವಳು ಅಲ್ಲಮನನ್ನು ಕುರಿತು:ದೇವ ನಿಮ್ಮವರುಗಳ ಪರಿಯನು/ ನೀವೆ ಬಲ್ಲಿರಿ ಹಾವಿನಡಿಯನು/ಹಾವುಗಳು ನೆರೆ ಬಲ್ಲುವಲ್ಲದೆ ನಮಗೆ ಗೋಚರವೆ?/ಭಾವಿಸುವೊಡೆಮಗಿನ್ನು ಗತಿಮತಿ/ಯಾವುದೆಂದೆನುತಲ್ಲಮಪ್ರಭು
ದೇವರಿಗೆ ಮುಕ್ತಾಯಿ ಬಿನ್ನೈಸಿದಳು ಭಕ್ತಿಯಲಿ (ಪ್ರಭುಲಿಂಗಲೀಲೆ-12.12)
‘‘ಪ್ರಭುವೆ? ನಿಮ್ಮ ರೀತಿ ನಿಮಗೆ ಮಾತ್ರ ತಿಳಿಯುತ್ತದೆ. ಹಾವಿನ ಅಡಿಯನ್ನು ಹಾವು ಮಾತ್ರ ತಿಳಿಯಲು ಸಾಧ್ಯ. ಅದು ನಮಗೆ ಗೋಚರವಾಗುವುದಿಲ್ಲ. ಹೀಗಿದ್ದಾಗ ನಮಗೆ ದಾರಿಯಾವುದು? ಅದನ್ನು ತಿಳಿಯುವ ಮತಿಯಾದರು ಯಾವುದು?’ ಎಂದು ಕಳವಳದಿಂದಲೂ ಭಕ್ತಿಯ ಪಾರಮ್ಯದಿಂದಲೂ ಮುಕ್ತಾಯಿ ಅಲ್ಲಮನಲ್ಲಿ ನಿವೇದಿಸಿಕೊಳ್ಳುತ್ತಾಳೆ. ಆಗ ಅಲ್ಲಮನು ಬಲು ಉಪಾಯದಿಂದ ಮುಕ್ತಾಯಿಗೆ ಲೋಕಸಾಮತಿಯನ್ನು ನೀಡುತ್ತ ಗುಪ್ತ ಶಿವಭಕ್ತಿಯ ನೆಲೆಯನ್ನು ತಿಳಿಸುತ್ತಾನೆ.
ಹೊಳೆಯನ್ನು ದಾಟುವವರು ಹರಿಗೋಲನ್ನು ಸಿದ್ಧಪಡಿಸಿ ಕೊಳ್ಳುತ್ತಾರೆ. ಅದರಂತೆ ಲಿಂಗತತ್ತ್ವವನ್ನು ತಿಳಿಯ ಬಯಸುವವರು ಕಮೇಂದ್ರಿಯಗಳನ್ನು ಪಕ್ಕಕ್ಕೆ ಸರಿಸುತ್ತಾರೆ. ಹೊರಗಿನ ಎಲ್ಲ ಕ್ರಿಯೆಗಳನ್ನು ಅವರು ತ್ಯಜಿಸಬೇಕಾಗುತ್ತದೆ. ಅಂಥವರು ಒಳಮಾರ್ಗವನ್ನು ಗಟ್ಟಿಯಾಗಿ ಹಿಡಿದು ಅದೊಂದನ್ನೇ ಅನುಸರಿಸುತ್ತಾರೆ. ಇದೇ ಶಿವಭಕ್ತಿ-ಎಂದು ಅಲ್ಲಮನು ಹೇಳಿದಾಗ ಮುಕ್ತಾಯಿಯು ಪ್ರಮುಖವಾಗಿ ಅಲ್ಲಮನ ಮುಂದೆ ಮೂರು ಪ್ರಶ್ನೆಗಳನ್ನು ಇಡುತ್ತಾಳೆ.ಅವಳು ಕೇಳಿದ ಮೊದಲ ಪ್ರಶ್ನೆ:ದೇಹದ ಮೇಲೆ ಸ್ವಾಧೀನವಿರುವ ಮನುಷ್ಯರು ಕಮೇಂದ್ರಿಯಗಳನ್ನು ನಿಂದಿಸಿದ್ದೇ ಆದರೆ ಆಗ ಜೀವವು ಯಾವುದರ ಆಶ್ರಯದಲ್ಲಿರುತ್ತದೆ.
ಎರಡನೆಯ ಪ್ರಶ್ನೆ:ಮನಸ್ಸು ನೆಲೆ ನಿಲ್ಲುವ ಪರಿ ಯಾವುದು? ಮೂರನೆಯ ಪ್ರಶ್ನೆ: ಬಯಲು ಯಾವ ಸ್ಥಿತಿಯಲ್ಲಿರುತ್ತದೆ? ಅಲ್ಲಮನು ಈ ಪ್ರಶ್ನೆಗಳಿಗೆ ಸಮುಚಿತವಾದ ಉದಾಹರಣೆಯ ಮೂಲಕವೇ ಹೀಗೆಂದು ನುಡಿಯುತ್ತಾನೆ.
ಕೇಳಿರೌ ಶಿಶುಗಳಿಗೆ ತಾಯ್ಮೊಲೆ/ವಾಲೆ ಜೀವನವಾದೊಡೆಯ ನೆರೆ/ಪಾಲನೆರೆೆವುತೆ ಮೆಲ್ಲಮೆಲ್ಲನೆಯಶನವನು ಸವಿಸಿ/ಬಾಲಕರ ಪಟುಮಾಡಬಲ್ಲ ಸ/ಕೀಲಕರವೋಲ್ ಹೊರಗೆ ಮರೆದು ನಿ/ರಾಳದಲ್ಲಿ ನಿಲಲರೆವುದೌ ಮುಕ್ತಾಯಿ ಕೇಳೆಂದ (ಪ್ರಭುಲಿಂಗಲೀಲೆ-12.16)
‘‘ಇಂದ್ರಿಯಾದಿಗಳು ವಿಷಯದ ಕಡೆ ಹರಿಯುವುದೇನೊ ನಿಜ. ಮಗು ಮೊಲೆಹಾಲನ್ನು ಬಯಸುವುದು ಸ್ವಾಭಾವಿಕವಷ್ಟೆ. ಆದರೆ, ಮಗುವಿಗೆ ಮೊಲೆಹಾಲನ್ನು ಕೊಡುತ್ತಲೇ ಮೆಲ್ಲಮೆಲ್ಲಗೆ ಅನ್ನದ ಕಡೆಗೆ ಪ್ರೇಮ ಹುಟ್ಟುವಂತೆ ತಾಯಿ ಅಭ್ಯಾಸ ಮಾಡಿಸುತ್ತಾಳೆ. ಹಾಗೆಯೇ ಗುರುವಾದವನು ಭಕ್ತಿಯ ಅಭ್ಯಾಸವನ್ನು ಮಾಡಿಸಿ, ವಿಷಯಗಳ ಕಡೆಗೆ ಮನಸ್ಸು ಹರಿಯುವುದನ್ನು ಕ್ರಮವಾಗಿ ಬಿಡಿಸುತ್ತಾನೆ. ಭಕ್ತಿಯ ಅಭ್ಯಾಸಕ್ಕೆ ಇಷ್ಟಲಿಂಗ ಆವಶ್ಯಕ. ಇದರ ಮೂಲಕ ಶಿಷ್ಯನನ್ನು ಅಂತಮುಖಿಯಾಗಿಸಬೇಕಾಗುತ್ತದೆ.’
ಅಲ್ಲಮನು ಮುಕ್ತಾಯಿ ಕೇಳಿದ ಮೂರು ಪ್ರಶ್ನೆಗಳಿಗೂ ಒಂದೇ ನೆಲೆಯಲ್ಲಿ ಉತ್ತರ ನೀಡಿ ‘ಶಿವಭಕ್ತಿ ರಹಸ್ಯ’ದ ದಾರಿಯನ್ನು ತೋರಿಸಿಕೊಡುತ್ತಾನೆ. ಅದಕ್ಕೊಂದು ಲೋಕ ಸಾಮತಿಯನ್ನು ನೀಡಿದ್ದಾನೆ. ಆ ಸಾಮತಿಯು ತಾಯಿ-ಮಗುವಿನ ರೂಪಕವಾಗಿದ್ದರೆ; ಗುರು-ಶಿಷ್ಯ ರೂಪಕಕ್ಕೂ ಇದು ಪರೋಕ್ಷವಾಗಿ ಒಪ್ಪುತ್ತದೆ! ಶಿವಭಕ್ತಿಯು ಗುರು-ಶಿಷ್ಯ ಮಾರ್ಗವನ್ನೂ ಪ್ರಶ್ನೋತ್ತರದ ಸುಪಥ ನೆಲೆಯನ್ನು ಪ್ರತಿನಿಧಿಸುತ್ತದೆ! ಪ್ರಶ್ನೆಗಳು ಸಂಶಯಗಳ ನಿವಾರಣೆಗೊಂದು ದಾರಿಯಷ್ಟೆ?
ಪ್ರೊ ಕಬಡ್ಡಿ ಲೀಗ್​ನಲ್ಲಿ ಪುಣೇರಿ ಪಲ್ಟಾನ್​ಗೆ ಸತತ 4ನೇ ಜಯ; ಅಗ್ರಸ್ಥಾನ ಭದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
